೧೯೭೫ ರ ತುರ್ತು ಪರಿಸ್ಥಿತಿ ಮತ್ತು ಇಂದಿನ ಲಾಕ್ ಡೌನ್…
ಅಂದಿಗೆ ಹೋಲಿಸಿದರೆ ಇಂದಿನ ಸ್ಥಿತಿ ಭೀಕರ, ಭಯಾನಕ. ಅಂದಿನ ಪ್ರಧಾನಿಯ ಖುರ್ಚಿ ಅಲುಗಾಡ ತೊಡಗಿದಾಗ ತುರ್ತು ಪರಿಸ್ಥಿತಿ ಹೇರಲಾಗಿತ್ತು. ರಾಜಕೀಯ ವಿರೋಧಿಗಳನ್ನು ಜೈಲಿಗೆ ಹಾಕಲಾಯಿತು, ಸರ್ಕಾರದ ವಿರುಧ್ಧ ಯಾರೂ ಮಾತನಾಡುವಹಾಗಿರಲಿಲ್ಲ. ಆದರೆ, ಜನಸಾಮನ್ಯರ ಬದುಕು ಎಂದಿನಂತೆ ಸಾಗಿತ್ತು, ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಯಾವುದೇ ತೊಂದರೆ ಇರಲಿಲ್ಲ; ಬದುಕಿನ ಆರ್ಥಿಕ ಅಭದ್ರತೆ ಯಾರನ್ನೂ ಕಾಡಿರಲಿಲ್ಲ.
ಇಂದಿನ ಸ್ಥಿತಿಯ ಹೆಸರು ಲಾಕ್ ಡೌನ್, ಜನರ ಜೀವ ಉಳಿಸಲು ಅನುಸರಿಸುವ ವಿಧಾನವೆಂದು ಹೇಳಿ ನಂಬಿಸಲಾಗುತ್ತಿದೆ.ಜನರ ವೈಯುಕ್ತಿಕ ಬದುಕನ್ನೂ ನಿಯಂತ್ರಿಸುತ್ತಿರುವ ಇದು ಅಂತರಾಷ್ಟ್ರೀಯ ಸಂಚಿನ ಒಂದು ಭಾಗ ಎಂಬುದು ಜನಸಾಮನ್ಯರಿಗೆ ತಿಳಿಯದ ರೀತಿಯಲ್ಲಿ ಭಯ ಸೃಷ್ಟಿಸಲಾಗಿದೆ. ದಿಕ್ಕೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿ, ನುಚ್ಚು ನೂರಾಗಿರುವ ವೈಯುಕ್ತಿಕ ಅರ್ಥಿಕ ಬದುಕು, ಕೋಟ್ಯಾಂತರ ಕಾರ್ಮಿಕರ ವಲಸೆಯ ಮಹಾಪರ್ವ ಮುಂತಾದ ಸಂಕಷ್ಟಗಳಿಗಿಂತ ಬೆರಳೆಣೆಕಿಯ ಶ್ರೀಮಂತರ ಹಿತರಕ್ಷಣೆಯೇ ಸರ್ಕಾರದ ಆದ್ಯತೆಯಾಗಿದೆ. ಎರಡು ತಿಂಗಳಿನಿಂದ ಸ್ಥಗಿತಗೊಂಡಿರುವ ಆರ್ಥಿಕ ಚಟುವಟಿಕೆಗಳು ಮಧ್ಯಮ ವರ್ಗದವರನ್ನು ನಾಳಿನ ಬದುಕಿನ ಕುರಿತು ಭಯ ಭೀತರಾಗುವಂತೆ ಮಾಡಿದೆ. ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದ ಕಾರ್ಮಿಕರು ಉದ್ಯೋಗವಿಲ್ಲದೇ, ಆದಾಯದ ಮೂಲವೂ ಇಲ್ಲದೇ ಬಳಲುತ್ತಿದ್ದಾರೆ.
ಅಂದು ಉತ್ತರ ಭಾರತದ ಕೆಲೆವೆಡೆ ಜನಸಾಮನ್ಯರ ಮೇಲೆ ಸಂತಾನ ನಿಯಂತ್ರಣದ ಬಲತ್ಕಾರದ ಹೇರಿಕೆ ನಡೆದಿತ್ತು, ಇಂದು ಮಿತಿಮೀರಿರುವ ಅಧಿಕಾರಿಗಳ ದರ್ಪ, ಭ್ರಷ್ಟಾಚಾರಗಳನ್ನು ತಮ್ಮ ಜೀವ ರಕ್ಷಣೆಯ ಕಸರತ್ತು ಎಂದು ಜನರು ನಂಬುವಂತೆ ಮಾಡಲಾಗಿದೆ. ತಮ್ಮ ಆರೋಗ್ಯ ರಕ್ಷಣೆಗಾಗಿ ಶುದ್ಧ ವಾಯು ಸೇವನೆಗೂ ಅವಕಾಶ ನೀಡದೇ ವಯಸ್ಕರನ್ನು, ಮಕ್ಕಳನ್ನು ಅಮಾನವಿಯ ರೀತಿಯಲ್ಲಿ ಗೃಹಬಂಧಿಯಾಗಿಸಲಾಯಿತು. ಮನೆಯಿಂದ ಹೊರಬಂದರೆ ಕೊರೊನಾ ಪೀಡಿತರಾಗುತ್ತರೆಂಬ ಅತಾರ್ಕಿಕ, ಅನಗತ್ಯ ಭಯ ಪ್ರಚಾರ ಮಾಡಲು ಮಾಧ್ಯಮಗಳೂ ಕೈ ಜೋಡಿಸಿವೆ.
ಅಂದು ಮಾಧ್ಯಮಗಳನ್ನು ಬೆದರಿಸಿ ನಿಯಂತ್ರಿಸಲಾಗಿತ್ತು; ಇಂದು ಅವರನ್ನು ಖರೀದಿಸಲಾಗದಿದ್ದರೆ ಬೆದರಿಕೆ ಒಡ್ಡಲಾಗುತ್ತಿದೆ,ಸಾಮಾಜಿಕ ಜಾಲತಾಣಗಳ ಮೂಲಕ ಅಪಹಾಸ್ಯ, ಬೆದರಿಕೆಯ ತಂತ್ರದ ಬಳಕೆ ನಡೆದಿದೆ.
ಅಂದು ಉದ್ಯಮಿಗಳಿಗೆ ಭೂಮಿ ನೀಡುವ ಸಲುವಾಗಿ ಜನರಿಂದ ಒತ್ತಾಯದಿಂದ ಕಸಿದುಕೊಳ್ಳಲಾಯಿತು; ಇಂದು ನೊಂದ ಜನರಿಗೆ ಸಹಾಯ ಮಾಡುವ ಸೋಗಿನಲ್ಲಿ ದೇಶದ ಅರ್ಥ ವ್ಯವಸ್ಥೆಯ ಹಿಡಿತವನ್ನು ಕೆಲವೇ ವ್ಯಕ್ತಿಗಳ ಹತೋಟಿಗೆ ನೀಡಲು ಅಗತ್ಯವಾದ ಕಾನೂನು ತಿದ್ದುಪಡಿಗಳನ್ನು, ಘೋಷಣೆಗಳನ್ನು ಈ ಅವಧಿಯಲ್ಲೇ ಮಾಡಲಾಗುತ್ತಿದೆ.
ಬ್ಯಾಂಕುಗಳಿಂದ ಸಾಲನೀಡಿಕೆಯ ಹೆಚ್ಛಳವೇ ಸರ್ಕಾರದ ಸಹಾಯ, ಸ್ವಾವಲಂಬನೆಯ ಕನಸನ್ನು ಘೋಷಣೆಗೆ ಸೀಮಿತಗೊಳಿಸಿ, ವಿದೇಶಿ ಕಂಪನಿಗಳಿಗೆ ಸ್ವಾಗತ ಕೋರುತ್ತಾ, ದೇಶದ ಸಂಪತ್ತನ್ನು ಲೂಟಿ ಹೊಡೆಯುವ ಅವಕಾಶವನ್ನು ಬೆರೆಳೆಣಿಕೆಯ ವ್ಯಕ್ತಿಗಳಿಗೆ ನೀಡುತ್ತಿರುವದನ್ನು ಕಂಡೂ ಜೈಕಾರ ಹಾಕುತ್ತಿರುವವರು ತಮ್ಮ ಬುದ್ಧಿಗೂ ಲಾಕ್ ಡೌನ್ ವಿಧಿಸಿಕೊಡಿದ್ದರೆನೋ?
ಅಂದು ಅಧಿಕಾರಿಗಳ ದರ್ಪ ಮತ್ತು ಕಾಂಗ್ರೆಸ್ ಪುಢಾರಿಗಳ ಹಾರಟದ ಹೊರತಾಗಿ ಹೆಚ್ಚಿನ ಬಿಸಿ ದಕ್ಷಿಣ ಭಾರತದಲ್ಲಿ ತಗಲಲೇ ಇಲ್ಲ. ಇಂದು ದೇಶದ ಪ್ರತಿಯೋರ್ವ ವ್ಯಕ್ತಿಯೂ ಲಾಕ್ ಡೌನ್ ನಿಂದ ಪೀಡಿತನಾಗಿದ್ದಾನೆ.
ಕೊರೊನಾದೊಂದಿಗೆ ಬದುಕಲು ಕಲಿಯಬೇಕೆಂಬ ಉಪದೇಶ ನೀಡಲು ಇಷ್ಟೊಂದು ಅನಾಹುತ ಘಟಿಸಬೇಕಿತ್ತೇ?
ಇದೂ ಕೂಡಾ ಬಂಡವಾಳಶಾಹಿ ಶೋಷಣೆಯ ಒಂದು ವಿಧ;ಯಾಕೆಂದರೆ, ಭಾರತದ ಸರ್ಕಾರವನ್ನು ಇಂದು ನಡೆಸುತ್ತಿರುವವರು ಕೆಲವೇ ಕೆಲವು ಉದ್ಯಮಿಗಳು /ಬಂಡವಾಳಶಾಹಿಗಳು ಹಾಗೂ ಅವರಿಂದ ಖರೀದಸಲ್ಪಟ್ಟ ಅಧಿಕಾರಿಗಳು; ಎದುರಿಗೆ ಕಾಣುವ ರಾಜಕಾರಣಿಗಳು ಸೂತ್ರದ ಗೊಂಬೆಗಳು ಹಾಗೂ ಲೂಟಿಯ ಚಿಕ್ಕ ಪಾಲುದಾರರು.
***************
ಗಣೇಶ ಭಟ್ ಶಿರಸಿ
ನನಗಂತೂ ಇದು ನಿಜ ಅನ್ನಿಸಿದೆ.ನನ್ನ ದೇಶದ ಜನರ ಬಾಯಿಗೆ ಈಗ ಬಟ್ಟೆ ಕಟ್ಟಲಾಗಿದೆ…ಮಾತಾಡದಂತೆ….