ಕಾವ್ಯ ಸಂಗಾತಿ
ಕಂಸ
ಗಜಲ್
ಶೈಶವದಲ್ಲಿ ಜೊತೆಗೂಡಿ ಆಡಿದರೂ ಪ್ರೀತಿ ಅರಿಯಲಿಲ್ಲ ನಾವು
ಎದುರು ಬದುರು ಮನೆಯಲ್ಲಿದ್ದರೂ ಸ್ನೇಹ ಬಯಸಲಿಲ್ಲ ನಾವು
ಸುಂದರವಾದ ಗುಲಾಬಿ ಹೂವಿನಲ್ಲೂ ಮುಳ್ಳು ಇರುವುದಿಲ್ಲವೇ
ಶಾಲಾ ದಿನಗಳಲ್ಲಿ ಜೊತೆಯಾಗಿ ನಡೆದರೂ ಮಿತಿ ಮೀರಲಿಲ್ಲ ನಾವು
ಅರಳುವ ಮೊಗ್ಗುಗಳ ಚಿವುಟದೆ ಬೆಳೆಯಲು ಬಿಟ್ಟರೆ ಸಾಕು
ಪ್ರೌಢಾವಸ್ಥೆಯಲ್ಲಿ ಕಿರುನೋಟದಿ ಕದ್ದು ಮುಚ್ಚಿ ನೋಡಲಿಲ್ಲ ನಾವು
ಆನಂದ ಪ್ರೇಮಾನಂದ ಪ್ರಾಸ ಒಂದೇಯಾದರೂ ಬಹಳ ವ್ಯತ್ಯಾಸವಿದೆ
ಯೌವ್ವನದಲ್ಲಿ ನಾಚಿಕೆಯಿಂದ ಮುಖಕ್ಕೆ ಮುಖಕೊಟ್ಟು ಮಾತಾಡಲಿಲ್ಲ ನಾವು
ಪ್ರೀತಿ ಎಂಬುದು ಸುಖದ ಕಲ್ಲು ಮುಳ್ಳಿನ ದುರ್ಗಮದ ಹಾದಿ
ಅನ್ಯರ ಪ್ರೀತಿ ಪ್ರೇಮ ಪ್ರಣಯದ ಕಥೆಗಳನ್ನು ಕೇಳಿ ಮರುಗಲಿಲ್ಲ ನಾವು
ಹೊಲ ಗದ್ದೆ ತೋಟ ಹಳ್ಳದ ದಂಡೆಯಲ್ಲೇ ಹಳ್ಳಿಯ ಪ್ರೇಮಿಗಳು ಮೀಯುವುದು
ಇದ್ದ ಊರು ತೊರೆದು ದೂರವಾದ ಮೇಲೆ ಸಹಿಸಲಿಲ್ಲ ನಾವು
ಬಾನೆತ್ತರಕ್ಕೆ ಹಾರಿದ ಪಕ್ಷಿಗಳು ನೆಲವಿಲ್ಲದೆ ಬದುಕಲಾದಿತೇ
ಇಬ್ಬರೂ ಹುಡುಕಾಡಿದರೂ ಗುರುತು ಸಿಗದೆ ಸಂಧಿಸಲಿಲ್ಲ ನಾವು
ಜನನ ಮರಣದ ನಡುವೆ ಬದುಕಲು ಸ್ನೇಹ ವಿಶ್ವಾಸ ಬೇಕು
ಮನದಲ್ಲೇ ಮೌನವಾಗಿ ಪ್ರೇಮಸೌಧವ ಕಟ್ಟಿದರೂ ಹೇಳಲಿಲ್ಲ ನಾವು
ಯುದ್ಧದಿಂದ ಸದ್ದು ಗದ್ದಲ ಗೊಂದಲ ನಾವೇ ಸೃಷ್ಟಿಸಿಕೊಳ್ಳುವುದು
ಕುಟುಂಬದ ಸದಸ್ಯರ ಜೊತೆ ಸಿಕ್ಕಾಗ ಕಣ್ಣಲ್ಲಿ ಕಣ್ಣಿಟ್ಟರೂ ಪಿಸುಗುಡಲಿಲ್ಲ ನಾವು
ಮಗುವಿಗೆ ತಾಯಿ ಆಶ್ರಯ ಬೇಕು ಮುಪ್ಪಾದಾಗ ಮಕ್ಕಳ ಆರೈಕೆ ಸಾಕು
ರೆಕ್ಕೆ ಬಲಿತ ಹಕ್ಕಿಗಳಾದರೂ ಹೆತ್ತವರ ಬಿಟ್ಟು ಓಡಿ ಹೋಗಲಿಲ್ಲ ನಾವು
ಹತ್ತಿರವಿದ್ದಾಗ ದೂರ ನಿಂತೆವು ಮರೆಯಾದಾಗ ಮೈ ಮರೆತು ಕುಳಿತೆವು
ಅಂತರದಲ್ಲಿದ್ದರೂ ನಿರಂತರ ಕನಸಿನ ಗೋಪುರ ಕಟ್ಟಿಕೊಳ್ಳುವುದ ಬಿಡಲಿಲ್ಲ ನಾವು
ಅಮಾವಾಸ್ಯೆಯ ಕತ್ತಲಲ್ಲಿ ಏಕಾಂಗಿಯಾಗಿ ನಡೆದ ಕಂಸ ನೀನಿಲ್ಲದೆ ನಡೆಯಲಾರ
ಕೊನೆಗೂ ಇಬ್ಬರ ಬಯಕೆಯಂತೆ ಮದುವೆಯಾಗುವುದ ಮರೆಯಲಿಲ್ಲ ನಾವು
————————
ಕಂಸ