ಸುಕುಮಾರ ಅವರ ಗಜಲ್

ಎರಡು ನಕ್ಷತ್ರಗಳ ನೋಡಬೇಕು ಪರದೆಯ ಸರಿಸು
ಗುನುಗುವ ಅದರದ ಮಧುವ ಸವಿಯಬೇಕು ಪರದೆಯ ಸರಿಸು

ತೆರೆಯ ಮರೆಯ ಚಾಂದಿನಿ ನೀನು ಬಂಧಿನಿ ಆಗಬೇಡ
ಚಂದ್ರಿಕೆಯ ಹೊನಲಿನಲ್ಲಿ ಮಿಂದಬೇಕು ಪರದೆಯ ಸರಿಸು

ವದನಕೆ ನೆರಳು ನೀಡಿ ಎನ್ನ ಮರಳು ಮಾಡಿದೆ
ಕದನಕೆ ಸಂಪಿಗೆ ನಾಸಿಕಬೇಕು ಪರದೆಯ ಸರಿಸು

ಲೋಲಾಕಿನ ಸದ್ದಿಗೆ ಕೋಕಿಲವು ವ್ಯಾಕುಲದಿ ಪಾಡಿತು
ಕರ್ಣ ಕುಂಡಲದ ಸೌಂದರ್ಯ ಸವಿಯಬೇಕು ಪರದೆಯ ಸರಿಸು

ಮದರಂಗಿ ಹಸೆ ಮೂಡಿತ್ತೇನೋ ಮೊಗಕೂ ನೋಡುವ ತವಕವಷ್ಟೇ
ಕಪೋಲಕೆ ಒಲವ ಮುದ್ರೆ ಒತ್ತಬೇಕು ಪರದೆಯ ಸರಿಸು

ಬಳೆಗಳ ಸದ್ದು ಗಲ್-ಗಲ್ ಎಂದು ಎದೆಗೆ ಗುಲ್ಲಿಟ್ಟಿದೆ
ಪ್ರೇಮಾಲಯದ ಗಂಟೆ ನಾ ಬಾರಿಸಬೇಕು ಪರದೆಯ ಸರಿಸು

ಅಕ್ಷಿಪಟಲಕೆ ಎನ್ನ ಉಪಟಳ ಸಹಿಸಲು ಆಗದೇನೋ ತಿಳಿಯೆನು
ನಯನ ಮಸೂರಕೆ ಕಾಂತಿ ಚೆಲ್ಲಬೇಕು ಪರದೆಯ ಸರಿಸು

ಕಿನ್ನರಿಯು ನೀನೆಂದು ಕಿಂದರಿ ನುಡಿಸುತಲ್ಲಿರುವೆ ರಾಧೆಯ ಕೃಷ್ಣನ್ನಿವನು
ಬಾಸುರಿ ತಾಕಿದ ವಕ್ಷವ ಮೀಟಬೇಕು ಪರದೆಯ ಸರಿಸು

ಗುಲ್ಮೊಹರಿನ ಕೆಂಪು ಕುಮಾರನ ಇಂಗಿತಕೆ ಕಂಪು ತಂದಿದೆ
ಗುಲಾಬಿಯ ನೀಡಿ ಪ್ರೀತಿ ನಿವೇಧಿಸಬೇಕು ಪರದೆಯ ಸರಿಸು

——————————

One thought on “ಸುಕುಮಾರ ಅವರ ಗಜಲ್

  1. ಮಿಂದ ಬೇಕು ಪದ ಪ್ರಯೋಗ ನಾನು ಕೇಳಿಲ್ಲ, ಮೀಯಬೇಕು, ಮಿಂದೇಳಬೇಕು ಕೇಳಿರುವೆ
    ಬಾಗೇಪಲ್ಲಿ

Leave a Reply

Back To Top