ಮೇಘ ರಾಮದಾಸ್ ಜಿ ಕವಿತೆ-ನೀನೇಕೆ ಸಿಡುಕಿಯಾದೆ?

ನಿನ್ನಲ್ಲಿ ಸದಾ ಪುಟಿಯುತ್ತಿದ್ದ ಲವಲವಿಕೆ
ನವಮಾಸಗಳಿಂದಾಚೆಗೆ ಕಾಣದಾಗಿದೆ
ಕಂದನ ಪಾಲನೆಯಲ್ಲಿ ಕಳೆದುಹೋಗುವ
ಭಯದಿ ಹೀಗಾದೆಯಾ ಗೆಳತಿ?
ನೀನೇಕೆ ಸಿಡುಕಿಯಾದೆ?

ನಿನ್ನದೇ ರಕ್ತಮಾಂಸಗಳ ಮುದ್ದೆಯೊಂದು
ದೇಹವ ಸೀಳಿ ಹೊರಬಂದಿದೆ
ಮರುಜೀವ ಪಡೆದ ಸಂದರ್ಭದಿಂದಾದ
ಆಯಾಸದಿ ಹೀಗಾದೆಯಾ ಗೆಳತಿ?
ನೀನೇಕೆ ಸಿಡುಕಿಯಾದೆ?

ಒತ್ತಡಗಳು ನಿನ್ನನ್ನು ಗಟ್ಟಿಗೊಳಿಸಿದ್ದವು
ಆದರಿಂದು ಅವುಗಳಿಂದ ಹಣ್ಣಾಗಿರುವೆ
ಈ ತೀವ್ರತೆಯ ತಾಪಕ್ಕೆ ಬೆಂದು
ಸೊರಗಿ ಹೀಗಾದೆಯ ಗೆಳತಿ?
ನೀನೇಕೆ ಸಿಡುಕಿಯಾದೆ?

ಏನನ್ನಾದರೂ ಸಾಧಿಸುವ ಹಂಬಲವಿದೆ
ಶ್ರಮಿಸಲು ಒದಗಿದೆ ಸಮಯದ ಕೊರತೆ
ಕಾಲ ಹೀಗೆ ಉರುಳಿಹೋಗಬಹುದೆಂಬ
ತವಕದಿ ಹೀಗಾದೆಯ ಗೆಳತಿ?
ನೀನೇಕೆ ಸಿಡುಕಿಯಾದೆ?

ತಾಳ್ಮೆಯಿಂದ ತಾಳು ಗೆಳತಿ
ಕಂದನೇ ನಿನ್ನ ಶಕ್ತಿಯಗುವ
ಜಗತ್ತೇ ಗುರುತಿಸುವ ಸಾಧಕಿಯಾಗುವೆ
ನಿನ್ನೀ ಅಂಶವ ಸದೃಢಗೊಳಿಸುವ ಸಮಯದಿ
ನೀನೇಕೆ ಸಿಡುಕಿಯಾದೆ?

————————–

2 thoughts on “ಮೇಘ ರಾಮದಾಸ್ ಜಿ ಕವಿತೆ-ನೀನೇಕೆ ಸಿಡುಕಿಯಾದೆ?

Leave a Reply

Back To Top