“ನಾಲ್ಕು ದಾರಿಗಳು”….ವೇಣು ಎಂ ಬನಹಳ್ಳಿ ಅವರ ವಿಭಿನ್ನ ಸಣ್ಣ ಕಥೆ

 ಇನ್ನೇನು ಜೋರು ಮಳೆಯಾಗುವುದೆಂಬಂತೆ ಕವಿದಿದ್ದ ಕಾರ್ಮೋಡ ಕತ್ತೆಲೆಯನ್ನು ಇನ್ನಷ್ಟು ಕತ್ತಲೆಯನ್ನಾಗಿಸಿತ್ತು. ಕಾಡಳ್ಳಿಯ ಜನರೆಲ್ಲಾ ಕತ್ತಲೆಯಲ್ಲಿ ತಮ್ಮ ತಮ್ಮ ಚಾಪೆ ಕಂಬಳಿಯನ್ನು ಹಿಡಿದು ಗೋಪಣ್ಣನ ಮನೆಯ ಬಳಿ ನೆರೆದಿದ್ದರು. ಗೋಪಣ್ಣ ಮನೆ ಮುಂದೆ ಅದಾಗಲೇ ‘ಕಥೆ’ ಮಾಡುವ ಮಂಡಳಿಯವರು ಪೆಂಡಾಲ್ ನ ಕೆಳಗೆ ತಮ್ಮ ಜಾಗಗಳಲ್ಲಿ ಭದ್ರವಾಗಿ ಕುಳಿತಿದ್ದರು. ಇನ್ನೇನು ಕಥೆ  ಶುರು ಎನ್ನುವಂತೆ , ಮುಂದಿದ್ದ ಮೈಕು ಸರಿಪಡಿಸುತ್ತಾ ‘ ಹಲೋ , ಹೆಲೋ  ಚೆಕ್ ‘ ಎನ್ನುತ್ತಾ ತಬಲಾ ತಾಳಗಳನ್ನು ಕುಟ್ಟುತ್ತಾ , ಗಂಟಲು ಸರಿಪಡಿಸಿಕೊಳ್ಳುತ್ತಾ  ವಿಚಿತ್ರ ಗಲಭೆಯನ್ನು ಸೃಷ್ಟಿಸುತ್ತಿದ್ದರು.

ಪೆಂಡಾಲಿಗೆ ಕಟ್ಟಿದ್ದ ಒಂದು ಸ್ಕ್ರೀನಿನ ಹಿಂದೆ ಕಥೆಯ ಪಾತ್ರಧಾರಿಗಳು ಬಂಡಿ ಬಣ್ಣವನ್ನು ಮೆತ್ತಿಕೊಂಡು, ಬೆಳಕು ನೀಡಲು ಕಟ್ಟಿದ್ದ ಫೋಕಸ್ ಲೈಟಿಗೆ ಪ್ರತಿಸ್ಪರ್ಧಿಗಳಂತೆ ಮಿರ ಮಿರ ಮಿನುಗುತ್ತಿದ್ದರು. ಅದರಲ್ಲಿನ ‘ಬಪೂನು’ ಪಾತ್ರಧಾರಿ ಅದಾಗಲೇ ಕುಚೇಷ್ಟಗಳನ್ನು ಶುರುವಿಟ್ಟಿದ್ದ . ಕಾಡಳ್ಳಿ ಜನರೆಲ್ಲಾ ಈಗ ನಡೆಯಲಿರುವ ‘ಯಲ್ಲಮ್ಮನ ಕಥೆ’ಗೆ ಸಾಕ್ಷಿಯಾಗುತ್ತಿದ್ದರು.

ಗೋಪಣ್ಣ ಇದ್ದಿದ್ದರೆ ಅವನೂ ಅವರಲ್ಲೊಬ್ಬನಾಗಿ ಕಂಬಳಿ ಚಾಪೆ ಹಾಸಿ ಬಿಟ್ಟಗಣ್ಣು ಮುಚ್ಚದೇ ಬೆಳಗಿನ ವರೆಗೂ ಯಲ್ಲಮ್ಮನ ಕಥೆ ನೋಡುತಿದ್ದ.
ಶಿವ-ಪಾರ್ವತಿಯ ಮಗಳಾಗಿ ಹುಟ್ಟಿ , ಮುನಿಯನ್ನು ವರೆಸಿ , ಮೋಹದ ಬಲೆಯಲ್ಲಿ ಮೈಮರೆತು ಗಂಡನ ಕೋಪಕ್ಕೆ ಗುರಿಯಾಗಿ , ಶಾಪಗ್ರಸ್ತಳಾಗಿ , ಕೊನೆಗೆ ಮಗನ ಕೈಯಿಂದಲೇ ತಲೆ ಕಡಿಸಿಕೊಂಡ ತನ್ನ ದೇವತೆಯ ಕಥೆ ಕೇಳುತ್ತಲೇ, ನೋಡುತ್ತಲೇ ಕಣ್ಣೀರಾಗುವನು ಗೋಪಣ್ಣ. ಅವನ ಕಣ್ಣೀರು ಅಲ್ಲಿ ನೆರೆದಿದ್ದ ಹೆಂಗಸರೆಲ್ಲರ ಕಣ್ಣೀರನ್ನು ಮೀರಿಸುವಂತದ್ದು. ಅಷ್ಟು ಹೆಂಗರುಳಿನ ಮನಸಿನವನು.

ಈಗ ಈ ಕಥೆಗೆ ಮತ್ತಷ್ಟು ಕಣ್ಣೀರೆರೆದು ಮ್ಲಾನನಾಗಬೇಕಿದ್ದ ಗೋಪಣ್ಣ ಉಸಿರು ಕಳೆದುಕೊಂಡು ಮನೆಯ ಒಳಗೆ , ತನ್ನ ಮಂಚದ ಮೇಲೆ ಸಿಕ್ಕಷ್ಟೂ ಹೂಗಳನ್ನು ಹೊತ್ತು , ಸತ್ತು ಮಲಗಿದ್ದಾನೆ. ಅವನ ಪಕ್ಕದಲ್ಲಿ ಅಕ್ಕಿ ತುಂಬಿದ ಲೋಟಕ್ಕೆ ಚುಚ್ಚಿದ್ದ ಊದು ಕಡ್ಡಿಗಳು ಕರಗಿ ಮುಕ್ಕಾಲು ಭಾಗಕ್ಕೆ ಬಂದಾಗಿದೆ. ಅವನ ತಲೆಯ ಭಾಗದಲ್ಲಿ ಉರಿಯುತ್ತಿದ್ದ ದೀಪದಲ್ಲಿ ಎಣ್ಣೆ ತುಂಬಿದೆ. ಮನೆಯಲ್ಲಾ ಗೌಜು ಗೌಜಾಗಿ ಉಸಿರು ಕಟ್ಟಿಸುವಂತಹ ಮೌನದಲ್ಲಿ ಮುಳುಗಿದೆ. ಮನೆಯ ಮೂಲೆಯಲ್ಲಿ ಯಾವುದೇ ದುಃಖ; ಸಂತಾಪ ಭಾವ  ತೋರಿಸದ ಮುಖ ಹೊತ್ತು ಅವನ ಮಗಳು ಪರಮೇಶ್ವರಿ  ಕೂತಿದ್ದಾಳೆ.

         ******

ಹೆಣದ ಮುಂದೆ ಗೊಳೋ ಎಂದು ಗೋಳಿಟ್ಟು ಅಳುವವರು ಇಲ್ಲದೆ , ಸುತ್ತ ಆವರಿಸಿದ್ದ ಸುಳ್ಳು ಸೂತಕಕ್ಕು ಬೇಸರವಾಗಿ, ಕಥೆ ಕೇಳಲು ಹೊರ ಬಂದು ನಿಲ್ಲುವಲ್ಲಿ , ಕಾರ್ಮೋಡ ಕರಗಿ ಜೋರೆಂದು ಜೋರು ಮಳೆ ಸುರಿಯುತಿತ್ತು. ನೆರೆದಿದ್ದ ಜನ , ಕಥೆ ಮಾಡುವರೊಂದಿಗೆ ಪೆಂಡಾಲಿನ ಕೆಳಗೆ ಒತ್ತರಿಸಿಕೊಂಡು ನಿಂತಿರಲು; ನಕ್ಕ  ಸೂತಕ ಮರಳಿ ಒಳ ಹೊಕ್ಕು , ಜೋಮು ಹಿಡಿದು ಕೂತಂತೆ ಕೂತ  ಪರಮಿಯ ಬಳಿ ಹೋಗಿ ಗೋಪಣ್ಣನ ಕುರಿತ ಕಥೆ ಕೇಳಲು…..

ಪರಮಿ ಗೋಪಣ್ಣ-ಸಾಕಮ್ಮಳ ಒಬ್ಬಳೇ ಒಬ್ಬ ಮಗಳು.
ಸಾಕಮ್ಮ ಪರಮಿ ದೊಡ್ಡವಳಾಗಿ ಕೆಂಪಾಗುವ ಮುನ್ನವೇ ಮಣ್ಣಾದವಳು. ಅವಳು ಸಾಯುವ ಎರೆಡ್ಮೂರು ವಾರದ  ಮೊದಲೇ ಅಪ್ಪನೊಂದಿಗೆ ಮಾತು ಬಿಟ್ಟುದ್ದಳು. ಹಾಗೆ ಸಾಕಮ್ಮನೊಂದಿಗೂ ಸಹ . ಸಾಕಮ್ಮ ಯಾರಿಗೂ ತಿಳಿಯದ ರೀತಿಯಲ್ಲಿ ಸಿಲುಕಿ ಸತ್ತ ನಂತರ ಸಂಪೂರ್ಣ ಸಂಬಂಧವೇ ಕಳೆದುಕೊಂಡಂತೆ ಅವರಿಬ್ಬರ ಸಂಬಂಧ ಸೊರಗಿತ್ತು.

ತಂದೆ ಮಗಳ ಸಂಬಂಧ ದಿನಗಳೆದಂತೆ ತೆಳ್ಳಗಾಗುತ್ತಾ ಇರಲು ತಾನೇಕೆ ಅಪ್ಪನೊಂದಿಗೆ ಮಾತು ನಿಲ್ಲಸಿದೆನೆಂದು ಅಪ್ಪ ಎಂದಿಗೂ ಕೇಳದೆ ಇದ್ದುದು, ಅಪ್ಪನ ಕುರಿತ ತಾತ್ಸಾರ ವೃದ್ಧಿಗೊಳ್ಳಲು ಇಂಬಾಯಿತು. ಗೋಪಣ್ಣ ಎಂದಿಗೂ ಕೇಳದ ಘಟನೆಯಾದರು ಅದೇನೆಂದು ಅವನ ಸೂಕ್ಷ್ಮ ಮನಸಿಗೆ ತಿಳಿಯದೆ ಇರಲಿಲ್ಲ.

ಗೋಪಣ್ಣ ಒಬ್ಬ ಕೂಲಿ ಪಡೆಯ ಮುಂದಾಳು. ಬರೀ ಹೆಣ್ಣಾಳುಗಳೇ ಇದ್ದ ತನ್ನ ಕೇರಿಯ ಕೂಲಿ ಪಡೆಗೆ ಇವ ನಾಯಕ. ಯಾವುದೇ ಊರ ಗೌಡರುಗಳು , ಹೊಲದ ಕೆಲಸ , ತೋಟದ ಕೆಲಸ , ಹೂ ಕಳೆ  ಕೀಳುವ ಕೆಲ್ಸಕ್ಕೆ ಕೂಲಿ ಜನರಿಗಾಗಿ ಗೋಪಣ್ಣನನ್ನೇ ನೋಡಲು , ಅವನು ಎಷ್ಟು ಜನ ಬೇಕು , ಎಷ್ಟೆಷ್ಟು ಕೂಲಿ ಎಲ್ಲಾ ಮಾತು ಮುಗಿಸಿ ತನ್ನ ಕೇರಿಯ ಹೆಣ್ಣಾಳುಗಳನ್ನು ಕೂಡಿಸಿ ಕೂಲಿಗೆ ಕರೆದೊಯ್ಯುವನು, ಅಷ್ಟೇ ಅಲ್ಲದೆ ಅವರೊಂದಿಗೆ ತಾನು ಸೇರಿ ದುಡಿದು ಕೂಲಿಯಲ್ಲೂ ಪಾಲಿನವನು. ಕೆಲಸದಲ್ಲಂತೂ ಅವನ ಕೈ ಮೈ ರಾಕ್ಷಸದಂತದ್ದು. ರಾಚೇಗೌಡನ ತೋಟದಲ್ಲೇ ಅವನ ಕಾಯಮ್ಮು ಕೆಲಸ. ರಾಚಣ್ಣನ ಅಣ್ಣ ಮಂಡ್ಯದಲ್ಲಿ ನೀರಾವರಿ ಜಮೀನು ಮಾಡಿದ್ದು ಅಲ್ಲಿನ ಬೆಳೆ ಕೊಯ್ಲಿಗೆ , ಅಥವಾ ಕಬ್ಬು ಕಟಾವಿಗೆ ವಾರಗಟ್ಟಲೆ ಗೋಪಣ್ಣ ಊರುಬಿಟ್ಟು ಮಂಡ್ಯದಲ್ಲಿ ಊರಿ ದುಡಿಯುತ್ತಿದ್ದ.
ಈ ದೆವ್ವದಂತಾ ದುಡಿಮೆಯ ಗಂಡಿಗೆ ಗುಂಡಿಗೆ ಕಮ್ಮಿಯೇ, ಎಂಬಂತೆ ಯಾರೇ ಗೋಳು ತೋಡಿಕೊಂಡರೂ ಕೂತು ಕೇಳಿ ಕರಗುವನು.

ತನ್ನ ಕೂಲಿ ಪಡೆಯ ಹೆಣ್ಣಾಳುಗಳು ” ಗಂಡ ಕುಡ್ಕೊಂಡ್ ಬಂದ್ ಹೊಡ್ದ” , ” ಮಗ ಇಸ್ಕೊಲ್ ಗೇ ಮಣ್ಣಾಕಿ , ಮೂರ್ ದಾರೀಲಿ ಕೂತ್ ಇಸ್ಪೀಟ್ ಆಡ್ತಾನೆ”, “ಅಣ್ಣ ಸೈನ್ ಹಾಕ್ಸ್ಕೊಂಡು , ನನ್ ಭಾಗಕ್ ಮೋಸ ಮಾಡ್ದ ” ಎಂದೆಲ್ಲಾ ಗೋಳು ಹೇಳಿಕೊಳ್ಳುವಾಗ , ತನ್ನಿಂದಲೇ ಯಾವ್ದೋ ಮೋಸ ಆಗೋಯ್ತು ಅನ್ನೋಹಾಗೆ  ಒಳಗೊಳಗೇ ಕೊರಗುತ್ತ ಕೇಳಿಸ್ಕೊತಾನೆ .
ಆದರೆ ತಾನೆಂದು ತನ್ನ ಗೋಳು ಹೇಳಿದವನಾಗಲಿ , ಅಸಲಿಗೆ ಸರೀ ಬಾಯಿ ಬಿಟ್ಟು ಮಾತಾಡುವುದು ಅವನಲ್ಲ.

ಅಂತವನ ಕುರಿತು ದ್ವೇಷ ಬೆಳೆಸಿಕೊಳ್ಳೋ ಮಗಳ ಕುರಿತು ಎಲ್ಲರಿಗೂ ಆಶ್ಚರ್ಯ. ಅಮ್ಮನ ಅಸಹಜ ಸಾವಿಗೆ ಅಪ್ಪ ಕಾರಣನಲ್ಲ ಎಂದು ಪರಮಿಗೆ  ಗೊತ್ತುದ್ದು , ಆ ತಪ್ಪನ್ನು ಅಪ್ಪನ ಮೇಲೆ ಹೊರಿಸಿ ಅವನ ಮೇಲೆ ಅಸಡ್ಡೆ ಬೆಳೆಸಿಕೊಂಡಳು.

ಹಿಂದೆ ಹೀಗಲ್ಲ. ಅವಳಿಗೆ ಅಪ್ಪನ್ನ ಬಿಟ್ಟು ಉಸಿರಾಡಲು ಆಗದವಳು. ನಡೆಯಬೇಕೆಂದಾಗ ಅಪ್ಪನ ಹೆಗಲು, ಮಲಗಲು ಅಪ್ಪನ ತೋಳು. ದಣಿದು ಬಂದ ಅಪ್ಪನ ಕೊರಳಪಟ್ಟಿ ಹಿಡಿದು ತನ್ನ ಕೈಯ ತುತ್ತು ತಿನಿಸುವಳು.

ಪರಮಿ ಬೆಳೆದಳು,  ಋತುವಾದಳು ಎಂಬುದು ಕೇಳುವ ವರೆಗೂ ಗೋಪಣ್ಣ ಅವಳನ್ನು ಅಂಗೈಯಲ್ಲೇ ಬೆಳೆಸಿದ್ದ. ನೆರೆದ  ಪರಮಿ ಸೀರೆ ಬೇಕು ಎಂದಾಗ ಹುಮ್ಮಸ್ಸಿನಿಂದ ಒಪ್ಪಿ ತಂದು ಕೊಟ್ಟು ಮುದ್ದಿಸಿದ. ಸೀರೆಗಾಗಿ ಮಾಡಿದ ಸಾಲಕ್ಕೆ ಸಲುವಾಗಿ ಒಂದು ವಾರದ ಮಟ್ಟಿಗೆ ಮಂಡ್ಯಕ್ಕೆ ಹೋಗಿ ದುಡಿಯಬೇಕು ಎಂಬುದು ತಿಳಿದು ಪರಮಿ ಅತ್ತಳು. ಆದರೆ ಗೋಪಣ್ಣ ಅಳುಕಿಲ್ಲದೆ ಹೆಚ್ಚೇ ಖುಷಿಯಿಂದ ದುಡಿದ.
ಗೋಪಣ್ಣ ಹೋಗಿ ವಾರ ಕಳೆಯುತ್ತಾ ಬಂದಿತ್ತು. ಪರಮಿ ಚಿಗುರಿ ಮತ್ತೆ ಶಾಲೆಗೆ ಹೋಗಿ ಬಂದು , ಅಪ್ಪನ್ನ ನೆನೆದೇ ತುತ್ತು ತಿನ್ನುವಳು. “ಪರಮಿ ಜಾಸ್ತಿನೇ ಓದು”
ಎಂದು ಅಪ್ಪ ಪಕ್ಕ ಕುಳಿತು ಹೇಳಿದನೇ ಎಂದುಕೊಂಡು ಒಂದಷ್ಟೊತ್ತು ಪುಸ್ತಕದಲ್ಲಿ ಕಳೆದೋಗುವಳು.

ವಾರಕಳೆದು ಎಂದಿನಂತೆ ಶಾಲೆ ಮುಗಿಸಿ ಬರಬೇಕಾದವಳು, ಅಂದು ಅಪ್ಪ ಬರುವನೆಂಬ ಖುಷಿಗೆ ಸ್ವಲ್ಪ ಬೇಗನೇ ಹುಷಾರಿಲ್ಲವೆಂಬ ಸಬೂಬು ಕೊಟ್ಟು ಬಂದವಳು , ಮನೆ ಸೇರುವ ಮೊದಲೇ ಬಾಗಿಲಲಿ ನಿಂತು ಒಳಗೆ ಮಾತನಾಡುತ್ತಿರುವ ಬದಲಾದ ಅಪ್ಪನ ಧ್ವನಿ ಕೇಳಿ , ಮೆಲ್ಲಗೆ  ಮನೆ ಹೊಕ್ಕಳು.  ಆದರೆ ಅದು ಅಪ್ಪನ ಮಾತಲ್ಲ ಎಂಬುದು ಅವಳು ಕಂಡ ಆ ದೃಶ್ಯ ಸ್ಪಷ್ಟ ಪಡಿಸಿತಲ್ಲದೆ, ಅವಳ ಜಗತ್ತನ್ನು ತಲೆಕೆಳಗಾಗಿ ನಿಲ್ಲಿಸಿತ್ತು. ಬೆತ್ತಲಾಗಿ ಮಲಗಿದ್ದ ಅಮ್ಮನ ಮೇಲೆ ರಾಚಪ್ಪನಿದ್ದ. ಅವರ ಮಾತು ಸಾಗುತ್ತಲೇ ಇತ್ತು ವಿನಹ ಪರಮಿಯ ಗಮನಿಸಲಿಲ್ಲ. ತಿರುಗಿ ಓಡಿದಳೇ ಪರಮಿ ಓಡಿ ಓಡಿ ಶಾಲೆ ಸೇರಿದ್ದಳು. ಏನಾಗುತ್ತಿದೆ ಎಂಬುದು ಇನ್ನೂ ಈಗೀಗ ಅರಿಯುವ ವಯಸ್ಸಲ್ಲಿ ಕಂಡ ದೃಶ್ಯ ಅವಳ ಕುರಡಾಗಿಸಲು ಪ್ರಯತ್ನಿಸುತಿತ್ತು.

ಶಾಲೆ ಬಿಟ್ಟ ಸಮಯಕ್ಕೆ ಮನೆಗೆ  ಬಂದಾಗ ಅಮ್ಮನಿರಲಿಲ್ಲ. ಅವಳಿನ್ನು ಆಗ ತಾನೇ ಕೂಲಿ ಕೆಲಸ ಮುಗಿಸಿ ಬರುತ್ತಿದ್ದೇನೆ ಎಂಬಂತೆ ಬರುವಳು. ಅದೆಲ್ಲ ನಾಟಕದ ದಣಿವು ಎಂದೇನೇನೋ ಯೋಚಿಸುತ್ತ , ಕಿಟಾರನೆ ಚೀರುತ್ತಾ ಅಮ್ಮ ಮಲಗಿದ್ದ ಜಾಗದಲ್ಲಿ ಹಾಸಿದ್ದ ಬಟ್ಟೆಯ ಗಂಟೆನ್ನೆಲ್ಲಾ ಎಳೆದು ಬಿಸಾಡಿ ಮೂಲೆಗೆ ಮುಖ ಕೊಟ್ಟು ಅಳುತ್ತಾ ಕುಳಿತು ಬಿಟ್ಟಳು.

           ******

ವಾರದ ಗಡುವು ಮುಗಿಸಿ ಬಂದ ಗೋಪಣ್ಣನಲ್ಲಿ , ಹೂದೋಟದಲ್ಲಿ ದುಡಿದು ಹೂವಿನ ವಾಸನೆಯು , ಹೊಲಗಳಲ್ಲಿ ದುಡಿದು ಮಣ್ಣಿನ ಬಣ್ಣವು ಮೆತ್ತಿಕೊಂಡಂತೆ, ಚಿಮ್ಮಿ ಜಿಗಿದು ಬರಲು , ಮೆನೆಯಲ್ಲ ಬಟ್ಟೆ ಚೆಲ್ಲಿ ಕೆದರಿದ ನೆಲ ಕಂಡು ತುಸು ತಡೆದನು. ಒಂದು ಕತ್ತಲ ಮೂಲೆಯಲ್ಲಿ ಮುಖ ತಿರುಗಿಸಿ ಕೂತಿದ್ದ ಮಗಳನ್ನು ಕಂಡು ಏನೋ ಹೊಳೆದಂತೆ ಸೋತನು.

ಸ್ಥಿತಿ ಅರಿತವನಂತೆ ಕೆದರಿದ ಬಟ್ಟೆಯನ್ನೆಲ್ಲಾ ಗುಡ್ಡೆ ಮಾಡಿ ಗಂಟು ಕಟ್ಟಿ ಮೂಲೆಸೇರಿಸಿದ. ಎಷ್ಟೇ ಬಿಕ್ಕಳಿಸಿ ಅಳುತಿದ್ದರೂ ಪರಮಿಯ ಸಮಾಧಾನ ಮಾಡಬೇಕೆಂಬ ಪ್ರಜ್ಞೆ ತಿಳಿಯಲಿಲ್ಲ. ವಿಷಯ ಅತೀ ಸಹಜ, ಎಂದಿದ್ದರೂ ತಿಳಿಯಲೇ ಬೇಕಿತ್ತು, ಇಂದು ತಿಳಿಯಿತು ಎಂಬಂತಿದ್ದ ಅವನ ವರ್ತನೆ , ಪರಮಿಯ ಮನಸಲ್ಲಿ ರೋಷ  ಉಕ್ಕಿಸಿತು. ಅವನ ತಾಳ್ಮೆ ಅವಳ ನೆಮ್ಮದಿ ಕೆಡಿಸುವಂತಿತ್ತು. ‘ ಅಪ್ಪನಿಗೆ ಇದೆಲ್ಲಾ ಮೊದಲೇ ತಿಳಿದಿದೆ ಎಂದೂ , ಆದರೂ ಸಹಿಸಿದ್ದಾನೆ’ ಎನ್ನುವ ಅವನ ಸಹನೆಗೆ ಅವಳು ವ್ಯಾಕರಿಸಿದಳು. ಅಂದೇ ಅಲ್ಲವೇ ಅವರಿಬ್ಬರ ಮಾತು ಸತ್ತಿದ್ದು.

ಎಲ್ಲಿಯವರೆಗೆ ….
ಹಲವು ವರ್ಷಗಳ ವರೆಗೆ ….
ಹಾಗೇ ಸಾಗುತ್ತಾ ….
ಗೋಪಣ್ಣನಿಗೂ ಹೇಳದೆ ಪರಮಿ ತಾನಿಷ್ಟ ಪಟ್ಟಿದ್ದ ಶಿವಲಿಂಗನನ್ನು ಮದುವೆಯಾಗುವವರೆಗೆ ….

ಹೊರಗಡೆ ಮಳೆಯ ಜೋರು ದನಿ ಮೆಲ್ಲಗೆ ಮಂಕಾಗುತ್ತ , ತಲೆದೂಗುವ  ತಾಳದಂತೆ ಟಪ್ ಟಪ್ ಎಂದು ತೊಟ್ಟಿಕ್ಕುವ ಮಟ್ಟಕ್ಕೆ ಇಳಿದಿತ್ತು. ಮಳೆ ತೊರೆದ ಗಳಿಗೆಗೆ ಮುದುಡಿಕೊಂಡಿದ್ದ ಕಥೆ ಮಾಡಲು ಬಂದವರೆಲ್ಲ ಚಿಗುರಿಕೊಂಡರು. ಯಾರೋ ಒಂದಷ್ಟು ಚಹಾ ಕೊಡಲು ಜುರ್ ಜುರ್ ಎಂದು ಹೀರುತ್ತಾ, ಮತ್ತಷ್ಟು ಪುಟಿದರು. ನೆರೆದಿದ್ದ ಜನ ಅಲ್ಲಲ್ಲಿ ಒಣಗುತ್ತಿರುವ ಕಲ್ಲುಚಪ್ಪಡಿಗಳ ಮೇಲೆ ಜಾಗ ಹಿಡಿದು ಹಾಸಿಕೊಳ್ಳುತಿದ್ದರು. ತಾಳ ಶುರುವಿಟ್ಟುಕೊಳ್ಳಲು, ಪರಮಿಯ ಶಿವಲಿಂಗ ಹೊರಗೆಲ್ಲೋ ಹೋದವನು ಅದೇ ಬಂದನು. ಬರುವವನ ಕೈಯಲ್ಲಿ ಗೋಣಿಚೀಲದ ತುಂಬಾ ತುಂಬಿತಂದಿದ್ದ ಏನೋ ಬಾಟಲಿಗಳು ಸದ್ದು ಮಾಡಲು , ಎಲ್ಲರೂ ತಮ್ಮ ನಾಲಿಗೆಯಿಂದ  ತುಟಿ ಸವರಿಕೊಳ್ಳುತ್ತಾ ಅವನತ್ತ ವಾಲಿದರು.

ಆದರೆ ಅಲ್ಲೇ ಎದುರು ಕೂತಿದ್ದ ರಾಚಪ್ಪನನ್ನು ನೋಡಿ ತಡೆಯುತಿದ್ದರು. ಸದ್ಯಕ್ಕೆ ಗೋಪಣ್ಣನ ಮುಂದಿನ ಕಾರ್ಯವೆಲ್ಲ ರಾಚಪ್ಪ ಹಾಗು ಶಿವಲಿಂಗನೇ ಒಪ್ಪಿಕೊಂಡಂತೆ ನಡೆಸುತಿದ್ದರು. ಸೂತಕದಲ್ಲೂ ಒಂದು ಗೆಲುವು ತರುವ ನಿಟ್ಟಿನಲ್ಲಿ ಒಂದಷ್ಟು ಬಾಟಲಿ ತೀರ್ಥಗಳನ್ನ ತರಿಸಿ ಇನ್ನೇನು ಹಂಚುವಲ್ಲಿ ….
ಇತ್ತ ಯಲ್ಲಮ್ಮನ ಪಾತ್ರಧಾರಿ ಒಬ್ಬಳ ಬಿಟ್ಟು ಮಿಕ್ಕೆಲ್ಲ ತಂಡದ ಜನರೆಲ್ಲಾ ತೀರ್ಥಕ್ಕೆ ಬಾಯಿ ನೆನೆಸಿಕೊಂಡರು.

ಓಹೋ ಎಂಬಂತೆ ಜಿಗಿದು ಬಂದ ಬಪೂನು ಬಾಯಿಬಿಟ್ಟವನೇ ಹಲ್ಕ ಎಂಬಂತ ಮಾತಗಳಲ್ಲೇ ಶುರುವಿಟ್ಟ. ಅವನ ಮಾತಿಗೆ ಮುಖ ಮುರಿಯಬೇಕಿದ್ದ ಹೆಂಗಸರೆಲ್ಲ ಕೆಳಗೆ ಬಿದ್ದು ಉರುಳಾಡಿ ನಗಲು ಶುರುವಿಟ್ಟರು.

ಮುಲು ಮುಲು ನಗುತ್ತಾ ಸೂತಕವು , ಮತ್ತೆ ಪರಮಿಯಲ್ಲಿ  ಬಂದು , ‘ ಹುಂ , ಮುಂದುಕ್ಕೇಳಮ್ಮಿ’ ಎಂಬಂತೆ ಕೂತಿತು. ಪರಮಿಯ ಕಣ್ಣಂಚಲ್ಲಿ ನೀರು ಬಲವಂತವಾಗಿ ಜಾರಲು…..

           ********

ಮಾತಿಲ್ಲದೆ ಜೊತೆಗೆ ಇದ್ದ ಅಪ್ಪ ಮಗಳಲ್ಲಿ , ತೃಪ್ತ ಭಾವ ಎಂಬುದು ಎಂದೂ ಸುಳಿಯಲ್ಲಿ . ಪರಮಿಯಂತೂ ಗೋಪಣ್ಣನ ವಿರುದ್ಧವೇ ನಡೆಯಲು , ಅವನಿಗೆ ಇಷ್ಟವಿಲ್ಲದ ಕಾರ್ಯಗಳಲ್ಲೇ ಮುಳುಗಿ , ದಿನವೂ ಸಾರಿಗೆ ಮೂಲಂಗಿ ಸೇರಿಸುತಿದ್ದಳು. ಇಷ್ಟವಿಲ್ಲದಿದ್ದರೂ ಗೋಪಣ್ಣ ಮೂಲಂಗಿಯನ್ನು ತಿನ್ನುತ್ತಾ ಕಾಲಕಳೆದನು. ‘ಜಾಸ್ತಿ ಓದು ‘ ಎಂದಿದ್ದ ಗೋಪಣ್ಣನಿಗೆ ಎದುರೆಂದು ಎರಡನೇ ಪಿ.ಯು.ಸಿ ಗೇ ನಿಲ್ಲಿಸಿಬಿಟ್ಟಳು ಅಲ್ಲದೆ , ಗಾರ್ಮೆಂಟ್ಸ್ ಒಂದರಲ್ಲಿ ಕೆಲಸಕ್ಕೆ ಸೇರಿದಳು. ಎಷ್ಟೇ ಮಾಡಿದರು ಗೊಪ್ಪಣ್ಣನ ಸಹನೆ ಕೆಡಲಿಲ್ಲ. ಕೆಟ್ಟಿದ್ದು ಪರಮಿಯ ತಾಳ್ಮೆ.

ಅಂತೂ ಅಪ್ಪನ ಮೇಲಿನ ಅಸಹನೆ ವಿನಾಕಾರಣವಾಗಿ ಬೆಳೆಯುತ್ತಲೇ ಪರಮಿ ಒಂದು ನಿರ್ಧಾರಕ್ಕೆ ಬರಲು , ಫ್ಯಾಕ್ಟರಿಯಲ್ಲಿ ಫ್ಲೋರ್ ಇಂಚಾರ್ಜ್ ಆಗಿದ್ದ ಶಿವಲಿಂಗನೊಂದಿಗೆ ಮದುವೆ ಎಂದು ನಿರ್ಧರಿಸಿ ನಿಂತಳು.

ಅಪ್ಪನ ಮೇಲಿನ ದ್ವೇಷಕ್ಕೇನೋ ಪರಮಿ ಗಾರ್ಮೆಂಟ್ಸ್ ಸೇರಿದ್ದಳು ಸರಿ, ಅಲ್ಲಿ ಅವಳ ಮನಸ್ಥಿತಿಗೆ ತಕ್ಕಂತ ಗೆಳೆಯರ ಗುಂಪು ಸಿಗಲು ತನ್ನೆಲ್ಲ ತೊಡಕುಗಳನ್ನು ಮರೆತು ಜೊತೆಗಾರರೊಂದಿಗೆ ಬೆರೆತುಹೋಗುವಳು. ಫ್ಲೋರ್ ಇಂಚಾರ್ಜ್ ಶಿವಲಿಂಗ ಇವಳ ಗುಂಗನ್ನು ಹಚ್ಚಿಕೊಂಡು ಇವಳು ಹೋದಲೆಲ್ಲಾ ತನ್ನ ಕಣ್ಣುಗಳು ತಿರುಗಿಸಲು ಶುರುಮಾಡಿದ. ಆ ಕಣ್ಣುಗಳು ಅವಳನ್ನು ತಿವಿದಾಗಲೇ ಅವಳಿಗೆ ತನ್ನ ಸೌಂದರ್ಯದ ಕುರಿತು ಗೊತ್ತಾದದ್ದು. ಮನೆಯ ಕಂತೆಗಳಲ್ಲಿ ಕಳೆದುಹೋಗಿದ್ದ ಪರಮಿ ಥೇಟು ಅಮ್ಮನ ಹಾಗೇ, ಮುಟ್ಟಿದರೇ ಕೆಂಪಾಗುವಂತ ಬಣ್ಣ , ಗಾಢ ಹಸಿರಿನ ವೀಳ್ಯಕ್ಕೆ , ಹಸೀ ಅಡಕೆ ಜೊತೆಗೆ ನಾಟಿ ಸುಣ್ಣ ಸವರಿ ಜಗಿದ ತಾಂಬೂಲಕ್ಕು , ಪರಮಿಯ ಅಂದಕ್ಕೂ ಹೋಲಿಕೆ. ಕೈ ಕಾಲುಗಳು ಅತೀ ತೆಳ್ಳಗಲ್ಲದೆ , ಮಂದವೂ ಅಲ್ಲದೆ ಸಾಧಾರಣವಿದ್ದರೂ ಅವಳ ಸ್ತ್ರೀ ಸಹಜ ಕಡೆಯೆಲ್ಲಾ ಚುಂಬಕ ಸೆಳತವಿತ್ತು. ಅವಳ ಕಣ್ಣಿನ ಕಪ್ಪು ಗುಡ್ಡೆಗಳ ಸಾದಾರಣಕ್ಕಿಂತ ಕೊಂಚ ದೊಡ್ಡದಾಗಿ, ಕಂಡವರನ್ನು ಕಂಡಲ್ಲೆ ಸೆಳೆದು ನಿಲ್ಲಿಸುತಿತ್ತು.

ಶಿವಲಿಂಗ ಪೂರ್ತಿ ಮರುಳಾದ , ಅದಕ್ಕೆ ತಕ್ಕಂತೆ ಪರಮಿಯೂ ಜಾರಿದಳು. ಶಿವಲಿಂಗ ಅನುಕೂಲಸ್ಥ ಎಂಬುದು ಅವನು ತೊಟ್ಟ ಬಟ್ಟೆಗಳು , ಹೊತ್ತು ಬರುತಿದ್ದ ಬೈಕು ಬೀಗಿ ಹೇಳುತಿದ್ದವು. ಅವನ ನಡತೆ ಪರವಾಗಿಲ್ಲ , ಜೊತೆಗೆ ಕೊಂಚ ಇಂಗ್ಲೀಷು ಮಾತಲ್ಲಿ ಸಿಕ್ಕು ‘ ಓಹೋ , ಡಿಗ್ನಿಫೈಡು ‘ ಎನ್ನುವಂತೆ ಇದ್ದ.

ಪರಮಿ ಸರೀ ಸಮಯ ಕಾದು “ಲವ್ವು ಗಿವ್ವು ಬೇಡ ಸೀದಾ ಮದ್ವೆ ಆಗ್ತೀಯಾ” ಅಂದಳು .
ಅವನು ಯೋಚಿಸದೆ ಒಪ್ಪಲು ಕಾರಣ ಅವಳ ಅಂದ ಒಂದುಕಡೆ, ಅವನ ಪ್ರಾಯ ಇನ್ನೊಂದು ಕಡೆ .

ವ್ಯಕ್ತವಾದ ಮಾತು ಕೆಲವೇ ದಿನಗಳಲ್ಲಿ ಮಂಜೂರಾಯ್ತು. ಶಿವಲಿಂಗನ ಮನೆಯಲ್ಲಿ ತಕರಾರಿಲ್ಲ. ಪರಮಿ ಅಪ್ಪನಿಗೆ ಹೇಳಲಿಲ್ಲ ಜೊತೆಗೆ ತನಗೆ ಯಾರೂ ಇಲ್ಲಾ ಎಂದು ಶಿವಲಿಂಗನಿಗೆ ಹೇಳಿ ಅನಾಥೆ ಎಂಬ ಪಟ್ಟಿ ಕಟ್ಟಿಕೊಂಡಳು. ನಂತರದ ತಿಂಗಳಲ್ಲೇ ತಾಲೂಕಿನ ಚೆನ್ನರಾಯನ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಮಾಡುವಲ್ಲಿ ತಮ್ಮ ಜೋಡಿಯ ಹೆಸರೂ ಸೇರಿಸಿಕೊಂಡರು.

ಇನ್ನೆರಡು ದಿನದಲ್ಲಿ ಮದುವೆ ಎಂದು ತನ್ನ ಕೇರಿಯ ನೆಂಟರಿಗೆಲ್ಲ ಸಾರಿಕೊಂಡು ಬಂದ ಪರಮಿ , ತನ್ನ ಬಟ್ಟೆಗಳನ್ನು ಕಟ್ಟುವಾಗಲು ಗೋಪಣ್ಣ ಅಡ್ಡ ಬಾರದ್ದನ್ನು ನೋಡಿ ಮತ್ತಷ್ಟು ಕುದಿಯಹತ್ತಿದಳು.

          ******

ಅಂತೂ ಅಂದು ಮದುವೆ ದಿನ. ನೂರು ಜೋಡಿಗಳು , ಅವರವರ ಕಡೆಯವರೆಲ್ಲಾ ಸೇರಿ ದೊಡ್ಡ ಜನ ಸಮೂಹ . ಅಲ್ಲಿ ನೆರೆದಿದ್ದ ದುಃಖ , ಅಸಹಾಯಕ , ಕುತೂಹಲ , ಎಂಬೆಲ್ಲ ಹಲವು ಭಾವಗಳ ಅನವಶ್ಯಕ ತಿಕ್ಕಾಟ.ಅದರಲ್ಲಿ ಕಾರಂಜಿಯಂತೆ ಪರಮಿ. ಶಿವಲಿಂಗನ ಮನೆಯವರು , ಗಾರ್ಮೆಂಟ್ಸ್ ಫ್ಯಾಕ್ಟರಿ ಜೊತೆಗಾರರು , ಪರಮಿಯ ಕೆಲ ಸಂಬಂದಿಕರು ಎಲ್ಲಾ ಸಾಕ್ಷಿ ಈ ಹೊಸ ಜೋಡಿಯ ಚಲನೆಗೆ.

ಯಾರೂ ನಿರೀಕ್ಷಿಸದಂತೆ ಅಲ್ಲೇ ದೂರದಲ್ಲಿ ಗೋಪಣ್ಣ ನಿಂತಿದ್ದ. ಕಣ್ಣಲ್ಲಿ ಗೆಲುವಿತ್ತು. ಹೊಸದು ಬಿಳಿ ಪಂಚೆ ಶರ್ಟನ್ನು ಹಾಕಿಕೊಂಡು, ಮುಂಗೈಗೊಂದು ಮಿರ ಮಿರ ವಾಚು. ಅವನ ಈ ಹಾಜರಿಯಿಂದ ಪರಮಿಗೆ ಆಶ್ಚರ್ಯವಾಗಲಿಲ್ಲ. ದೂರದಲ್ಲೇ ಯಾರೋ ನೆಂಟರಂತೆ ನಿಂತು ನೋಡಲು , ತಲೆ ತಗ್ಗಿಸಿ ಮಾಂಗಲ್ಯಕ್ಕೆ ಕೊರಳಿಟ್ಟ ಪರಮಿ ಅಪ್ಪನ ಕಡೆ ಹನಿಗಣ್ಣಿಂದ ನೋಡಿ ಉಸಿರೆಳೆದಳು.
ಧಾರೆ ಮುಗಿದದ್ದೇ ನೇರ ಸತಿಪತಿಗಳಿಗೆ ಬಂದ ಗೋಪಣ್ಣ, ಹುಡುಗನಿಗೆ ಒಂದು ಚಿನ್ನದ ಉಂಗುರ , ಚೈನು ಕೊಟ್ಟು ,  ಮಾಟಿ ಇರುವ ಓಲೆಜುಮುಕಿ ಪರಮಿಯ ಕೈಲಿಟ್ಟು , ಇಬ್ಬರಿಗೂ ಹರಸಿ ಹೊರಟುಹೋದ.

ಅಂದಿಗೆ ಅವನಿಗೆ ಗೊತ್ತಿತ್ತೇನೋ ಅದೇ ಅವಳನ್ನ ಕೊನೆಗೆ ನೋಡುವುದೆಂದು. ಹನಿಗಣ್ಣಾಗಿಸಿ ಓಡಿ ಓಡಿ ಬಂದಂತೆ ಮನೆಗೆ ಬಂದನು.

            *******
ಹೊರಗೆ ಯಲ್ಲಮ್ಮನ ಕಥೆಗೆ ಜೋರು ಉಮ್ಮಸ್ಸು ಬಂದಂತೆ. ಬಪೂನನ ಪಾತ್ರ ಮೆಲ್ಲಗೆ ಮರೆಯಾಗುತ್ತಾ ಶಿವ ಪಾರ್ವತಿಯರ ಪ್ರೇಮ ಸಲ್ಲಾಪ ಮುಗಿದು, ಅದರ ಪ್ರತೀಕಕ್ಕೆ ಹಸಿಗೂಸಾದ ಯಲ್ಲಮನನ್ನು ರೇಷ್ಮೆ ಸೀರೆಯ ತೊಟ್ಟಿಲಲ್ಲಿ ಇಟ್ಟು ತೂಗತ್ತಾ ಹಾಡಲು ….

ಪರಮಿಗೆ ಆತು ಕೂತಿದ್ದು , ಎಲ್ಲಾ ಕಥೆಯ ಹೀರಿಕೊಂಡ  ಸೂತಕಕ್ಕೆ ಗೋಪಣ್ಣನ ಸಹನೆಯ ಮೂಲ ಯಾವುದೆಂಬ ಕುತೂಹಲ ಹೆಚ್ಚಿಸಿಕೊಂಡಿತು. ಮಗಳ ಬಿಟ್ಟು ಯಾರೂ ತನ್ನವರಿಲ್ಲದ ಗೋಪಣ್ಣನ ಬದುಕಲ್ಲಿ ಇದಕ್ಕೂ ಮೊದಲು ಇದ್ದ ಯಾರೋ , ಅವನ ತಾಳ್ಮೆಗೆ ಗುರುವಾದಂತಿದ್ದಾರೆ ಎಂಬುದಂತೂ ಹೊಳೆಯಲು , ಕಲ್ಲಾಗಿ ಮಲಗಿದ್ದ ಗೋಪಣ್ಣನ ಬಳಿ ಬಂದು ಅವನ ಎದೆ ತಟ್ಟಿತು.

ಮೆಲ್ಲಗೆ ಮೇಲೆದ್ದ ಗೋಪಣ್ಣ ….
ಉಸಿರಾದ  ….
  …

ಪೆಂಡಾಲಿನಲ್ಲಿ ಒಂದು ತಾತ್ಕಾಲಿಕ ಮೌನವಿರಲು ದಣಿದ ಕಲಾವಿದರಿಗೆ ಚಹಾ ಕೊಟ್ಟಿದ್ದೆ ಕಾರಣ. ಅದಾಗಲೇ ಪಾರ್ವತಿ ಪಾತ್ರದಾರಿಯ ಕುಪ್ಪುಸಕ್ಕೆ ನೂರರ ಮೂರು ನೋಟು ಸೇರಲು ಕಾರಣ ಕುಳಿತಿದ್ದ ಪ್ರೇಕ್ಷಕರ ಪ್ರೀತಿಗೆ ಅನ್ನಬಹುದೇ ಅಥವಾ ಒಳ ಸೇರಿದ್ದ ಸಾರಾಯಿಯ ಕುಮ್ಮಕ್ಕೇನ್ನಬಹುದೇ ತಿಳಿಯದು. ಶಿವ ಪಾತ್ರದಾರಿ ಎಷ್ಟೇ ಚಳಿಬಿಟ್ಟು ಕಿರುಚಿದರೂ ಒಂದು ನೋಟೂ ಮೂಸಲಿಲ್ಲ ಎನ್ನುವುದಕ್ಕಿಂತ , ಬಪೂನನ ಜೊತೆ ಅಂಗಾಂಗ ಕುಣಿಸಿ ಜಿಗಿದಿದ್ದ ಅಂಗನೆಯ ಅಂಗಾಂಗಗಳಿಗೆ ಎಲ್ಲೆಂದರಲ್ಲಿ ನೋಟಿನ ಪಿನ್ನನ್ನು ಚುಚ್ಚಿ ಚುಚ್ಚಿ ಕುಣಿಸಿದರು ಎಂಬುದು ಜರುಗಿತ್ತು.

ಹೊರಗೆಷ್ಟು ಗದ್ದಲವಿದೆಯೋ ಅಷ್ಟಕ್ಕೂ ಹೆಚ್ಚು ಕರಾಳ ಮೌನ ಒಳಗಿತ್ತು.
ಸೂತಕ ಕೂತಲ್ಲೇ ನೋಡಲು ಗೋಪಣ್ಣ ಎದ್ದು ಕೂತು ಏನನ್ನೋ ಗುನುಗುತ್ತಾ ಇದ್ದಾನೆ.
ಅದರಲ್ಲೆಲ್ಲಾ ‘ಚಿಕ್ಕಮ್ಮ’ ಎನ್ನುವ ಮಾತು ಸ್ಪಷ್ಟವಾಗಿದೆ.
ಚಿಕ್ಕಮ್ಮನಿಂದ ಗೋಪಣ್ಣನ ಕಥೆ ಶುರುವಾಗಲು …

ಪರಮಿಯ ಮದುವೆ ಮುಗಿಯುತ್ತಲೇ ಗೋಪಣ್ಣ ಬಡಕಲಾಗುತ್ತಾ ಹೋದ. ಪರಮಿಯ ಕೊರಗು ಎನ್ನುವಂತೆ ಎಲ್ಲರಿಗೂ ಕಂಡರು , ಅದು ಅದಾಗಿರಲಿಲ್ಲ. ಎದ್ದವನೇ ಒಂದಿನ ಸೀದಾ ಆಸ್ಪತ್ರೆಗೆ ಹೋಗಿದ್ದ. ಕಂಡ ಡಾಕ್ಟರುಗಳೆಲ್ಲ ಯಾವ್ಯಾವುದೋ ಹೆಸರುಗಳಲ್ಲಿ ರೋಗವನ್ನು ವಿವರಿಸಿದರು. ಕೊನೆಗೊಮ್ಮೆ ರಾಚಣ್ಣನ ಪ್ರಸ್ತುತದಲ್ಲಿ ಬಲಎದೆಯ ಮೇಲೆ ಬೆಳೆದಿದ್ದ ಗಡ್ಡೆಯನ್ನು ಕುಯ್ದು ತೆಗೆದರು. ಅದರ ಕಾರಣ ಗೋಪಣ್ಣ ಸಂಪೂರ್ಣ ವಿಶ್ರಾಂತಿ ಮಾಡಬೇಕಿತ್ತು.

ಯಾರೂ ಇಲ್ಲದವರಿಗೆ ಯಾರೂ ಇಲ್ಲದವರೇ ದಿಕ್ಕಾದಂತೆ ಚಿಕ್ಕಮ್ಮ ಗೋಪಣ್ಣನ ತೋಳಿಗೆ ನಿಂತಳು. ಪರಮಿ ಕಳೆದ ಮೇಲೆ ಗೋಪಣ್ಣನ ಊಟಕ್ಕೆ , ಆಸ್ಪತ್ರೆಯಲ್ಲಿ ಸೇವೆಗೆ , ಮನೆಗೆ ಬಂದಮೇಲೆ ಸಲಹುವಿಕೆಗೆ ಹೆಸರಾಗಿ ನಿಂತವಳೇ ಚಿಕ್ಕಮ್ಮ.

ಚಿಕ್ಕಮ್ಮ ಗೋಪಣ್ಣನ ವರಸೆಗೆ ದೊಡ್ಡಮ್ಮನಾಗಬೇಕು. ಗೋಪಣ್ಣನ ಅಪ್ಪನ ಅಣ್ಣನ ಹೆಂಡತಿ ಚಿಕ್ಕಿ ವಯಸ್ಸಿಳಿದಂತೆ ಚಿಕ್ಕಮ್ಮಳಾದಳು . ಆಕೆಗೆ ಮಕ್ಕಳಾಗಲಿಲ್ಲ. ಇತ್ತೀಚಿಗೆ ಗಂಡನೂ ಮಣ್ಣಾದ. ಕೊನೆಗಾಲಕ್ಕೆ ಉಳಿದ ಒಂದೇ ನೇರ ನೆಂಟನೆಂದರೆ ಗೋಪಣ್ಣ. ಪರಮಿ ದೂರಾದ ಮೇಲೆ ಗೋಪಣ್ಣ ಬದುಕಲು ಇವಳೊಬ್ಬ ಕಾರಣ ಎಂಬಂತೆ ಚಿಕ್ಕಮ್ಮ ಹೆಗಲು ಬಿದ್ದಳು . ಆದರೆ ಗೊಪ್ಪಣ್ಣನೇ ರೋಗಿಯಾಗಿ ಬಿದ್ದು ಅವಳ ಹೆಗಲಿಗೆ ವಾಲಿದ. ಊಟದ ಸರಕಿಗೆ ರಾಚಣ್ಣನ ಕೈ ಎಂದೂ ಇತ್ತು.

ಎಷ್ಟೇ ಮದ್ದು ಉಯ್ದರೂ ಗೋಪಣ್ಣ ಗೆಲ್ಲಲಿಲ್ಲ. ಕುಸಿಯುತ್ತಲೇ ನರಳುತ್ತಲೇ ಇರಲು ಕೊನೆಗೆ  ಶೌಚಕ್ಕೂ ಮೇಲೇಳಲು ಆಗದೆ ಮಂಚಕ್ಕೆ ಅಂಟಿಕೊಂಡ.
ಅವನ ಎಲ್ಲಾ ಕಸವನ್ನು ಒಂದಷ್ಟೂ ಅಳುಕಿಲ್ಲದೆ ತೊಳೆದಳು ಚಿಕ್ಕಮ್ಮ.

“ಪರಮಿಗೆ ಹೇಳಿ ಕಳುಸಲಾ”, ಎಂದು ಚಿಕ್ಕಮ್ಮ ಅಂದಾಗಲೆಲ್ಲ ಗೋಪಣ್ಣ ಒಪ್ಪನು.

” ಇನ್ನೆಷ್ಟು ದಿನ ಹೀಗೆ ” ಎಂದಾಗ ಮೇಲೆ ನೋಡುವನು.

” ಅಂತಾದ್ದು ಏನ್ ಆಗಿದ್ದು” ಎಂದು ಕೆಣಕಿ ಕೆಣಕಿ ಕೇಳಲು,

ಅವನು ಉಸುರಿದ್ದು ” ಸಾಕಿ ” ಎಂದು.

             ******

ರೇಣುಕಾ ಯಲ್ಲಮ್ಮನ ಪಾತ್ರದಾರಿ ಥೇಟು ಯಲ್ಲಮ್ಮನಂತೆ ಕಾಣಲು ಬಣ್ಣಗಳಲ್ಲೇ ಅವಳ ಮುಖವನ್ನು ಅದ್ದಿದಂತೆ ಇರಲು , ಬಟ್ಟೆಯೆಲ್ಲಾ ಮಿರ ಮಿರ ಮಿನುಗುವಂತಿರಲು, ಎದುರು ನಿಂತು ಸೊಂಪಾಗಿ ಹಾಡಲು , ಮೈಕ್ ಸೆಟ್ಟಿನ ಫಲದಿಂದ ಕರ್ಕಶವಾಗಲು, ಎಲ್ಲರೂ ಮುಗ್ಧರಾಗಿ ಬಿಟ್ಟ ಬಿಟ್ಟಂತೆ ನೋಡುತ್ತಿರಲು , ಜಮದಗ್ನಿಗೆ ರೇಣುಕಾ ಸೋಲಲು, ಪ್ರೇಮ ಸಲ್ಲಾಪಗಳಲ್ಲಿ ನೆರೆಹೊರೆಯೆಲ್ಲಾ ಮುಳುಗಿರಲು.

ಗೋಪಣ್ಣನ ಅಮ್ಮ “ಗೌರಮ್ಮ”  ಕೇರಿಯ ನೆಂಟರೆಂಬವರೆಲ್ಲ ಜನರನ್ನು ಗೋಳಿಟ್ಟು ಕೂಗಿ ,

” ನಾನಿನ್ನು ಎಷ್ಟು ದಿನದ್ ಉಸಿರು , ಯಾರಾದ್ರೂ ನಮ್ ಗೋಪುಗೆ ನನ್ ಕಣ್ ಹೆದುರಿಗೆ ಒಂದು ಹೆಣ್ಣು ಕೂಡಿಸ್ರಿ , ನಿಮ್ ಧಮ್ಮಯ್ಯ ” ಎಂದು ಅಲವತ್ತುಕೊಂಡಳು.
ಅವಳು ಸೊರಗಿದ ದೇಹ ಸುಧಾರಿಸಿಕೊಳ್ಳುವಷ್ಟಲ್ಲಿ ಒಂದು ಹೊತ್ತು ಹಿಡಿಯಿತು. ಅವಳೋ ಇಂದೋ ನಾಳೆಯೋ ಎನ್ನುವವಳು , ಆದರೆ ಗೋಪಣ್ಣನ ಸಾಧು ಗುಣಕ್ಕೆ ಹೂಂ ಗುಟ್ಟದವರಿಲ್ಲ. ಅವನಿಗಾಗಿ ಗೌರಮ್ಮನ ದೂರದ ಸಂಬಂಧಿ ಸಾಕಿಯನ್ನು ತಂದು ಕಟ್ಟಿದರು. ಅವರ ಹರಸಿದ ಗೌರಮ್ಮನ ಕೈ ಮತ್ತೆ ಮೇಲೇಳಲೇ ಇಲ್ಲ.

ಸಾಕಿ ನಾಜೂಕಿನ ಹೆಣ್ಣು. ಬಣ್ಣ ಕೆಂಪು. ಅಂಗ ಸೌಂದರ್ಯದಲ್ಲಿ ಬಿನ್ನಾಣಿ. ಹೂಗಳೂ ಅವಳ ಮೂಸುವಂತ ಘಮಲಿನ ಚೆಲುವು. ಎಂತವನೇ ‘ಆಹ್’ ಎಂದು ಉಸಿರು ಹಿಡಿದು ನೋಡುವಂತಾ ಸಾಕಿ ಗೋಪುವನ್ನು ಅಷ್ಟು ಆಕರ್ಷಿಸಲಿಲ್ಲ. ಅವನು ಎಲ್ಲರನ್ನು ನೋಡುವಷ್ಟೇ ಸಾಧಾರಣವಾಗಿ ಸಾಕಿಯನ್ನು ನೋಡುವುದು ಅವಳಿಗೆ ಆಚ್ಚರಿ ಗೊಳಿಸಿತು. ತಾನು ಹಳ್ಳೀಲಿ ಕುಡಿಕೆ ಹಿಡಿದು ಬಾವಿಗೆ ಬಂದರೇ , ನೋಡಲೆಂದೇ ಊರ ಗೌಡರೆಲ್ಲಾ ಬಾವಿಕಟ್ಟೆಗೆ ಠಿಕಾಣಿ ಇಡುತ್ತಿದ್ದರು. ಅಂತಾ ವಿಶೇಷದಲ್ಲಿ ಕೈ ಹಿಡಿದವನು ಒಂಚೂರು ಕೆಡದೆ ನಿರಾಳನಾಗಿ ನೋಡುತ್ತಾನೆ ಎಂಬುದು ಅವಳಲ್ಲಿ ಅಜೀರ್ಣವಾಯ್ತು.

ಮಿಕ್ಕ ವಿಷ್ಯದಲ್ಲೆಲ್ಲಾ ಇವರಿಬ್ಬರು ಒಳ್ಳೇ ಜೋಡಿಯೇ. ಕಷ್ಟದಲಿ ದುಡಿದರೂ ಅವರಿಬ್ಬರ ಧಣಿವು ಒಳ ಮನಸು ಮುಟ್ಟಲಿಲ್ಲ. ಸಲ್ಲಾಪಗಳಲ್ಲಿ ಕೊರತೆ ಇರಲಿಲ್ಲಾ. ಹೊಗಳಿಕೆ ಎಂಬುದು ಗೋಪು ಮಾಡಲಿಲ್ಲವಾದರೂ , ಮುದ್ದುಮಾಡುವುದರಲ್ಲಿ ಮನ್ಮಥನಾಗುತಿದ್ದ.
ಎಲ್ಲಾ ಮುದ್ದಿಗೂ ಮುದ್ದಾದ ಒಂದು ಹೆಣ್ಣು ಮಗು ಸಾಕ್ಷಿ ಆಯ್ತು. ಆ ಮಗುವಿಗೆ ಸಾಕಿ ತನ್ನ ಅಮ್ಮನ ಹೆಸರು ಇಟ್ಟು ಪರಮೇಶ್ವರಿ ಎಂದು ಕೂಗಲು , ಗೋಪುವಿಗೆ ಅವಳು ಪರಮಿಯಾದಳು.

          *****

ಪರಮಿ ನಾಲ್ಕೈದು ವರ್ಷದವಳಾದಳು. ಸಾಕಿ ರಾಚಣ್ಣನ ಹೊಲದ ಕಾಯಂ ಕೂಲಿಯಾದಳು. ಗೋಪು ಕೆಲಸ ಬಿದ್ದಾಗ ತನ್ನ ಕೂಲಿ ಪಡೆಗೆ ಮುಂದಾಳಾಗಿ , ಕೆಲಸವಿಲ್ಲದಾಗ ರಾಚಣ್ಣನ ಕೂಲಿಯಾಗುವನು ವಿನಹ ದುಡಿಮೆ ಇಲ್ಲದೆ ಸುಮ್ಮನೆ ಕೂರುವನಲ್ಲ.

ದಿನಗಳೆದು ರಾಚಣ್ಣ ಹೇಳಿದಂತೆ ಕೂಲಿ ಪಡೆಯೊಂದಿಗೆ ಮಂಡ್ಯದ ಅಣ್ಣನ ಹೊಲಕ್ಕೆ ವಾರದ ಕೆಲಸಕ್ಕೆ ಹೊರಟುಬಿಟ್ಟ. ಪರಮಿಯ ಕಾರಣಕ್ಕೆ ಸಾಕಿ ಹೋಗಲಿಲ್ಲ. ಅಲ್ಲೇ ರಾಚಣ್ಣನ ಹೊಲದಲ್ಲೇ ದುಡಿದಳು . ರಾಚಿ ಒಂದನೇ ತರಗತಿ ಸ್ಲೇಟು ಹಿಡಿದಳು.
ಗೋಪು ಮಂಡ್ಯ ಸೇರಿದ ನಾಲ್ಕನೇ ದಿನಕ್ಕೆ ಪರಮಿ ಹುಷಾರು ತಪ್ಪಿದಳು. ವಿಪರೀತ ಜ್ವರವೇರಿ ಮೈ ಸುಡುತಿತ್ತು. ಕತ್ತಲಾಗುವ ಮೊದಲೇ ನಾಟಿ ಔಷದಿ ತಂದು ಕೊಟ್ಟು ಮಲಗಿಸಿದಳು. ಔಷದಿ ಪ್ರಭಾವಕ್ಕೆ ಪರಮಿ ನಿದ್ದೆಗೆ ಜಾರಿದಳು , ಜ್ವರವೂ ಸ್ವಲ್ಪ ಸ್ವಲ್ಪವೇ ಇಳಿಯುತ್ತಿತ್ತು.
ಮಧ್ಯ ರಾತ್ರಿ ಸರಿದಂತೆ ಜ್ವರ ಹೆಚ್ಚಾಗಿ ಪರಮಿ ಕೈಯಲ್ಲಿ ನಿಲ್ಲದಂತೆ ಆದಳು. ಧಿಗಿಲುಗೊಂಡ ಸಾಕಿ ಓಡಿದ್ದೆ ರಾಚಣ್ಣನ ಬಳಿ ಹೇಳಲು , ರಾಚಣ್ಣ ಅಷ್ಟು ಹೊತ್ತಿನಲ್ಲಿ ಪರಮಿಯನ್ನು ಹೆಗಲ ಮೇಲೆ ಹಾಕಿಕೊಂಡು , ಬುಸ ಬುಸನೆ ನಡೆದುಕೊಂಡೇ ಪಕ್ಕದೂರಿನ ಆಸ್ಪತ್ರೆಗೆ ಮುಟ್ಟಿದ. ಅವನಿಂದೆಯೇ ತಗುಲು ಗೊಂಬೆಯಂತೆ ಕಣ್ಣೀರಿಕ್ಕುತ ಸಾಕಿ ನಡೆದಳು.

ರಾಚಣ್ಣನ ಪರಿಚಯಸ್ತ ಡಾಕ್ಟರ್ , ಅ ಹೊತ್ತಲ್ಲೂ ಪರಮಿಗೆ ಚಿಕಿತ್ಸೆ ಕೊಟ್ಟನು. ನಾಲ್ಕೈದು ತರದ ಗುಳಿಗೆ ಕೊಟ್ಟು ಕಳುಹಿಸಿದನು. ಮತ್ತೆ ಪರಮಿಯ ಹೊತ್ತು ತಂದ ರಾಚಣ್ಣ ಸಾಕಿಯ ಮನೆಯಲ್ಲಿ ಮಗುವನ್ನು ಮಲಗಿಸಿ. “ಡಾಕ್ಟರ್ರು ಹೇಳಿದ್ನಲ್ಲ , ಒದ್ದೆ ಬಟ್ಟೆ ಹಣೆ ಮೇಲೆ ಹಾಕು , ಗುಳಿಗೆ ಕೊಟ್ಟು ಮಲಗ್ಸು ಬೆಳಿಗ್ಗೆ ಅಷ್ಟೊತ್ತಿಗೆ ಸರಿ ಹೋಗ್ತದೆ ” ಎಂದು ಹೇಳಿ ಎದ್ದು ಹೊರಡಲು ಸಾಕಿ ಕೊಂಚ ನಡುಗಿದಳು.
ಮತ್ತೆ ರಾತ್ರಿ ಜ್ವರ ಜಾಸ್ತಿ ಆದ್ರೆ ಅನ್ನೋ ಭಯ ಅವಳದು.
” ರಾತ್ರಿ ಇಲ್ಲೇ ಇದ್ದು , ಬೆಳಿಗ್ಗೆ ಹೋಗ್ಬೋದ್ ಅಲಾ ” ಎಂದಳು .
ರಾಚನು ಆ  ಮಾತಿಗೆ ಕಾದಿದ್ದೆ ಎಂಬಂತೆ ಕುಳಿತು ಬಿಟ್ಟನು.

ಅವನಿಲ್ಲಿ ಉಳಿಯುವನು ಎನ್ನುವುದು ಸಾಕಿಗೆ ಮೊದಲೇ ಗೊತ್ತಿತ್ತು. ಹೊಲದಲ್ಲಿ ಕೂಲಿಗೆ ಹೋದಾಗಲೆಲ್ಲ ರಾಚನು ಅವಳನ್ನು ನೋಡಿ ನುಂಗುತ್ತಿದ್ದುದು. ಗೋಪು ಇಲ್ಲದಾಗ ಸಲುಗೆ ಬೆಳೆಸಲು , ಯಾವುದಾದರೂ ಒಂದು ನೆಪ  ಹೂಡಿ ಮಾತನಾಡಿಸುತ್ತಿದ್ದುದು, ಮುಂದುವರಿದು ಅವಳ ಸೌಂದರ್ಯ ವರ್ಣನೆ ಮಾಡುತ್ತಿದ್ದುದು , ಇವೆಲ್ಲಕ್ಕೂ ಅರ್ಥ ಅವಳಿಗೆ ಗೊತ್ತೇ ಇತ್ತು. ಇಂದು ನೆರವೇರಿತ್ತು.

         *******

ಗೋಪು ತಿರುಗಿ ಬಂದಮೇಲೆ ಸಾಕಿ ಪರಮಿಗೆ ಹುಷಾರಿಲ್ಲದ್ದು . ಆ ಹೊತ್ತಿನಲ್ಲಿ ರಾಚಣ್ಣ ಆಸ್ಪತ್ರೆಗೆ ಹೊಯ್ದಿದ್ದು ಹೇಳಲು. ಗೋಪು ಪರಮಿ ಬಾಚಿ ತಬ್ಬಿಕೊಂಡು ಅತ್ತನು. ಅಂದಿಗೆ ಪರಮಿ ಗೋಪುವಿನ ಜೀವವಾಗಿ ಹೋದಳು. ಹೆಗಲು ಇಳಿಸದಂತೆ ನೋಡಿಕೊಂಡನು.

ಇತ್ತ ಗೋಪು ಇಲ್ಲದಾಗ ಸಾಕಿ ರಾಚರ ಸಲ್ಲಾಪ ನಡೆದಿತ್ತು. ಅದು ಕದ್ದುಮುಚ್ಚಿ ಅಂದುಕೊಂಡರು ತಪ್ಪು , ಕಾಮ ಕೊಳೆತ ಹೆಣದಂತೆ ನಾರದೆ ಇರದು. ಕೆಲದಿನಗಳಲ್ಲೇ ರಾಚನಿಗೂ ಇದು ತಿಳಿಯುವುದಿತ್ತು.

ಬತ್ತ ಕೊಯ್ಲಿಗೆ ಬಂದಾಗ ಇಲಿಗಳ ಕಾಟ ಇದ್ದುದ್ದೇ. ಅದಕ್ಕೆ ಮದ್ದು ತರಲು ಗೋಪು ಪೇಟೆಗೆ ಹೋಗಲು, ಹೊತ್ತು ಮೂಡುವ ಮುನ್ನವೇ ಮದ್ದಿನೊಂದಿಗೆ ಹೊಲಕ್ಕೆ ಬಂದ. ಹೊಲದಲ್ಲಿದ್ದ ಬಾವಿ ಗುಡಿಸಲಲಿ ಸಾಕಿ ರಾಚರ ಕಂಡು ಮುಚ್ಚಿದ ಕಣ್ಣು ಬಿಡಲಾಗದೆ, ಬಿರ ಬಿರನೇ ಓಡೋಡಿ ಬಂದು ತನ್ನ ಮನೆ ಮುಟ್ಟಿದ.
ಕಂಡದ್ದು ನಿಜವಲ್ಲ ಎಂದು ಎಷ್ಟೇ ಸಾವರಿಸಿಕೊಂಡರು ದುಃಖ ತಡೆಯಲಾಗದೆ , ಮನೆಯಲ್ಲಿ ಸಿಕ್ಕ ಸಿಕ್ಕ ವಸ್ತಗಳನ್ನೆಲ್ಲಾ ಎಳೆದು ತೂರಾಡಿದ , ಬಟ್ಟೆ ಬರೆಗಳನ್ನೆಲ್ಲಾ ಚೆಲ್ಲಾಡಿದ.

ಕೊಂಚ ಹೊತ್ತಿನ ನಂತರ ಗಾಢ ಮೌನವೊಂದು ಆವರಿಸಿತ್ತು. ಆ ಮೌನ ಮನೆಯಲ್ಲೋ ಮನದಲ್ಲೋ ತಿಳಿಯದಾಯ್ತು.

ಹೊತ್ತು ಕಳೆಯಲು ಇನ್ನೇನು ಸಾಕಿ ಬರುವಳು , ಶಾಲೆಗೆ ಹೋದ ಪರಮಿಯೂ ಬರುವಳು. ಗೋಪು ಎದ್ದವನೇ ಚೆಲ್ಲಾಡಿದ ಬಟ್ಟೆ ಪಾತ್ರೆಗಳನ್ನೆಲ್ಲಾ ಮತ್ತೆ ಜೋಡಿಸುತ್ತಾ ಮನೆಯನ್ನು ಯಥಾ ಸ್ಥಿತಿಗೆ ತಂದನು. ಮನಸ್ಸನ್ನೂ ಸಹ ….

ಕೆಲವೇ ವರ್ಷಗಳಲ್ಲಿ ಇದೇ ಸ್ಥಿತಿಯಲ್ಲಿ ಪರಮಿಯನ್ನು ಕಂಡು , ಏನು ಮಾಡಲು ತೋಚದೆ ಮತ್ತೆ ಮನೆಯನ್ನು ಯಥಾ ಸ್ಥಿತಿಗೆ ತರುವಲ್ಲಿ ತತ್ತರಿಸಿದನು. ಅಪ್ಪನ ಅಸಂಬಂಧಿತ ವರ್ತನೆಗೆ ಪರಮಿ ವ್ಯಾಕುಲಗೊಂಡರು ಗೋಪು ಚೆದುರಲಿಲ್ಲ. ಗಟ್ಟಿಯಾಗೇ ಬದುಕು ಸಾಗಿಸಿಸಲು ….

ಪರಮಿ ಅಪ್ಪ ಅಮ್ಮನಲ್ಲಿ ಮಾತು ಬಿಟ್ಟಳು. ಅಮ್ಮ ಕಂಡಾಗಲೆಲ್ಲ ದೂರವೇ ಹೋಗುವಳು. ಅವಳ ವರ್ತನೆ ಸಾಕಿಗೆ ಹಿಡಿಸದೆ , ” ಅದ್ಯಾಕೇ ಹಾಗಾಡ್ತೀಯಾ” , ಎಂದು ಗದರುವಳು  ಆದರೆ ಅದಕ್ಕೂ ಪರಮಿ ದೂರವೇ ಹೋಗುವಳು. ಕೆಲದಿನಗಳಲ್ಲಿ ಇದು ಹೆಚ್ಚಾಗಲು ಸಾಕಿಯ ಮನಗೆಟ್ಟು ಒಮ್ಮೆ ಪರಮಿಯ ಹಿಡಿದು ನಿಲ್ಲಿಸಿ
“ಏನಾಯ್ತೆ ನಿಂಗೆ , ಯಾಕ್ ಹೀಗ್ ದೂರ್ದೂರಾ ಓಡ್ತಿಯ ” ಎಂದು ಪಟ್ಟು ಹಿಡಿಯಲು ,
ತಾನು ಕಂಡದ್ದೆಲ್ಲ ಪರಮಿ ಒಪ್ಪಿಸಿಬಿಟ್ಟಳು, ಅದಲ್ಲದೆ ಅಪ್ಪನಿಗೋ ಇದು ಎಂದಿಗಿಂತ ಮೊದಲೇ ಗೊತ್ತು ಎಂದಳು.

ಅದಾಗಿ ಎರಡನೇ ವಾರಕ್ಕೆ ಸಾಕಿಯ ಉಸಿರು ಕೊನೆಯಲ್ಲಿತ್ತು. ಇನ್ನೆರಡು ಕ್ಷಣಗಳಲ್ಲಿ ಅವಳು ಸತ್ತು ಹೋಗುವಳು. ಇದು ಹೀಗೆ ಆಗುತಿತ್ತು , ಅದಿಕ್ಕೆ ನಾನೇನು ಹೇಳಿಕೊಳ್ಳದೇ ಮುಚ್ಚಿಟ್ಟು ಸಹಿಸಿಕೊಂಡೆ ಎಂಬಂತೆ ಗೋಡೆಗೆ ಒರಗಿ ಗೋಪು ನಿಂತಿದ್ದ.

ಸಾಕಿ ಉಸಿರೆಳೆದು ಬಿಟ್ಟವಳು ಮತ್ತೆ ಉಸಿರಾಗಲಿಲ್ಲ ….

ಅಷ್ಟರಲ್ಲೇ ಅವಳು ಸಾಯುವುದೆಂದರೆ ….

ಸಹಜ ಸಾವಲ್ಲ ಇದು , ಅಪ್ಪನೇ ಮಾಡಿದ ಕೊಲೆ ಎಂಬಂತೆ ಪರಮಿ ಅಪ್ಪನ ಮೇಲೆ ತಿರುಗಿದಳು ….

******

ಮೋಹಕ್ಕೆ ಒಳಗಾಗಿ ನೀರು ತರುವಲ್ಲಿ ತಡ ಮಾಡಿದಳೆಂದು ,  ಗಂಡನಿಂದ ಶಾಪಕ್ಕೊಳಗಾದ ರೇಣುಕಾ, ರೋಗದ ಗಾಯಗಳು ಬಾತುಕೊಂಡು ನರಳುತ್ತಾ, ಶಾಪ ವಿಮೋಚನೆಗೆ ಗಂಗೆಯ ಮೂಲ ಹುಡುಕಿ ಸಾಗುತ್ತಾ , ನೊಂದ ರಾಗದಿಂದ ಹಾಡುತ್ತಿರಲು …
ಎದುರು ಕೂತ ಕೇರಿಯ ಜನರು ತಮ್ಮ ತಮ್ಮ ಕಣ್ಣೀರನ್ನೇ ಗಂಗೆಯಾಗಿ ಚೆಲ್ಲುತಿದ್ದಾರೆ.

ಇತ್ತ ಸೂತಕವು ಗೋಪಣ್ಣನ ಕಥೆ ಹೊಕ್ಕು , ಅದರೊಳಗೆ ಚಿಕ್ಕಮ್ಮನಿಗೆ ಕಥೆ ಹೇಳುತ್ತಿರುವ ಗೋಪಣ್ಣನ ಬೆನ್ನಿಗೆ ಒರಗಿರಲು ….

ಮನೆಯೆಲ್ಲಾ ಮೌನವಾಗಿರಲು , ದುಡುಕಿ ನಿಜ ಹೇಳಿದ ಪರಮಿಯೇ ಕಾರಣವಾದಳು. ತನ್ನ ತಪ್ಪು ಮಗಳಿಗೆ ಗೊತ್ತಾಗಿದೆ , ಗಂಡನಿಗೆ ಈ ಮೊದಲೇ ಗೊತ್ತಿದೆ ಎಂಬುದು ಸಾಕಿಯನ್ನು ನಡುಗಿಸಿತ್ತು. ಹೇಳಿಕೊಳ್ಳದೆ ನರಳಿದ ಪರಮಿ , ಹೇಳಿಕೊಳ್ಳಲಾಗದೆ ಕೊರಗಿದ ಗೋಪು ಇಬ್ಬರ ಕಣ್ಣಲ್ಲೂ ಈಗ ನಾ  ಸತ್ತವಳು ಎಂದುಕೊಳ್ಳುತ್ತ ಇನ್ನು ಉಸಿರಿಡಿವ ತಾಕತ್ತಿಲ್ಲದೆ ಕುಸಿದಳು.

ಈ ದಿನದ ನಂತರ ಮನೆಯಲ್ಲಿ ಮಾತುಗಳೇ ಸತ್ತುಹೋದವು. ರಾಚಣ್ಣನಿಗೆ ವಿಷಯ ತಿಳಿಯಲು ಅವನಂತು ಸುಸ್ತಾದ. ಗೊತ್ತಿದ್ದೂ ಸುಮ್ಮನಿದ್ದ ಗೋಪಣ್ಣನ ಮೌನಕ್ಕೆ ರಾಚಣ್ಣನ ತೊಡೆಗಳು ಗಡ ಗಡ ನಡುಗತೊಡಗಿ , ಕೆಲವು ದಿನಗಳ ಕಾಲ ಅವನು ಕಣ್ಮರೆಯಾಗಿಹೋದನು.

ಇದಾದ ಎರಡನೇ ವಾರಕ್ಕೆ ಸಾವಿನಂಚಿನಲ್ಲಿ ಸಾಕಿ ಮಲಗಲು ಅವಳ ಆ ಒಂದು ನಿರ್ಧಾರ ,
ಇನ್ನು ಮುಖ ಮಾಡಿ ಬದುಕುವ ಧೈರ್ಯ ಸಂಪೂರ್ಣವಾಗಿ ಸೊನ್ನೆಯಾಗಿ , ತೋಟದ ಬಾವಿ ಗುಡಿಸಲಲ್ಲಿ ಇದ್ದ ಇಲಿ ಮದ್ದನ್ನು , ಒಂದೊಂದೇ ಚಿಟಿಕೆ ತಾನು ತಿನ್ನುವ  ಊಟದಲ್ಲಿ ಸೇರಿಸಿಕೊಂಡಳು. ಒಂದುವಾರಕ್ಕೆ ಆರೋಗ್ಯ ಸಂಪೂರ್ಣ ಹದಗೆಟ್ಟು , ಗೋಪು ಎಷ್ಟೇ ಬೇಡಿಕೊಂಡರು ಕೈ ನೀಡಿ ಆಸ್ಪತ್ರೆಗೆ ಬರದೇ ನಾಟಿ ಔಷದಿ ತೆಗುದುಕೊಳ್ಳುವ ಸುಳ್ಳು ಭರವಸೆ ನೀಡುತ್ತಾ ಎರಡನೇ ವಾರಕ್ಕೆ ಅಸುನೀಗಿಬಿಟ್ಟಳು.

ಸಾವಿನ ಶೋಕ ಮರೆಸಲು ಅಂದು ರಾತ್ರಿ ಮನೆಯ ಎದುರು ಭಜನೆ. ಭಜನೆಗೋ , ಕೊನೆಗೊಮ್ಮೆ ಮುಖ ನೋಡುವ ಎಂದೋ ಹಳ್ಳಿಯ ಜನರೆಲ್ಲಾ ಸೇರಿರಲು, ಅಲ್ಲೊಂದು ಮೂಲೆಯಲ್ಲಿ ರಾಚಣ್ಣನೂ ನಿಂತಿದ್ದು , ಯಾರೂ ಅಷ್ಟಾಗಿ ನೋಡಲಿಲ್ಲವೇನೋ.
ಸಾಕಿಯ ಒಣ ದೇಹದ ಮೇಲೆ ಅತೀ ಭಾರ ಅನ್ನುವಷ್ಟು ಹೂಗಳೇನು ಇರಲಿಲ್ಲ. ಅವಳ ಕಾಲಿನ ಬಳಿ ಬಿಕ್ಕಳಿಸಲೂ ಉಸಿರಿಲ್ಲದೆ ಕೂತಿದ್ದ ಪರಮಿಗೆ ಮಾತ್ರ ತನ್ನ ಉಸಿರೂ ಭಾರವಾದಂತೆ ಬಿದ್ದುಕೊಂಡಿದ್ದಳು.
ನಡೆದದ್ದೆಲ್ಲಾ ತಾಳೆ ಮಾಡಲು , ಅಮ್ಮ ಸ್ವತಃ ಅವಳ ತಪ್ಪಿಂದಾಗಲಿ , ಅಪ್ಪನಿಗೆ ಅದು ಗೊತ್ತೆಂದಾಗಲಿ ಸತ್ತವಳಲ್ಲ , ಬದಲಿಗೆ ನಾ ಮಾತು ಬಿಟ್ಟಿದ್ದರಿಂದಲೇ ಸತ್ತುಹೋದಳು ಎಂದೆಂದು ಯಾರೋ ಕಿವಿಯಲ್ಲಿ ಕಿರುಚಿದಂತಾಗಿ , ಕಿಟಾರನೆ ಕಿರುಚಿಕೊಳ್ಳುತ್ತ , ಎದ್ದು ಅಮ್ಮನ ಮೈ ಮೇಲೆ ತನ್ನ ಕೈ ಬೆರಳುಗಳನ್ನೆಲ್ಲ ತೀಡುತ್ತಾ ಗೊಳೋ ಎಂದು ಅತ್ತಳು. ನೆರೆದವರಲ್ಲಿ ಕೆಲವರು ತಡೆಯಲು , ಯಾರೋ ನನ್ನನ್ನು ಅಮ್ಮನಿಂದ ಎಳೆಯುವಂತೆ ಅನಿಸಿ ಮತ್ತೂ ಗೋಳಾಡಿ ಅತ್ತಳು.
ಬಿಟ್ಟುಹೋದ ದುಃಖ ಎಳೆ ಎಳೆಯಾಗಿ ಬಿಡಿಸಿ ಹಾಡಿ ಅಳಬೇಕಿನಿಸಿದರೂ ಅವಳಿಂದ ಅದು ಆಗಲಿಲ್ಲ . ಗಂಟಲು ತುಂಬಿಕೊಂಡು , ಬಾಯಿ ಕಟ್ಟಿಕೊಂಡು , ಕಣ್ಣೀರೆ ಪಾದಕ್ಕೆ ಚೆಲ್ಲಿ , ಕೈಯಿಂದ ಏನೇನೋ ತೋರಿಸುತ್ತ , ಏನೇನೋ ಸಲಿಗೆ ಮಾಡುತ್ತಾ ದಮ್ಮು ಕಟ್ಟಿ ಅಳುತ್ತಿದ್ದಳು . ಅವಳ ದುಃಖ ಉಕ್ಕಿ ನೆರೆದವರಿಗೆಲ್ಲ ತಾಕಿ ಅವರೂ ಅಳಲು , ಪರಮಿಯ ಅಳು ಮತ್ತೂ ಜೋರಾಗಿ , ಒಂದು ಕೊನೆಯಲ್ಲಿ ಜ್ಞಾನ ತಪ್ಪಿ ಬಿದ್ದಳು.

ಕೂಡಿದವರೆಲ್ಲ  ಬಟ್ಟೆಯಿಂದ ಗಾಳಿ ಬೀಸುತ್ತ , ತಲೆಗೆ ಒಂಚೂರು ನೀರು ಹಾಕಿ ತಟ್ಟುತ್ತ ಮತ್ತಷ್ಟು ಹಿಂಸಿಸಿದರು . ಈ  ರೀತಿ ಮಗಳ ಗೋಳು ನೋಡಲಾಗದ ಗೋಪಣ್ಣ ಬಾಯಿ ಕಟ್ಟಿಕೊಂಡು ಹೊರಬಂದನು. ಹೊರಬಂದವನು ಭಜನೆಯ ಗುಂಪಿನೆಡೆಗೆ ತಿರುಗಲು ,
” ಗಂಡಾನ ಜೋಪಾನ ಮಾಡೆ ನನ್ನವ್ವ ,
ಗಂಡಾನೆಂದರೆ ಮನೆಯ ದೇವರು ಕೇಳವ್ವ “
ಎಂದವರು ಹಾಡಲು , ಕಟ್ಟಿದ್ದ ಅಳು ಹೊಡೆದು , ನಿಂತಲ್ಲೇ ಅವನು ನೆಲ ಹಿಡಿದು , ಮೇಲೆ ಆಕಾಶ ನೋಡಿ , ಕೆಳಗಿನ ಮಣ್ಣನ್ನು ಬಸಿದು , ಎರಡೂ ಕೈಗಳಿಂದ ನೆಲವನ್ನು ಉಜ್ಜಿ , ಗೊಳೋ ಎಂದನು.
ಅವನ ಅಳು ಕೇಳಿ ನೆರೆದಿದ್ದ ಕಲ್ಲು ಮನಸಿನವರೂ ಕೂಡ ಜೊತೆಗೂಡಿ ಒಮ್ಮೆ ಅತ್ತುಬಿಡುವ ಎನ್ನುವಷ್ಟು ಅವನ ದುಃಖ ಆಳವಾಗಿತ್ತು.

ಈ ಆಕ್ರಂದನಕ್ಕೆ ತೀರಾ ತುತ್ತಾಗಿ ಕೊರಗಿದವನು ರಾಚಣ್ಣ.

ಬೆಳಿಗ್ಗೆ ಮಣ್ಣು ಮಾಡುವಲ್ಲೂ ಪರಮಿಯ ಅರಚಾಟ ಅಲ್ಲಿದ್ದ ಕಲ್ಲು ಮಣ್ಣು , ಪೊದೆಗಳಿಗೆಲ್ಲ ಅರ್ಥವಾಗಿ ತಲೆತಗ್ಗಿಸಿ ಅವಳೊಂದಿಗೆ ಅಳುತಿದ್ದವು. ಗೋಪಣ್ಣ ಜೀವವಿದ್ದ ಒರಟು ಬಂಡೆಯಂತೆ ನಿಂತಿದ್ದ.

ಅಲ್ಲೇ ಕವಲಾಗಿ ನಿಂತಿದ್ದ ರಾಚಣ್ಣ , ಇನ್ನು ದಿಕ್ಕೆಟ್ಟ ಇವರಿಗೆ ದಿಕ್ಕಾಗಿ ನಾನು ಬದುಕಬೇಕು ಎಂದು ನಿರ್ಧರಿಸಿಕೊಳ್ಳುತಿದ್ದ.

ಇದೆಲ್ಲಾ ಕಳೆದು ಕೆಲದಿನಗಳಲ್ಲಿ ಸಾಕಿ ವಿಷ ತಿಂದೇ  ಸತ್ತುದು ಎಂಬುದು ಹರಡಿ , ಪರಮಿಯನ್ನು ಮುಟ್ಟಲು ,
‘ಬಟ್ಟೆ ಕೆದರಿಕೊಂಡು ಗೋಡೆಗೆ ಆತು ಅಳುವುದನ್ನು  ಕಂಡೇ ಅಮ್ಮನ ವಿಷಯ ನನಗೆ ತಿಳಿದಿದೆ ಎಂದು ಅರಿತುಕೊಂಡ ಅಪ್ಪನಿಗೆ , ಅಮ್ಮ ವಿಷ ತಿಂದು  ಸಾಯಲು ಯೋಚಿಸುವುದೂ ಗೊತ್ತಿರಲೇಬೇಕು. ಅಪ್ಪ ಯಾಕ್ ಅಮ್ಮನನ್ನು ತಡೀಲಿಲ್ಲ , ಇದೆಲ್ಲಕ್ಕಿಂತ ಮುಂಚೆ ಅಮ್ಮ ಎಡವಿದಾಗಲೇ ಯಾಕ್ ತಡೀಲಿಲ್ಲ. ಅಂದೇ ತಡೆದಿದ್ರೆ ಈವತ್ತು….. ‘ ಎಂದೆಲ್ಲಾ ತನ್ನಲ್ಲಿ ತಾನೇ ಅಂದುಕೊಂಡು ಗೋಪಣ್ಣನಿಗೆ ವಿಮುಖಳಾದಳು.

     ******

ಇವಿಷ್ಟೂ ನಡೆದದ್ದು ಎಂದು ವಿವರಿಸಿ ಹೇಳಿದ ಗೋಪಣ್ಣನ ಕಣ್ಣುಗಳಲ್ಲಿ ಕಾಂತಿ ಕುಂದಿತು. ಅದನ್ನು ಕಂಡು ಚಿಕ್ಕಮ್ಮನೂ ತಡವರಿಸಿ ನಿಟ್ಟುಸಿರು ಬಿಟ್ಟಳು.

ಇತ್ತ ಗಲಭೆ ಇಲ್ಲದೆ ನಡೆಯುತ್ತಿರುವ ರೇಣುಕಾಳ ಕರಾಳ ದಿನ ಗಣನೆಗಳಲಿ , ರೇಣುಕಾ ಪಾತ್ರದಾರಿ ಸಂಪೂರ್ಣ ರೋಗಿಯಾಗಿದ್ದವಳು , ಗಂಗೆಯ ನೀರನ್ನು ಮುಟ್ಟುತ ಮತ್ತೆ ತನ್ನ ರೂಪ ಹೊಂದಿದ್ದು , ಕಣ್ಣ ಕಟ್ಟಿದಂತೆ ನಟಿಸಲು ನೆರೆದವರೆಲ್ಲ ನಿರಾಳರಾಗಿ ಕೈ ಮುಗಿದರು. ಶಾಪ ವಿಮುಕ್ತಳಾದ ರೇಣುಕಾ ಪತಿಯನ್ನರಸಿ ಮತ್ತೆ ಕುಟೀರಕ್ಕೆ ಬರಲು …..
ಮತ್ತಷ್ಟು ಕೋಪಗೊಂಡ ಜಮದಗ್ನಿ .

ಒಳಮನೆಯಲ್ಲಿ ಸೂತಕವು ಎದ್ದು ಕೂತಿದ್ದ ಗೋಪಣ್ಣನ ಸವರಿ ‘ಮುಂದೆ…..?’ ಎಂದಿತು.

ಇಷ್ಟೆಲ್ಲಾ ಏನೂ ಅಲ್ಲವೇ ಅಲ್ಲ ಎಂಬಂತೆ ಮತ್ತೊಂದು ನೋವು ಅವನ ಕಾಡಿತ್ತು , ಅದೆಂದರೆ ಪರಮಿ ಅವನೊಂದಿಗೆ ಮಾತು ಬಿಟ್ಟಿದ್ದು. ಅವಳ ಉಸಿರೂ ಕೂಡ ಅವನೊಂದಿಗೆ ಮಾತಾಡಲಿಲ್ಲ ಎಂಬುದು. ಅಂತೂ ಅವಳು ನೆಲೆ ಕಂಡಳು. ಕಟ್ಟಿಕೊಂಡ ಶಿವಲಿಂಗ ಕಣ್ಣಾಗಿ ಕಾದುಕೊಂಡರೆ ಸಾಕು ಎಂದುಕೊಳ್ಳಲು ಅವನಿಗೆ ಈ ವ್ಯಾಧಿಯಾಗಿ ಹಾಸಿಗೆ ಹಿಡಿದಿದ್ದ.

ಗೋಪಣ್ಣನ ಬೇನೆ ಕಂಡು ಚಿಕ್ಕಮ್ಮನ ಮನಸೇ ಉಸಿರಿಗಿಂತ ತೆಳುವಾಗುತ್ತ, ತಂದಿದ್ದ ಗಂಜಿಯನ್ನ ಗೋಪಣ್ಣನಿಗೆ ಕುಡಿಸಿ , ಕೈಯಿ ಬಾಯಿ ಒರೆಸಿ , ಎಂದಿನಂತೆ ಹಳ್ಳಿಯ ತೋಪಿನ ಮದ್ಯೆ ನೆಲೆಸಿದ್ದ , ಛಾವಣಿ ಇಲ್ಲದ ಮಾರಮ್ಮನ ಗುಡಿಗೆ ಹೊರಟಳು. ಮಾರಮ್ಮನ ಮೂರ್ತಿ ಎಂದು ಅರಿಶಿನ ಕುಂಕುಮ ಹಚ್ಚಿದ್ದ ಕಲ್ಲಿನ ಎದುರು ಇದ್ದ ಮಣ್ಣಿನ ದೀಪಕ್ಕೆ ಎಣ್ಣೆ ಸುರಿದು ಬೆಳಕು ಕೊಟ್ಟು , ಮುಂದೆ ಕೂತಳು.

ಎಂದಿನ ಗೆಳತಿ ಚಿಕ್ಕಮ್ಮನ ಕಂಡು ಮಾರಮ್ಮ ದೇವಿಯೂ ಕಲ್ಲಿನಿಂದ ಹೊರಬಂದು ಅವಳೆದುರು ಕೂತಂತೆ , ಭುಜದ ಮೇಲೆ ಕೈ ಇಟ್ಟು ಏನೆಂದು ಕೇಳಿದಂತೆ , ಗೋಪಣ್ಣನ ಅಷ್ಟೂ ಕಷ್ಟಗಳನ್ನು ಕನಸಿನಂತೆ ಹೇಳುತ್ತಾ , ಅವನ ಕಾಯಿಲಿಗೆ ಮದ್ದಾಗು ಎಂದು ಬೇಡಿಕೊಳ್ಳುತ್ತ ಕಣ್ಣೀರಾದಳು ಚಿಕ್ಕಮ್ಮ.

ಅವಳನ್ನೇ ಕಾಣುತ್ತಾ ಮಾರಮ್ಮ ದೇವಿಯು ನಕ್ಕು , ಅವಳಚ್ಚಿದ್ದ ದೀಪದ ಬೆಳಕನ್ನು ತನ್ನುಸಿರಿನಿಂದ ಊದಿ ಆರಿಸಿ ಕಪ್ಪುಬಣ್ಣಕ್ಕೆ ತಿರುಗಿ ಆವಿಯಾದಳು.

ಅಷ್ಟು ದೂರ ಚಿಕ್ಕಮ್ಮ ನಡೆಯುವಷ್ಟರಲ್ಲಿ ಮಾರಿಗುಡಿಯ ಹಿಂದೆ ಇದ್ದ ದೆವ್ವದಷ್ಟು ದೊಡ್ಡದಾದ ರಾಗಿ ಮರವು , ಕಪ್ಪಾಗಿ ಕೊಂಚ ಕದಲಿದಂತೆ ಅದರಲ್ಲಿ ಇದ್ದ ದೊಡ್ಡ ಜೇನು ಗೂಡಿಗೆ ಕಲ್ಲು ಬಿದ್ದಂತೆ ಹುಚ್ಚೆದ್ದು ಸುತ್ತೆಲ್ಲಾ ಚೀರಾಡಿ ಹುಡುಕಿ , ಸಿಕ್ಕ ಬಲಿ ಇದು ಎಂದು ಚಿಕಮ್ಮನ ಮೇಲೆ ದಾಳಿ ಇಟ್ಟವು.
ವಯಸ್ಸಲ್ಲದ ವಯಸ್ಸಿನ ಚಿಕ್ಕಮ್ಮ , ಬುಸಗುಡುತ್ತ ತನ್ನ ಸೀರೆ ಸೆರಗಿನಿಂದ ಜೇನುಗಳನ್ನು ಓಡಿಸುತ್ತಾ , ಸೋಲುತ್ತಾ ,ಕುಂಟುತ್ತಾ ಹಳ್ಳಿ ಮದ್ಯಕ್ಕೆ ಬರುವಷ್ಟರಲ್ಲಿ ಅರ್ಧ ಜೀವವಾಗಿಹೋದಳು.

ಕಂಡ ಯಾರ್ಯಾರೋ ಜನರು ಬೆಂಕಿ ಪಂಜುಗಳನ್ನು ತಂದು , ಕಂಬಳಿ ತಂದು , ಸಿಕ್ಕ ಸಿಕ್ಕ ಗಿಡಗಳ ಮುರಿದು ತಂದು ಜೇನುಗಳನ್ನು ದಿಕ್ಕುಗೆಡಿಸಿ ಚಿಕ್ಕಮ್ಮನ ಹೊತ್ತು ಮನೆ ಸೇರಿಸಿದರು.

        *****

ನರಳಾಟದಲ್ಲಿ ಚಿಕ್ಕಮ್ಮ ಕೊನೆಉಸಿರಾಡಲು , ಹಳ್ಳಿಯ ಮಂದಿ ಬಂದು ಬಂದು ನೋಡತೊಡಗಿದರು. ಜೇನು ಕಚ್ಚಿದ ಜಾಗದಲ್ಲೆಲ್ಲ ಊದಿಕೊಂಡು ಉಣ್ಣುಗಳಾಗಿ , ಕೀವು ಕಟ್ಟಲು , ಅದಕ್ಕೆಲ್ಲ ನಾಟಿ ಔಷಾದಿಯ ಹೆಸರಲ್ಲಿ ಏನೆಲ್ಲಾ ಹಚ್ಚಿದರೂ , ವಾಸಿ ಆಗುವ ಮುಖವಿರಲಿಲ್ಲ.

” ಯಾರೋ ಪುಂಡ ಹುಡುಗ್ರು ಕಲ್ಲು ಹೋಡ್ದವ್ರೆ , ಅದೇ ಹೊತ್ತಲ್ಲಿ ಚಿಕ್ಕಮ್ಮನು ಅಲ್ಲೇ ಅವ್ಳೆ , ಈಗಿನ್ನ ಬದುಕಲ್ಲ ಅಂತ , ಬಂದು ಮುಖ ನೋಡ್ತೀಯ…?”
ಎಂದು ರಾಚಪ್ಪ ವಿವರಿಸಿ ಹೇಳಲು , ಗೋಪಣ್ಣ “ಹೂಂ” ಎನ್ನಲು , ರಾಚಣ್ಣನ ಹಾಳುಗಳು ಗೋಪಣ್ಣನ ಹೊತ್ತುಕೊಂಡು ಚಿಕ್ಕಮ್ಮನ ಮನೆ ಸೇರಿಸಿ , ಬೆನ್ನ ಹಿಡಿದು ಕೂರಿಸಿದರು.

ಗೋಪಣ್ಣ ಬರುವ ಮುನ್ನ ನರಳುತ್ತಾ ಇದ್ದ ಚಿಕ್ಕಮ್ಮ , ಅವ ಬಂದ ಒಡನೆ ನರಳಾಟ ನಿಲ್ಲಿಸಿದಳು. ಆ ನೋವಲ್ಲು , ಆ ಅರ್ಧ ಉಸಿರಲ್ಲೂ ಗೋಪಣ್ಣ ಬಂದದ್ದು ಕಂಡಳೇನೋ ನರಳುವುದು ನಿಲ್ಲಿಸಲು ನೆರೆದವರೆಲ್ಲ ಮೂಖರಾದರು. ಗೋಪಣ್ಣ ನೋಡಿದಷ್ಟು ನೋಡಿ ಮತ್ತೆ ಮನೆಗೆ ಹೋಗಬೇಕೆಂದ. ತಂದ ಹಾಳುಗಳು ಹೊತ್ತು ಹೊಯ್ಯಲು , ಗೋಪಣ್ಣ ಒಸಿಲು ದಾಟಲು , ಇತ್ತ ಚಿಕ್ಕಮ್ಮನ ‘ ಜೀವ ‘ ಕಳಚಿತು.

ಗೋಪಣ್ಣ ಪಡೆದುಕೊಂಡದ್ದೇನು , ಬರೀ ಕಳೆದುಕೊಂಡದ್ದೇ ಇರುವಾಗ ಎಂದುಕೊಳ್ಳುತ್ತ ಸೂತಕವು,

“ಎಷ್ಟೇ ಕಷ್ಟದಲ್ಲೂ ಬದುಕುವ ಧೈರ್ಯ ಮಾಡಿದ ನೀನು , ಚಿಕ್ಕಮ್ಮ ಹೋದಮೇಲೆ ಯಾಕೆ ಬಿಟ್ಟುಕೊಟ್ಟೆ , ಚಿಕ್ಕಮ್ಮ ಸತ್ತಮೇಲೆ ಸಂಪೂರ್ಣ ಅನ್ನ ನೀರು ಬಿಟ್ಟು ಸಾವಿಗಾಗಿ….”
ಎನ್ನಲು.

ಅವನು ಮೌನವಾದನು….

ಅವನ ಮೌನವೆಲ್ಲ ಒಟ್ಟುಗೂಡಿ ದನಿಯಾಗಿ “ಅಮ್ಮ”
ಎನ್ನಲು ….

*****

ಇತ್ತ ಕ್ರೋಧಗೊಂಡ ಜಮದಗ್ನಿ , ಅವಳ ತಲೆಕಡಿಯುವಂತೆ ಆಜ್ಞೆ ಮಾಡಲು , ಅವನ ಮಕ್ಕಳೆಲ್ಲರೂ ಬೇಡ ಬೇಡವೆಂದು ಪುಕ್ಕರಾಗಲು, ‘ಪರಶುವಿನೊಂದಿಗೆ ರಾಮ ಬಾ’ ಎಂದು ಜಮದಗ್ನಿ ಕೂಗಲು….
ಕಿಟಾರನೆ ಬಪೂನನು ಕಿರುಚುತ್ತಾ ಪೆಂಡಾಲಿನ ಬಳಿ ಬಂದು ‘ ಬೆಂಕಿ ಬೆಂಕಿ ‘ ಎಂದು ಬುಸುಗುಡುತ್ತ ಬಿದ್ದನು .
ಗೋಪಣ್ಣನ ಮನೆಯ ಹಿಂದೆ ಇದ್ದ , ಉಲ್ಲಿನ ವಾಮೆಗೆ ಬೆಂಕಿ ಬಿದ್ದು ಧಗ ಧಗ ಎನ್ನುತ್ತಾ ಬೆಂಕಿ ಮೇಲೆದ್ದು , ಎಲ್ಲೆಲ್ಲಿ ಹರಡಿ ಸುಡಬಹುದು ಎಂದು  ಇಣುಕಿ ನೋಡುತ್ತಿರಲು, ಕಥೆ ಮಾಡುವವರು , ನೋಡುವವರು , ಎಲ್ಲರು ಬೆಂಕಿ ಕಂಡ ಕಡೆಗೆ ಓಡಿ ಬಂದರು.

ಸ್ಟೇಜ್ ಗೆ ಬರುವ ಮುನ್ನ ಮೂತ್ರ ವಿಸರ್ಜನೆಗೆ ಹೋಗಿದ್ದ ಪರಶು ಪಾತ್ರ ದಾರಿಯ ಸಿಗರೇಟು ಚಟಕ್ಕೆ ಹಚ್ಚಿದ್ದ ಕಡ್ಡಿಯ ಕಿಡಿ ಉಲ್ಲಿಗೆ ತಾಕಿ ಮಳೆಯಲ್ಲಿ ನೆನೆದಿದ್ದ ಉಲ್ಲು ತಕ್ಷಣಕ್ಕೆ ಉರಿಯದೆ , ನಿದಾನವಾಗಿ ಉರಿದು ಮೇಲೆದ್ದಿತು. ಅದ  ಕಂಡು ಬೆಂಕಿ ಆರಿಸಲು ಹೋದ ಪರಶುರಾಮ ವೇಷಧಾರಿಯ ಬಟ್ಟೆಗೆ , ಬಣ್ಣಕ್ಕೆ ಬೆಂಕಿ ಹೊತ್ತಿ ಅವನೂ ಉರಿಯ ತೊಡಗಿ , ಅಲ್ಲಿಗೆ ಬಂದ ಬಪೂನನಿಗೆ ಕಂಡು , ಅವನೂ ಬೆಂಕಿ ನಂದಿಸಲು ತೊಡಗಿ ಸೋತು , ಲಬೋ ಲಬೋ ಎನ್ನುತ್ತಾ ಬಂದಿದ್ದನು.

ಜನರೆಲ್ಲ ಬೆಂಕಿಯಬಳಿ ಬರುವಷ್ಟರಲ್ಲಿ ಪರಶು ಪಾತ್ರದಾರಿಯ  ವೇಷದ ಬಟ್ಟೆ , ಬಣ್ಣಕ್ಕೆ ಬೆಂಕಿ ಮೆತ್ತಿಕೊಂಡಿತ್ತು. ಸಿಕ್ಕ ಸಿಕ್ಕ ವಸ್ತುಗಳಲ್ಲಿ ಅವನ ಮೇಲಿನ ಬೆಂಕಿ ನಂದಿಸಿ , ಅವನನ್ನು ಹೊತ್ತು ಒಂದು ಗುಂಪು , ಉಲ್ಲಿಗೆ ಮೆತ್ತಿದ್ದ ಬೆಂಕಿಯ ನಂದಿಸುವ ವಿಫಲ ಪ್ರಯತ್ನದಲ್ಲಿ ಇನ್ನೊಂದು ಗುಂಪು. ಕಥೆ ಅಲ್ಲಿಗೆ ನಿಂತು ದೊಪ್ಪನೆ ಬಂದ ಆರ್ತ ನಾಧಗಳಲ್ಲಿ ಮರೆಯಾಗಿರಲು…
ಅದನ್ನೆಲ್ಲ ಕಂಡ ಸೂತಕವು ನಾಲಿಗೆ ಚಪ್ಪರಿಸಿಕೊಂಡು ಮತ್ತೆ ಗೋಪಣ್ಣನ ಬಳಿ ಸೇರಿ ‘ ಹೂಂ ‘ ಗುಟ್ಟಲು …

ಗೋಪಣ್ಣ ಮೌನ ಹೊತ್ತು ಕುಳಿತಿದ್ದ.

ಮೌನವ ಕೆದಕಲು ಸೂತಕವು , ” ಎಡಕ್ಕೆ ಮಾತು ಮುರಿದು ಕೂತ ಮಗಳು , ಬಲಕ್ಕೆ ಮೋಸ ಮಾಡಿ , ಮೋಸಗೊಂಡು ,ಬದುಕು ಮುರಿದ ಸಾಕಿ , ಎದುರು ತನ್ನ ಕಣ್ಣೀರಿನಲ್ಲಿ ಆರೈಕೆ ನಡೆಸಿ ಕಾದ ಚಿಕ್ಕಮ್ಮ . ಎಲ್ಲರೂ ಒಂದೊಂದು ದಿಕ್ಕಾಗಿ ಮೂರುದಾರಿಗಳಾಗಿ ಹೊಡೆದು ಕೂತಿರಲು , ನಿನ್ನ ಬೆನ್ನ ಹಿಂದೆ ಒಂದು ದಿಕ್ಕಿದೆ , ಅದೊಂದು ಹೆದ್ದಾರಿಯಾಗಿ ನಿನ್ನ ಸಾಗಿಸಿದೆ. ಅದು ಯಾವ ದಾರಿ ” ಎಂದು ಕೇಳಲು …..

” ಅಮ್ಮ ” ಎಂದದ್ದು ಗೋಪಣ್ಣನ ಅಂತರಾತ್ಮ.

       *******

ಕಂಡವರೆಲ್ಲ ‘ ಇದು ಕಾಡೇ ಒರೆತು ಹಳ್ಳಿಯಂತೂ ಅಲ್ಲ’, ಎನ್ನುವಷ್ಟು ಕಾಡಾಗಿದ್ದ ಹಳ್ಳಿಯದು ಕಾಡಳ್ಳಿ. ಹಳ್ಳಿಯ ದಿಣ್ಣೆಯಲ್ಲಿ ಹಳ್ಳಿಯ ಗೌಡರು , ಜಮೀನು ಇದ್ದೋರು  ಇರುವಂತದ್ದಾದರೆ. ದಿಣ್ಣೆಯ ಕೆಳಗೆ ಕೇರಿಯಲ್ಲಿ ಕೂಲಿ ಕೆಲಸವನ್ನೇ ನೆಚ್ಚಿಕೊಂಡಿದ್ದ ಹೊಲೆಯರು, ಬಡವರ ಗುಡಿಸಲು ಇರುವಂತದ್ದು. ಈ ಕೇರಿಯ ಕೊನೆಯ ಗುಡಿಸಲು ಕೆಂಚನದು. ಅವನ ಹೆಂಡ್ತಿ ಗೌರಿ. ಇದೆ ಗೌರಿ ಮುಂದೆ ಗೋಪಣ್ಣನ ಅಮ್ಮನಾದಳು. ಗೋಪು ಹುಟ್ಟುವ ತಿಂಗಳಲ್ಲೇ ಕೆಂಚ ಹಾವು ಕಡಿದು ಸತ್ತ. ಕೆಂಚನ ಅಣ್ಣ ಲಚ್ಚಣ್ಣ ಅವರ ಕುಟುಂಬಕ್ಕೆ ಬಿಡದ ಕೈಸಹಾಯವಾದನು. ಲಚ್ಚನ ಹೆಂಡತಿ ಚಿಕ್ಕಿಯು ಅವರ ಹೊಟ್ಟೆಗೆ ‘ಇಲ್ಲ’ ಎನ್ನದೆ ಬದುಕಿದಳು.

ಪುಟ್ಟ ಪುಟ್ಟ ಗುಡಿಸಲುಗಳಲ್ಲಿ ಪುತಪುತನೆ ಹುತ್ತದ ಹುಳಗಳು ಎದ್ದಂತೆ ಜನರೆಲ್ಲಾ ಹೊತ್ತಲ್ಲೇ ಎದ್ದು ಕೂಲಿಗೆ ಹೊರುಡುವಾಗ , ಅದರಲ್ಲಿ ಹೆಣ್ಣಿಲ್ಲ , ಗಂಡಿಲ್ಲ ಕೊನೆಗೆ ಮಕ್ಕಳೂ ಇಲ್ಲ ಎನ್ನುವಂತೆ ಎಲ್ಲರೂ ಕೂಲಿಗಳೇ. ಅದರಲ್ಲಿನ ಹೆಣ್ಣಾಳುಗಳ ಹರಿದ ಬಟ್ಟೆ ಸೊಂದಿಯ ಭಾಗ ನೋಡಲೆಂದೇ ಕೆಲ ಗೌಡರು ಬಂದಿರಲು, ಹಲವರ ಕಣ್ಣು , ಗಂಡನಿಲ್ಲದವರ ಮೇಲೆಯೇ ಹೆಚ್ಚು. ಅದರಲ್ಲಿ ‘ಗೌರಿ’ ಚೆಲುವಿ, ಎಳೆ ವಯಸ್ಸಾದರೂ ಬಲಿತಿದ್ದ ಮೈ ಕೈ ಅಂಗಾಂಗಗಳು ಚಪ್ಪರಿಸಿ ಕಾಣುತಿದ್ದವು. ಕೂಲಿ ಮಾಡಿ ಬರುವಷ್ಟರಲ್ಲಿ ಅವಳ ಬೆನ್ನು ಬಾಗಿರುತಿತ್ತು. ಒಂದಷ್ಟು ಗಂಜಿ ಕುಡಿದು ಹೊಟ್ಟೆ ನೀಯುವಳು. ಲಚ್ಚಣ್ಣ- ಚಿಕ್ಕಿಯು ಅವಳ ಬೆನ್ನು ಸವರಿ ಸಮಾಧಾನಗೊಳಿಸುವರು. ಅಪ್ಪಿ ಮಲಗುವ ಮಗು ಅಷ್ಟುದ್ದ ಬೆಳೆದು ಅಂಗಿಚಡ್ಡಿ ತೊಡುವಷ್ಟಾಗಲು, ಗೌಡರ ಮಕ್ಕಳ ಅರಿದು ಎಸೆದಿದ್ದ ಚಡ್ಡಿ ತೊಟ್ಟು , ನಡೆಯುವಷ್ಟಾದ. ‘ಗೋಪು’ ಎಂದು ಕೂಗಲು ‘ಓ’ ಎನ್ನುತ್ತಾ ಅಮ್ಮನ ಮಡಿಲಾಗುತ್ತಿದ್ದ.

ಆ ಎಳೆ ವಯಸ್ಸಿನ ಗೋಪುವಿಗೂ ಅಮ್ಮನ ಕಷ್ಟಗಳೆಲ್ಲ ಅರ್ಥವಾಗುವಷ್ಟು ಬಡತನ ಅವರನ್ನು ಹಣ್ಣು ಮಾಡಿತ್ತು. ಹಣ್ಣಾದ ಗೋಪುವಿನ ಬುದ್ದಿಗೆ ರಾತ್ರಿಹೊತ್ತು ತಮ್ಮ ಗುಡಿಸಲಿಗೆ ಕಲ್ಲುಗಳು ಬೀಳುವ ಸದ್ದು , ಹೊತ್ತಾಗುವ ಮುಂಚೆಗೆ ಕೇಳುತಿದ್ದ ಶಿಳ್ಳೆಗಳ ಸದ್ದು , ಏನೆಂದು ಅರ್ಥವಾಗಲು ಬಹಳ ವರ್ಷಗಳೇ ಬೇಕಾಗಿತ್ತು. ಆ ಸದ್ದು ಬಂದಾಗಲೆಲ್ಲ ಗೌರಿ ಕಣ್ಣು ಬಿಗಿಸಿಕೊಂಡು ಮುಖ ಕಿವುಚಿ ಹೆದರಿ ಮಲಗುವುದು ಗೋಪುವಿಗೆ ಸಹಿಸಲಾಗದೆ , ತನಗೆ ಗೊತ್ತಿಲ್ಲದ ಯಾವುದೊ ಕ್ರೋಧ ಉಕ್ಕುತಿತ್ತು. ಬೆಳಗೆದ್ದು ಚಿಕ್ಕಿಯ ಗುಡಿಸಿಲಿಗೆ ಓಡಿ ದೂರು ಹೇಳಿ ಕುದಿಯುತ್ತಿದ್ದ. ಏನೂ ಮಾಡಲಾಗದ ಚಿಕ್ಕಿ ಅವನನ್ನ ತಕ್ಷಣಕ್ಕೆ ಯಾಮಾರಿಸಿ , ಬೇರೆ ಕಥೆ ಹೊಡೆಯುತ್ತಾ ಮುದ್ದಿಸುತ್ತಿದ್ದಳು.

ಗೌರಿ ಚಿಕ್ಕಿಯು ಕೂಲಿಯಾಗಿದ್ದ ಹೊಕ್ಕಲು ಜಮೀನುದಾರ  ಸೋಮೇಗೌಡನಿಗಂತು  ಗೌರಿಯನ್ನು ತನ್ನ ಮಂಕರಿಯಲ್ಲಿ ಕೂಡಿಟ್ಟ ನಾಟಿ ಕೋಳಿಯಂತೆ ಕಾಣುತ್ತಾ  , ಮಸಾಲೆ ಅರೀದೆ ಬಿಡಲ್ಲ ಎನ್ನುತ್ತಾ , ದಾಡಿಗೆ ಇಳಿದ ಜೊಲ್ಲನ್ನು ಒರಸದೇ, ಏನೆಲ್ಲಾ ಲಾಗ ಹೊಡೆದರು ಗೌರಿ ಅವನ ಕಡೆ ತಿರುಗಿಯೂ ನೋಡದೆ ಕೂಲಿ ಮುಗಿಸಿ ಮನೆಸೇರುವಳು. ಅವಳ ಪಡೆಯಲು ಯಾವುದೇ ಸ್ಥಿತಿಮಟ್ಟಕ್ಕೂ ಇಳಿಯುವ ಜಿದ್ದಿಗೆ ಅವ ಬಿದ್ದಿದ್ದ . ಕೆಲವೊಮ್ಮೆ ಮುಂಡೂರಿಗೆ ಹೋಗಿ ಯಾರಿಗೂ ತಿಳಿಯದಂತೆ ಮಾಟವೂ ಮಾಡಿಸಿದ್ದನಲ್ಲ. ಅದರಿಂದ ಉಲ್ಲುಕಡ್ಡಿಯೂ ಕೊಂಕಲಿಲ್ಲ. ಅಂತೂ ಅವಳು ಸಿಕ್ಕ ಸಿಕ್ಕವರ ಸೊತ್ತಾಗದೆ ಬದುಕುವುದ ಕಂಡು ಕೇರಿಯ ಮಿಕ್ಕ ಹೆಣ್ಣಾಳುಗಳು ಬಾಯಿಮೇಲೆ ಬೆರಳಿಟ್ಟರು. ಇತ್ತ ಗೋಪು ಆಡಾಡುತ್ತ ಬೆಳೆಯುತ್ತ ಅವಳ ಕನಸಾದ.

       *******

ಅದಾಗಲೇ ಗೋಪು ಗೌರಿಯ ಭುಜಕ್ಕೆ ಮೀರಿ ಬೆಳೆದಿದ್ದ. ತನ್ನೊಂದಿಗೆ ಮತ್ತೊಂದು ಜೋಡೆತ್ತು ಕಟ್ಟಿಕೊಳ್ಳಲು ನೊಗಹೊತ್ತು ನಿಂತಿದ್ದ. ಅವನ ಹಣೆಗೆ ಅಚ್ಚಿಕೊಳ್ಳುವ ಹೆಣ್ಣು ಯಾರೋ ಎಂಬೆಲ್ಲ ಕನಸುಗಳು ಅವನದಲ್ಲ. ಹೈಕಳು ಮಕ್ಕಳೂ ಕೂಲಿಗೆ ಹೋಗುವ ಕೇರಿಯಲ್ಲಿ ಇವನು ಬೇರೆ ಹಣೆ ಬರಹದವನು.
‘ಕೂಲಿ ಬಿಟ್ಟು ಬೇರೆ ಹೊಟ್ಟೆಗೆ ಇಟ್ಟಾಗುವ ಕೆಲ್ಸ ನಮಗೆ ಬಂದಿಲ್ಲ, ಅವನ್ನೂ ಕೂಲಿಗೆ ಕರ್ಕೊಂಡ್ ಬಾ ‘, ಎಂದೆಲ್ಲ ಲಚ್ಚಣ್ಣ ಚಿಕ್ಕಿ ಹೇಳಿದರೂ ಗೌರಿ ಒಪ್ಪಲಿಲ್ಲ.
‘ಅವ ನನ್ನ ಕಣ್ಮುಂದೆ ಕೂಲಿ ಮಾಡೋದು ನಾನ್ ನೋಡಿ ಇರೋದಿಲ್ಲ’, ಎಂದುಬಿಟ್ಟಳು.
ಆದರೂ ಬೆಳೆದಂತೆ ಗೋಪು ಅರಿತುಕೊಂಡು ಈ ಹಳ್ಳಿ ಬಿಟ್ಟು ಬೇರೆ ಹಳ್ಳಿಗೆ ಕೂಲಿಗೋ , ಪೇಟೆ ಮಂಡಿಗಳಲ್ಲಿ ಕೆಲಸಕ್ಕೋ ಹೋಗಿ ಬರುತಿದ್ದ. ದುಡಿಮೆಗೆ ಹತ್ತಿದ ಮಗನ ಕಂಡು ಗೌರಿ ಉಕ್ಕಿದಳು , ನಿಂತಲ್ಲೇ ಮೇಲೆ ಎಕ್ಕಿದಳು.

ಅಂತವಳ ಎಡಗಣ್ಣು ಅದುರಿತ್ತು. ಗೋಪು ಸುಸ್ತಾಗಿ ಮಲಗಿದವನು ಮತ್ತೆ ಮೇಲೆದ್ದು ಗೆದ್ದು ನಿಲ್ಲಲಾಗದೆ , ಮಲಗಿದಲ್ಲೇ ಮಲಗಿ ಹೋದನು . ಅವಳ ಉಸಿರೆಲ್ಲ ತಣ್ಣಗಾಗಿ ಅವಳ ಎಲುಬುಗೂಡೆಲ್ಲ ದಿಗಿಲಿನ ಗಾಳಿ ತುಂಬಿ ಕೊಂಡಾಯ್ತು. ಕಂಡುಕೇಳಿದ ದೇವರಿಗೆಲ್ಲಾ ಒಂದೊಂದು ನಾಟಿ ಕೋಳಿ ಎಂದಳು. ನಾಟಿ ಕೋಳಿ ತಕ್ಕೊಳ್ಳಲು ಕಾಸೆಲ್ಲಿ ಎಂಬ ಯೋಚನೆ ಆ ಹೊತ್ತಿಗೆ ಅವಳನ್ನ ಮುಟ್ಟಲಿಲ್ಲ. ಈ ಊರು ಆ ಊರು ಅಂತ ಲೆಕ್ಕಾ ಇಕ್ಕದೆ ಎಲ್ಲಾ ಊರಿಗೂ ಹೋಗಿ ಮಗನ ಕಾಯಿಲೆಗೆ ಮದ್ದು ಈಸ್ಕೊಂಡು ಬಂದಿದ್ದೆ ಬಂದಿದ್ದು ಒಂದು ಕ್ಷಣಕ್ಕೂ ಅದು ಉಪಯೋಗ ಆಗ್ಲಿಲ್ಲ ಅಂತ ತಲೆ ಮೇಲೆ ಕೈ ಹೊತ್ತು ಕುಂತುಬಿಟ್ಟಳು.
ಗೋಪು ಸಣ್ಣಗೆ ಸೊರಗುತ್ತಾ ಕೈ ತಪ್ಪುವ ದಾರಿಗೆ ಬಿದ್ದ. ಸೋಮೇಗೌಡನಿಗೆ ಇದು ಕಜ್ಜಾಯಕ್ಕೆ ಮಾಡಿದ ಬೆಲ್ಲದ ಪಾಕದಂತಾ ವಿಷಯ. ಚಪ್ಪರಿಸಿ ಎದ್ದು ಗೌರಿಯ ಕದ ಮುಟ್ಟಿ ಮಗುವಿನ ಕೈ ಮೈ ಮುಟ್ಟಿ,
‘ ಇದು ದೊಡ್ಡಾಸ್ಪತ್ರೆ ಕಾಯಿಲೆ ಕಣೇ , ಗೋಪನ್ನ ಕರ್ಕೊಂಡು ಹೋಗ್ತೀನಿ , ಆದ್ರೆ ಖರ್ಚು ಜ್ಯಾಸ್ತಿ ಇದೆ ಏನ್ಮಾಡ್ಲಿ’
ಎಂದು ಗೌರಿಯ ಗುಂಡಿಗೆ ಮೇಲೆ ಕಲ್ಲು ಬಂಡೆಯಂತಾ ಸುದ್ದಿ ಹಾಕಿದ್ದು, ಅವಳು ನರಳಾಟದೊಳಗೆ ಮುಳುಗೋದಳು.

ಸೋಮೇಗೌಡ , ‘ ಅರ್ಚ್ಬೇಡ್ವೇ , ಈವಾಗ್ಲೇ ಹೊತ್ಕೊಂಡು ನಾನು ಹೋಗ್ತೀನಿ , ಆದ್ರೆ ದುಡ್ಡಿಗ್ ಯೇನ್ ಮಾಡೋದು ಅಂತ ‘ , ಅನ್ನುತ್ತಾ ಮತ್ತೆ ಗೌರಿಯ ಮುಖ ನೋಡಿದ.
‘ ಯೆಂಗಾದ್ರೂ ನನ್ ಮಗೂನ ಉಳಿಸ್ಕೊಡ್ರಿ ‘, ಎಂದು ಚೀರುತ್ತಾ ಗೌರಿ ಅವನ ಪಾದಕ್ಕೆ ಬಿದ್ದು ಕಣ್ಣೀರ ತೊಟ್ಟು ಇಕ್ಕಿದಳು. ಅವಳ ಕಣ್ಣೀರ ಬಿಸಿಗಿಂತ ಸೋಮೇಗೌಡನಿಗೆ ಅವಳ ಸ್ಪರ್ಶ ಮತ್ತಾಗಿ ತುಟಿ ಸವರಿದ. ಗೋಪುವನ್ನು ಹೊತ್ತು ಗಾಡಿ ಮಾಡಿಸಿಕೊಂಡು ದೊಡ್ಡಾಸ್ಪತ್ರೆಗೆ ಹೋದವನು ಎರಡು ವಾರಗಳಾದರು ತಿರುಗಲಿಲ್ಲ.

ಎರಡು ವಾರಗಳಾಚೆ ಗಾಡಿ ಬಂತು. ಗೋಪುವಿನ ಮುಖದಲ್ಲಿ ಒಂಚೂರು ಕಳೆ ಬಂದಿತ್ತು. ಆದರೆ ಕೆಲ ದಿನಗಳು ಅವನು ಮಲಗಿದಲ್ಲೇ ಮಲಗಿರಬೇಕು. ಅವನ ಹೊಟ್ಟೆಯ ಒಳಗೆ ಅದೇನೋ ಗಡ್ಡೆ ಬೆಳೆದಿತ್ತಂತೆ. ಅದನ್ನು ಕುಯ್ದು ತೆಗೆದಿದ್ದಕ್ಕೆ ಗುರುತಾಗಿ ಹೊಟ್ಟೆ ಮೇಲೆ ಕುಯ್ದು ಒಲಿಗೆ ಹಾಕಿದ ಗಾಯ ಕಾಣುತಿತ್ತು. ಗೌರಿಗಂತೂ ಅವನ ಆರೈಕೆ ಬಿಟ್ಟರೆ ಬೇರೆ ಕೆಲಸವಿಲ್ಲದ ಹಾಗೆ ಕಾಯ್ದಳು. ಅವನಷ್ಟು ದಿನಗಳಲ್ಲಿ ಚಿಗುರಲು ಶುರುವಿಟ್ಟ.

ಈ ಕಡೆ ಹೊಂಚುತಿದ್ದ ಸೋಮೇಗೌಡ ಗೌರಿಯ ಬಳಿ , ಲಚ್ಚ – ಸಾಕಿಯ ಬಳಿ ಸಿಕ್ಕ ಸಿಕ್ಕ ಕಡೆ ದುಡ್ಡು ವಾಪಾಸ್ ಕೊಡಿ ಎನ್ನುತ್ತಾ ಅಲೆಯಲು ಶುರುವಿಟ್ಟ. ಇರೋ ಬರೋ ಕಥೆ  ಹೇಳುತ್ತಾ ಸೋಮೇಗೌಡನ ಕಣ್ಣು ತಪ್ಪಿಸಲು, ಅವನು ಹಳ್ಳಿಯ ಒಂದಷ್ಟು ಹಿರಿಯರನ್ನು ಗುಡ್ಡೆ ಮಾಡಿಕೊಂಡು ನ್ಯಾಯಕ್ಕೆ ಬಂದ. ಎಲ್ಲರು ಸೋಮೇಗೌಡನ ಕಡೆಗೆ ಮಾತು ಆಕಲು ಗೌರಿಯ ಪಡೆಗೆ ಮಾತೆ ಇರದಂತೆ ಆಗಲು , ಅವಳಿಗೆ ಕಡೇದಾಗಿ ಇಪ್ಪತ್ತು ದಿನಗಳ ಹೊತ್ತು ಕೊಟ್ಟು , ಅಷ್ಟರೊಳಗೆ ಕೊಡದಿದ್ದಲ್ಲಿ ಸೋಮೇಗೌಡ ಹೇಳ್ದಾಗೆ ಕೇಳ್ಬೇಕು ಅನ್ನೋ ಸಣ್ಣ ಸುಳಿವೂ ಕೊಟ್ಟರು . ಗೌರಿಗೆ ದಿಕ್ಕೆಟ್ಟಿದಂತಾಯ್ತು.

ಈ ನ್ಯಾಯದ ದಿನ ಕಳೆದಂತೆ ಗೌರಿಯ ನೆಮ್ಮದಿಯೂ ಕಳೆದಿತ್ತು. ಎಷ್ಟೇ ಬಿಮ್ಮಾನದಿಂದ ಬದುಕಿದರು ಈ ಬದುಕು ಮೂರಾಬಟ್ಟೆ ಮಾಡದೆ ಬಿಡುವಂತೆ ಇರೋಲ್ಲ ಎಂಬ ಕಡುಗಪ್ಪುಕಣ್ಣಿನ ಒಳಸಂಚು ಅನ್ನೋ ನಿಜ ಅವಳ ಸುತ್ತುಗಟ್ಟಿ ಇಸುಕಿ ಅಮುಕಿ ಬಿಗಿಮಾಡುತಿತ್ತು. ಅವಳು ನೆನೆ ನೆನೆದು ಅತ್ತಳು, ಆದರೆ ಆ ಧ್ವನಿ ಗೋಪುವಿಗೆ ಮುಟ್ಟಲು ಬಿಡಲಿಲ್ಲ.
ಇದಾಗಿ ಎರಡನೇ ದಿನಕ್ಕೆ ಗೋಪುವನ್ನು ಚಿಕ್ಕಿಗೆ ಒಪ್ಪಿಸಿ , ಲಚ್ಚಣ್ಣನ ಕರೆದು ಗೌರಿ ಪೇಟೆಗೆ ಹೊರಟವಳು ಹತ್ತು ದಿನಗಳಾದರೂ ಬರಲಿಲ್ಲ. ‘ ಅಮ್ಮಾ , ಅಮ್ಮಾ ‘ ಎಂದು ಗೋಪು ನರಳಲು ಇವತ್ತು ನಾಳೆ ಎನ್ನುತ್ತಾ ಚಿಕ್ಕಿ ದಿನ ದೂಡಿದಳು.

           ******

ಹನ್ನೊಂದನೇ ದಿನ ಗುಡಿಸಲ ಮುಂದೆ ಗಾಡಿ ಬಂದು ನಿಂತಿತು . ಅದರಲ್ಲಿ ಗೌರಿ ನರಳುತ್ತಾ ಅರ್ಧ ಜೀವವಾಗಿ ಮಲಗಿದ್ದಳು.
ಅವಳ ಕಣ್ಣಲ್ಲಿ ಕಳೆ ಸತ್ತು , ಕಣ್ಣು ಗುಡ್ಡೆಗಳು ಅಳ್ಳಕ್ಕೆ ಬಿದ್ದಂತೆ ಆಳವಾಗಿತ್ತು. ನರಳುವಿಕೆಯನ್ನೇ ಉಸಿರಾಡುತಿದ್ದಳು. ಅಯ್ಯೋ ಅಮ್ಮಾ ಎನ್ನುವ ಮಾತೊಂದೆ ಅವಳ ಮಾತು. ಲಚ್ಚಣ್ಣನು  , ಗಾಡಿಯವನು ಅವಳ ಹೊತ್ತು ತಂದು ಗುಡಿಸಲ ಮೂಲೆಗೆ ಮಲಗಿಸಿದರು.
ಒಂದಷ್ಟು ಚಿಗುರಿದ್ದ ಗೋಪು ಅವಳತ್ತ ಒರಳಿ ನೋಡಲು ಅವನಿಗೆ ‘ ಹೆಣ ‘ ಕಂಡಂತಾಗಿ ಕಣ್ಣು ಕಿವುಚಿಕೊಂಡನು.

******    

ಬಿಟ್ಟ ಕಣ್ಣು ಬಿಟ್ಟಂತೆ ಗೋಪು ಅಮ್ಮನನ್ನೇ ನೋಡುತ್ತಾ ಒರಳುತ್ತಾ , ಗೌರಿ ‘ ಅಯ್ಯೋ ಅಮ್ಮ’ ಎಂದು ನರಳಲೂ ಜನ್ಮಕ್ಕೆ ಆಗುವಷ್ಟು ಸುಸ್ತಾಗಲು, ಗುಡಿಸಲ ಕತ್ತಲಿಗೆ ಕಪ್ಪು ಮಸಿ ಮೆತ್ತಿದಂತೆ ಮತ್ತಷ್ಟು ಕತ್ತಲಾಗಿ , ಮಾತೆಲ್ಲ ಸತ್ತು ನಿಟ್ಟುಸಿರು , ನರಳಾಟಗಳೇ  ಒಡನಾಡಲು,

ಗೋಪು ಬಿಕ್ಕಿ ಅಮ್ಮನೆಡೆ ಒರಳಿದ , ಗೌರಿ ಬೆಳಕು ಕಳೆದುಕೊಂಡು ಗುಡಿಸಲ ಮಾಡು ನೋಡುತ್ತಾ ಇದ್ದಾಗ , ಚಿಕ್ಕಿ ಬೇಯಿಸಿದ ಗಂಜಿ ತಂದು ಇಬ್ಬರಿಗೂ ಸುರಿದು ಬಲಗೊಳಿಸಲು , ಗೋಪು ಬಲವಾದ.  ಗೌರಿ ಎಲ್ಲವನ್ನು ಕಕ್ಕುತ್ತ , ನೆಲ ಕಚ್ಚುತ್ತ ….

      ******

‘ಎಂತದೇ ಹಾವು ಬಂದು ಲಂಗ ಸೇರಿದರು ಸೋತು ಲಾಡಿ ಬಿಚ್ಚೋಲ್ಲ’,
ಎಂತೆಂತ ಉರಿ ಮಾತು ಆಡಿದ್ದು ಗೌರಿ , ‘ಕಡೆ ಕ್ಷಣ ಕತ್ತು ಕುಯ್ಕೋತೀನಿ , ಮಗುನಾ ನೀವೇ ನೋಡ್ಕೊಳ್ಳಿ’ ಎಂದು ನೇರಾನೇರ ಲಚ್ಚಣ್ಣ ಚಿಕ್ಕಿಯ ಮುಖಕ್ಕೆ ಮಾತು ಕೊಟ್ಟಳು.

ಸೋಮೇಗೌಡನ ಕೀಳುಗಣ್ಣಿಗೆ ಬೀಳಲು ಒಪ್ಪದ ಗೌರಿಯ ಮಾತಿಗೆ ಲಚ್ಚಣ್ಣ ಒಂದು ದಾರಿ ಹುಡುಕಿ ತಂದಿದ್ದ.
‘ ಪಕ್ದೂರಾಗ ಸಾಯೇಬ್ರು ಇದಾರೆ , ಈ ಸಲ ಮಂಡ್ಯ ಸಕ್ಕರೆ ಪ್ಯಾಕ್ಟ್ರಿ ತವ ಕಾಂಟ್ರಾಕ್ಟು ಇಡ್ಕೊಂಡವ್ರೆ , ಮಂಡ್ಯದಲ್ಲಿ ಇರೋ ಸಾವಿರಾರು ಎಕ್ರೆ ಕಬ್ಬಿನ ಗದ್ದೆ ಕಟಾವಿಗೆ ಇಲ್ಲಿಂದ ನೂರಾರು ಕೂಲಿ ಆಳುಗಳ್ನ ಕರ್ಕೊಂಡು ಹೋಗ್ತಾರಂತೆ. ಆದ್ರೆ ಒಂದು ಮಾತು,
ಹೆಂಗಸ್ರು ಮುಟ್ಟಾದ್ರೆ ಮೂರು ದಿನ ಕೆಲ್ಸ ಇಲ್ದೆ ನಷ್ಟ ಅಂತ , ಹೆಂಗಸ್ರು ಮುಟ್ಟಾಗದೆ ಇರೋ ಅಂಗೆ ಸೂಜಿ ಚುಚ್ತಾರೆ , ಅದಿಕ್ಕೆ ಒಪ್ಪಿಕೊಂಡ್ರೆ ಸೈ , ಅಷ್ಟೇ ಅಲ್ದೆ ಕೆಲ್ಸಕ್ಕೆ ಕೊಡೊ ದುಡ್ಡು , ಅರ್ಧ ಮೊದ್ಲೇ ಕೊಡ್ತಾರಂತೆ ‘ , ಎಂದು ದೀರ್ಘ ಮಾತಿಗೆ ಮುಕ್ತಿ ಕೊಟ್ಟ.
ಲಚ್ಚಿಗೆ ಇದು ಒಪ್ಗೆ ಅನ್ಸಿತ್ತು. ಗೋಪುನಾ  ಚಿಕ್ಕಿಗೆ  ಕೊಟ್ಟು ಲಚ್ಚಣ್ಣನ  ಜೊತೆ ಪಕ್ದೂರ್ ಸಾಯೇಬ್ರು ಅತ್ರ ಹೋದಳು.

ಸಾಯೇಬ್ರು ಮಾತ್ಕೊಟ್ಟಂತೆ ಅವ್ಳ ಹೆಸ್ರು ಬರ್ಕೊಂಡು , ಸೂಜಿ ಚುಚ್ಚಿಸೋಕೆ ಅಲ್ಲೇ ಹಾಸ್ಪತ್ರೆಗೆ ಕರ್ಕೊಂಡು ಹೋಗಿ ಸೇರಿಸಿದ. ಏನೇನೋ ಮೊದ್ಲೇ ವ್ಯವಸ್ಥೆ ಮಾಡ್ಕೊಂಡಿದ್ದ ಡಾಕ್ಟರು ಅವಳೊಂದಿಗೆ ನಾಜೂಕಾಗಿ ಮಾತಾಡ್ತಾ ಒಂದು ಸೂಜಿ ಚುಚ್ಚಿದ. ಸ್ವಲ್ಪ ಹೊತ್ತಲ್ಲೇ ಅವಳದು ಗಾಢ ನಿದ್ದೆ.

ಲಚ್ಚಣ್ಣ ಗೌರಿಗಾಗಿ ಆಸ್ಪತ್ರೆ ಹೊರಗಡೆ ಕುಕ್ಕುರುಗಾಲಲ್ಲಿ ಕೂತು ಕಣ್ಣು ಇಸುಕಿಕೊಂಡು ನೋಡ್ತಿದ್ದ. ಬೆಳಿಗ್ಗೆ ಹೋದವ್ರು ಸಂಜೆ ಆದ್ರೂ ಪತ್ತೆ ಇಲ್ವಲ್ಲ ಅಂತ ಕಳವಳ ಪಡ್ತಾ , ಕೂತೆ ಇದ್ದ.
ರಾತ್ರಿ ಮುಟ್ಟೋ ಅಷ್ಟ್ರಲ್ಲಿ ಯಾರೋ ಬಂದು ಅವನ್ನ ಕರ್ಕೊಂಡು , ಗೌರಿ ಅತ್ರ ಹೋಗೋ ಅಷ್ಟ್ರಲ್ಲಿ , ಗೌರಿ ಅರೆ ಪ್ರಜ್ಞೆಯಲ್ಲಿ ನರಳಾಡುತ ಇದ್ಲು. ಒಂದು ಸೂಜಿ ಚುಚ್ಚೋಕೆ ಇಷ್ಟೊತ್ತಾಗುತ್ತ , ಇಷ್ಟೊಂದು ನೋವಾಗುತ್ತಾ ಅಂತ ಡಾಕ್ಟ್ರು ನಾ ಕೇಳಲು. ‘ಅದೆಲ್ಲಾ ನಿಮ್ಮ ಸಾಹೇಬ್ರ ಅತ್ರ ಕೇಳ್ಕೊಳ್ರಿ’ ಅಂತ ದಬಾಯಿಸಿ ಹೊರಡಲು, ಲಚ್ಚಣ್ಣ ಸಾಹೇಬ್ರ ಹುಡ್ಕೊಂಡು ಹೊರಡಲು , ಎಷ್ಟೇ ಹುಡುಕಿದರೂ ಸಾಹೇಬ್ರು ಸಿಗದಿರಲು, ಸೋತು ಮತ್ತೆ ಗೌರಿಯ ಬಳಿ ಬಂದ.

ಅವನು ಗೌರಿಯ ಬಳಿ ಬರುವಷ್ಟರಲ್ಲಿ , ಸಾಯಬ್ರ ಮನೆಯ ಆಳೊಬ್ಬ ಒಂದು ಗಂಟನ್ನು ತಂದು ಲಚ್ಚಣ್ಣನ ಕೈ ಗೆ ಇಟ್ಟು , ‘ ಸಾಯೇಬ್ರು ಕೊಟ್ರು , ಇಟ್ಕೋ ‘, ಅಂತ ಹೇಳಿ ತಿರುಗಿ ನೋಡದೇ , ಓಡುವಂತೆ ನಡೆದ. ಲಚ್ಚಣ್ಣ ನಿಂತಲ್ಲೇ ಕಲ್ಲಾಗಿದ್ದ. ನರಳುತ್ತಿದ್ದ ಗೌರಿಯನ್ನ ಬಿಟ್ಟು ಕದಲದೆ ಲಚ್ಚಣ್ಣ , ಕೂಡಹುಟ್ಟಿದವಳೇನೋ ಎನ್ನುವಂತೆ ಕಾದುಕೊಂಡ. ವಾರ ಕಳೆದಂತೆ ಅವಳ ನರಳಾಟ ಹೆಚ್ಚಿತ್ತೆ ವರೆತು , ಕಮ್ಮಿ ಆಗಲಿಲ್ಲ. ಲಚ್ಚಣ್ಣ ಕೈ ಕೈ ಇಸುಕಿಕೊಂಡು , ಸೋರುವ ಮೂಗನ್ನು ಒರೆಸಿಕೊಂಡು , ಆಸ್ಪತ್ರೆಯ ಎಲ್ಲಾ ಡಾಕ್ಟ್ರುಗಳ ಅಡಿಗಡಿಗೆ ಬಿದ್ದು ಬೇಡಿಕೊಂಡ. ಕಂಡ ಡಾಕ್ಟರುಗಳೆಲ್ಲ ಏನೊಂದು ಹೇಳದೆ ಸತಾಯಿಸಿ, ಕೊನೆಗೆ, ‘ ಮನೆಗೆ ಕರ್ಕೊಂಡು ಹೋಗಿ ಸ್ವಲ್ಪ ದಿನ ನೋಡ್ಕೋ , ಸರಿ ಹೋಗ್ತಾಳೆ ‘, ಎಂದು ಹೇಳಲು , ಆ ‘ಸರಿ ಹೋಗ್ತಾಳೆ’ ಅನ್ನೋ ಮಾತಿಗೆ ಬೇರೆ ಆರ್ಥ ಕೇಳಿಸಿತು.

ಇನ್ನಷ್ಟು ದಿನಕ್ಕೆ ಅವಳನ್ನು ಹೊತ್ತು ಕಾಡಳ್ಳಿಯ ಗುಡಿಸಲಲಿ ದೂರಿಕೊಂಡರು. ಗೌರಿಯ ಸ್ಥಿತಿ ಕಂಡು ಚಿಕ್ಕಿ ಬಾಯಿ ಬಾಯಿ ಬಡಿದುಕೊಂಡು ಲಚ್ಚನ ಜುಟ್ಟು ಹಿಡಿದು ಕೇಳಲು , ‘ ಯಾರೋ ಅದೃಷ್ಟದ ಕುಲಕ್ಕೆ ಸೇರಿದ ಅಮ್ಮಣ್ಣಿಗೆ ಗರ್ಭದಲ್ಲಿ ಏನೋ ಕಾಯ್ಲೆ , ಮಕ್ಳಾಗಲಿಲ್ಲ. ಅದಿಕ್ಕೆ ನಮ್ ಗೌರಿ ಹೊಟ್ಟೆ ಕುಯ್ದು ಗರ್ಭ ಕಿತ್ಕೊಂಡು , ಅವ್ರ್ ಬಾಯಿಗೆ ಹಾಕೊಂಡ್ರು , ಅದಕ್ಕೆ ಎದುರು ಈ ಗಂಟು ದುಡ್ಡು ಕೊಟ್ರು ‘ ಎಂದೆಂದು ಜೋರು ಬಿಕ್ಕುತ್ತಾ , ಸಾಯೇಬ್ರು ಮಾಡಿದ್ ಮೋಸವನ್ನ ಹೇಳುತ್ತಾ , ತಲೆ ತಲೆ ಚಚ್ಚಿಕೊಂಡು ಚೆಲ್ಲಿಬಿದ್ದ.

ಚಿಕ್ಕಿಯ ಗೋಳು ಓಣಿ ದಾಟಿತು. ಗೌರಿಯ ನರಳಾಟದ ಕಾವಿಗೆ ಅಲ್ಲೇ ಪಕ್ಕದಲ್ಲಿ ಬಿದ್ದುಕೊಂಡಿದ್ದ ಗೋಪು ಉಸಿರು ಕಟ್ಟಿ ಬಿಕ್ಕುತಿದ್ದ. ಒಮ್ಮೆಗೆ ಅವನ ಸುಪ್ತ ಲೋಕ ತಲೆಕೆಳಗಾಯ್ತು. ವಿಚಿತ್ರ ಕನಸುಗಳು , ನೆನೆಹುಗಳು ಏನೆಲ್ಲಾ ಅವನ ಪುಟ್ಟ ಎದೆಯ ಮೇಲೆ ಕಾಲಿಟ್ಟುಕೊಂಡು ಹಾದುಹೋದವು. ಅರ್ಥವಾಗದ ಯಾವುದೋ ಒಂದು ಒತ್ತಡ ಅವನ ಕತ್ತು ಬಿಗಿಸಿ ಒತ್ತುತಿತ್ತು. ಬೆನ್ನ ಮೂಳೆಗಳೆಲ್ಲ ತಣ್ಣಗಾಗುತ್ತಾ ಅದುರಲು , ಹೊಟ್ಟೆ ತೊಳೆಸಲು , ಕೈ ಕಾಲುಗಳು ಜೋಮು ಹಿಡಿದ ಹಾಗೆ . ಆದರೆ ಇದಕ್ಕೆಲ್ಲ ಏನು ಹೆಸರು ಎನ್ನುವುದೇ ಅವನಿಗೆ ಗೊತ್ತಾಗದೆ ಕಣ್ಣು ಬಿಗಿಮಾಡಿ ಹಲ್ಲು ತುಟಿ ಕಚ್ಚಿದನು.
ಮುಚ್ಚಿದ ಕಣ್ಣಿನ ಸುತ್ತ ಕತ್ತಲೆ ಕಟ್ಟಿ ಕಪ್ಪಾಗಲು , ಆ ಕಪ್ಪನ್ನು ಸೀಳಿ ಬೆಳಕೊಂದು ಮಂದವಾಗಿ ಹೆಚ್ಚಿದಂತೆ ಭಾಸವಾಗಿ , ಯಾವುದೋ ತನಗೆಟುಕದ ಸಂಗತಿ ಅವನಿಗೆ ಅಪ್ಪಿಕೊಂಡಂತೆ ಅನಿಸಿ , ಕಣ್ಣು ಬಿಡಲು ….
ಸುತ್ತೆಲ್ಲಾ ಪ್ರಕೃತಿ ವಿಚಿತ್ರ ರೂಪ , ವಿರೂಪಗಳು ಬೆರುತುಕೊಂಡು ಒಂದು ರೂಪ ಪಡೆದು , ಅದಕ್ಕೊಂದಷ್ಟು ಪ್ರೀತಿ , ಜವಾಬ್ದಾರಿ , ಕಾರುಣ್ಯ  ಮೆತ್ತಿಕೊಂಡು ಆ ರೂಪಕ್ಕೆ ಅಂಟಿಕೊಂಡವು. ಅದರ ಮೇಲೆ ತ್ಯಾಗವೆಂಬ ಬೆಳಕು ಯಥೇಚ್ಛವಾಗಿ ಬೆಳಗಿ ಆ ರೂಪವು ಸಾಮಾನ್ಯ ಕಣ್ಣಿಗೆ ಕಾಣದಷ್ಟು ಪ್ರಕಾಶಮಾನವಾಯ್ತು.
ಕ್ಷಣ ಕಳೆದು ಆ ಬೆಳಕಿನ ಪ್ರಕಾಶ ಆ ರೂಪದ ಒಳಗೆಯೇ ಸೇರಿಕೊಳ್ಳುತ್ತಾ ಸ್ಪಷ್ಟವಾಗ ತೊಡಗಿ , ಗೋಪು ಅದನ್ನು ದಿಟ್ಟಿಸಲು ಆ ರೂಪ ಒಂದು “ಹೆಣ್ಣು”.

ದೂರದಲ್ಲೆಲ್ಲೋ ಯಾರೋ ನರಳುವಂತೆ , ಅವನ ಕಿವಿಗೆ ಕೇಳಲು ಅವನು ತನ್ನ ಗಮನವನ್ನು ಆ ಕಡೆಗೆ ತಿರಿವುದ. ಕ್ರಮೇಣ ಆ ನರಳಾಟ ಅವನ ಬಳಿಗೆ ಬಂದಂತೆ , ಅವನು ಕಣ್ಣು ಬಿಟ್ಟು ನೋಡಲು ಪಕ್ಕದಲ್ಲಿ ಅಮ್ಮನ ನರಳಾಟ ಕಂಡು ಸಂಪೂರ್ಣ ಎಚ್ಚರಗೊಂಡ. ಗೌರಿ ಅವಳ ಹೊಟ್ಟೆಯನ್ನು ಗಟ್ಟಿಯಾಗಿ ಇಡಿದುಕೊಂಡು ನರಳುತ್ತಾ ಅಳುತಿದ್ದಳು. ತನ್ನ ಆರೋಗ್ಯಕ್ಕಾಗಿ ಮಾನವ ಜನ್ಮ ಮೂಲಸ್ಥಾನ ‘ಗರ್ಭ’ವನ್ನೇ ಕುಯ್ದುಕೊಂಡು ಮಲಗಿರುವ ಅಮ್ಮನನ್ನು ಕಂಡು ದಿಗ್ಬ್ರಾಂತನಾದ.

    ******

ಮಾರನೇ ದಿನ ಸ್ವಲ್ಪ ಗೆಲುವಾಗಿದ್ದ ಗೌರಿ ತನ್ನ ಬಂಧುಗಳೆಂಬುವರನ್ನೆಲ್ಲ ಕೂಗಿ ಕೂಗಿ ಕರೆದು , ಪೇಚಾಡಿ ಮೂರೇ ದಿನಗಳಲ್ಲಿ , ಸಾಕಿಯನ್ನು ತಂದು ಗೋಪುವಿಗೆ ಕಟ್ಟಿ ಆಶೀರ್ವದಿಸಿ ಅಸುನೀಗಿದಳು. ಅದಾಗ ತಾನೇ ಎದ್ದು ನಿಲ್ಲುವಷ್ಟು ಚೇತರಿಸಿಕೊಂಡಿದ್ದ ಗೋಪು , ಅಮ್ಮನ ಸಾವಿಗೆ ಕಣ್ಣಿಂದ ಒಂದು ಹನಿ ಉದುರಿಸಲಿಲ್ಲ. ಬದಲಿಗೆ ಬಿಟ್ಟ ಕಣ್ಣು ಬಿಟ್ಟುಕೊಂಡು ಆಶ್ಚರ್ಯದ ಮುಖಚರ್ಯದಲ್ಲೇ ನೋಡುತಿದ್ದ.

ಅಂದಿನಿಂದ ಸಾಯುವವರೆಗೂ ಅವನು ಯಾವುದೇ ಹೆಣ್ಣನ್ನು ಅದೇ ಆಶ್ಚರ್ಯ ರೂಪನಾಗಿ ನೋಡಿದವನೇ. ಮೂಲ ದಿಕ್ಕಾದ ಗೌರಮ್ಮ , ತೋರು ದಿಕ್ಕಾದ ಪರಮಿ , ಜೊತೆಸಾಗಿ ಬಂದ ಬಲಭುಜದ ದಿಕ್ಕಿನ ಸಾಕಿ , ಎಲ್ಲೆ ಮೀರಿ ಕಾದ ಎಡ ಎದೆಯ ಬಾಗದ ದಿಕ್ಕಿನ ಚಿಕ್ಕಿ. ನಾಲ್ವರು ನಾಲ್ಕು ದಿಕ್ಕಿನವರು. ನಾಲ್ಕು ದಾರಿಗಳವರು….

     ******

ಬೆಂಕಿಗೆ ಸಿಕ್ಕಿ ಬೆಂದಿದ್ದ ಪರಶು ಪಾತ್ರದಾರಿಯ ಸುಟ್ಟಗಾಯಗಳಿಗೆ ಜೇನುತುಪ್ಪ ಸವರಿ , ಪಕ್ಕದೂರಿನ ಆಸ್ಪತ್ರೆಗೆ ಸಾಗಿಸಿದರು. ಕಥೆ ಅಲ್ಲಿಗೆ ನಿಂತಿದ್ದರು , ಮುಕ್ತಾಯದ ಪದಗಳನ್ನು ಹಾಡಿ , ಎಲ್ಲಮ್ಮನಿಗೆ ಪೂಜೆಕೊಟ್ಟು, ಪಾತ್ರದಾರಿಗಳೆಲ್ಲ ಬಣ್ಣವನ್ನು ಅಳಿಸಿಕೊಂಡು ನಿದ್ದೆಯಿಂದ ತೇಲುವ ಕಣ್ಣುಗಳಿಂದ , ವಾಲಾಡುತ್ತ ನಡೆಯುತಿದ್ದರು.

ಇತ್ತ ಸೂತಕ ಗೋಪಣ್ಣನ ಬಳಿ ಕೂತು ತನ್ನೆ ತಾ ಮರೆತಿತ್ತಂತೆ, ಗೋಪಣ್ಣನು ಇದ್ದ ಕತೆಯನ್ನೆಲ್ಲ ಹೇಳಿ ಒದರಿಕೊಂಡು ಮತ್ತೆ ಸತ್ತು ಮಲಗಿದನು. ಎಚ್ಚರಗೊಂಡ ಸೂತಕ , ತನ್ನ ರೂಪ ಬದಲಾದ್ದನ್ನು ತಾನೇ ಗಮನಿಸಿತು. ಸೂತಕದ ಸುತ್ತ ಒತ್ತರಿಸಿದ್ದ ಕಪ್ಪು ಮಾಯವಾಗಿ , ಬೆಳಕಾಗುತಿತ್ತು. ಗೋಪಣ್ಣನ ಮುಖವನ್ನು ಕಂಡ ಸೂತಕ ನಗುತ್ತಾ ಮುಂದಿನ ಮನೆ ಯಾವುದೆಂಬ ಧಾವಂತದಿಂದ ಹೊರಬಂದಿತು.


2 thoughts on ““ನಾಲ್ಕು ದಾರಿಗಳು”….ವೇಣು ಎಂ ಬನಹಳ್ಳಿ ಅವರ ವಿಭಿನ್ನ ಸಣ್ಣ ಕಥೆ

Leave a Reply

Back To Top