ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
‘ಸಾಂಗತ್ಯ’
ಮಾವಿನ ಚಿಗುರಿಗೆ ಕೋಗಿಲೆ ಕೂಗಲು
ಹೊಸತು ರಾಗವು ದಕ್ಕಿದೆ
ಹೂವಿನ ಸೊಬಗಿಗೆ ಭೃಂಗದ ಸಮ್ಮೇಳ
ಮಧುವ ಹೀರಲು ಕಾದಿದೆ
ಹುಣ್ಣಿಮೆ ರಾತ್ರಿಯಲಿ ಬೆಳಕ ಸೂಸುತ
ಚಂದಿರ ನಗುತ ಬಂದನು
ಬಣ್ಣದ ತೋರಣದಿ ಜಗದ ಕತ್ತಲನು
ಕಳೆದು ಬೀಗುತ ನಿಂದನು
ತುಂತುರು ಮಳೆಗೆ ಬಾನಿನ ರಂಗು
ಚೆಲುವಿನ ಚಿತ್ತಾರ ಮೂಡಿಸಿದೆ
ಬೆಳ್ಳಿಯ ಮೋಡವು ಕಳ್ಳನ ಹಾಗೆ
ಇಣುಕಿ ಮರೆಯಾಗಿ ಓಡಿದೆ
ಕಾಮನ ಬಿಲ್ಲಿನಲಿ ಸಪ್ತ ವರ್ಣಗಳು
ಕೋಮಲ ಭಾವನೆ ಅರಳಿಸಿದೆ
ಸುಮ್ಮಾನ ತೋರಿದ ನಲ್ಲನ ಸಾಂಗತ್ಯ
ಎದೆಯ ಬಯಕೆಯ ಕೆರಳಿಸಿದೆ
———————-
ಅನುರಾಧಾ ರಾಜೀವ್ ಸುರತ್ಕಲ್