ಕಾವ್ಯ ಸಂಗಾತಿ
‘ಅಮ್ಮ ಮತ್ತು ಸೌದೆ ಒಲೆ’
ಕಂಸ ಅವರ ಕವಿತೆ
ನಾನು ಹುಟ್ಟುವ ಮೊದಲೇ
ಸೌದೆ ಒಲೆಯಿಂದ
ಅಡುಗೆ ಮಾಡುತ್ತಿದ್ದಳು
ನಮ್ಮಮ್ಮ
ಸೌದೆ ಹುಡುಕಲು
ಅಮ್ಮನ ಜೊತೆ ಹೋಗುತ್ತಿದ್ದೆ
ಹೊಲ ಗದ್ದೆ ತೋಟಗಳಲ್ಲಿ
ಪುಳ್ಳೆಮುರಿದು
ಅಂಬಳ ಬಳ್ಳಿ ಹುಡುಕಿ
ಪೆಂಡಿ ಕಟ್ಟುತ್ತಿದ್ದಳು
ಪುಟ್ಟ ಹೊರೆ
ನನಗಾಗಿ ಕಾದಿರುತ್ತಿತ್ತು
ಹರಿದ ಸೀರೆಯ ಮಡಿಚಿ ಹೊದ್ದು
ಸೌದೆಯ ಭಾರದಲ್ಲಿ
ತೇಗುತ್ತಾ ಹಣೆಯ ಬೆವರು
ಒರೆಸುತ್ತಾ
ಮನೆ ಕಡೆ ಸಾಗುತ್ತಿದ್ದೆವು
ದಾರಿಯುದ್ದಕ್ಕೂ
ಓ ಒಳ್ಳೆಯ
ಸೌದೆ ಸಿಕ್ಕಿದೆಯಲ್ಲಕ್ಕ
ಯಾವ ಕಡೆ ಹೋಗಿದ್ದೆ ಎಂದಾಗ
ಹಳ್ಳಕೊಳ್ಳ ತೋಟಗಳ ಪರಿಚಯ
ಮನೆ ತಲುಪಿ
ಸಮನಾಗಿ ಕತ್ತರಿಸಿ
ಜೋಡಿಸಿಡುವುದೇ
ನೆಮ್ಮದಿಯ ಕಾಯಕ
ಚಳಿಗಾಲದಲ್ಲಿ
ಮನೆ ತಲುಪಿ
ಸಮನಾಗಿ ಕತ್ತರಿಸಿ
ಜೋಡಿಸಿಡುವುದೇ
ನೆಮ್ಮದಿಯ ಕಾಯಕ
ಊದುವ ಕೊಳವೆಯಲ್ಲಿ
ಕಣ್ಣು ಕೆಂಪಾದರೂ ಹೊಗೆ ಹೋಗಿ
ಬೆಂಕಿ ಹತ್ತಲು
ಬಿಡದೆ ಊದುವಳು
ಕೊನೆಯಲ್ಲಿ
ಸೌದೆ ಒಲೆಯ
ಅಮ್ಮನ ನಳಪಾಕ ಸಿದ್ಧ
ಉಂಡರೆ ಎಂದೂ ಮರೆಯದ
ಸವಿ ಸವಿ ನೆನಪಿನ ಬುತ್ತಿ
ಇನ್ನೇಕೆ ಹೆಣ್ಣು ಹೊನ್ನು ಮಣ್ಣಿನ ಕುಸ್ತಿ
ಸಾಕಲ್ಲವೇ ಜೀವನದ ಆಸ್ತಿ
———————————-