ಕಾವ್ಯ ಸಂಗಾತಿ
ಡಾ. ಡೋ.ನಾ.ವೆಂಕಟೇಶ್
ಅಸಂಗತದ ಪರಾಕಾಷ್ಠೆ
ಹುಟ್ಟಿದ್ದಕ್ಕೊಂದು ಬದ್ಧತೆಯ ಶಿಸ್ತು.
ಬೆಳೆಯುತ್ತ ಕೈಗೆಟುಕದ ಮಸ್ತಿ ಯ
ಜೀವನ ಕ್ರಮದ ರೂಢಿ
ಮೈಗೂಡಿಸಿ ಕೊಳ್ಳಲೇ ಇಲ್ಲ
ರಾತ್ರಿ
ದಾರಿಹೋಕರ ದೀಪದ ಕಂಭದ
ಕೆಳಗೆ ಅಭ್ಯಾಸ ಮಾಡಲಿಲ್ಲ,
ಹಗಲು
ಕಲ್ಲು ಮಠ ದಲ್ಲಿ
ಮರಳ ಮೇಲೆ ಅಕ್ಷರಾಭ್ಯಾಸ
ನಡೆಸಲಿಲ್ಲ
ನಮ್ಮಪ್ಪನ ತರಹಾ
ಮೊಮ್ಮಗನ ತರಹ
ತರಹೇವಾರಿ ಡಿಜಿಟಲ್ ಪ್ರಪಂಚದಲ್ಲಿ ಮಿಂದು ಸಕಲ
ವಿದ್ಯೆಗಳ ಒಮ್ಮೆಲೇ ಕಲಿಯುವ
ಧಾವಂತ ಇರಲಿಲ್ಲ
ಪ್ರಪಂಚವನ್ನೇ ಗೆಲ್ಲುವ
ಆತುರಗಳೇ ಬರಲಿಲ್ಲ!
ಕಲಿತದ್ದು
ಅಜ್ಜ ಹೇಳಿ ಕೊಟ್ಟ
ಪಾಠ ಬೋಧೆಗಳಿಂದ
ಅಪ್ಪ ತೋರಿದ ಕಾರ್ಪಣ್ಯದಿಂದ
ಅಮ್ಮ ಹೇಳಿಕೊಟ್ಟ ಸದೃಢ
ಸಂಕಲ್ಪಗಳಿಂದ.
ಮತ್ತು
ಏಕಾದಶಿಯ ದಿನ ಅಜ್ಜಿ ಮರೆಯಲ್ಲಿ ನಿಂತು ಕೊಟ್ಟ
ಬೇಯಿಸಿದ ಗೆಣಸಿನ ತುಂಡಿನ
ಋಣದ ಜೀವನಾಮೃತದಿಂದ.
ಧನ್ಯನಾದೆ
ಕೃತಕೃತ್ಯನಾದೆ!
ನೋಡಿದರೆ ಈಗ
ಜೀವನ ಕಾವ್ಯದ
ಪರಾಕಾಷ್ಠೆ
ಅಂಗುಲ ಅಂಗುಲದಿಂದ
ಭೂಮ್ಯಾಕಾಶದುದ್ದಕ್ಕೂ
ಅವ್ಯಾಹತ
ಅನಂತ
ಅದ್ಭುತ
ಹಾಗೂ ಅಸಂಗತ !!
—————————————–
ಡಾ ಡೋ.ನಾ.ವೆಂಕಟೇಶ
ತನ್ನದೇ ಹಾದಿ ಹಿಡಿದು, ತನ್ನದೇ ಹಾಡು ಬರೆಯಲು ನಿಮಗಲ್ಲದೆ ಇನ್ಯಾರಿಗೆ ಸಾಧ್ಯ. ಮತ್ತೊಮ್ಮೆ ಉತ್ತಮ ಕವನ… ಡಾ. ಕೆ. ಬಿ. ಸೂರ್ಯ ಕುಮಾರ್, ಮಡಿಕೇರಿ.
ಧನ್ಯವಾದಗಳು ಸೂರ್ಯ!
ನಿಮ್ಮ ಹೂಗಳಿಕೆಯ ಹೂಗಳೇ ಕವನಗಳಿಗೆ photo synthesis!
ಕವಿತೆ ಪರಮಶ್ರೇಷ್ಟವಾಗಿ ಬಂದಿದೆ
ಧನ್ಯವಾದಗಳು ಮಂಜಣ್ಣ !