ಮಾನವ ಮೂಲತಃ ಒಬ್ಬ ನಟ….ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರಿಂದ ರಂಗಭೂಮಿ ದಿನದ ಅಂಗವಾಗಿ ವಿಶೇಷ ಬರಹ

ಡಾ. ರಾಜಕುಮಾರ್ ಮಾಡಿದ ಪಾತ್ರಗಳಿಗೆಲ್ಲ  ಜೀವ ತುಂಬಿದ  ಅದ್ಭುತ ನಟ ಅನಿಸಿಕೊಂಡವರು…!!

 ತೆರೆಯ ಮೇಲೆ ಬಂದರೆ  ಅದ್ಭುತ ಖಳನಾಯಕ, ವಿದೂಷಕ, ವಿಲನ್… ಪ್ರೇಕ್ಷಕರೆಲ್ಲರೂ ಅವನನ್ನು ದ್ವೇಷಿಸುವಷ್ಟು “ಭಯಂಕರ ನಟ” ಎಂದು ಕರೆಯುತ್ತಾರೆ ಅವರೇ ವಜ್ರಮುನಿ..!!

‘ನಾಯಿ’ ಪಾತ್ರದ ಮೂಲಕ ಜಗತ್ತಿಗೆ ಅದ್ಭುತ ಸಂದೇಶ ನೀಡಿದ, ಅಳುವಿನಲ್ಲೂ ಪ್ರೇಕ್ಷಕರನ್ನು ನಗಿಸಿದ ಚಾರ್ಲಿ ಚಾಪ್ಲಿನ್ ಅವರ ನಟನೆ ಮರೆಯಲು ಸಾಧ್ಯವೇ…?

 ಇಂತಹ ಸಾವಿರಾರು ಕಲಾವಿದರು ರಂಗಭೂಮಿಯ ಹಿರಿಮೆಯನ್ನು ಹೆಚ್ಚಿಸಿದವರು‌. ಮೂಲತಃ ರಂಗಭೂಮಿಯ ನಟರಾಗಿದ್ದುಕೊಂಡು ನಂತರ ಸಿನಿಮಾ ರಂಗವನ್ನು ಪ್ರವೇಶಿಸಿ, ಅದರಲ್ಲಿಯೂ ತಮ್ಮ ಪ್ರತಿಭೆಯನ್ನು ಮೆರೆದವರು.

 ಇಂದು ‘ವಿಶ್ವ ರಂಗಭೂಮಿ ದಿನಾಚರಣೆ’  ಮನುಷ್ಯ ಹಾಗೇ ನೋಡಿದರೆ ಮನುಷ್ಯ ಮೂಲತಃ ನಟ.
ಅವನು ಹುಟ್ಟಿನಿಂದ ತನ್ನ ಮರಣದವರೆಗೂ ಅನುಕರಣೆ, ವಿನ್ಯಾಸ, ವಿವಿಧ ಅಂಗಗಳ ಭಾವಕ್ಕೆ ತಕ್ಕಂತೆ ಅಭಿನಯಿಸುತ್ತಾನೆ, ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಬದುಕನ್ನು ಸಾಗಿಸುವಾಗ ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ.  ಭಾವನೆಗೆ ತಕ್ಕಂತೆ ಸಂಭಾಷಣೆ,  ಮಾತುಗಾರಿಕೆಯಂತಹ ಅನೇಕ ಮುತ್ತುಗಳನ್ನು ಪೋಣಿಸುತ್ತಾ ಪೋಣಿಸುತ್ತಾ ಸಮಾಜದಲ್ಲಿರುವ ವ್ಯಕ್ತಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಾನೆ.

 ರಂಗಭೂಮಿ… ಎಂದರೆ ನವರಸಗಳ ಬುಗ್ಗೆಯಿದ್ದಂತೆ.  ಸಿಟ್ಟು, ಕೋಪ, ಶಾಂತಿ, ಹತಾಶಯ, ಹಾಸ್ಯ, ವಿಡಂಬನೆ, ವ್ಯಂಗ್ಯ, ಕರುಣೆ, ಬಿಬತ್ಸ್,  ದುಃಖ, ಕರುಣಾರಸ, ಸಾತ್ವಿಕತೆ, ವೈರಾಗ್ಯ….ಹೀಗೆ ಉಂಟಾದ ಭಾವನೆಗಳನ್ನು ನವರಸಗಳಲ್ಲಿ ಹಿಡಿದಿಡುತ್ತಾನೆ.

ಸರಳ ವ್ಯಕ್ತಿತ್ವವನ್ನು ಅವನ ಮಾತುಗಳಲ್ಲಿ ಅಂಗೀಕ ಅಭಿನಯಗಳಲ್ಲಿ ನಾವು ಗುರುತಿಸುತ್ತೇವೆ.  “ಒಂದು ಮುಗುಳ್ನಗೆ ಇಡೀ ಜಗತ್ತನ್ನು ಗೆಲ್ಲುತ್ತದೆ”  ಎನ್ನುವ ಮಾತೊಂದಿದೆ.  ವ್ಯಕ್ತಿ ಸುಮ್ಮನಿದ್ದರೂ ಅದರಲ್ಲೊಂದು ಪ್ರಶಾಂತವಾದ ಬುದ್ದನ ನಗುವಿದೆ. ಮೇಲಿಂದ ಮೇಲೆ ಬೀಳುವ ಬದುಕಿನ ಪೆಟ್ಟುಗಳಿಗೆ ಸಮ್ಮಳಿತಗೊಂಡ ತನ್ನ ಬದುಕಿನಲ್ಲಿ ಕುದಿಯುತ್ತಾನೆ, ಮುಖದ ಪ್ರತಿ ಭಾಗದಲ್ಲಿಯೂ ಕೆಂಪು ಸೂರ್ಯನ ಕಿರಣಗಳನ್ನು ಮೂಡಿಸಿಕೊಳ್ಳುತ್ತಾ, ಸಯೋಧನನ ಆಕ್ರೋಶದ ಸಿಟ್ಟು ಮೂಡಿಸಿಕೊಲ್ಳುತ್ತಾನೆ.

 “ಅಯ್ಯೋ ನನ್ನ ಬದುಕು ಮುಗಿದು ಹೋಯಿತಲ್ಲ, ಆದರೂ ನಾನು ಬದುಕನ್ನು ಕಟ್ಟಲೇಬೇಕು ಇಲ್ಲವಾದರೆ ನನ್ನ ಬದುಕಿಗೆ ಬೆಲೆ ಇಲ್ಲ..” ಎನ್ನುವ ಸುಯೋಧನನ ಛಲವನ್ನು ಬದುಕಿನಲ್ಲಿ ಮಾನವ ಇಟ್ಟುಕೊಳ್ಳುತ್ತಾನೆ.  “ಏನೇ ಬಂದರೂ ನಾವು ಎದುರಿಸಬೇಕೆನ್ನುವ..” ಧರ್ಮರಾಯನ ಸಾತ್ವಿಕತೆಯು ಅನೇಕ ಸಂದರ್ಭದಲ್ಲಿ ಅಡಕವಾಗಿರುತ್ತದೆ…

 ಹೀಗೆ ಸಮಾಜವೆಂಬ ಸಮಾಜದಲ್ಲಿ ವ್ಯಕ್ತಿಗಳ ನಟನೆಗಳು ಸಾಗುತ್ತಲೇ ಹೋಗುತ್ತವೆ.  ಮನುಷ್ಯ ಕೂಡ ಒಬ್ಬ ನಟನಲ್ಲವೇ..?  ಕೇವಲ ರಂಗ ಮಂಚದ ಮೇಲೆ ನಿಂತುಕೊಂಡು ಅಭಿನಯ ಮಾಡಿದರೆ ಮಾತ್ರ ನಟನಲ್ಲ..!!  ಬದುಕಿನಲ್ಲಿಯೂ ನಟಿಸುವವರು ಸಾಕಷ್ಟು ಜನ ಇದ್ದಾರೆ.  ನಮ್ಮ ನಟನೆ ಇನ್ನೊಬ್ಬರ ಮನಸ್ಸನ್ನು ನೋಯಿಸದಂತೆ ಇರಬೇಕು ಎನ್ನುವ ಪ್ರಜ್ಞೆ ನಮ್ಮೊಳಗಿರಬೇಕು.

“ಬದುಕೊಂದು ನಾಟಕ ಜಗತ್ತೇ ರಂಗಭೂಮಿ, ನಾವೆಲ್ಲರೂ ನಟರು..” ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ. ಬದುಕಿನಲ್ಲಿ ಬರುವ ವಿವಿಧ ಸನ್ನಿವೇಶಗಳನ್ನು ನಾವು ಪ್ರತಿಛಾಯೆಯಾಗಿ, ನಾಟಕಕಾರರು ನಾಟಕದಲ್ಲಿ ಅಕ್ಷರರೂಪಕ್ಕೆ ಇಳಿಸುತ್ತಾರೆ. ನಂತರ ಕಲಾವಿದರು ನಟಿಸುತ್ತಾರೆ. ಬದುಕಿನ ವಾಸ್ತವಿಕ ತಲ್ಲಣಗಳನ್ನು ರಂಗಭೂಮಿಗೆ ತರುವಲ್ಲಿ ಅನೇಕ ಸಂಶೋಧನೆಗಳು, ಹೊಸ ಹೊಸ ಅನ್ವೇಷಣೆಗಳು, ನಿರ್ದೇಶನಗಳು ಅದರಲ್ಲೂ ವಿಶ್ವ ರಂಗಭೂಮಿಯ ಜಗತ್ತಿಗೆ ಭಾರತೀಯರ ಕೊಡುಗೆ ಅದ್ಭುತವಾಗಿದೆ.

 ದೆಹಲಿಯ ಆರ್ಟ್ ಆಪ್ ಸ್ಕೂಲ್ ಅಕಾಡೆಮಿ, ರಂಗಭೂಮಿಯ ತರಬೇತಿ ಅಕಾಡೆಮಿ, ಕರ್ನಾಟಕ ಸರ್ಕಾರದಿಂದ ನಡೆಸಲ್ಪಡುವ ಅನೇಕ ರಂಗತರಬೇತಿ ಶಾಲೆಗಳು, ರಂಗ ತರಬೇತಿ ಶಾಲೆಗಳಾದ ರಂಗಾಯಣ, ನಿನಾಸಂ ಹೆಗ್ಗೂಡು,  ಅಲ್ಲದೆ  ಪ್ರತಿ ಹಳ್ಳಿ ಹಳ್ಳಿಗಳಲ್ಲಿರುವ ಹವ್ಯಾಸಿ ನಾಟಕ ತಂಡಗಳು, ನಾಟಕ ಸಂಘಗಳು… ಇವು ರಂಗಭೂಮಿಯ ಹಿರಿಮೆಯನ್ನು ವಿಸ್ತಾರಗೊಳಿಸಿವೆ. ಅಲ್ಲದೇ ವೃತ್ತಿ ರಂಗ ಭೂಮಿ ನಾಟಕ ಕಂಪನಿಗಳು ಇವತ್ತು ಕಲಾ ಪರಂಪರೆಗೆ ಕೀರ್ತಿ ತಂದಿವೆ.

 ತಾಂತ್ರಿಕವಾಗಿ ನಾವು ಎಷ್ಟೇ ಮುಂದುವರಿದರು, ಇವತ್ತಿಗೂ ನಾಟಕವೆಂದರೆ ರೋಮಾಂಚನ. ಅದನ್ನು ನೋಡಿಯೇ ಅನುಭವಿಸಲೇಬೇಕು. ರಂಗಭೂಮಿಗೆ ಸಂಬಂಧಿಸಿದಂತೆ ಮಾತೊಂದಿದೆ,

” ಸಿನಿಮಾ ಚಿಕ್ಕದನ್ನು ದೊಡ್ಡದಾಗಿ ತೋರಿಸುತ್ತಾರೆ,  ಕಿರುತೆರೆಯಲ್ಲಿ ದೊಡ್ಡದನ್ನು  ಚಿಕ್ಕದಾಗಿ ತೋರಿಸುತ್ತಾರೆ, ರಂಗಭೂಮಿಯ ರಂಗಮಂಟಪದಲ್ಲಿ ಇದ್ದುದ್ದನ್ನು ತೋರಿಸುತ್ತಾರೆ..”

 ಈ ಮಾತು ಅಕ್ಷರ ಸತ್ಯ. ಬದುಕಿನ ಅನುಭವಗಳು, ನೋವುಗಳು, ಸಂಕಟಗಳು, ಸಂತೋಷಗಳಳನ್ನು ಯಾವುದೇ ವರ್ಣನೆ ಇಲ್ಲದೆ ಇದ್ದ ವಿಷಯವನ್ನು ಇರುವ ಹಾಗೇ ಸಮಯ, ಸಂದರ್ಭ, ಸನ್ನಿವೇಶಗಳನ್ನು ಇರುವ ಹಾಗೆಯೇ ತೋರಿಸುವುದೇ ರಂಗಭೂಮಿಯ ವಿಶೇಷ. ಇಂತಹ ಯಾಂತ್ರಿಕ ಯುಗದಲ್ಲಿ ಇರುವ ನಾವುಗಳು ರಂಗಭೂಮಿಯ ಕಲಾವಿದರನ್ನು ಗೌರವಿಸೋಣ. ರಂಗುಭೂಮಿಗಾಗಿ ಪ್ರೋತ್ಸಾಹಿಸೋಣ. ಎಲ್ಲರಿಗೂ ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯಗಳು


Leave a Reply

Back To Top