ಗಂಗಾಧರ ಬಿ ಎಲ್ ನಿಟ್ಟೂರ್, ನಿನಗೂ ತೀರ್ಪಾಗಲಿ

ಜನಮಾನಸದೊಳು ದೇವನೆಂಬ
ಕಿರೀಟ ಹೊತ್ತವನೇ
ನೀ ಕಡಿದು ಕಟ್ಟೆ ಹಾಕಿದ್ದಕ್ಕೆ ಲೆಕ್ಕವೆಲ್ಲಿದೆ …!?

ಜಗದಾದಿ ಅಂತ್ಯಕೂ ದೈವತ್ವದ ಪರಿಪಾಲಕನಂತೆ
ನಿನ್ನ ನಿಜ ಅಸ್ತಿತ್ವದ ಆಸ್ತಿ ಏನು … ?

ಆರು ಗುಣಗಳ ಆರ್ಭಟ
ಹದ್ದುಮೀರಿದ ಅಸುರತ್ವ
ಏರುಪೇರಿನ ಆಟ ಆಂಗಳದಲ್ಲಿ
ಪ್ರಕೃತಿಯ ಏಣಿಶ್ರೇಣಿ ಊದುತ್ತಿದೆ ಶಂಖ
ನೀ ಮಾತ್ರ ಸಂಭವಾಮಿ ಯುಗೇ ಯುಗೇ
ಯಾವ ಯುಗದಲ್ಲಿ … !

ಮನುಜ ಮಾಡಿದ ಕರ್ಮವೇನು
ನಿನ್ನ ಸೃಷ್ಟಿಯ ಮರ್ಮವೇನು
ಹೇಳಲು ನಿನ್ನ ಲೆಕ್ಕ ಬಲ್ಲವರಾರು.

ವಿಕಾರದ ಅಂಗಿ ತೊಡಿಸಿ
ಅಧರ್ಮದ ಲುಂಗಿ ಉಡಿಸಿ
ನಿರಾಕಾರದ ಪುಂಗಿ ಊದುವ
ಇಬ್ಬಗೆಯ ಮೂಲ ನೀನೇ ಅಲ್ಲವೇನು
ಬಲ್ಲವರಿಗೆ ತಿಳಿಯದೇನು !
ಹಗ್ಗವಿಲ್ಲದ ಕಟ್ಟು ಕೋಲಿಲ್ಲದ ಪೆಟ್ಟು
ತರವೇನು ?

ಜಗ ನಂಬಿದ ಜಗದೋದ್ಧಾರಕ
ಅನ್ನದಾತ ಸ್ವರ್ಗ ನಿರ್ಮಾತೃ ನೀನಂತೆ ನಿಜವೇನು ನಿನಗೂ ಮನಸಾಕ್ಷಿ ಬೇಡವೇನು ?

ನಂಬಿಕೆಯ ಶೇಷಕ್ಕೆ ಶಾಯಿ ನೀನು
ಹೋಗಲಿ ಬಿಡು ಲೆಕ್ಕ ಪಕ್ಕಕ್ಕೆ ಇಡು
ಕಾದು ಕುಳಿತದ್ದು ಸಾಕು
ನಿನಗೂ ನ್ಯಾಯ ತೀರ್ಪಾಗಲಿ.

—————————————-

Leave a Reply

Back To Top