ವಚನ ಮೌಲ್ಯ ಶರಣೆ ಅಕ್ಕಮ್ಮ ಸುಜಾತಾ ಪಾಟೀಲ ಸಂಖ ಅವರಿಂದ

ವ್ರತಾಚಾರವೆಂದು ಹೆಸರಿಟ್ಟುಕೊಂಡಿಪ್ಪರಯ್ಯಾ!*ವ್ರತವೆಂದೇನು ಆಚಾರವೆಂದೇನು!
ಅನ್ಯರು ಮಾಡಿದ ದ್ರವ್ಯವನೊಲ್ಲದಿಪ್ಪುದು ವ್ರತವೆ?
ಆರನು ಕರೆಯದಿಪ್ಪುದು ಆಚಾರವೆ!

ಪರಸ್ತ್ರೀ ಪರಧನಂಗಳಲ್ಲಿ ನಿಂದೆಗೆ ಒಡಲಾಗದಿದ್ದುದೆ ವ್ರತ.
ಸರ್ವಭೂತಹಿತನಾಗಿ ದಯವಿದ್ದುದೆ ಆಚಾರ.
ಇಂತೀ ಕ್ರೀಯನರಿತು, ಕ್ರೀಯ ಶುದ್ಧತೆಯಾಗಿ
ನಿಂದುದೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ.

          ಶರಣೆ ಅಕ್ಕಮ್ಮ

*********
ಶರಣ ಸಾಹಿತ್ಯದ ಚಿಂತಕರಾದ ಡಾ ಶಶಿಕಾಂತ ಪಟ್ಟಣ ಸರ ಅವರು ಹೇಳುವ ಒಂದು ಮಾತು ನೆನಪಾಗುತ್ತದೆ ನನಗೆ,

“ಕನ್ನಡ ನಾಡಿನಲ್ಲಿ ಶರಣ ಕ್ರಾಂತಿ ಸಂಘಟಿತವಾಗಿ ಒಂಬತ್ತು ನೂರು ವರ್ಷಗಳಾಗುತ್ತಾ ಬಂದಿದ್ದರೂ ,ಅದರ  ಸಹೋತ್ಪನ್ನವಾದ ವಚನ ಸಾಹಿತ್ಯದ ಚರ್ಚೆ, ಮರು ಚರ್ಚೆ ಇಂದಿಗೂ ನಡೆಯುತ್ತಿರುವುದು ಶರಣರ ವಚನಗಳ ಸರ್ವಕಾಲಿಕ ಪ್ರಸ್ತುತತೆಗೆ ಸಾಕ್ಷಿ, ನಮ್ಮ ನಾಡಿನಲ್ಲಿ ಅಷ್ಟೇ ಅಲ್ಲ, ದೇಶ ವಿದೇಶಗಳಲ್ಲೂ ಆ ಕ್ರಿಯಾತ್ಮಕ ಕ್ರಾಂತಿ  ಹಾಗೂ ಶರಣರ ವಚನಗಳ ಪ್ರಭಾವ ಮತ್ತು ಪ್ರೇರಣೆಯಿಂದ ಹೊಸ ಹೊಸ ವಿಚಾರಧಾರೆಗಳು ಹುಟ್ಟು ಪಡೆಯುತ್ತಿರುವುದು ಅವುಗಳ ಸರ್ವಕಾಲಿಕ ಮಹತ್ವವನ್ನೇ… ಸಾರುತ್ತಿವೆ. ಶರಣರ ವಚನಗಳ ಇತ್ಯಾತ್ಮಕ ಚಿಂತನೆಯ ಪ್ರಗತಿಪರ ಮನಸ್ಸುಗಳಿಗೆ ನಿತ್ಯ ಹೊಸ ಹೊಸ ಹೊಳಪನ್ನು ಹೊಳೆಸುವ ವಚನ ಸಾಹಿತ್ಯವು ಜಗತ್ತಿನಲ್ಲೇ…! ಒಂದು ವಿನೂತನ ಮಾದರಿಯ ಸಾಹಿತ್ಯವಾಗಿದೆ.
ಇಂತಹ ಬಹುರೂಪ ಚಿಂತನೆ, ನಡೆ ಮತ್ತು ನುಡಿ ಒಂದಾದ ಪ್ರಾಯೋಗಿಕ ಸಾಹಿತ್ಯ ಜಗತ್ತಿನಲ್ಲಿ ಬೇರೆ ಇನ್ನಾವುದೇ ಸಾಹಿತ್ಯದಲ್ಲಿ ಇಲ್ಲವೆಂದರೆ ಅದು ಬರಿ ಅಭಿಮಾನದಿಂದ ಹೇಳುವ ಮಾತಲ್ಲ;
ಶರಣರ ವಚನಗಳು ಸತ್ಯವನ್ನು ಸಾಕ್ಷಾತ್ಕಾರಗೊಳಿಸುವ ವಿನಯ ಭಾವನೆಗಳ ಅಕ್ಷರ ಪುಂಜಗಳು”
ಎನ್ನುವ ಡಾ ಶಶಿಕಾಂತ ಪಟ್ಟಣ ಸರ ಅವರ ನುಡಿಯಂತೆ  
ಈ ಮೇಲಿನ ಶರಣೆ ಅಕ್ಕಮ್ಮನವರ ವಚನದ ಭಾವಾರ್ಥ ತಿಳಿಯೋಣ ಬನ್ನಿ.

ವ್ರತಾಚಾರವೆಂದು ಹೆಸರಿಟ್ಟುಕೊಂಡಿಪ್ಪರಯ್ಯಾ!*ವ್ರತವೆಂದೇನು ಆಚಾರವೆಂದೇನು!
ಅನ್ಯರು ಮಾಡಿದ ದ್ರವ್ಯವನೊಲ್ಲದಿಪ್ಪುದು ವ್ರತವೆ?
ಆರನು ಕರೆಯದಿಪ್ಪುದು ಆಚಾರವೆ!

     ದೊಡ್ಡ ದೊಡ್ಡ ಕೆಲವು ವ್ಯಕ್ತಿಗಳು ತಾವು ವೃತಾಚಾರಿಗಳೆಂದು ಹೆಸರಿಟ್ಟುಕೊಂಡು ಡಾಂಭಿಕತೆ ಸಾರುತ್ತ ಮೆರೆಯುವವರಿಗೆ  ವ್ರತವೆಂದರೇನು? ಅದರ ಅರ್ಥವೇ ಗೊತ್ತಿರುವುದಿಲ್ಲ,
     ಅದೇರೀತಿ ಆಚಾರವೆಂದರೇನು?…..ಇದರ ಅರ್ಥವೂ ಏನು ಎಂಬುದೇ…. ಗೊತ್ತಿರುವುದಿಲ್ಲ.  
ಇವರು  ತಿಳಿದಿರುತ್ತಾರೆ,
ಇನ್ನೊಬ್ಬರು ಸಂಪಾದಿಸಿದ ಸಂಪತ್ತನ್ನು ನಿರಾಕರಿಸುವುದು ವೃತವೆಂದು, ಆದರೆ ಅದು  ವೃತವಲ್ಲ , ಅದು ನಮ್ಮ ಕರ್ತವ್ಯ ಧರ್ಮ ಅಷ್ಟೆ.

ವ್ರತದ ಅರ್ಥ ಸ್ವರೂಪಗಳನ್ನು ತಿಳಿದುಕೊಳ್ಳದೆ ಬಹುಪಾಲು ಜನರು ತಾವೊಬ್ಬ ಶ್ರೇಷ್ಠ ವ್ರತಾಚಾರಿಗಳೆಂದು ಹೆಸರಿಟ್ಟುಕೊಂಡು ಡಂಗುರ ಸಾರುತ್ತಿರುತ್ತಾರೆ.   ಇದಕ್ಕಾಗಿ ಕೆಲವು ಹೊಗಳು ಭಟ್ಟರನ್ನೂ ಸಾಕಿಕೊಂಡಿರುತ್ತಾರೆ.
  “ಖ್ಯಾತಿಯ ಲಾಭಕ್ಕೆ ವ್ರತವ ಮಾಡಿಕೊಂಡವನ ನೇಮವ ನೋಡಾ !”
ಎಂದು  ಇಂತಹ ವ್ರತಾಚಾರಿಗಳನ್ನು ಶರಣೆ ಅಕ್ಕಮ್ಮ ಛೇಡಿಸುತ್ತಾರೆ.   ವೃತವೆಂದರೆ ಎಂಬುದನ್ನು ಇನ್ನೊಂದು ವಚನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ,

ವ್ರತವೆಂಬುದೇನು? ವಸ್ತುವ ಕಾಂಬುದಕ್ಕೆ ನಿಚ್ಚಣಿಕೆ.
ವ್ರತವೆಂಬುದೇನು? ಇಂದ್ರಿಯಂಗಳ ಸಂದಮುರಿವ ಕುಲಕುಠಾರ.
ವ್ರತವೆಂಬುದೇನು?
 ಸಕಲ ವ್ಯಾಪಕಕ್ಕೆ ದಾವಾನಳ.
ವ್ರತವೆಂಬುದೇನು? ಸರ್ವದೋಷನಾಶನ.
ವ್ರತವೆಂಬುದೇನು? ಚಿತ್ತಸುಯಿದಾನದಿಂದ
ವಸ್ತುವ ಕಾಂಬುದಕ್ಕೆ ಕಟ್ಟಿದ ಗುತ್ತಗೆ.
ವ್ರತವೆಂಬುದೇನು?
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರಿಗೆ
ತತ್ತಲಮಗನಾಗಿಪ್ಪನು.

ಎಂಬುದಾಗಿ ವ್ರತವನ್ನು ವಿವರವಾಗಿ ತಿಳಿಸಿದ್ದಾರೆ ಶರಣೆ ಅಕ್ಕಮ್ಮ.

ಹಾಗೆಯೇ….
ಯಾರನ್ನೂ ಕರೆಯದಿರುವುದು   ಆಚಾರವೇ?  ಎಂದು ಎಂಬುದಾಗಿ ಶರಣೆ ಅಕ್ಕಮ್ಮನವರು ಪ್ರಶ್ನಿಸುತ್ತಾರೆ.

ಪರಸ್ತ್ರೀ ಪರಧನಂಗಳಲ್ಲಿ ನಿಂದೆಗೆ ಒಡಲಾಗದಿದ್ದುದೆ ವ್ರತ.
ಸರ್ವಭೂತಹಿತನಾಗಿ ದಯವಿದ್ದುದೆ ಆಚಾರ.
ಇಂತೀ ಕ್ರೀಯನರಿತು, ಕ್ರೀಯ ಶುದ್ಧತೆಯಾಗಿ
ನಿಂದುದೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ.

   ಪರಸ್ತ್ರೀ- ಪರಧನಗಳಿಗೆ ಆಸೆಪಡದೆ, ನಿಂದೆಗೆ ಗುರಿಯಾಗದಿರುವುದೇ ಆಚಾರ.   ಸಕಲ ಜೀವಿಗಳ ಹಿತ ಬಯಸಿ, ಸಮಾಜಮುಖಿ  ಒಳಿತಾಗುವ, ದಯಾಭಾವವಿಟ್ಟುಕೊಳ್ಳುವುದೇ  ಆಚಾರ.    
ಹಾಗೂ ಕ್ರಿಯಾ ಜ್ಞಾನಮಾರ್ಗದಲ್ಲಿ ನಡೆಯುವುದು ಕೂಡಾ ಆಚಾರವೆನಿಸಿಕೊಳ್ಳುತ್ತದೆ.   ಈ ರೀತಿ ಕ್ರಿಯೆಯನ್ನರಿತುಕೊಂಡು ಕ್ರಿಯಾಶುದ್ಧರಾಗಿ ನಿಲ್ಲುವುದೇ ಆಚಾರ .
ಆಚಾರವೇ ಪ್ರಾಣವಾದ  ರಾಮೇಶ್ವರಲಿಂಗದ ನೇಮ ಎನ್ನುತ್ತಾರೆ ಶರಣೆ ಅಕ್ಕಮ್ಮ.

    ವೃತ , ಆಚಾರ ಇವುಗಳನ್ನು ಅರಿತುಕೊಂಡು ಆಧ್ಯಾತ್ಮಿಕ ಶರಣ ನೆಲೆಯಲ್ಲಿ “ವ್ರತ ಮತ್ತು ಆಚಾರ”ಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.  

 “ತಾ ಮುಟ್ಟದುದ ಮುಟ್ಟಿದಡೆ ತಾ ಕೊಳ್ಳದುದ ಕೊಂಡಡೆ
ಆ ಸೂಕ್ಷ್ಮ ತನುವಿನಲ್ಲಿ ಆ ತನುವ ಬಿಟ್ಟು ನಿಂದುದು ವ್ರತ.
ಮಾಡಿಕೊಂಡ ನೇಮಕಕ್ಕೆ ಕಂಡು ಬಂದಲ್ಲಿ
ಆ ಅಂಗಕ್ಕೆ ಓಸರಿಸದೇ ನಿಂದುದು ಆಚಾರ.”

ಎಂಬುದಾಗಿ,   ವ್ರತ ಮತ್ತು ಆಚಾರಗಳ ಸ್ವರೂಪವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತಾರೆ. ಅಂತರಂಗದಲ್ಲಿ ವ್ರತ ಬಹಿರಂಗದಲ್ಲಿ ಆಚಾರ ಎನ್ನುವ ಶರಣೆ ಅಕ್ಕಮ್ಮ,

ತನುವಿಂಗೆ ಕ್ರೀ, ಆತ್ಮಂಗೆ ವ್ರತ.
ಆ ವ್ರತಕ್ಕೆ ನಿಶ್ಚಯ ಕರಿಗೊಂಡು
ಬಾಹ್ಯದ ಕ್ರೀ, ಅರಿವಿನ ಆಚರಣೆ,
ಭಾಷೆ ಓಸರಿಸದೆ ನಿಂದಾತನೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.

 ಎನ್ನುತ್ತಾ,   ದೇಹಕ್ಕೆ ಕ್ರಿಯೆ ಆಚಾರವಾದರೆ
ಆತ್ಮಕ್ಕೆ ವ್ರತವಿದೆ.   ಈ ರೀತಿ ಬಹಿರಂಗದ ಕ್ರಿಯೆ ಮತ್ತು ಅಂತರಂಗದ ಅರಿವಿನ ಆಚರಣೆಗಳನ್ನು ಮನದಲ್ಲಿ ಗಟ್ಟಿಗೊಂಡು,
ಮಾತು ತಪ್ಪದಂತೆ ನಡೆದು ನಿಂದಾತನೇ ಆಚಾರವಂತನು ಎನ್ನುತ್ತಾರೆ ಶರಣೆ ಅಕ್ಕಮ್ಮ.


One thought on “ವಚನ ಮೌಲ್ಯ ಶರಣೆ ಅಕ್ಕಮ್ಮ ಸುಜಾತಾ ಪಾಟೀಲ ಸಂಖ ಅವರಿಂದ

Leave a Reply

Back To Top