ಕಾವ್ಯ ಸಂಗಾತಿ
ಜುಗಲ್ ಬಂಧಿ ಗಝಲ್-ನಯನ. ಜಿ. ಎಸ್ ಮತ್ತು ವಿಜಯಪ್ರಕಾಶ್ ಕಣಕ್ಕೂರು ಅವರುಗಳಿಂದ
ನಯನ. ಜಿ. ಎಸ್
ಮನದ ಹಸಿ ಮುನಿಸಿಗೆ ಭಾವಗಳನು ಸವರಿಬಿಡು ಬರೆಯುತ್ತೇನೆ
ಹೊರಲಾರದ ಹಿರಿದಾದ ಕನಸುಗಳ ಅಣಕಿಸಿಬಿಡು ಬರೆಯುತ್ತೇನೆ
ನನ್ನೆದೆಯ ವ್ಯಥೆಗಳಿಗೆ ಬೆಟ್ಟು ಮಾಡಿ ದೂರಲಿ ಯಾರನ್ನು ಹೇಳು ನೀನು
ನನ್ನಷ್ಟೇ ಬೇಗುದಿಗಳ ಭಾರ ನಿನ್ನಲ್ಲೂ ಇದೆ ಎಂದುಬಿಡು ಬರೆಯುತ್ತೇನೆ
ನಿಶೆಯ ನೆರಳಿಗೂ ಅತ್ತ ಕಂಗಳಿವು ಯಾರನ್ನು ಆಶ್ರಯಿಸಲಿ ಸಾಂತ್ವನಕೆ
ಸುಡುವ ನೋವಿನಲೂ ತಂಬೆಲರ ತಂಪಾಗಿ ಆವರಿಸಿಬಿಡು ಬರೆಯುತ್ತೇನೆ
ನಟ್ಟಿರುಳ ನಡುಕದಲೂ ಮಂದಸ್ಮಿತಳಾಗುವ ಹುಂಬತನವಿಲ್ಲವೋ ಗಾಲಿಬ್
ಮುಗಿಲ ಮುಟ್ಟಿದ ಕುಕೃತ್ಯಗಳ ಒಂದೇ ಸಮನೆ ಕೆಡಹಿಬಿಡು ಬರೆಯುತ್ತೇನೆ
ಗಿರಗಿರನೆ ತಿರುಗುವ ತಲೆಯ ಚರ್ಯೆಗೆ ದ್ರವಿಸುತ್ತಿವೆ ನಯನಗಳು ಮತ್ತೆ ಮತ್ತೆ
ಹಟವನ್ನೂ ಹಿಮ್ಮೆಟ್ಟಿಸುವ ಸಾಹಸವ ತೋರಿ ಮೆರೆದುಬಿಡು ಬರೆಯುತ್ತೇನೆ.
***
ವಿಜಯಪ್ರಕಾಶ್ ಕಣಕ್ಕೂರು
ಅಂತರಂಗದ ಹಸಿ ಕನಸಿಗೆ ಆಸರೆಯನು ಕೊಟ್ಟುಬಿಡು ಬರೆಯುತ್ತೇನೆ
ಮರೆಯಾಗದ ಹುಸಿ ನಗುವಿಗೆ ಭಾವಗಳ ಬೆಸೆದುಬಿಡು ಬರೆಯುತ್ತೇನೆ
ಸರಿದ ಸಮಯದ ನೆನಪಲಿ ಬಾಳನು ಸವೆಸುವುದರಿಂದೇನು ಫಾಯದೆ
ನೋವ ಮಡುವಲಿ ನರಳುವಾಗ ಸ್ನೇಹ ಹಸ್ತ ಚಾಚಿಬಿಡು ಬರೆಯುತ್ತೇನೆ
ಅರ್ಥವೆಲ್ಲಿದೆ ಸುತ್ತಲಿದ್ದರೂ ಅಂತಃಕರಣವಿಲ್ಲದ ಮನುಜರ ಸಾಂಗತ್ಯಕೆ
ಒಡಲು ದಣಿದಿರೆ ಮನದ ಮಡಿಲಿಗೆ ಒಲವ ಹರಿಸಿಬಿಡು ಬರೆಯುತ್ತೇನೆ
ಪುಟಿದೆದ್ದು ನಿಲ್ಲಬೇಕಿದೆ ತೆಗಳಿದವರೆದುರು ಸ್ವಾಭಿಮಾನದಿಂದ ನನಗೆ
ಹೆಗಲ ಮೇಲೊಮ್ಮೆ ಕೈಯಿರಿಸಿ ಭರವಸೆಯ ಬಿತ್ತಿಬಿಡು ಬರೆಯುತ್ತೇನೆ
ವಿಜಯವ ಬಯಸುವ ಹೃದಯಗಳ ಕಾಳಜಿಗೆ ತುಂಬಿವೆ ನಯನಗಳು
ಉಸಿರಿರುವರೆಗೆ ಜೊತೆಗಿರುವ ನುಡಿ ದಿಟವೆಂದುಬಿಡು ಬರೆಯುತ್ತೇನೆ
***