ಕಾವ್ಯ ಸಂಗಾತಿ
ಸಾಕ್ಷಿ ಶ್ರೀಕಾಂತ ತಿಕೋಟಿಕರ
ಪಡವಲಕಾಯಿ ಬಜಿ
ಹಿತ್ತಲಲ್ಲಿ ಹಾಕಿದ ಹಸಿರು ಚಪ್ಪರದಲ್ಲಿ
ಜೋತು ಬಿದ್ದೆವೆ ನೋಡು ಅಬ್ಬರದಲಿ
ಹಾವಿನಂತೆ ಬಳಕುವ ಹಸಿರು ಕಾಯಿ
ನೋವಾಗದಂತೆ ಕತ್ತರಿಸು ನೀ ಬಾಯಿ
ವಕ್ರವಾಗಿದರೂ ತಪ್ಪಿಲ್ಲ ರುಚಿ ಗುಣದಲಿ
ಚಕ್ರವಾಗಿ ಕತ್ತರಿಸು ಈಳಿಗೆಮಣೆಯಲಿ
ಪಕ್ವವಾದ ಕಾಯಿ ಔಷದಿ ಪಹಣಿಯಲಿ
ಸತ್ವದಲಿ ಚುತಿತಾರದೆ ಸವಿ ಹವಣಿಯಲಿ
ತಾಜಾ ಬೀಸಿದ ಹಸಿ ಕಡಲೆಹಸನು ಹಿಟ್ಟು
ರಜಾ ಉಳಿದ ತರಕಾರಿ ಪಕ್ಕ ಸರಿಸಿಟ್ಟು
ಬಾಣಲೆಯನು ಬೆಂಕಿ ತಲೆ ಮೇಲಿಟ್ಟು
ಗಾಣದ ಎಣ್ಣೆಯನು ಹಾಕಿತುಸು ಕೈ ಬಿಟ್ಟು
ಅರಿಷಿಣವನು ಸೇರಿಸಲು ಬಣ್ಣ ಬರಲಿ
ಪರೀಷೆ ಮಾಡದೆ ಕೆಂಪು ಕಾರ ರುಚಿ ತರಲಿ
ಇಂಗಿನ ಪರಿಮಳ ಜೀರಿಗೆ ಜೊತೆ ಇರಲಿ
ಹಂಗಿನ ಲವಣ ಮರೆಯದೆ ಬಂದು ಸೇರಲಿ
ಹದವಾದ ಹಿಟ್ಟಿನಲ್ಲಿ ಹೋಳು ಮಿಂದೆದ್ದು
ಕಾದ ಎಣ್ಣೆಯಲ್ಲಿ ಗರಿಗರಿ ತೇಲುತ ಬಿದ್ದು
ರುಚಿಯನ ಮೀರುತ ಚಟ್ನಿ ಜೊತೆಗೆ ಇದ್ದು
ಶುಚಿಯಲಿ ಪಡವಲಕಾಯಿ ಕವನ ಮೀರಿದ್ದು!!
ಸಾಕ್ಷಿ ಶ್ರೀಕಾಂತ ತಿಕೋಟಿಕರ.