ವಿಮಲಾರುಣ ಪಡ್ಡoಬೈಲ್ ಅವರ ಕವಿತೆ-ಕಾದಿಹಳು

ಹೊಳೆವ ಅವಳ ನಯನ
ಬೇಗುದಿಯಲ್ಲಿ ಮಾಸಿ ಸುಕ್ಕಾಗಿವೆ
ಕೊಳದ ಸುತ್ತಲಾವರಿಸಿದ ಕಪ್ಪು
 ಮರುಕಾಂತಿಯ ನಿರೀಕ್ಷೆಯಲ್ಲಿ
ಕಾದಿಹಳು ಅವನುತ್ತರಕೆ.

ಜಪಿಸುತಿಹಳು ಮೇಘರಾಜನ
ಎದೆಯ ತಂಪಾಗಿಸಿ
 ಕಂಗಳಲಡಗಿದ  ನೋವಿನ ಗೆರೆಯ
ಒಲವ ಸಿಂಚನದಿ
ಮಾಯವಾಗಿಸುವನೆಂದು

ಸಹಸ್ರ ನೋವು ಸಂತಸ
ದೇಹವನ್ನೇ ನಡುಗಿಸುತಿಹುದು
ಇತ್ತ ಇಬ್ಬನಿಯ ಹನಿ
ಚಳಿಯ ಇಮ್ಮಡಿಸಿಹುದು
ಅವನೊಲವ ಹೊದಿಕೆಯ ಬಂಧನಕೆ
ಕಾದಿಹುದವಳ  ಮನ

ಬಾಯಾರಿ ಬಸವಳಿದಳು
ಹನಿ ನೀರು ಇಲ್ಲದೆ
ಒಣಗುತಿದೆ ಒಡಲು
ಹಸುರಾದ ಕನಸಿಗೆ ಉಸಿರಿಲ್ಲದಾಗಿದೆ
ಬಂದು ಬಿಡು ನೀ ಬೇಗ
 ದಾಹ ನೀಗಿಸಲು.

ಚಿಪ್ಪಿಂದ ಬಿರಿದ ಮುತ್ತಿನ ಹೊಳಹು
ಅವನೆದೆಯ ನಾಟಲು
ಮಿಂಚು ಹರಿದ ದನಿಯಲ್ಲಿ
ಬಿಗಿಹಿಡಿದ ತನುವ..
ಉರಿಬಿಸಿಲು ತಂಪಾಯ್ತು
ಹಸುರಾಯಿತು ಒಡಲು.

ಎಲ್ಲೆಲ್ಲೂ ಮುತ್ತಿನ ಹನಿ
ಮನದ ಮೂಲೆಗಳ ದಾಟಿ
ಬಿರುಕುಗಳ ಅಳಿಸಿ ಕವಲು ಕವಲಾಗಿ
ಒಲವ ತೊರೆ  ಹರಿಸುತಿಹನು

ಈಗ ಇಲ್ಲಿ ಲೀನವಾಗಿಹನು
ನೀಲ ಸಾಗರದಲ್ಲಿ
ಶುಭ್ರವಾದ ಅವಳ ಕಂಗಳು
ಸಾರ್ಥಕತೆಯ ಭಾವದಿ ದಿಟ್ಟಿಸುತಿಹುದು
ಅವನನ್ನೇ
ನೀಲ ಸಾಗರವನ್ನೆ.

————————–

Leave a Reply

Back To Top