ಕಾವ್ಯ ಸಂಗಾತಿ
ಪ್ರೇಮಾ ಟಿಎಂಆರ್
‘ನಿನ್ನ ದಾರಿಗೆ ದಿಟ್ಟಿಯ ನೆಟ್ಟು’
ಜಗವೆಲ್ಲ ಮಲಗಿರಲು ಮುಸುಕೊಳಗೆ
ಮಿಸುಕಾಡುತ್ತೇನೆ
ನನ್ನೊಳಗಿನ ನಾನು
ಕಾನನ ತುಟಿಯೊಳಗಿನ ಮುರಳಿಯೊಳಗೆ
ಸುರುಳಿಯಾಗುವಾಸೆಯಲ್ಲಿ
ನಿದ್ದೆ ಹತ್ತಿರ ಸುಳಿಯುವದಿಲ್ಲ
ಬೆಳ್ದಿಂಗಳೂ ಸುಡುವ ಧಗೆ
ಎದ್ದು ನಡೆಯುತ್ತೇನೆ
ಹುಡುಕಿಕೊಂಡು ಸಾಂತ್ವನಿಸಿ
ತುಸು ತಂಪು ತೋಕುವ ನೆನಪುಗಳಂಗಳಕೆ
ಯಮುನೆಯ ತಟದಲ್ಲೂ ಉರಿಉರಿ
ಅವಳೂ ಬಿಸುಸುಯ್ಯುತ್ತಾಳೆ ಶ್ಯಾಮನ ನೆನೆದು
ಅವನೆಸೆದ ಕಲ್ಲಿಗೆ ತೂತುಬಿದ್ದ ನೀರ್ಗೊಡ
ಕಾಲಿಯಾಗುವ ಹಾಗೇ
ಜಾರುತ್ತಿದೆ ಯೌವನ
ಈ ರಾಧೆ ಕೃಷ್ಣನಿಗೆ ಮಾತ್ರ ಮೀಸಲು
ಕೃಷ್ಣ ಯಾರೊಬ್ಬರಿಗೂ ಮೀಸಲಾಗಲೇ ಇಲ್ಲ
ರಾಧೆಗೋ ರುಕ್ಮಿಣಿಗೋ ಭಾಮೆಗೋ
ನಾನು ಬರಿ ನಿನ್ನವನು ಅಂದಿದ್ದೊಂದೇ ಬಂತು
ಎಂಟೊ ಹದಿನಾರು ಸಾವಿರದೆಂಟೊ
ಒಬ್ಬೊಬ್ಬರನ್ನೂ ಭೃಮೆಯಲ್ಲಿಯೇ
ಬಂಧಿಸಿದವನಿಗೆ ಒಂದಾದವನಿಗೆ
ರಾಧೆಯೇನನ್ಯಾಯ ಮಾಡಿದಳೋ
ಕನಸಿಗೂ ಬಾರದಿದ್ದುದೇಕೋ
ಈ ರಾಧೆಯದು ಪ್ರೇಮ ಕಾಮ ಮೋಹ
ಏನಾದರೂ ಅಂದುಕೊ
ಅದು ನಿನಗಾಗಿಯೇ ಕೃಷ್ಣ ಹೆರವರಿಗಲ್ಲ
ಕಾಯುತ್ತೇನೆ ಹೆರಳು ನೆರೆಯುವ ತನಕ
ಯಮುನೆ ಬತ್ತುವ ತನಕ
ಬಿದ್ದುಹೋದರೂ ಕಾಯ ಸುತ್ತುತ್ತದೆ ಭಾವ
ಗೋಕುಲದ ಗಲ್ಲಿಗಳಲ್ಲಿ ನೀ ಬರುವ ತನಕ
ಕೊಳಲಿಗೆ ಕೊರಳಾದ ಕೊರಳುಲಿಯಾದ
ಕೊಳಲಿಗುಸಿರಾದ
ಬಿದಿರಿಗೆ ಭೂಮಿಯಾದ
ರಾಧೆ
———————————
ಪ್ರೇಮಾ ಟಿಎಂಆರ್