ಕಾವ್ಯ ಸಂಗಾತಿ
ನಾಗರಾಜ್ ಹರಪನಹಳ್ಳಿ
“ಗಾಳಿಗೂ ಕನಿಕರ ಬಂದಿದೆ”
-1-
ಸಮುದ್ರ ಅಬ್ಬರಿಸುತ್ತಿದೆ
ಮನಸಿನಂತೆ
ದಂಡೆಗೆ ತಿಳಿದಿದೆ ತಳಮಳ
ಆಕೆಗೆ ?
***
-2-
ದಂಡೆಯ ಭಾಷೆ
ಪ್ರೇಮ
ಇಲ್ಲಿ ನಡೆದವರಿಗೆ
ದಂಡೆ ಅರ್ಥವಾಗಿಲ್ಲ
ಕಡಲ ಧ್ವನಿ …..ಕೂಡಾ
**
-3-
ದಂಡೆಯಲ್ಲಿ
ಅವರು ಆಗಿನಿಂದಲೂ
ತರ್ಕಿಸುತ್ತಿದ್ದಾರೆ
ಅನುಸಂಧಾನ ಆಗುತ್ತಲೇ ಇಲ್ಲ
ಅಲ್ಲೇ ….
ಪಕ್ಕದ
ಮುರಿದ ಹಡಗಿನ ಮೇಲೆ
ಕುಳಿತ ಎರಡು ಹಕ್ಕಿಗಳು
ಮುಸಿ ಮುಸಿ ನಗುತ್ತಿದ್ದವು
**
-4-
ದಂಡೆಯಲ್ಲಿ
ಒಬ್ಬನೇ ಅಲೆಯುತ್ತಿದ್ದೇನೆ
ಗಾಳಿಗೂ
ಕನಿಕರ ಬಂದಿದೆ
ಕಡಲ ಅಲೆ
ಪಾದ ತೊಳೆಯುತ್ತಿದೆ
ಎಲ್ಲಿ ಹೋದೆ ನೀನು?
-5-
ಕಾಯುತ್ತಲೇ ಇರುತ್ತೇನೆ
ದಂಡೆ ಕಡಲು ಇರುವವರೆಗೆ
ನೀನು ಬರುವ
ಭರವಸೆಯೊಂದಿಗೆ
ನಾಗರಾಜ್ ಹರಪನಹಳ್ಳಿ
ಎಂದಿನಂತೆ ಚಂದ ಹನಿಗಳು….
ಕವನದ ಸಾಲುಗಳು ಜೀವಂತ ಭಾವದೊಟ್ಟಿಗೆ ಸೇರಿ ಭರವಸೆಯಾಗಿದೆ. ನೋಡುತಾ ನಿಂತ ಕಡಲಿಗೂ ಒಂದು ಕಾಯುವ ಸಂಯಮ ಇದೆ. ಬೀಸುವ ಗಾಳಿಗೂ ಕನಿಕರ ಬಂದಿದೆ ಎನ್ನುವ ಸಾಲುಗಳು ಆಪ್ತವೆನಿಸುತ್ತದೆ. ಬದುಕೆಂದರೆ ಒಂದು ಭರವಸೆ ಎನ್ನುವ ಕವನದ ಸಾಲುಗಳಲ್ಲಿ ಇಡೀ ಕವನದ ಅಂತರಾಳವಿದೆ……… ಚೆನ್ನಾಗಿದೆ ಸರ್ ಕವನ
ನಾಗರಾಜ ಬಿ.ನಾಯ್ಕ
ಹುಬ್ಬಣಗೇರಿ
ಕುಮಟಾ