ವಚನ ಮೌಲ್ಯ-ಸುಜಾತಾ ಪಾಟೀಲ ಸಂಖ

“ಮಾಡಿದೆನೆಂಬುದು ಮನದಲ್ಲಿ ಹೊಳೆದರೆ,
ಏಡಿಸಿ ಕಾಡಿತ್ತು ಶಿವನ ಡಂಗುರ!

ಮಾಡಿದೆನೆನ್ನದಿರಾ ಲಿಂಗಕ್ಕೆ,
ಮಾಡಿದೆನೆನ್ನದಿರಾ ಜಂಗಮಕ್ಕೆ.
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದರೆ,
ಬೇಡಿತ್ತನೀವ ಕೂಡಲಸಂಗಮದೇವ.”

ಅಪ್ಪ ಬಸವಣ್ಣನವರು
*********

12 ನೇ ಶತಮಾನದ ಬಸವಾದಿ ಶರಣರು  ಜಗದ ಅಜ್ಞಾನ ತೊಲಗಿಸುವ  ಪಣ ತೊಡುವದರ, ಜೊತೆ ಜೊತೆಗೆ ತಮ್ಮಲ್ಲಿರುವ ಅಜ್ಞಾನ ಅಂಧಕಾರ ಅಳಿಸಿಹಾಕಲು, ತಮ್ಮನ್ನು ತಾವೇ ಆತ್ಮಾವಲೋಕನ ಮಾಡಿಕೊಳ್ಳುವ ಆಧ್ಯಾತ್ಮಿಕ ಮೌನಕ್ರಾಂತಿಯನ್ನು ಹುಟ್ಟು ಹಾಕಿ , ಯಾವ ಫಲಾಪೇಕ್ಷೆ ಬಯಸದೆ ,ಯಾವ ಹಮ್ಮು ಬಿಮ್ಮುಗಳಿಲ್ಲದೆ, ನಿರಾಳ ಸುರಾಳ, ಸುಂದರ , ನಿರ್ಲಿಪ್ತ ಜೀವನ ಬದುಕಿದರು. ಅವರು ಬದುಕಿದ ಸತ್ಯದ ಕನ್ನಡಿಯೇ ವಚನ ಸಾಹಿತ್ಯ.
ಸಾಗರೋಪ ಸಾಗರವಾಗಿ ಮಾನವೀಯ ಮೌಲ್ಯಗಳು ತುಂಬಿ ನಿಂತಿವೆ ಶರಣರ ವಚನಗಳಲ್ಲಿ,
ಅವುಗಳನ್ನು ಬದುಕಿನಲ್ಲಿ ಬಳಸಿಕೊಳ್ಳುವ ಮನಸ್ಸುಗಳು ,ಹ್ರದಯಗಳು ತಯಾರಾದರೆ ಮತ್ತೇ ಕಲ್ಯಾಣ ರಾಜ್ಯ  
ಮರು ಸ್ರಷ್ಟಿಯಾಗುವದು ನಿಶ್ಚಿತ,  ಮತ್ತು ಶರಣರು ಕಂಡು ಕನಸು ನನಸಾಗುವುದು.

ಇಂದು ಜಗತ್ತು ಬಾಹ್ಯವಾಗಿ ಎಷ್ಟೇ ಶ್ರೀಮಂತರಾಗಿ ಬೆಳೆದರು ಶರಣರಂತೆ ಹ್ರದಯಶ್ರೀಮಂತಿಕೆ  ನಮ್ಮಲ್ಲಿ ಇದೆಯೇ? ಎಂದು ಆತ್ಮ ಪರೀಕ್ಷೆ ಮಾಡಿಕೊಳ್ಳಬೇಕು.
ಹಾಗಾದರೆ ಅಪ್ಪ ಬಸವಣ್ಣನವರ ಈ ವಚನ ತಿಳಿಯೋಣ ಬನ್ನಿ

“ಮಾಡಿದೆನೆಂಬುದು ಮನದಲ್ಲಿ ಹೊಳೆದರೆ,
ಏಡಿಸಿ ಕಾಡಿತ್ತು ಶಿವನ ಡಂಗುರ!

      ಮಾಡಬೇಕು ನೀಡಬೇಕು ಆ ಮೂಲಕ ಹೆಸರು ಪಡೆಯುವ ಉದ್ದೇಶವುಳ್ಳವರಿಗೆ ಈ ವಚನದ ಮಾತು ರುಚಿಸುವುದಿಲ್ಲ. ಸಾಯುವುದರೊಳಗಾಗಿ ಏನನ್ನಾದರೂ ಮಾಡಿ ಹೆಸರನ್ನು ಪಡೆಯಬೇಕು ಎಂಬ ಹಪಾಹಪಿತನ ಮನದಲ್ಲಿ ಗಟ್ಟಿಯಾಗಿ ಬೇರು ಬಿಟ್ಟು ಉಳಿದುಕೊಂಡಿರುತ್ತದೆ.

.     ನಾವು ಯಾವುದಾದರೂ ಒಂದು ಕೆಲಸ ಮಾಡದ್ದರೆ ನಾನು ಮಾಡಿದೆನು  ಎಂಬುದರಲ್ಲಿ ‘ ನಾನು ‘ ಎಂಬ ಅಹಂ ಇದೆ. ಈ ನಾನು ಎಂಬ ಅಹಂ ಎಲ್ಲಿಯವರೆಗೆ ನಮ್ಮಲ್ಲಿ ಇರುವುದು ಅಲ್ಲಿಯವರೆಗೆ ನಾವು ‘ ಭವಿ ‘  ಅಂದರೆ ಸಾಮಾನ್ಯ ಜೀವಿಗಳಾಗಿಯೇ ಉಳಿಯುತ್ತವೆ.
ಮಾಡಿದೆನು ಎಂಬ ‘ ಅಹಂ’ ಸುಪ್ತವಾಗಿದ್ದರೆ ಅಷ್ಟೇನೂ ಅಪಾಯವಿರುವುದಿಲ್ಲ. ಆದರೆ ವಾಸ್ತವದಲ್ಲಿ ಹಾಗಾಗುವುದಿಲ್ಲ.  ನಾನೆಂಬ’ ಅಹಂ’ ಯಾವಾಗಲೂ ಜಾಗ್ರತವಾಗಿದ್ದು ಅದು ಶರವೇಗವಾಗಿ ನಮ್ಮ ಮನವನ್ನು ಆವರಿಸಿಬಿಡುತ್ತದೆ. ಆಗ ಅರಿವು ಹಿಂದಕ್ಕೆ ಸರಿದು ಅಜ್ಞಾನ ಮುಂದಕ್ಕೆ ಬರುತ್ತದೆ.  ಅರಿಷಡ್ವರ್ಗಗಳು ವಿಜೃಂಬಿಸಿ ಪಂಚೇಂದ್ರೀಯಗಳ ಮೂಲಕ ಭವಗುಣಗಳು ಕಾರ್ಯತತ್ಪರವಾಗುತ್ತವೆ. ಅಜ್ಞಾನದ ಮುಸುಕನ್ನು ಅರಿವಿನ ಮೇಲೆ ಮುಚ್ಚಿಬಿಡುತ್ತವೆ.

 ಪರಿಣಾಮವಾಗಿ ಅಧ:ಪತನದ ಆರಂಭ, ಹಾಗೂ ಆ ಮೂಲಕ ವ್ಯಕ್ತಿತ್ವದ ವಿನಾಶವಾಗಿ, ಕ್ರಮೇಣ ಸಮಾಜವು ವಿನಾಶದ ಹಾದಿ ಹಿಡಿಯುತ್ತದೆ.
ನಾನು ಮಾಡಿದೇನು ಎಂಬ ಅಹಂ ಮನದಲ್ಲಿ ಮೂಡಿದಾಗ ಶಿವನ ಎಚ್ಚರಿಕೆಯ ಗಂಟೆ ಅಣಕಿಸುತ್ತ ಹಂಗಿಸುತ್ತದೆ. ಅಂದರೆ ನಮ್ಮ ಆತ್ಮಸಾಕ್ಷಿ  ನಮಗೆ ಕೆದಕುತ್ತದೆ, ಎಂದು ಅಪ್ಪ ಬಸವಣ್ಣನವರು ಹೇಳುತ್ತಾರೆ.

ಮಾಡಿದೆನೆನ್ನದಿರಾ ಲಿಂಗಕ್ಕೆ,
ಮಾಡಿದೆನೆನ್ನದಿರಾ ಜಂಗಮಕ್ಕೆ.
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದರೆ,
ಬೇಡಿತ್ತನೀವ ಕೂಡಲಸಂಗಮದೇವ.”

 ನಾನು ಲಿಂಗಕ್ಕೆ ಮಾಡಿದೆನು, ನಾನು ಜಂಗಮಕ್ಕೆ ಮಾಡಿದೆನು, ಎಂದು ಜಂಭ ಕೊಚ್ಚಿಕೊಳ್ಳಬಾರದು.
ಯಾವಾಗಲೂ ಪ್ರಸಿದ್ಧಿಗಾಗಿ, ಕೀರ್ತಿಗಾಗಿ,ಹೊಗಳಿಸಿಕೊಳ್ಳುವಿಕೆಗೆ,  ಹಂಬಲಿಸಬಾರದು.

ಲಿಂಗ, ಜಂಗಮಕ್ಕೆ ಮಾಡಿದ ಉಭಯ ಕಾರ್ಯಗಳನ್ನು  ನಿಷ್ಕಾಮ ಭಾವದಿಂದ ಮಾಡಬೇಕು, ಯಾವುದೇ ಫಲಾಪೇಕ್ಷೆ ಬಯಸದೆ ಮಾಡಬೇಕು.  
 ‘ನಾನು ಮಾಡಿದೆ’ ಎಂಬ ಭಾವ, ಅಹಂ ಮನದಲ್ಲಿ ಇಲ್ಲದಿದ್ದರೆ ಆತನೇ…. ಕೂಡಲಸಂಗಮದೇವ ಆಗುವನು.  ನಾವು ಬಯಸುವುದನ್ನು ತಕ್ಷಣ ಆತ ಕೊಡುತ್ತಾನೆ.
 ಎಂದು ಅಪ್ಪ ಬಸವಣ್ಣನವರು ಹೇಳುತ್ತಾರೆ.


Leave a Reply

Back To Top