ಕಾವ್ಯ ಸಂಗಾತಿ
ಸುಜಾತಾ ರವೀಶ್ ಅವರ
ಕವಿತೆಯೊಂದು
ಕವಿತೆಯೊಂದು
ಬಿರಿಯುತಿದೆ ಮಲ್ಲಿಗೆಯಂತೆ
ಜಿನುಗುತಿದೆ ನೀರೊರತೆಯಂತೆ
ಹನಿಯುತಿದೆ ಮಳೆ ತುಂತುರಂತೆ
ಸುರಿಯುತಿದೆ ಭಾವ ಧಾರೆಯಂತೆ
ಕವಿತೆಯೊಂದು
ಸುಜಾತಾ ರವೀಶ್ ಅವರ ಕವಿತೆಯೊಂದು
ಮನದ ಭಾವ ಉಕ್ಕಿ ಹರಿದ ಹಾಗೆ .
ಕವಿತೆಯೊಂದು
ಹರಿದಿದೆ ಸರಾಗ ಸಲಿಲವಾಗಿ
ಸುರಿದಿದೆ ಶಶಿಯ ಚಂದ್ರಿಕೆಯಾಗಿ
ಹರಡಿದೆ ವ್ಯೋಮ ವಿಸ್ತಾರವಾಗಿ
ಮಲಗಿದೆ ರಾತ್ರಿಯ ರಜನಿಯಾಗಿ.
ಕವಿತೆಯೊಂದು
ಕವಿಮನದ ಕುಸುಮ
ಭಾವಗಳ ಹೊಸ ಆಯಾಮ
ಶಬ್ದಗಳಲ್ಲಿ ಮಾಡುವ ಪ್ರಣಾಮ
ಇದಕ್ಕಿಲ್ಲ ಯಾವುದೇ ನಿಯಮ
ಕವಿತೆಯೊಂದು
ಹಸುಗೂಸಿನ ನಿದ್ರೆಯ ನಗೆ
ಚಂದನವನದ ಸವಿಯ ಹೊಗೆ
ಜ್ಯೋತ್ಸ್ನೆ ತರುವ ಶೀತಲತೆ
ಜ್ಯೋತಿಯಲ್ಲಿನ ಪ್ರಶಾಂತತೆ
ಕವಿತೆಯೊಂದು
ಹುಟ್ಟಿತೆನ್ನ ಮನದಾಳದಲ್ಲಿ
ಇಳಿಯಿತು ಬಿಳಿಹಾಳೆಯಲ್ಲಿ
ಲೇಖನಿಯ ಒಕ್ಕಣಿಕೆಯಾಗಿ
ಭಾವಶರಗಳ ಬತ್ತಳಿಕೆಯಾಗಿ.
ಕವಿತೆಯೊಂದು
ಮನದ ಮೌನದ ಮಾತು
ಭಾವಕ್ಕೂ ಭಾಷೆಗೂ ಸೇತು
ಹೃದಯದನಿಸಿಕೆಗಳ ಒಸಗೆ
ಕವಿ ಹೃದಯಕ್ಕೆ ಓದುಗನ ಬೆಸುಗೆ
ಕವಿತೆಯೊಂದು
ಸಾಹಿತ್ಯ ದೇವಿಯ ಪೂಜೆಗೆ ಮಂದಾರ
ಶಬ್ದಗಳ ಗುಚ್ಛದಲ್ಲಿ ಪದ ಸಿಂಗಾರ
ಮನೆಯ ಬಾಗಿಲ ಹಸಿರು ತೋರಣದಂತೆ
ಮನದ ಭಾವದ ಪ್ರತಿಫಲನವಂತೆ.
ಕವಿತೆಯೊಂದು
ಮನವೆಂಬ ಹಣತೆಯಲ್ಲಿ
ಭಾವದ ಎಣ್ಣೆ ಸುರಿದು
ಪದಗಳ ಬತ್ತಿ ಹೊಸೆದು
ಬೆಳಗಿಸಿದ ಜ್ಯೋತಿ .
ಕವಿತೆಯೊಂದು
ಮನದ ಭಾವಗಳ ಇಳೆಗೆ
ಶಬ್ದಗಳ ಆಗಸದ ಮಿಲನ
ಅಲ್ಲಿ ಮೂಡಿತು ನವದಿಗಂತ
ಇಲ್ಲಿ ಹುಟ್ಟಿತು ಹೊಸ ಕವಿತ.
ಕವಿತೆಯೊಂದು
ಅಂತರಂಗದಿ ಉದಯಿಸುವ ಅರುಣ
ಶಬ್ದ ಜಾಲಗಳಲಿ ನೇಯುವ ತೋರಣ
ಪದಗಳೋ! ಭಾಷೆಯ ಹೊಂಗಿರಣ
ಇದರ ಸವಿ ಸಿಹಿ ಹೋಳಿಗೆ ಹೂರಣ .
——————————–
ಸುಜಾತಾ ರವೀಶ್
ಪ್ರಕಟಣೆಗಾಗಿ ಸಂಪಾದಕರಿಗೆ ಧನ್ಯವಾದಗಳು