ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ಹನಿಗಳು
1. ಮಾರ್ಗ.!
ಪ್ರತಿ ಗೆಲುವು ಬರಲೇಬೇಕು
ಸೋಲಿನ ಬಾಗಿಲು ದಾಟಿ
ಎದುರಿಸಿ ನಿಂದನೆಯ ಈಟಿ.!
2. ದರ್ಶನ.!
ಗೆಲುವು ನಮಗೆ ಕೇಳಿಸುವುದು
ಕೇವಲ ಜನರ ಜೈಕಾರಗಳನ್ನು
ಸೋಲು ನಮಗೆ ತೋರಿಸುವುದು
ಜನರ ಜಗದ ನಿಜ ವಿಕಾರಗಳನ್ನು.!
3. ಪಠ್ಯ.!
ಗೆಲುವು ರೂಢಿಸುವುದು
ಬೀಗುವುದನ್ನು ಮಾತ್ರ
ಸೋಲು ಕಲಿಸುವುದು
ಸೋತು ಬಾಗುವುದನ್ನು
ಬಾಗಿ ಮಾಗುವುದನ್ನು.!
4. ದಿಕ್ಸೂಚಿ..!
ಸೋಲನ್ನು ಸಹಿಸಿದ್ದೀರಿ.!
ಸೋಲಿನಿಂದ ಕಲಿತಿದ್ದಿರಿ.!
ಸೋಲಲ್ಲು ಸಂಭ್ರಮಿಸಿದ್ದೀರಿ..
ಎಂದಾದರೇ… ನೀವು….
ಗೆಲುವಿನ ಬಾಗಿಲಲ್ಲಿದ್ದೀರಿ.!!
5. ಅತ್ಯಗತ್ಯ.!
ಸೋಲನ್ನು ಒಪ್ಪಿಕೊಳ್ಳುವುದನ್ನು
ಸೋಲನ್ನು ಅರಗಿಸಿಕೊಳ್ಳುವುದನ್ನು
ಮಕ್ಕಳಿಗೆ ಕಲಿಸಲೇಬೇಕಿದೆ ಗೆಳೆಯ
ಹೊರಗಿನ ಜಗವದು ಬಲು ನಿರ್ದಯ
ಸೋತವರ ಸಾಯಿಸಲು ಕಾದಿದೆ ನಿತ್ಯ.!
6. ಸ್ವತ್ತು.!
ಸೋತವರೆಲ್ಲ ಬೇಸತ್ತು ಸತ್ತಿದ್ದರೆ
ಉಳಿಯುತ್ತಲೇ ಇರಲಿಲ್ಲ ಜಗತ್ತು
ಸೋತು ಗೆದ್ದವರಿಂದಲೇ ಇವತ್ತು
ಸಾಧನೆಗಳಿಗೆ ಕಿಮ್ಮತ್ತು ಘಮ್ಮತ್ತು
ಅವರೇ ಈ ಲೋಕದ ನಿಜಸ್ವತ್ತು.!
———————————-
ameshಎ.ಎನ್.ರಮೇಶ್.ಗುಬ್ಬಿ.
Wow!