ವಾಣಿ ಯಡಹಳ್ಳಿಮಠ ಅವರ ಕವಿತೆ-ಡೋಲಾಯಮಾನ

ನನ್ನದೆನ್ನುವುದೇನೂ ಇಲ್ಲ ಜಗದಲಿ
ಆದರೂ ನನ್ನದೆನ್ನುವ ಅಭಿಮಾನ
ಶಾಶ್ವತವೇನೂ ಉಳಿವುದಿಲ್ಲ ಜಗದಲಿ
ಆದರೂ ಇರುವೆನೆನ್ನುವ ಬಿಗುಮಾನ
ಇದೆಂತಹ ಡೋಲಾಯಮಾನ ?

ತಾನೇ ಎಲ್ಲ, ತನ್ನಿಂದಲೇ ಎಲ್ಲ
ಎಂದುಕೊಳ್ಳುವ ಭಾವ
ಅನ್ಯರನು ಕೀಳೆಂದು ನೋಡುವ
ಹಂಗಿಸಿ, ಚುಚ್ಚಿ ಮಾತಾಡಿ ನಗುವ
ಮನ ನೋಯಿಸಿ ನಲಿಯುವ ಭಾವ  
ಇದೆಂತಹ ಡೋಲಾಯಮಾನ ?

ತನ್ನದಷ್ಟೇ ನೋವು, ತನ್ನವರದಷ್ಟೇ ಕಣ್ಣೀರು
ಅನ್ಯರ ನೋವಿಗೆ  ಅಪಹಾಸ್ಯ ಮಾಡಿ
ಅನ್ಯರ ಕಂಬನಿಗೆ ಕುಹಕವಾಡಿ
ಬಿದ್ದವರ ನೋಡಿ  ಬಿಗುಮಾನದ ನಗೆ ಬೀರಿ
ಮೇಲೇಳದ ಹಾಗೆ ಮನವ ಥಳಿಸುವರು
ಇದೆಂತಹ ಡೋಲಾಯಮಾನ ?

ಎಲ್ಲರೂ ಒಂದೇ ಅಲ್ಲವೇ?
ಎಲ್ಲರಿಗೂ ಮನಸಿರುವುದಲ್ಲವೇ ?
ನಿಂದಿಸಿದರೇ ನೋವಾಗುವುದಲ್ಲವೇ ?
ನೊಂದರೇ  ಕಣ್ಣೀರು ಜಿನುಗುವುದಲ್ಲವೇ ?
ಇದೆಂತಹ ಡೋಲಾಯಮಾನ ?
ಇದೆಂತಹ ಡೋಲಾಯಮಾನ ?

——————————-

Leave a Reply

Back To Top