“ಬಾಲ್ಯ ಕಾಪಿಡುವ ಅತ್ತಿ ಹಣ್ಣು”ಭಾರತಿ ಅಶೋಕ್ ಅವರ ಬಾಲ್ಯದ ನೆನಪುಗಳು

ಹಳ್ಳಿಯಲ್ಲಿ ಬೆಳೆದ ನಮ್ಮ ಜನರೇಷನ್ ಗೆ ಇವತ್ತಿನ ಮಕ್ಕಳಿಗೆ ಸಿಗುವ ಹಣ್ಣು ಹಂಪಲು ತಿಂಡಿ ತಿನಿಸುಗಳು  ತಿನ್ನಲು ಇರಲಿ ನೋಡಲು ಸಹ ಸಿಗುತ್ತಿರಲಿಲ್ಲ. ನಮ್ಮ ಶಾಲಾ ವಿರಾಮದ ಸಮಯದಲ್ಲಿ ಅಕ್ಕ ಪಕ್ಕದ ತೋಟಗಳಿಗೆ ನುಗ್ಗಿ ಅಥವಾ ಬೇಲಿಗಳ ಮೇಲೆ ಸಿಗುವ ಹಣ್ಣುಗಳೇ ನಮ್ಮ ಅಮೂಲ್ಯ ತಿನಿಸುಗಳಾಗಿದ್ದವು. ಅವುಗಳನ್ನು ಪಡೆಯಲು ನಾವು ಹರ ಸಾಹಸ ಮಾಡುತ್ತಿದ್ದೆವು. ಊರ ಹೊರಗೆ ಅಥವಾ ಶಾಲೆಯ ಪಕ್ಕದಲ್ಲಿ ಇರುವ ಹಣ್ಣಿನ ಮರಗಳನ್ನು ಗುರ್ತು ಇಟ್ಟುಕೊಂಡು  ಬಿಡುವಿನ ವೇಳೆಯಲ್ಲಿ ಅಲ್ಲಿಗೆ ಓಡುತ್ತಲೇ ಮರದ ಜೊತೆ ಹಣ್ಣಿಗಾಗಿ ಸೆಣಸಾಟ ನಡೆಯುತ್ತಿತ್ತು.

ಮೇಲೆ ಹೆಸರಿಸಿದ ಹಣ್ಣುಗಳ ಪೈಕಿ ಅತ್ತಿ ಹಣ್ಣಿನ ಮರಗಳು  ಕಡಿಮೆ. ಆದರೂ ಹಣ್ಣನ್ನು ಹುಡುಕಿಕೊಂಡು ಅಲೆಯಿತ್ತುದ್ದೆವು. ಅದರೂ ಅವನ್ನು ನೊಡಿದ ನೆನಪು ಕಡಿಮೆಯೇ  ಅದರೆ ತಿಂದ ನೆನಪು ಮಾತ್ರ ಭಾರೀ ಜೋರು.ಕನಿಷ್ಟ ವರುಷಕ್ಕೊಮ್ಮೆಯಾದರೂ ಈ ಹಣ್ಣನ್ನು ತಿನ್ನಲೇಬೇಕು ಎನ್ನುವುದು ನಮ್ಮ ಹಿರಿಯರ ಕಡ್ಡಾಯ ಅಂಬೋಣ. ಬಾರೀ ಬಿಕ್ಕಿ ಮತ್ತು ಅತ್ತಿ ಹಣ್ಣುಗಳನ್ನು ನಮ್ಮೂರ ತಾಂಡಾದಿಂದ ಮಾರಲು ಬರುತ್ತಿದ್ದ ಸೀತಮ್ಮ ನಮಗೆ ಅಚ್ಚು ಮೆಚ್ಚು. ವಯಸ್ಸಾದ ಆಕೆ ಸಣ್ಣ ಬುಟ್ಟಿಯಲ್ಲಿ ಅಯಾ ಸೀಸನ್ನಿನ ಹಣ್ಣುಗಳನ್ನು ಮಾರುವುದರಿಂದಲೇ ಆಕೆ ಹೊಟ್ಟ ಹೊರೆಯುತ್ತಿದ್ದಳು. ಆಕೆಯ ಹತ್ತಿರ ಜೊಳಕ್ಕೆ ಬದಲಾಗಿ ಹಣ್ಣುಗಳನ್ನು  ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಅವ್ವ ಮನೆಯವರ ಹಸಿವಿಗೆ  ತಂದಿಟ್ಟ ಜೋಳದಲ್ಲಿ ಒಂದು ಬೊಗಸೆ ಜೋಳವನ್ನು ಹಾಕಿಕೊಂಡ ಪ್ರಾಕಿನ ತುದಿಯಲ್ಲೇ ದುಂಡಗೆ ಹಿಡಿದು ಸೀತಮ್ಮನ ಬಳಿ ಓಡುತ್ರಿದ್ದೆವು. ಆಕೆಯ ಜೊತೆ ಜಗಳ ಕಾಯುತ್ತಲೇ ಅಕೆ ಕೊಟ್ಟ ಹಣ್ಣನ್ನು ತಂದು ಮನೆಯ ಮೋಲೆಯಲ್ಲಿ ಕುಳಿತು ತಿಂದರೆ ಆ ದಿನ ಪೂರ್ತಿ ತೃಪ್ತಿ.

ಅಪ್ಪ ಮೆದುವಾದ ಅತ್ತಿ ಹಣ್ಣನ್ನು ಎರಡು ಕೈಯಿಂದ ಎರಡು ಹೊಳು ಮಾಡಿ ಜಲ್ದಿ ಬಾ ಗುಬ್ಬವ್ವ(ಅಪ್ಪ ಪ್ರೀತಿಯಿಂದ ಕರೆಯುತ್ತಿದ್ದುದು ಹಾಗೆ) ಕಣ್ ಮುಚ್ಕೊಂಡ್ ತಿನ್ನು ಅನ್ನುತ್ತಿದ್ದನು. ನಾನು ಹಾಗೆ ಕಣ್ ಮುಚ್ಕೊಂಡೆ ಬಾಯಿ ತೆರೆದರೆ ಅಪ್ಒ  ಬಾಯಿಗಿಡುತ್ತಿದ್ದ ಹಣ್ಣನ್ನು ತಿಂದು ನಾನೆ ತಿನ್ನುತ್ತೇನಪ್ಪಾ ಎಂದರೆ ಕೊಡುತ್ರಿರಲಿಲ್ಲ. ನಾವ್ ಕಣ್ಬಿಟ್ಕೊಙಡು ತಿನ್ನುವ ಹಣ್ಣಲ್ಲ ಅದು. ಕಾರಣ ಅದರಲ್ಲಿ ಚಿಕ್ಕ ಕಣಜಿಗ(ಹುಳುಗಳು) ಇರುವುದರಿಂದ ನೊಡಿದರೆ ಖಂಡಿತ ತಿನ್ನುವುದಿಲ್ಲ.ಆದರೆ ಅವನ್ನು ಹಾಗೆ ತಿನ್ನಬೇಕು ಎನ್ನುವುದು ಅಪ್ಪನ ಆದೇಶ. ಕಾರಣ ಹಾಗೆ ತಿನ್ನುವುದರಿಂದ ಕಣ್ಣು(ಬೇನೆ) ಬರುವುದಿಲ್ಲವಂತೆ. ಅದಕ್ಕಾಗಿ ಕಡ್ಡಾಯವಾಗಿ ಆ ಹಣ್ಣನ್ನು ಆ ಹಣ್ಣಿನ ಸುಗ್ಗಿ ಮುಗಿಯುವತನಕ ತಿನ್ನಲೇಬೇಕು ಕಣ್ಣು ಮುಚ್ಚಿಕೊಂಡು.

ಅತ್ತಿ ಅಥವಾ ಔದುಂಬರ ಮರ ಪೂರ್ತಿ ಖನಿಜಾಂಶಗಳಿಂದ ಕೂಡಿದ್ದು ಮರದ ತೊಗಟೆ, ಎಲೆ, ಹಣ್ಣು ಎಲ್ಲವೂ ಮನುಷ್ಯನ ದೇಹಕ್ಕೆ ಬೇಕಾದ ಬಹು ಮುಖ್ಯ ಔಷಧಿ ಗುಣ ಹೊಂದಿವೆ ಎನ್ನುವುದೇ ಅ ಹಣ್ಣನ್ನು ತಿನ್ನಲು ಮುಖ್ಯ ಕಾರಣ.  ಕೆಲವೊನ್ಮೆ ಇತರ ಹಣ್ಣುಗಳ ಮುಂದೆ ಅವು  ಸಪ್ಪೆ ಎನ್ನಿಸಿ ತಿನ್ನಲು ಹಿಂದೆಟು ಹಾಕಿದರೆ ಹಿಂದೆಯೇ  ಕಣ್ ಬರುವ, ಬಂದಾಗ ಕಣ್ಣು ಕೆಂಪಗೆ ಊದಿಕೊಂಡು ನೀರು ಸೋರುತ್ತಾ ನರಳುತ್ತಾ ಮನೆಯಲ್ಲಿ ಮುಚ್ಚಿಕೊಂಡು ಮಲಗುವುದನ್ನು ಊಹಿಸಿಕೊಂಡು ತಿನ್ನುತ್ತಿದ್ದೆನು. ಅದರೂ ಆಗೆಲ್ಲಾ ವರುಷಕ್ಕೊಮ್ಮೆಯಾದರೂ ಕಣ್ ಬಂದೇ ಬರುತ್ತಿದ್ದವು, ಅನುಭವಿಸುತ್ತಿದ್ದೆವು.

ಒಮ್ಮೆಯಂತೂ ಕಣ್ ಬಂದು ಮತ್ತು ಈವರೆಗೂ ಕಣ್ ಬಾರದಿದ್ದುದನ್ನು ಯಾವತ್ತೂ ಮರೆಯುವಂತಿಲ್ಲ. ಹೀಗೆ ಪ್ರತಿ ವರ್ಷದ ಬೇಸಿಗೆ ರಜೆಯಲ್ಲಿ ದೊಡ್ಡಪ್ಪನ ಊರಿಗೆ  ಹೊಗುವಂತೆ ಆ ವರ್ಷವೂ (ಪ್ರಾಯಶಃ ಏಳನೇ ತರಗತಿಲ್ಲಿದ್ದೆ)ಹೋಗಿದ್ದು ಆಕಸ್ಮಿಕವಾಗಿ ಈ ಕಣ್ ಬಂದದ್ದು, ಅದೇ ದಿನ ಹಗರಿಬೊಮ್ಮನಹಳ್ಳಿಯ ತೇರು ಇದ್ದದ್ದು, ನಾನು ಕಣ್ ಬಂದುದಕ್ಕೆ ತೇರು ನೊಡಲು ಸಾಧ್ಯವಿಲ್ಲ ಎಂದು ಮರುಗುತ್ತಾ  ಮಲಗಿದಾಗ ನನ್ನ ಅತ್ತಿಗೆ (ಬಹುಶಃ ಆಗ ಹೆರಿಗೆ ಆಗಿತ್ತ) ನನ್ನ ಬಳಿ ಪ್ರೀತಿಯಿಂದ ಬಂದು ಮೈದಡವಿ  ಏನಾಯ್ತು ಕಂದಾ ಎನ್ನುತ್ತಾ ತಾವು ಕೈಯಲ್ಲಿ ಹಿಡಿದು ತಂದಿದ್ದ ದಪ್ಪನೆಯ ಒಣ(ಕೆಂಪು) ಮೆಣಸಿನ. ಕಾಯಿ  ತುದಿಯನ್ನು ಮುರಿದು ಅದರೊಳಗಿನ ಬೀಜವನ್ನೆಲ್ಲಾ ಇಸುಕಿ ಹೊರ ಚೆಲ್ಲಿ ಅದರಲ್ಲಿ ಮೊಲೆ ಹಾಲನ್ನು ಹಿಂಡಿ ಪ್ರಿತಿಯಿಂದ ತೊಡೆ ಮೇಲೆ ಮಲಗಿಸಿಕೊಂಡು ಎರಡು ಕಣ್ಣಲ್ಲಿ ಮೆಣಸಿನಕಾಯಿಯಲ್ಲಿ ತುಂಬಿದ ಹಾಲನ್ನು ಒಂದೊಂದು ಹನಿ ಹಾಕಿದರು ಅಷ್ಟೇಏಎ….

ಈ ಕಣ್ಣು ಬರೋದು ಅಂದ್ರ ಇವತ್ತು ಗೊತ್ತಾಗಲ್ಲ ನಾವು ಮಕ್ಳಾಗಿದ್ದಾಗ ಪ್ರತಿ ವರುಷ ಕರೆಯದ ಅತಿಥಿಯಂತೆ ಮಾವು ಬೇವಿನ ಹಣ್ಣಿನ ಸುಗ್ಗಿಯಲ್ಲಿ ಇದು ಕಡ್ಡಾಯವಾಗಿತ್ತು. ಕಣ್ ಬಂದ್ವು ಅಂದ್ರೆ ಮುಗಿತು ಕಣ್ಣೆಲ್ಲಾ ಕೆಂಪಗಾಗಿ ಊತ ಬಂದು ಗಾಳಿ ಸೋಕಿದರೆ ಕಣ್ತುಂಬಾ ನೀರು ತುಂಬಿಕೊಳ್ತಿದ್ವು.ಕಣ್ಣಲ್ಲಿ ಸೂಜಿ ಚುಚ್ಚಿದ ಅನುಭವ, ಅದರ ಗಾಳಿ ಸೊಂಕಿದರೆ ಪಕ್ಕದವರಿಗೂ ಪಸರಿಸಿಬಡುತ್ತಿತ್ರು. ರಾತ್ರಿ ಮಲಗಿ ಮುಂಜಾನೆ ಎದ್ದರೆ ಕಣ್ಣಿನ ಮೇಲಿನ ರೆಪ್ಪೆಯೊಙದಿಗೆ ಕೆಳ ರೆಪ್ಪಯನ್ನು ಜೊಡಿಸಿ ಹೊಲಿದಂತೆ ಮುಚ್ಚಿಕೊಂಡಿರುತ್ತಿದ್ದವು. ಕಣ್ಣಲ್ಲಿ ಪಿಚ್ಚು ಬಙದು ಒಣಗಿ ಎರಡು ರೆಪ್ಪೆಗಳನ್ನು ಗಟ್ಟಿಯಾಗಿ ಹಿಡಿದಯ ಬಿಡುತ್ತುದ್ದವು. ಅಗ ಅವ್ವನಿಗೆ ನೀರು ಕಾಯಿಸಿ ಕೊಡುವ ಕೆಲಸ. ಕಾರಣ ಬಿಸಿ ನಿರಿನಲ್ಲ‌ಮೆದುವಾದ ಬಟ್ಟೆ ಅದ್ದಿ ಅದರಿಂದ ಅಂಟಿಕೊಂಡಿರುವ ಎರಡು ರೆಪ್ಪೆಗಳನ್ನು ಒದ್ದೆ ಮಾಡಿ ಬಿಡಿಸುವುದು ಮತ್ತೊಙದು‌ ಕೆಲಸ ಆಕೆಗೆ. ಎಷ್ಟೊ ಹೊತ್ತು ಹಾಗೆ ಒರೆಸಿದ ನಂತರ ಕಣ್ಣು ತೆರೆದುಕೊಳ್ಳುತ್ತುದ್ದವು. ಬಲವಂತದಿಙದ ಬಿಡಿಸಿಕೊಳ್ಳಲು ಹೋದರೆ ಮೆಲಿನ ರೆಪ್ಪೆಯೊಂದಿಗೆ ಕೆಳ ರೆಪ್ಪೆ, ಕೆಳ ರೆಪ್ಪೆಯೊಂದಿಗೆ ಮೇಲಿನ ರೆಪ್ಪೆ ಕಿತ್ತುಕೊಂಡು ಹೋಗುವಷ್ಟು ಬಿಗಿಯಾದ ಬಂಧವದು.

ಒದ್ದಾಡುತ್ತಾ ಕಿರುಚುತ್ತಾ ಯಾವಾಗ ನಿದ್ದೆ ಅತ್ತಿತೋ ಗೊತ್ತಿಲ್ಲ ಎದ್ದಾಗ ನನ್ ಕಣ್ಣಿಗೆ ಏನೂ ಆಗೆ ಇಲ್ಲ ಅನ್ನುವಷ್ಟು ಸ್ವಚ್ಛವಾಗಿದ್ದವು. ಬೇಗ ಎದ್ದು ಹೋಳಿಗಿ ಉಂಡು ತೇರು ನೊಡು ಹೋಗು  ಕಂದಾ ಎಂದರು ಅತ್ತಿಗೆ. ನನಗೆ ಎಲ್ಲಿಲ್ಲದ ಅಚ್ಚರಿ. ಸಾಮಾನ್ಯವಾಗಿ ಕಣ್ ಬಂದರೆ ವಾರದತನಕ ನರಳುತ್ತಿದ್ದೆ. ಈ ಬಾರಿ ಅರ್ಧ ದಿನಕ್ಕೆ ಕಣದಣು ಸ್ವಚ್ಛವಾಗಿದ್ದವು .  ಮತ್ತೆ ಅತ್ತಿ ಹಣ್ಣು ತಿನ್ನುವದನ್ನು ಯಾವತ್ತೂ ಬಿಡಲಿಲ್ಲ. ಮತ್ತೊಂದು ಅಚ್ಚರಿ ಅಂದರೆ ಅಲ್ಲಿಂದ ಇಲ್ಲಿಯವರೆಗು  ಕಣ್ ಬಂದಿಲ್ಲ.

ಇವತ್ತಿಗೆ ಅತ್ತಿ ಹಣ್ಣು ಮಾಯವಾಗಿ ಅದರ ಸ್ಥಾನದಲ್ಲಿ ಅಂಜೂರತ್ತಿ ಹಣ್ಣು ವಿರಾಜಿಸುತ್ತಿದೆ.
ವಿಶೇಷವೆಂದರೆ ನಮ್ಮ ಮನೆಯ ಪಕ್ಕದಲ್ಲಿ ಹಾಳು ಮನೆಯಲ್ಲಿ ಅತ್ತಿ ಮರ ಬೆಳೆದಿದೆ, (ಪಟದಲ್ಲಿರುವುದು ಅದೇ)  ವರುಷಪೂರ್ತಿ ಹಣ್ಣು, ಕಾಯಿ,ಚಿಗುರು ಇಲ್ಲಾ ಹೂವಿನಿಂದ ಕಂಗೊಳಿಸುತ್ತದೆ. ನಾನು ನೊಡಿದಂತೆ ಒಂದು ವರ್ಷದಲ್ಲಿ ನಾಲ್ಕೈದು ಬಾರಿ ಹಣ್ಣು ಆಗಿದೆ.
 ಮರದಡಿಯಲ್ಲಿ ಒಡಾಡುವುದೇ ಒಂದು ಅನುಭೂತಿ. ಅದರ ಪರಿಮಳ  ಆಕರ್ಷಿಸುತ್ತದೆ. ಈಗ ಒಂದೆರಡು ವರ್ಷದಿಂದ ಅದನ್ನು ಗಮನಿಸುತ್ತಿದ್ದೇನೆ. ಮಕ್ಕಳನ್ನು ಏರಿಸಿ ಹಣ್ಣು ಕಿತ್ತು ತಿನ್ನುತ್ತಾ ಅಕ್ಕ ಪಕ್ಕದ ಮನೆಯವರುಗೂ ಕೊಡುವುದು ಒಟ್ಟಿಗೆ ತಿನ್ನುವುದು  ಮತ್ತೆ ಮತ್ತೆ ಬಾಲ್ಯ ಮೆಲಕು ಹಾಕುವಂತಾಗಿದೆ.


Leave a Reply

Back To Top