ವಿಶೇಷ ಲೇಖನ
ಪ್ರೇಮಾ ಟಿಎಂಆರ್
“ಅಮ್ಮನೆಂಬ ಅನುಭಾವಿ”
ಅಮ್ಮ ನೆನಪಾದೊಡನೆ ಎದೆಯೊಳಗೇನೋ ಸಂಚಲನ. ಅಮ್ಮನೆಂಬ ಅನುಭೂತಿಯೇ ಹಾಗೆ. ಕಲ್ಲೆದೆಯಲ್ಲೂ ತನ್ನತನ ತುಂಬುವ ಸತ್ವ. ಆಂತರ್ಯವನ್ನ ಅಗಲಿಸುವ ಭಾವ ಕಡಲು. ಅಮ್ಮನೆಂದರೆ ಸಾಕು ಅರೆಗಳಿಗೆ ಎಲ್ಲ ಮರೆತು ಎದೆ ಹಗುರಾಗುವ ಅನನ್ಯ.
ಅಮ್ಮನಿಲ್ಲದ ನಡೆದು ಬಂದ ದಾರಿ ದೂರವೇ. ಮೂವತ್ತು ವರ್ಷಗಳಲ್ಲಿ ಮರೆವೆನೆಂದರೂ ಮತ್ತಷ್ಟು ಆವರಿಸಿಕೊಂಡಿದ್ದಾಳೆ ಅಮ್ಮ .ಚೈತ್ರದ ಸುಡು ಬಿಸಿಲಲ್ಲಿ ದೊಡ್ಮನೆ ಘಟ್ಟದ ತಪ್ಪಲಿನೂರು ಕಲ್ವೆಚಿಮ್ಮಳ್ಳಿಯಲ್ಲಿ ನಿತ್ಯ ತೇಯುತಿದ್ದಳು ಅಮ್ಮ. ಕಾಯಕವೇ ಕೈಲಾಸವೆಂದುಕೊಂಡ ಜೀವಕ್ಕೇ ತನಗಾಗಿಯೇ ತನ್ನದೇ ಆದ ಕನಸುಗಳಿರಲಿಲ್ಲ. ಅವಳ ಕನಸುಗಳ ತುಂಬ ಒಡಲ ಕಂದಮ್ಮಗಳು. ಬೆಳಗಿನ ಜಾವ ಬೆಳ್ಳಿ ಮೂಡುವ ಹೊತ್ತಲ್ಲಿ ಅಮ್ಮನ ದಿನಚರಿಗೆ ಚಾಲನೆ. ಅಮ್ಮನ ತಟ್ಟಿಯಗೋಡೆ ಹುಲ್ಲು ಹೊದಿಕೆಯ ಬಿಡಾರದಲ್ಲಿ ಗಡಿಯಾರವಿಲ್ಲ. ಗೂಡಲ್ಲಿ ರೆಕ್ಕೆಪಟಪಟಿಸಿ ಕೊರಳೆತ್ತಿ ಕೋಳಿ ಕೂಗುವದ ಕೇಳಿಯೇ ಅಮ್ಮ ಗಡಬಡಿಸಿ ಏದ್ದು ಕೂತಲ್ಲೇ ಪೂರ್ವಕ್ಕೆ ಮುಖಮಾಡಿ “ಅಪ್ಪಾ ತಿಮ್ಮಪ್ಪೊಡೆಯಾ ನನ್ನ ಮಕ್ಕಳನ್ನ ಕಾಪಾಡಪ್ಪಾ ” ಎಂದು ಕಣ್ಮುಚ್ಚಿ ಕ್ಷಣ ಕೂರುತ್ತಾಳೆ. ಮೊಖಕ್ಕೊಂದಷ್ಟು ನೀರು ಹನಿಸಿ ಇರುಳು ಅರೆಬೆಂದ ಭತ್ತದ ಹಂಡೆಯೊಲೆಗೆ ಇನ್ನಷ್ಟು ಕುಂಟೆ ತುರುಕಿ ಬೆಂಕಿಹೊತ್ತಿಸಿ ಕತ್ತಿ ಸಿಂಬಿ ಬಳ್ಳಿ ಬರಗಿ ಬಗಲಲ್ಲಿಟ್ಟುಕೊಂಡು ಕಾಡಿನ ದಾರಿಗೆ ಮುಖ ಮಾಡುತ್ತಾಳೆ. ಮುನ್ನಾದಿನ ಮುಸ್ಸಂಜೆ ಕಡಿದಿಟ್ಟ ಒಂದು ಹೊರೆ ಕಟ್ಟಿಗೆ ಕಟ್ಟಿಕೊಂಡು ಬಂದು ಒತ್ತೊಟ್ಟಿಗಿಟ್ಟ ಸೌದೆ ಗೊದ್ನೆಯ ಮೇಲೆ ನಾಜೂಕಾಗಿ ಪೇರಿಸಿ ಒಳಬರುವ ಹೊತ್ತಿಗಿನ್ನೂ ಮಬ್ಬು ಹರಿಯುವದಿಲ್ಲ. ಒಳಮನೆ ಹೊರಮನೆ ಗುಡಿಸಿ, ಗೋಮಯ ಮಾಡಿ , ಒಲೆಬೂದಿ ಬಳಿದು, ತಟ್ಟೆ ಬಟ್ಟಲು ಬೆಳಗಿ, ತುಳಸಿ ಕಟ್ಟೆಯ ಸುತ್ತಿ ಕೈಮುಗಿದು, ಕೊಟ್ಟಿಗೆ ಹೊಕ್ಕುತ್ತಾಳವಳು. ಕರುಬಿಟ್ಟು ಕರೆದು ಕಟ್ಟಿ ನೊರೆಹಾಲು ಅಂಗಳದ ತುಳಸಿಗೆ ಎರೆದಾದ ಮೇಲೆಯೇ ಒಲೆಬೆಂಕಿ ಹಚ್ಚುತ್ತಾಳೆ. ಕೊಟ್ಟಿಗೆಯ ದನಕರುಗಳನ್ನ ಒಂದೊಂದಾಗಿ ಮೈದಡವಿ ಕೊಟ್ಟಿಗೆಗೆ ಬೇಗ ಬರುವಂತೆ ತಾಕೀತು ಮಾಡಿ ಕಣ್ಣಿ ಕಳಚಿ ಹೊರದಬ್ಬಿ ಜೊತೆಯಲ್ಲಿಯೇ ಅಕ್ಕರೆಯೂಡುತ್ತ ಹಿಂದಿಂದೆ ಹತ್ತು ಹೆಜ್ಜೆ ಸಾಗಿ ಮೇಯಲು ಕಾಡ ದಾರಿಯ ಹಿಡಿಸಿ ತಿರುತಿರುಗಿ ನೋಡತ್ತಲೇ ಒಳಬರುತ್ತಾಳೆ. ಇಷ್ಟರ ಮೇಲವಳು ಮೊದಲ ಗುಟಗಿ ನೀರು ಕುಡಿಯುವದು.
ಕೆಳಗಿನೂರಲ್ಲಿರುವ ಕಂದಮ್ಮಗಳ ನೆನೆಯುತ್ತಲೇ ಒಂದು ಒಣಜಬ್ಬು ಹಂಡೆಯೊಲೆಯ ಕೆಂಡದಮೇಲೆ ಸುಟ್ಟು ನಂಜಿಕೊಂಡು ತಣ್ಣೆಗಂಜಿ ಉಂಡು ಕಳದಂಗಳಕ್ಕೆ ನಡೆಯುತ್ತಾಳೆ. ತಳಿಜಪ್ಪಿ , ಹೊಟ್ಟುತೂರಿ, ಭತ್ತಗೇರಿ, ಹಸನಾದ ಭತ್ತ ಹೊತ್ತು ತಂದು ಕಣಜಕ್ಕೆ ಸುರಿದು, ನನ್ನ ಕಣಜ ಹೊಲಿಯಾಗುತ್ತಲೇ ಇರಲಿ ದ್ಯಾವ್ರೆ ಎಂದು ಕಾಣದೆ ಕಾಯುವವನ ಉಪಕಾರ ನೆನೆಯುತ್ತಾಳೆ. ಮತ್ತೆ ಅಂಗಳಕ್ಕೆ ಸೆಗಣಿ ಸಾರಿಸಿ ಒಣಗಲು ಬಿಟ್ಟು, ಅನ್ನಕ್ಕೆಸರಿಟ್ಟು, ಮನೆಮುಂದಿನ ಚಪ್ಪರದ ಒಂದಷ್ಟು ಬಸಳೆ ಕೊಡಿಗೋ ಮಾವಿನಕಾಯಿಗೋ ಒಣಶೆಟ್ಲಿ ಹಾಕಿ ಬೆರಕೆಸಾರು ಮಾಡಿಟ್ಟು ಮತ್ತೆ ಅಂಗಳಕ್ಕೆ ಓಡುತ್ತಾಳೆ. ಬೆಂದ ಬತ್ತ ತೋಡಿ ಅಂಗಳದ ಬಿಸಿಲಿಗೆ ತೆಳ್ಳಗೆ ಹರವುತ್ತಾಳೆ. ಮತ್ತೆ ಹಂಡೆಗೆ ಬತ್ತ ಅಳೆದು ತುಂಬಿ, ಮನೆದಿಬ್ಬದ ತಗ್ಗಿನಲ್ಲಿ ಅಡ್ಡಾಗಿ ಮಲಗಿದ ಬತ್ತಿದ ಹೊಳೆಯೆದೆ ಬಗೆದು ಮಾಡಿದ ತೋಡಿನ ಹೊಂಡಕ್ಕಿಳಿದು ನೀರು ಮೊಗೆದು ತಲೆಮೇಲೊಂದು ಸೊಂಟಕ್ಕೊಂದು ಕೊಡಹೊತ್ತು ದಿಬ್ಬಹತ್ತಿ ತಂದು ತುಂಬಿಸುತ್ತಾಳೆ. ಬೆಂದ ಅನ್ನವ ಬಸಿದು ಅದೇ ತೆಳಿಗಂಜಿಯಲ್ಲಿ ರಾಗಿ ಅಂಬಲಿ ಕುದಿಸಿ ಆರಲು ಬಿಟ್ಟು, ಎರಡು ಬಿಸಿಲು ಕಂಡ ಮೊನ್ನೆಯ ಬತ್ತವನ್ನ ಒಳ್ಳಂಗಳಕ್ಕೆ ಸುರಿಯುತ್ತಾಳೆ. ಬತ್ತ ಕುಟ್ಟಲು ಬರುವ ಹೆಣ್ಣಾಳುಗಳು ಬರುವದರೊಳಗೆ ಅಮ್ಮ ಒನಕೆ ಹಿಡಿಯುತ್ತಾಳೆ. ಬತ್ತ ಕುಟ್ಟಲು ಬಂದ ಹೆಣ್ಣುಗಳಿಗಾಗಿ ಅಮ್ಮನೆದೆಯಲ್ಲಿ ಅನುಕಂಪ. ಅವರಿಗಾಗಿ ಅವಲಕ್ಕಿ ಬೆಲ್ಲದ ತಂಪು, ಮುಳ್ಳಣ್ಣುಕೊಡಿ ಕಿವುಚಿದ ತಂಪಿನ ಬಂಪುನೀರು ತಪ್ಪದೇ ಕೊಡುತ್ತಾಳೆ. ಕೇಳಿ ಕೇಳಿ ಒತ್ತಾಯಿಸಿ ಬಡಿಸುತ್ತಾಳೆ. ಮನೆ ಮಕ್ಕಳ ಕಷ್ಟ ಸುಖ ವಿಚಾರಿಸಿ ಸಾಂತ್ವನ ನೀಡುತ್ತಾಳೆ.
ಬತ್ತ ಹಸನಾಗಿ ಅಕ್ಕಿಯಾಯಿತೆಂದು ಅಮ್ಮ ಉಂಡು ಅಡ್ಡಾಗಲಾರಳು. ಕೊಟ್ಟಿಗೆಯ ಸಗಣಿ ಬಾಚಿ, ದರಕು ಹಾಸಿ, ಮಿಂದು ಮಡಿಯಾಗಿ ತಟ್ಟೆಗೆ ಅನ್ನ ಇಕ್ಕಿಕೊಳ್ಳುವಾಗ ಸೂರ್ಯ ಪಡುವಣದ ದಾರಿಯಲ್ಲಿ ಬಲದೂರ ಸಾಗಿರುತ್ತಾನೆ. ಉಂಡು ಕುಂಡೆಯೂರುವದಿಲ್ಲ ಅವಳು. ಮತ್ತೆ ಕಾಡಿಗೆ ಮುಖಮಾಡಿನಡೆದು ನಾಳೆ ನಸಿಕಿಗೊಂದು ಹೊರೆಯಾಗುವಷ್ಟು ಕಟ್ಟಿಗೆ ಕಡಿದಿಟ್ಟು ಬತ್ತದೊಲೆಗೊಂದು ಕುಂಟೆ ಹೊತ್ತು ಮನೆದಾರಿ ಹಿಡಿಯುತ್ತಾಳೆ. ಮತ್ತೆ ದನಕರು ಕಟ್ಟಿ ಆಸರಿಗೆ ಅಕ್ಕಿಧೂಳು ಕಲಕಿ ಅಕ್ಕಚ್ಚು ನೀಡಿ ಮೈದಡವಿ ಮುದ್ದಿಸುವಳು. ಮೈಲು ಅರೆಮೈಲು ದೂರವಿರುವ ನೆರಮನೆಗಳಿರುವ ಊರಲ್ಲಿ ಅಮ್ಮನಿಗೆ ಮನುಷ್ಯರಿಗಿಂತ ಕೊಟ್ಟಿಗೆಯ ದನಕರುಗಳೇ ಸಂಗಾತಿ ಸ್ನೇಹಿತರು. ರಾತ್ರಿ ತಿಂಗಳ ಬೆಳಕಲ್ಲಿ ಅಮ್ಮ ಕಳದಂಗಳದಲ್ಲಿ ಕೂತು ಹುಲ್ಲು ಕಟ್ಟುತ್ತಾಳೆ. ಅಂಗಳದಲ್ಲಿ ಅಪ್ಪ ಕೊಯ್ದುತಂದು ರಾಶಿ ಹಾಕಿದ ವಾಂಟೆ ಕಾಯಿ ಮಾವಿನಕಾಯಿ ತೆಳ್ಳಗೆ ಕೊಚ್ಚುತ್ತಾಳೆ ಸಾರಿನ ಹುಳಿಪುಡಿಗೆ. ಮುಂಜಾವ ಮೈಮುರಿದೇಳುವಾಗಿನಿಂದ ಇರುಳು ಮುಂಡಿಗೆ ಹುಲ್ಲಿನ ಒರಟು ಹಸೆಮೇಲೆ ನಿದ್ದೆಗೆಂದು ಬಿದ್ದುಕೊಳ್ಳುವತನಕ ಅಮ್ಮನ ದಿನಚರಿಯಲ್ಲಿ ಈ ನಡುವೆ ನಾ ಬರೆಯದೇ ಬಿಟ್ಟು ಹೋದ ಅದೆಷ್ಟು ಸಣ್ಣ ಪುಟ್ಟ ಕೆಲಸ ಕಾರ್ಯಗಳೋ?.
ಅಗೆಗೆದ್ದೆಗೆ ಗೊಬ್ಬರ ಹೊತ್ತು ಹರಡಿ ಅಕ್ಷಯ ತೃತೀಯಾಕ್ಕೆ ಮೊದಲ ಅಗೆಬೀಜ ಗದ್ದೆಗೆ ಬಿದ್ದು ಮೊದಲ ಮಳೆ ಹನಿಸಿದರೆ ಅಮ್ಮ ಕೊಕ್ಕಲ್ಲಿ ತುತ್ತು ಕಚ್ಚಿಕೊಂಡು ಗೂಡಿಗೆ ಹಾರುವ ಹಕ್ಕಿಯಾಗುತ್ತಾಳೆ. ಒಂದಷ್ಟು ಬೆಣ್ತಕ್ಕಿ ಕೊಚ್ಚಗಕ್ಕಿ ಹೊತ್ತು ಮಲ್ನಾಡಿನಿಂದ ತನ್ನ ಮಕ್ಕಳು ವಾಸವಿರುವ ಕರಾವಳಿಯ ತೋಟದಂಚಿನ ಕೂಜಳ್ಳಿಯೆಂಬ ಕೆಳಗಿನೂರಿಗೆ ಮುಖಮಾಡುತ್ತಾಳೆ. ಚಿಮ್ಮಳ್ಳಿಯಿಂದ ಬಾಸಳ್ಳಿ ಬಸ್ ನಿಲ್ದಾಣದವರೆಗಿನ ಆರು ಕಿಲೋಮೀಟರುಗಳ ಕಾಡುದಾರಿಯನ್ನು ನಡೆದೇ ಸವೆಸುವ ಅಮ್ಮ ಬಾಸಳ್ಳಿಯ ಕಟ್ಟೆಮನೆ ಶೇಮಜ್ಜಿಯ ಅಂಗಡಿಯಲ್ಲಿ ಹೊರೆಯಿಳಿಸಿ ಚೊಂಬು ನೀರು ಬೇಡಿ ಕುಡಿದು ಕೂರುತ್ತಾಳೆ . ಅಮ್ಮನ ತಲೆಯಲ್ಲೀಗ ಕೆಳಗಿನೂರಿನಲ್ಲಿ ಮಾಡಿ ಮುಗಿಸಬೇಕಾದ ಕಾಮಗಾರಿಯ ರೂಪರೇಷೆಗಳ ಸುರುಳಿ ಸಿದ್ಧ. ಅವಳು ಕೆಳಗಿನೂರಲ್ಲಿ ಒಂದೆರಡು ತಿಂಗಳು ನೆಲೆ ನಿಲ್ಲತ್ತಾಳೆ. ಬೆಳೆದ ನುಗ್ಗೆಕಾಯಿ ಪೇಟೆಗೆ ಕೊಂಡುಹೋಗಿ ಮಕ್ಕಳಿಗೆ ಹೋಗ್ಬರೋಕೆ ಹೊಸ ಬಟ್ಟೆ ತರಬೇಕು. ಗೇರಬೀಜ ಕೊಯ್ದು ಒಣಗಿಸಿ ಮಾರಿದ ದುಡ್ಡಲ್ಲಿ ಮಳೆಗಾಲದ ಖರ್ಚಿಗಾಗುವಷ್ಟು ಒಣಮೆಣಸಿಗೆ ಅಳ್ವೆಕೋಡಿಯ ಉಳ್ಳಾಗಡ್ಡೆ ಪೊತ್ತೆಗೆ ಸರಿಮಾಡಬೇಕು. ಮಕ್ಕಳಿಗೆ ಮಳೆಗಾಲದ ತಿಂಡಿಗೆ ಒಂದಷ್ಟು ಹಲಸಿನ ಕಾಯಿ ಹಪ್ಪಳ ಮಾಡಬೇಕು. ಮೇಲಿನೂರು ಕೆಳಗಿನೂರಿಗಾಗುವಷ್ಟು ಒಣಮೀನು ಕೊಟಗಿ ಕಟ್ಟಬೇಕು. ಮುರುಗಲ ಹಣ್ಣುದುರಿಸಿ ಒಡೆದು ಒಣಗಿಸಿ ಹುಳಿ ಮಾಡಬೇಕು. ಮನೆ ಹೊದಿಕೆಗೆ ಕೇರಿಗೆಲ್ಲ ಪಾಯಸದೂಟ ಹಾಕಬೇಕು. ಮನೆಕರಿ ಗೊಬ್ಬರ ಹೊತ್ತು ತೋಟದ ಅಡಿಕೆ ತೆಂಗು ಮರಗಳ ಬುಡಕ್ಕೆ ಬಲ ನೀಡಬೇಕು. ಜೊಟ್ಟೆ ಎತ್ತಿ ಮರಗಿಡಗಳಿಗೆ ನೀರು ಉಣಿಸಬೇಕು. ಮುರಿದು ಬಿದ್ದ ತೋಟದ ಬೇಲಿ ಬಿಗಿಯಬೇಕು. ಒಡೆದಿರ ಕೇರಿಯೆಲ್ಲ ತಿರುಗಿ ಮಕ್ಕಳಿಗಾಗಿ ಹಳೆ ಪುಸ್ತಕ ಒಟ್ಟು ಮಾಡಬೇಕು. ಚಾಲಿ ಅಡಿಕೆ ಸುಲಿದು ಮಂಡಿಗೆ ಕಳಿಸಬೇಕು. ಬಂದ ದುಡ್ಡಲ್ಲಿ ಮಳೆಗಾಲಕ್ಕಾಗುವಷ್ಟು ಮೇಲ್ಸಾಮಾನು ಸಕ್ಕರೆ ಚಾಪುಡ ಕೊತ್ತಂಬ್ರಿ ) ತರ್ಬೇಕು. ಒಂದಷ್ಟು ದುಡ್ಡು ಮಿಕ್ಕಿದರೆ ಮಕ್ಕಳಿಗಾಗಿ ಮರದ ಕಾವಿನ ಕೊಡೆ ಕೊಡಿಸ್ಬೇಕು. ಮಡಚಲಾಗದೇ ಸದಾ ಬಿಡಿಸಿಕೊಂಡೇ ಇರುವ ತಾಳಿಮಡ್ಲ ಕೊಡೆ ಹೊತ್ತು ಹೋಗುವ ಅವರ ಹೆಣಗಾಟ ಕಂಡು ಅವಳ ಹೊಟ್ಟೆ ಚುರ್ರೆನ್ನುತ್ತದೆ. ಸಾಧ್ಯವಾದ್ರೆ ದುಡ್ಡು ಹೊಂದಿದರೆ ವರ್ಷವಿಡೀ ಎಲ್ಲೆಲ್ಲೂ ತಿರುಗಾಡದ ಮಕ್ಕಳನ್ನ ಕೊನಳ್ಳಿ ಹಬ್ಬ ತೋರಿಸ್ಕೊಂಡು ಬರ್ಬೇಕು. ಮನೆಹಿಂದಿನ ಕಾನು ತಿರುಗಿ ಸುರಗಿಮೊಕ್ಕೆ ಕೊಯ್ದು ಒಣಗಿಸಿ ದರ ಬರುವದಕ್ಕೆ ಕಾಯಬೇಕು. ಮಾರಿದ ದುಡ್ಡಲ್ಲಿ ಮಕ್ಕಳ ಸಮವಸ್ತ್ರಕ್ಕೆ ಸರಿಮಾಡಬೇಕು. ಬಿಡುವು ಮಾಡಿಕೊಂಡು ಮಗಳ ಹರಿದ ಪಾಟಿಚೀಲ ಹೊಲಿಯಬೇಕು. ತನಗಾಗಿ ತಾಳೆಮಡ್ಲ ಹೊಲಿದು ಗೊರಬು ಕಟ್ಟಬೇಕು. ಮಡ್ಲು ಹೆಡೆ ನೆನೆಸಿ ನೆಯ್ದು ಶೀರಂಗಿ ಹೊಡೆಯುವ ಮಾಡಿನಂಚಿಗೆ ಮಡ್ಲ ತಟ್ಟಿ ಕಟ್ಟಬೇಕು. ಕುಂಬಾರಕೇರಿಗೆ ಹೋಗಿ ಒಂದಷ್ಟು ಹೊಸ ಮಡಿಕೆ ತಂದು ಸುಟ್ಟು ಕಂತಿಸಬೇಕು. ಮಕ್ಕಳ ಕೈಲಿ ಸಿಕ್ಕಿ ಹಳೆಯದೆಲ್ಲ ಮುಕ್ಕಾಗಿರಬಹುದು. ದೊಡ್ಡ ಕೆಲ್ಸ ಅಂದ್ರೆ ಚಂದಾವರ ಮೂರು ಮೈಲು ದೂರದ ಚಂದಾವರ ಬೆಟ್ಟ ಹತ್ತಿ ಕಟ್ಟಿಗೆ ಹೊತ್ತುತಂದು ಬಚ್ಚಲು ಮನೆಯಲ್ಲಿ ಪೇರಿಸುವದು ಶಾಲೆಗೋಗೋ ಮಕ್ಕಳಿಗೆ ಬೇಯಿಸಿಕೊಳ್ಳುವದಕ್ಕೆ ಯಾವುದೇ ಅನಾನುಕೂಲ ಆಗ್ಬಾರ್ದು. ಅಬ್ಬಾ ಕೆಳಗಿನೂರಿಗೆ ಬಂದು ಬಸ್ಸು ಇಳಿಯುವ ಮೊದಲೇ ಅಮ್ಮ ಸೊಂಟ ಬಿಗಿಯಲು ತಯಾರಾಗೇ ಇರುತ್ತಿದ್ದಳು. ಎದೆಯಲ್ಲಿ ಅಭಿಮಾನವಾಗಿ ಕೂತ ಅಮ್ಮನ ಕೈಕಾಲುಗಳಲ್ಲಿದ್ದುದು ಯಾವ ಯಕ್ಷಿಣಿಯ ಮಾಯದ ಕಡ್ಡಿಯೋ. ಮತ್ತೆ ಕರ್ಮಯೋಗಿಯ ಮಳೆಗಾಲ ಚಳಿಗಾಲಗಳ ಬಾಬ್ತು ನೀವೇ ಅಂದಾಜಿಸಬಲ್ಲಿರಿ ಅಲ್ವಾ?
ಬರಿ ಇಷ್ಟೇ ಆಗಿದ್ದರೆ ಮತ್ತೆ ಬರೆಯಲೇಕೆ? ಅಮ್ಮ, ಅಮ್ಮನಂಥ ಜೀವಗಳ ಬದುಕೆಲ್ಲ ಬೆವರ ಹರಿವೇ. ಅಥವಾ ಬೆವರೇ ಬದುಕೆಂದುಕೊಂಡವರು ಅವರುಗಳು. ಆದ್ರೆ ನನ್ನಮ್ಮ ಇನ್ನೂ ಒಂಚೂರು ವಿಶೇಷ. ಊರು ಕೇರಿಗಳಲ್ಲಿ ಸೀಕು ಸಂಕ್ಟ ಎಂದರೆ ಅಮ್ಮ ಥಟ್ಟನೆ ನಾಟಿ ವೈದ್ಯಳಾಗಿ ಬದಲಾಗುತ್ತಿದ್ದಳು. ಯಾವುಯಾವುದೋ ಗಿಡಮೂಲಿಕೆಗಳ ಮದ್ದು ಅವಳಿಗೆ ಗೊತ್ತಿತ್ತು. ಐದು ದಶಕಗಳ ಹಿಂದೆಯೇ ಹೆಬ್ಬೆಟ್ಟಿನ ಅಮ್ಮ ತನ್ನ ಸುತ್ತಮುತ್ತಲಿನವರಿಗೆ ವಿದ್ಯೆಯ ಮಹತ್ವವನ್ನು ಮನದಟ್ಟು ಮಾಡಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪ್ರೇರೇಪಿಸುತ್ತಿದ್ದಳು. ಚುನಾವಣೆ ಬಂತೆಂದರೆ ಯಾವುದೇ ಕೆಲಸ ಕೇಡುಗಳಿದ್ದರೂ ಬಿಟ್ಟು ಮೇಲಿನೂರು ಚಿಮ್ಮಳ್ಳಿಯನ್ನು ಬಿಟ್ಟು ಕೆಳಗಿನೂರು ಕೂಜಳ್ಳಿಯಲ್ಲಿ ಹಾಜರಿರುತ್ತಿದ್ದಳು, ತನ್ನ ಮತದಾನದ ಹಕ್ಕು ಚಲಾಯಿಸಲು. ತನ್ನ ಸುತ್ತಲಿನ ಹೆಂಗಸರನ್ನು ಬಿಡದೇ ಗುಂಪು ಕಟ್ಟಿಕೊಂಡು ಮತಗಟ್ಟೆಗೆ ಹೊರಡಿಸುತ್ತಿದ್ದಳು. ಹೆಬ್ಬೆಟ್ಟಿಗೆ ಮಸಿಬಳಿದುಕೊಳ್ಳುವ ಅಮ್ಮ ಮಕ್ಕಳು ಅಕ್ಷರ ಕಲಿಯತೊಡಗಿದ ಮೇಲೆ ತಾನೂ ಪಾಟಿಹಿಡಿದು ಕೂತು ಓದುಬರಹ ಕಲಿತು ಹೆಬ್ಬೆಟ್ಟು ಕೊಡಮ್ಮ ಎಂದ ಮತಗಟ್ಟೆಯ ಅಧಿಕಾರಿಗೆ “ಈ ಬಾರಿ ಸೈ ಹಾಕ್ತೇನೆ ಒಡ್ಯಾ ” ಎಂದು ಅಭಿಮಾನದಿಂದ ನುಡಿದವಳು. ತನ್ನ ಸುತ್ತಲಿನವರೆಲ್ಲ ಆರೇಳು ಎಂಟು ಹತ್ತು ಮಕ್ಕಳನ್ನು ಹೆತ್ತು ಹೆಣಗಿದರೆ ಅಮ್ಮ ಮೂರೇ ಮಕ್ಕಳಿಗೆ ಇತಶ್ರೀ ಹಾಡಿ ಚಿಕ್ಕ ಕುಟುಂಬದ ಹಸನು ಬದುಕಿನ ಅರಿವ ತನ್ನವರಿಗೆ ತಿಳಿಸಿ ಫೆಮಿಲಿ ಪ್ಲಾನಿಂಗ್ ಗೆ ಪ್ರೇರೇಪಿಸಿದವಳು. ಊರಲ್ಲಿ ಯಾರೇ ಕಷ್ಟದಲ್ಲಿರಲಿ ತಾನು ಬೆನ್ನಿಗೆ ನಿಂತು ಬಲವಾದವಳು. ಸರೀಕರು ತಮ್ಮ ಹೆಣ್ಮಕ್ಕಳಿಗೆ “ಮುಲ್ಕಿ ಮುಗೀತು ಗೆದ್ದೆ ನೆಟ್ಟಿ ಕಲೀರಿ” ಎಂದು ಶಾಲೆ ಬಿಡಿಸಿದರೆ, ಅಮ್ಮ “ಹೈಸ್ಕೂಲಂದ್ರೆ ಹೇಗಿದೆ ನೋಡ್ಕೊಂಡು ಬಾ ಮಗಳೆ” ಎಂದು ಮಲ್ಲಾಪುರಕ್ಕೆ ಮುಖಮಾಡಿ ಬಿಟ್ಟು ಬೆನ್ನು ತಟ್ಟಿದ್ದಳು. ಮತ್ತದೇ ಸರೀಕರು ಹೆಣ್ಮಕ್ಕಳ ಮದ್ವೆಗೆ ಗಂಡು ನೋಡುತ್ತಿದ್ದರೆ ಅಮ್ಮ ಕೋಲೇಜ್ ಮೆಟ್ಲು ಹತ್ತೇಬಿಡು ಮಗ್ಳೆ ಹೆದ್ರಬೇಡ ಅಂದವಳು. ಮತ್ತವಳ ಗೆಳತಿಯರು ತಮ್ಮ ಮಕ್ಕಳ ಬಾಣಂತನ ಮಾಡುತ್ತಿದ್ದರೆ ಅಮ್ಮ ಸಾಲಸೋಲ ಮಾಡಿ ಉಂಬ ಅಕ್ಕಿಯ ಮಾರಿ ಧಾರವಾಡಕ್ಕೆ ಬಸ್ಸು ಹತ್ತಿಸಿ “ಅದೆಂಥದೋ ಎಮ್ಮೆ(ಎಮ್ ಎ)ಕಲಿಬೇಕಂತಿದ್ಯಲ್ಲೇ, ಮುಗಿಸ್ಕೊಂಡೆ ಬಿಡು” ಎಂದವಳು.
ಸೋರುವ ಸೂರಿನ ಹರಿವಿಗೆ ಮಡಕೆ ಕುಡಿಕೆ ಇಡುತ್ತಿದ್ದ ಅಮ್ಮನ ಎದೆಯೊಳಗೆ ತನ್ನ ಕುಡಿಗಳಿಗಾಗಿ ಅದೆಷ್ಟು ಕನಸುಗಳು . ನನಸು ಮಾಡಿಯೇ ನೇಪಥ್ಯಕ್ಕೆ ಸರಿದವಳು ಅಮ್ಮ. ಅವಳಿಗಾಗೊಂದು ಭಾವಹೂಗಳ ಮಾಲೆ ಕಣ್ಣಕಂಬನಿ ಧಾರೆ ಸಲ್ಲಬೇಕಲ್ಲವೇ…..?ಎದೆಯೊಳಗೇ ಮನೆಮಾಡಿಕೊಂಡಿರುವ
ಅಮ್ಮ ನಿಗೆ ನಿತ್ಯ ನಮನ ಸಲ್ಲುತ್ತಲೇ ಇದೆ.
ಪ್ರೇಮಾ ಟಿಎಂಆರ್