ಕಾವ್ಯ ಸಂಗಾತಿ
ಮಲ್ಲಿಕಾ ಜೆ ಆರ್ ರೈ
“ಬೆಟ್ಟವೇರಿದಂತೆ ಬಗೆ ಬಗೆಯ ಬಯಕೆ“
ಬೆಟ್ಟವೇರಿದಂತೆ,
ನಿನ್ನೆ ಹೊರಟೆ
ಇವತ್ತು ಬಂದುಬಿಟ್ಟೆ
ನಾಳೆ ಹೀಗೆ ಎಂಬ ಅರಿವಿರದೆ
ಸುಮ್ಮನೆ ಅಲ್ಲಿ ಇಲ್ಲಿ ಕಾಲ ಕಳೆದು
ನಗುವ ಮೊಗವನ್ನು ಸಂತಸದಿ ನೋಡಿ
ನಂಬಿರುವ ಆ ದೇವರನ್ನು ಮನದಲ್ಲಿ ಸ್ಮರಿಸಿ
ನಿತ್ಯವೂ ಬಣ್ಣದೋಕುಳಿ ಇಡುವ ಆ ಹಜಾರಕೆ
ಪ್ರವೇಶ ಎಲ್ಲರಿಗೂ ಇದೆ
ನಾಮಫಲಕ ಕಾಣುತ್ತಿಲ್ಲವಷ್ಟೇ
ನಾನಂದುಕೊಂಡ ಲೋಕವೆಲ್ಲ
ನನ್ನೊಳಗಿನ ಅಂತರಂಗಕ್ಕಿಳಿದು
ಅದು ಇಷ್ಟೇ ಇದು ಅಷ್ಟೇ ಎಂದು ಸೀಮಿತಗೊಳಿಸಿ
ನೆವನ ಹೇಳಿದರೂ ನಂಬುವವರಾರು ಎಂಬ
ಸೋಜಿಗದ ನಗೆಯೊಳಗೆ ನೆಗೆಯುತ್ತಾ
ನಿಂತಲ್ಲೇ ನಿಲ್ಲೋಕಾಗದೇ ಎಡವುತ್ತಾ ಬಸವಳಿದು
ಸಾಕಪ್ಪ ಸಾಕು ಅನ್ನುವಷ್ಟರಲ್ಲಿ
ಹೊಸ ಹುರುಪು ಬಂದರೂ ಅಚ್ಚರಿ ಇಲ್ಲ
ಬರೆದಿರುವುದರ ಬಗೆಗೆ ಚಿಂತೆಯೂ ಇಲ್ಲ
ಬಾಂಧವ್ಯಕ್ಕೆ ಅಡ್ಡಿ ಏನುಂಟು
ಒಂದೆರಡು ಮಾತು ಮುತ್ತಿನಂತೆ ಆಡಿದರಾಯ್ತು
ನವಿಲಿನ ಕಣ್ಣಿನ ತಿಜೋರಿಯೊಳಗೂ
ಆ ಬಗೆಯ ನಂಟು
ಒಳಿತಾದುದರ ಬಗೆಗೆ ಏನಡ್ಡಿ
ತಿದ್ದುವ ಪ್ರಕ್ರಿಯೆ ನಮ್ಮಂತರಂಗದಲ್ಲಿ ಇದ್ದಾಗ
ನಲಿಯುವ ಹೂಬನ ನಮ್ಮೆದುರಲ್ಲೇ
ಕಾಣುವ ಚೈತನ್ಯಕ್ಕೊಂದು ಚಿತ್ತಾರದ ಲೇಪನ
ಸುತ್ತಮುತ್ತ ಎಲ್ಲೆಲ್ಲೂ ಹಾಡಿ ಕುಣಿದು
ನಲಿಯುವಷ್ಟರ ಹೊತ್ತಿಗೆ
ಮೈ ನವಿರೇಳಿಸುವಂತಹ ಮೌನಗೀತೆ
ಹೃದಯದ ಹಾಡಿಗೆ ಸೋತಿತೇ
ಸೋತು ಗೆಲ್ಲುವ ಪರಿಗೆ
ದಾರಿಯ ಅರಿವಿದೆ ಅಗೋಚರವಾದ
ಸಂಗತಿಗಳಿವೆ, ಶಾಸ್ತ್ರ ಬದ್ಧವಾದ ಕರ್ಮಗಳಿವೆ
ಅನುಸರಿಸುವುದು ಕಷ್ಟವಾಗದು.
ಮಲ್ಲಿಕಾ ಜೆ ಆರ್ ರೈ
ಅಧ್ಯಕ್ಷರು
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ (SCI)
ಪುತ್ತೂರು ಲೀಜನ್ 5 7 4 2 0 2
ಮಲ್ಲಿಕಾ ಜೆ ಆರ್ ರೈ