ಪುಸ್ತಕ ಸಂಗಾತಿ
ರಂಜಾನರ ಹೊಸ ಸಂಕಲನ
“ಮುರಿದು ಬಿದ್ದ ನಕ್ಷತ್ರಗಳು ”
ಅವಲೋಕನ
ದೇವರಾಜ್ ಹುಣಸಿಕಟ್ಟಿ
ನೆಲದ ನಂಜಿಗೆ ಮದ್ದು ಹುಡುಕುವ ಹಾಯ್ಕುಗಳು
ಪ್ರೀತಿಯ ಕವಿ ರಂಜಾನರ ಹೊಸ ಹಾಯ್ಕುಗಳ ಸಂಕಲನ “
ಮುರಿದು ಬಿದ್ದ ನಕ್ಷತ್ರಗಳು ” ಒಂದು ಅನನ್ಯ ಅನುಭೂತಿ ನೀಡಿದ ಕೃತಿ. ಅವರ ಚಿಕ್ಕ ಚಿಕ್ಕ ಹಾಯ್ಕುಗಳು ಉತ್ಕಟ ಪ್ರೇಮ, ವಿರಹ,ಆಳವಾದ ನೋವು, ಸಂಕಟ, ವಿಷಾದ, ವಿರಹ,ತಣ್ಣನೆಯ ಪ್ರತಿಭಟನೆ, ಪ್ರಶ್ನೆ, ದುರಿತ ಕಾಲಘಟ್ಟಕೆ ದಿಟ್ಟ ಪ್ರತಿಕ್ರಿಯೆ ಹೀಗೆ ಬಹು ಆಯಾಮಗಳಲ್ಲಿ ತಮ್ಮ ಆಳವಾದ ಅನುಭವದಿಂದ ಬರೆದ ಬರಹಗಳು ನಮ್ಮನ್ನು ಬೆರಗುಗಣ್ಣಿಂದ ನೋಡುವಂತೆ ಮಾಡುತ್ತವೆ.
ಪ್ರೀತಿ ಎಲ್ಲ ಕಾಲಘಟ್ಟದ ಕವಿಗಳ ಪ್ರಿಯ ಆತ್ಮಾನು ಸಂಧಾನದ ಭಾಷೆ. ಅದನ್ನು ರಂಜಾನರ ಹಾಯ್ಕು ಗಳಲ್ಲಿ ಕಾಣುವುದು ಭಾಷೆ, ಭಾವನೆ ಎರಡಕ್ಕೂ ರೆಕ್ಕೆ ಕಟ್ಟಿದಂತೆ ಬರೆಯುತ್ತಾರೆ. ಉದಾಹರಣೆಗೆ….
* ನೀನು ಎದೆಯೊಳಗೆ
ಮನೆ ಮಾಡಿದೆ ಈ
ನಗರದ ಅಂತಸ್ಥಿನ ಮನೆಗಳು
ನೆಲ ಸಮವಾದವು..!!
* ಅವಳ ನಗು
ಇನ್ನೂ ಕೊಲ್ಲುತ್ತಿದೆ
ಎಂದರೆ
ಅವನು ಬಾಂಬು ತಯಾರಿಸಿದ್ದು ವ್ಯರ್ಥ..!!
*ಎದುರಾಗಬಾರದಿತ್ತು
ಹೂತ ನೆನಪುಗಳು
ಮತ್ತೆ ವಸಂತ ಹಾಡುತ್ತಿವೆ….
ಹೀಗೆ ಪ್ರೇಮಕ್ಕೆ ಇಲ್ಲಿಯವರೆಗೆ ಇದ್ದ ಫ್ರೆಮಗಳ ಮುರಿದು ಕಟ್ಟುವ ಕವಿ ಅವರು. ರಂಜಾನರು ಕಾಲದ ಸ್ಥಿತಿಗೂ ಕನ್ನಡಿ ಹಿಡಿಯುವ, ಆಳುವ ವ್ಯವಸ್ಥೆಗೆ ಮುಖಾಮುಖಿ ಯಾಗುವ ದಿಟ್ಟತನವನ್ನು ಮಾಡಿದ್ದಾರೆ ಅನ್ನುವುದು ಖುಷಿಯ ಸಂಗತಿ. ಕೆಲವರ ಮೌನವೇ ನಮ್ಮನ್ನು ಇರಿಯುತ್ತಿರುವಾಗ ಮೌನ ಮುರಿದು ಹೀಗೆ ಬರೆಯುವುದು ಕಾಲದ ತುರ್ತು ಕೂಡ. ಉದಾಹರಣೆಗೆ ನೋಡಿ…
* ಅಕ್ಷರಗಳು
ನಡುಗುವುದಿಲ್ಲ ನಿನ್ನ
ಬಂದೂಕಿನ ಸದ್ದಿಗೆ….!
*ಎದೆ ಹಿಡಿದು
ಕೇಳಿದಳು ಕೊಲೆಗೆ ಕಾರಣ
ಮೌನದಿಂದ ದಿಟ್ಟಿಸಿದೆ
ದೊರೆಯನ್ನ…!!
*ಪ್ರತಿ ರಾತ್ರಿಯ
ಮಿಲನಕ್ಕೂ ಮಾಲೀಕನ
ಅಪ್ಪಣೆ ಬೇಕಾಗಿದೆ….!!
*ಸುಮ್ಮನಿದ್ದು ಬಿಡು
ಎಲ್ಲ ಧರ್ಮಗಳು
ಕಾಲವಾದ ಮೇಲೆ ಮತ್ತೆ ಹುಟ್ಟೋಣ…!!
ಹೀಗೆ ಎದೆಯೊಳಗಿನ ಕಾವನ್ನು ಕಾವ್ಯವಾಗಿಸುವುದಕ್ಕೆ ರಂಜಾನರು ಇಷ್ಟವಾಗುತ್ತಾರೆ. ರಂಜಾನ್ ರ ಹಾಯ್ಕುಗಳನ್ನು ಧರ್ಮದ ನೆಲಘಟ್ಟನ್ನ ಅಲುಗಾಡಿಸುವ ಹಾಗೆ ಬರೆದಿದ್ದಾರೆ. ಈ ನೆಲದವನ್ನು ಹಾಸಿ ಹೊದ್ದು ಉಂಡವರಿಗೆ ಮಾತ್ರ ಹೀಗೆ ಬರೆಯಲು ಸಾಧ್ಯ. ಅವರು ಎಷ್ಟು ಜೀವಪರರು ಎಂಬುದನ್ನು ಈ ಹಾಯ್ಕುಗಳು ಅರಹುವಲ್ಲಿ ಯಶಸ್ವಿಯಾಗಿವೆ ಉದಾಹರಣೆಗೆ ನೋಡಿ…
* ಜೊತೆಗೂಡಿ ಬರುವ
ಚಂದಿರನೆಂದೂ…
ನೀನ್ಯಾವ ಧರ್ಮವೆಂದು ಕೇಳಲಿಲ್ಲ….!!
* ಪ್ರೇಮವೂ
ಧರ್ಮಯುದ್ಧ ರಕ್ತವೀಗ ಸೋವಿ…!
*ಬೀದಿ ದೀಪ
ದಾರಿ ತೋರಿತು
ನೀನು ಬೆಳಕಿನ ಧರ್ಮ
ಕೇಳಿದೆ…!
* ಧರ್ಮ ಜೋರಾಗಿ
ಬೊಬ್ಬಿರಿಯಿತು
ಮಗು ನಕ್ಕಿತು…!
ಹೀಗೆ ದಿಟವಾಗಿ ಸ್ಪಷ್ಟವಾಗಿ ಬರೆಯುವ ರಂಜಾನ್ ಈ ನೆಲ ಅದ್ಭುತ ಕವಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಕಾವ್ಯವನ್ನು ಅವಲೋಕಿಸುತ್ತ ಹೋದ ಹಾಗೆ ಅವರ ಮೇಲೆ ಗಾಂಧಿ ಮತ್ತು ಬುದ್ಧ, ಯೇಸು ಪ್ರಭಾವ ಅಗಾಧವಾಗಿ ಕಂಡು ಬರುತ್ತೆ. ಅವರೊಳಗಿನ ಜೀವ ಜಲ ಹಿಂಡಿ ಬರೆದಂತಿವೆ ಅವರ ಕೆಲವು ಹಾಯ್ಕುಗಳು. ಅಲ್ಲಮ ಬಸವಾದಿ ಶರಣರನ್ನು ತಮ್ಮ ಹಾಯ್ಕುಗಳ ತೆಕ್ಕೆಗೆ ತರುವಲ್ಲಿ ರಂಜಾನರು ಪ್ರಯತ್ನ ಪಟ್ಟಿರುವುದು ಖುಷಿ ಕೊಡುತ್ತೆ. ಉದಾಹರಣೆಗೆ….
* ಲೋಕ
ಹೊತ್ತವನಿಗೆ
ನಿನ್ನ ಶಿಲುಬೆ
ಯಾವ ಲೆಕ್ಕ…!!
*ಎದೆಗೆ ಬಿದ್ದ
ಮೂರು ಗುಂಡು
ಈಶ್ವರ ಅಲ್ಲಾ ತೇರೆ ನಾಮ!
* ಬಸವನೆಂದರೆ
ಬೆವರು..
ನೆಲದ ತುಂಬ ಹರಿದ ಅರಿವು!
*ಎಲೆ ಉದುರಿತು
ನಾನು ಅತ್ತೆ..
ಬುದ್ಧ ನಕ್ಕ…!!
*ಮುಟ್ಟಲಾಗದು
ಅಲ್ಲಮ
ನಿನ್ನ
ಬೆಂಕಿ ಬೆಳಕು ಎದೆಯೊಳಗೆ
ಹೊತ್ತಿಕೊಂಡಿರಬೇಕು…!!
ಅದೆಷ್ಟು ಪ್ರಜ್ಞೆಯ ಒಳಗೂ ಹೊರಗೂ ಹೊತ್ತಿ ಉರಿಸಿದಂತೆ ಬರೆವ ರಂಜಾನ್ ಅವರು. ಸ್ತ್ರೀ ಸಂವೇದನೆಯನ್ನು ಒರೆಗೆ ಹಚ್ಚಿದಂತೆ ಕೂಡ ಬರೆದಿದ್ದಾರೆ.
ಮನುಸ್ಮೃತಿಯಿಂದ ಹಿಡಿದು.. ಮೊನ್ನೆ ಮೊನ್ನೆಯ ಮಣಿಪುರದ ವರೆಗಿನ ಸ್ತ್ರೀ ಶೋಷಣೆಯ ಎದೆಗೆ ನಾಟುವಂತೆ ಹೇಳುವ ಅವರ ಹಾಯ್ಕು ನೋಡಿ…
ನಿನ್ನ ತೀಟೆಗೆ
ನಾನು ಇಲ್ಲೊಂದು
ಯೋನಿ…!
ಹೀಗೆ ಅವರು ಬಿಕ್ಕಿದ ಪ್ರತಿ ಮಾತು ಅಕ್ಷರ ಸೋತ ಹೃದಯಗಳ ನೇವರಿಸಿ ಸಂತೈಸಿದಂತೆ ಭಾಸವಾಗುತ್ತವೆ. ಅವರ ಮಾತೃ ಹೃದಯ ಬರೆದಷ್ಟು ಓದುಗನ ಎದೆಯ ನೆಲ ಮೆದುವಾಗುದು. ಅವರ ಈ ಎರಡು ಹಾಯ್ಕುಗಳ ಮೇಲಿನ ಮಾತಿಗೆ ಸಾಕ್ಷಿಗೆ ಇರಿಸುತ್ತ ನನ್ನ ಮಾತಿಗೆ ವಿರಾಮವಿಡುತ್ತೇನೆ..
* ಪ್ರೇಮವೊಂದೆ
ಎದೆಯ ಗಾಯಕ್ಕೆ
ಮುಲಾಮು…!!
* ತಾಜ್ಮಹಲ್ ಮೇಲೆ
ಬೆರಳಾಡಿಸಿದೆ…
ಕಣ್ಣೇರೆಗಳು ತೇವಗೊಂಡವು..!!
ಪ್ರೀತಿಯಿಂದ ಶುಭಾಶಯ ಕೋರುತ್ತಾ…
ದೇವರಾಜ್ ಹುಣಸಿಕಟ್ಟಿ
ಧನ್ಯವಾದಗಳು ಸರ್