ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಮುಖದ ತುಂಬಾ ರಂಗೋಲಿ ಬಿಡಿಸಬೇಕೆಂದಿದ್ದೆ ಅಧರದ ಕುಂಚದಿ
ತನುವ ತುಂಬೆಲ್ಲ ಚಿತ್ತಾರ ಮೂಡಿಸಬೇಕೆಂದಿದ್ದೆ ಅಧರದ ಕುಂಚದಿ

ಪ್ರೀತಿಯಾ ಕುಸುಮಗಳು ಅರಳಿ ಕೆರಳಿ ನಗು ನಗುತ ನಲಿಯುತಿವೆ
ಹೊಂಗನಸಿನ ಬಯಕೆಗಳ ಮುತ್ತಾಗಿಸಬೇಕೆಂದಿದ್ದೆ ಅಧರದ ಕುಂಚದಿ

ಒಲವಿನ ಚೆಲುವ ಮಲ್ಲಿಗೆ ಬಿರಿದು ಗಮಗಮಿಸುತ್ತ ಪರಿಮಳಿಸುತ್ತಿದೆ
ಜಗದ ಜಂಜಡ ಮರೆತು ಮೈ ಮರೆಯಸಬೇಕೆಂದಿದ್ದೆ ಅದರದ ಕುಂಚದಿ

ಹಂಬಲದಾರುಟಿಗೆ ತುಂಬಿ ತುಳುಕುತ  ತಂಗಾಳಿ ಸೋಕಿ ತಂಪಾಗಿದೆ
ಬಯಸಿ ನಿಂತ ದೇಹದ ಭಾರವ ಇಳಿಸಬೇಕೆಂದಿದ್ದೆ ಅಧರದ ಕುಂಚದಿ

ಚಿತ್ತ ಚಿತ್ತಾರದಾಗ ಪ್ರೀತಿ ಕುಸುಮಗಳ ಸೊಭಗಿನ ಸೋಗು ತುಂಬಿದೆ
ಪ್ರೇಮಪತ್ರದಿ ಬರೆದಿಟ್ಟಕ್ಷರಗಳಿಗೆ ಮುತ್ತಿಡಬೇಕೆಂದಿದ್ದೆ ಅಧರದ ಕುಂಚದಿ

ಕೆಂಗುಲಾಬಿ ತೋಟದಾ ಚೆಲುವು ರಂಜಿಸಿ ರಂಗೇರಿ ಪರಿಮಳಿಸುತ್ತಿದೆ
ಬೆತ್ತಲಾದಾಸೆಗೆ ಚಿನ್ನದಂಗಿ ಹಾಕಿ ಬಳಸಬೇಕೆಂದಿದ್ದೆ ಅಧರದ ಕುಂಚದಿ

ತಿಳಿಗೊಳದ ತುಂಬ ಬಣ್ಣ ಬಣ್ಣದಾಸೆ ಮೀನು ಸುಳಿ ಸುಳಿದು ದನಿದಿದೆ
ಪ್ರೇಮತಾಪವೇರಿದ ತನು ಮಣಿಸಿ ತಣಿಸಬೇಕೆಂದಿದ್ದೆ ಅಧರದ ಕುಂಚದಿ

ಅನುಳ ವಿರಹವೇದನೆಯು ಗರಿಗೆದರಿ ಮಂಪರಿಸಿ ಕಂಗಾಲಾಗಿ ನಿಂತಿದೆ
ಮತ್ತೇರಿದ ಮದರಂಗಿ ಇಟ್ಟ ಮೈ ಮುದ್ದಿಸಬೇಕೆಂದಿದ್ದೆ ಅಧರದ ಕುಂಚದಿ


ಡಾ ಅನ್ನಪೂರ್ಣ ಹಿರೇಮಠ

—————————

.

Leave a Reply

Back To Top