ಪತಿ ಹಾಗೂ ಮಕ್ಕಳು ರಸ್ತೆಯ ತಿರುವಿನಲ್ಲಿ ಮರೆಯಾಗಿ ಹೋದಾಗ ಕಲ್ಯಾಣಿಯವರು ದಿಗ್ಮೂಢರಾಗಿ ನಿಂತರು. ಏನು ಮಾಡುವುದು ಎಂದು ತೋರದೇ ನಿಂತಲ್ಲೇ ಕುಸಿದು ಹೋಗುತ್ತಾ ಇರುವಂತೆ ಅನಿಸಿತು.  ಕಣ್ಣು ತತ್ತಲಾಯಿತು ಬಾಯಿ ಒಣಗಿತು. ತನ್ನ ಸುತ್ತ ಇರುವ ಎಲ್ಲವೂ ಗಿರ್ರನೆ ತಿರುಗುತ್ತಿರುವಂತೆ ಭಾಸವಾಯಿತು.  ನಾರಾಯಣನ್ ಕುಟುಂಬವನ್ನು ಬೀಳ್ಕೊಡಲು ಬಂದು ನಿಂತಿದ್ದ ಎಲ್ಲರೂ ಕಲ್ಯಾಣಿಯ ಪರಿಸ್ಥಿತಿಯನ್ನು ಕಂಡು ವ್ಯಥಿತರಾದರು. ಪಕ್ಕದಲ್ಲಿ ನಿಂತಿದ್ದ ಮಹಿಳೆಯರು ವಾಲುತ್ತಾ ನೆಲಕ್ಕೆ ಕುಸಿಯುತ್ತಿದ್ದ ಕಲ್ಯಾಣಿಯನ್ನು ಹಿಡಿದು ಕುರ್ಚಿಯಲ್ಲಿ ಕುಳ್ಳಿರಿಸಿದರು. ಕೆಲವರು ನೀರು ತರಲೆಂದು ಒಳಗೆ ಓಡಿದರು. ಹೂಜಿಯಲ್ಲಿ ನೀರನ್ನು ತಂದು ಕಣ್ಣುಮುಚ್ಚಿ ಕುಳಿತಿದ್ದ ಕಲ್ಯಾಣಿಯ ಮುಖಕ್ಕೆ ಚಿಮುಕಿಸಿದರು. ಕಣ್ಣು ಬಿಟ್ಟ ಕಲ್ಯಾಣಿಯ ಕಣ್ಣಲ್ಲಿ ನೋವಿನ ಛಾಯೆ ಮನೆ ಮಾಡಿತ್ತು. ಮಾತೇ ಬಾರದೇ ಹಾಗೇ ಕುಳಿತುಬಿಟ್ಟರು. ಯಾರು ಏನೇ ಕೇಳಿದರೂ ಕಣ್ಣೀರೇ ಅವರ ಉತ್ತರವಾಗಿತ್ತು. ಅವರ ಸ್ಥಿತಿಯನ್ನು ಕಂಡು ಎಲ್ಲರಿಗೂ ಮರುಕವುಂತಾಯಿತು. ನಾರಾಯಣನ್ ಹೀಗೆ ಮಾಡಬಾರದಿತ್ತು….ಪತ್ನಿಯನ್ನು ಬಹುವಾಗಿ ಪ್ರೀತಿಸುತ್ತಿದ್ದ ಅವರಿಗೆ ಏನಾಯಿತು? ಈ ರೀತಿ ಒಂಟಿಯಾಗಿ ಬಿಟ್ಟು ಹೋಗಲು ಮನಸ್ಸಾದರೂ ಹೇಗೆ ಬಂದಿತು? ಎಂದು ಕೆಲವರು ಮಾತನಾಡಿದರೆ… ಇನ್ನೂ ಕೆಲವರು… ಛೇ ನಾರಾಯಣನ್ ಹಾಗೆ ಬಿಟ್ಟು ಹೋಗುವುದಿಲ್ಲ…ಪತ್ನಿ ಹಾಗೂ ಮಕ್ಕಳು ಎಂದರೆ ನಾಣುವಿಗೆ ಪಂಚಪ್ರಾಣ.

ಅರ್ಧ ದಾರಿಗೆ ಹೋಗಿ ಮತ್ತೆ ಖಂಡಿತಾ ಹಿಂದಿರುಗಿ ಬರುವರು. ಮಕ್ಕಳು ಇನ್ನೂ ಚಿಕ್ಕವರು ನಾಣು ಒಬ್ಬರೇ ಅವರನ್ನೆಲ್ಲಾ ನೋಡಿಕೊಳ್ಳಲು ಸಾಧ್ಯವಿಲ್ಲ. ಎಂದು ಅವರವರಿಗೆ ತೋಚಿದ ಹಾಗೆ ಮಾತನಾಡುವುದು ಕಲ್ಯಾಣಿಯ ಕಿವಿಗೂ ಬಿತ್ತು. ಇವರೆಲ್ಲರ ಮಾತಿನಂತೆ ಅವರು ಹಿಂತಿರುಗಿ ಬಂದರೆ ಸಾಕು ಕೃಷ್ಣಾ…ಎಂದು ಮನದಲ್ಲಿಯೇ ಪರಿ ಪರಿಯಾಗಿ ಇಷ್ಟ ದೈವವನ್ನು ಬೇಡಿಕೊಂಡರು.

ಕಲ್ಯಾಣಿಯ ದೃಷ್ಟಿ ಮುಖ್ಯ ಪ್ರವೇಶ ದ್ವಾರದ ಕಡೆಗೇ ಇತ್ತು. ಸಣ್ಣ ನೆರಳು ಕಂಡರೂ ಪತಿ ಹಾಗೂ ಮಕ್ಕಳು ಹಿಂತಿರುಗಿ ಬಂದರು ಎಂಬ ಆಸೆಯಿಂದ ನೋಡುತ್ತಾ ಇದ್ದರು. ನಿಧಾನವಾಗಿ ಸಾವರಿಸಿಕೊಂಡು ಪ್ರವೇಶ ದ್ವಾರದ ಬಳಿಗೆ ಸಾಗಿದರು. ಜೊತೆಯಲ್ಲಿ ಇರುವವರು ಎಷ್ಟು ಬೇಡವೆಂದರೂ ಕೇಳದೇ ಹೋಗಿ ನಿಂತರು. ಅಷ್ಟು ದೂರ ಕಣ್ಣು ಹಾಯಿಸಿ ನೋಡಿದರೂ ಪತಿ ಹಾಗೂ ಮಕ್ಕಳು ಬಾರದೇ ಇರುವುದನ್ನು ಕಂಡು ನಿರಾಶರಾಗಿ ಅಲ್ಲಿಯೇ ಕುಳಿತರು. ಯಾರು ಎಷ್ಟೇ ಹೇಳಿದರೂ ಕೇಳದೇ ಕಣ್ಣೀರು ಹರಿಸುತ್ತಾ ಪತಿ ಹಾಗೂ ಮಕ್ಕಳ ದಾರಿ ನೋಡುವುದೇ ಅವರ ಕೆಲಸವಾಯಿತು. ಆ ದೃಶ್ಯ ಕಂಡು ಅಲ್ಲಿ ನೆರೆದವರ ಮನಸ್ಸು ಮರುಗಿತು. ಅವರನ್ನು ತೀರಾ ಹತ್ತಿರದಿಂದ ಗೊತ್ತಿರುವ ಹೆಂಗಸರು ಕಲ್ಯಾಣಿಯ ಅವಸ್ಥೆ ಕಂಡು ತಮ್ಮ ಸೆರಗಿನಿಂದ ಕಣ್ಣುಗಳಲ್ಲಿ ಜಿನುಗಿದ ನೀರನ್ನು  ಒರೆಸಿಕೊಂಡರು. ಪಡಸಾಲೆಯ ಬಳಿ ನಿಂತಿದ್ದ ಆನೆ ಕೇಶವ ಇದನ್ನೆಲ್ಲಾ ನೋಡುತ್ತಾ ತಾನೂ ಮೌನವಾಗಿ ಕಣ್ಣೀರು ಹರಿಸಿದ. ಇನ್ನೂ ಎಷ್ಟು ಹೊತ್ತು ಇಲ್ಲಿ ಇರುವುದು ಎಂದು ಬಂದಿದ್ದ ಊರವರೆಲ್ಲ ಒಬ್ಬೊಬ್ಬರಾಗಿ ಹೊರಟು ಹೋದರು. ಕಲ್ಯಾಣಿಗೆ ಆಪ್ತರಾದ ಕೆಲವು ಹೆಂಗಸರು ಜೊತೆಗೆ ಉಳಿದು ಕೊಂಡರು. ಇಂತಹಾ ಸ್ಥಿತಿಯಲ್ಲಿ ಒಬ್ಬರನ್ನೇ ಬಿಟ್ಟು ಹೋಗುವುದು ಅವರಿಂದ ಸಾಧ್ಯವಿರಲಿಲ್ಲ. ಹಸಿವು  ನೀರಡಿಕೆ ಇಲ್ಲ ಎಲ್ಲಿಯೂ ಗಮನವಿಲ್ಲ. ಕೆದರಿದ ಕೂದಲು ಮುಖ ಬಾಡಿದೆ ಕಣ್ಣುಗಳು ಕಳೆಗುಂದಿದೆ. ಕಲ್ಯಾಣಿಯು ಮನೆಯಿಂದ ಹೊರಗೆ ಬರುತ್ತಾ ಇದ್ದದ್ದೇ ಕಡಿಮೆ.ಅವರನ್ನು ಮುಖತಃ ಭೇಟಿ ಆದವರು ಮಾತನಾಡಿದವರು ಬಹಳ ಅಪರೂಪ. ಇಂದು ಎಲ್ಲರೂ ಅವರ ಈ ಸ್ಥಿತಿಯನ್ನು ಕಂಡಿದ್ದರು ಕಂಡು ಮರುಗಿದ್ದರು. 

ಇಂಥಹ ಸ್ಥಿತಿ ಯಾವ ಹೆಣ್ಣಿಗೂ ಬರಬಾರದು ಎಂದು ಒಳಗೊಳಗೇ ಹೇಳಿಕೊಳ್ಳುವವರೇ ಎಲ್ಲರೂ.

ಸಂಜೆಯಾಯಿತು ಇನ್ನೂ ಹೀಗೇ ಇದ್ದರೆ ಸರಿಯಾಗದು ಎಂದು ಜೊತೆಗಿದ್ದ ಮಹಿಳೆಯರು ಅವರನ್ನು ಮನೆಯ ಒಳಗೆ ಕರೆದುಕೊಂಡು ಬಂದರು. ಅಷ್ಟು ಹೊತ್ತಿಗೆಲ್ಲ ಮನೆ ಖರೀದಿ ಮಾಡಿದವರೂ ಬಂದರು. ಇನ್ನು ಕಲ್ಯಾಣಿಯು ಆ ಮನೆಯಲ್ಲಿ ಇರುವುದು ಸಾಧ್ಯವಿರಲಿಲ್ಲ. ಆದರೂ ಕಲ್ಯಾಣಿಯನ್ನು ಕಂಡ ಅವರಿಗೆ ಮರುಕವುಂತಾಯಿತು. ಅವರ ಈ ಸ್ಥಿತಿ  ಅರ್ಥವಾಯಿತು. ಮನೆ ಹಾಗೂ ತನ್ನ ಕುಟುಂಬದ ಮೇಲೆ ಅವರಿಗೆ ಇರುವ ಅಕ್ಕರೆ ಕಂಡು ಎಂಥಹಾ ಸ್ನೇಹಮಯಿ ಹೆಂಗಸು ಇವರು. ಇವರ ಕುಟುಂಬದವರು ನಿಜಕ್ಕೂ ಭಾಗ್ಯವಂತರು ಎಂದು ಮನದಲ್ಲೇ ಅಂದುಕೊಂಡು….”ಅಮ್ಮಾ ನೀವು ಇಲ್ಲಿ ಎಷ್ಟು ದಿನ ಬೇಕಾದರೂ ಇರಬಹುದು ನಾರಾಯಣನ್ ರವರನ್ನು ಇಲ್ಲಿಗೆ ಕರೆತರುವ ವ್ಯವಸ್ಥೆ ಮಾಡುತ್ತೇವೆ….ಎಂದರು.

ಅವರ ಮಾತುಗಳನ್ನು ಕೇಳಿ ಕಲ್ಯಾಣಿಯವರಿಗೆ ಸ್ವಲ್ಪ ಸಮಾಧಾನ ಆದಂತೆ ಆಯಿತು….ಅವರಿಗೆ ಧನ್ಯವಾದಗಳು ಹೇಳಬೇಕೆಂದು ನೆನೆದು ಮಾತನಾಡಲು ಪ್ರಯತ್ನ ಪಟ್ಟರು ಆದರೆ ಧ್ವನಿಯು ಗಂಟಲಲ್ಲಿ ಉಳಿದು ಕೊಂಡಿತು. ಕಣ್ಣಲ್ಲಿ ನೀರು ತುಂಬಿತು ಕೈಮುಗಿದರು. ಆವರ ಈ ದಯನೀಯ ಸ್ಥಿತಿ ಕಂಡು ಮರುಗದ  ಯಾರೂ ಅಲ್ಲಿ ಇರಲಿಲ್ಲ. ಮನಸ್ಸಿನಲ್ಲಿ ನಾಣುವನ್ನು ನಿಂದಿಸಿದರು. ಎಂತಹಾ ಸ್ಥಿತಿಗೆ ನಾಣು ತನ್ನ  ಪತ್ನಿಯನ್ನು ದೂಡಿದರು… ಛೇ…

ಎಂದುಕೊಳ್ಳುತ್ತಾ ಎಲ್ಲರೂ ಅವರವರ ಮನೆಗೆ ಹೊರಟು ಹೋದರು. ಕಲ್ಯಾಣಿಯು ಪಡಸಾಲೆಯಲ್ಲಿ ಇದ್ದ ಕುರ್ಚಿಯಲ್ಲಿ ಕುಳಿತು ಕೊಂಡರು. ಈ ಮನೆ ಈಗ ನಮ್ಮದಲ್ಲ ಇಲ್ಲಿ ನನ್ನ ಮಕ್ಕಳ ಮಾತಿನ ನಗುವಿನ ಕಲರವವಿಲ್ಲ ಅವರ ಓಡಾಟವಿಲ್ಲ. ಅಯ್ಯೋ ನಾನೆಂತಹ ನತದೃಷ್ಟ. ಜೊತೆಗೆ ಮಕ್ಕಳೂ ಇಲ್ಲ ಪತಿಯೂ ಇಲ್ಲ. ನಾನು ಕೂಡಾ ಅವರ ಜೊತೆಗೆ ಹೋಗಿದ್ದರೆ ಚೆನ್ನಾಗಿತ್ತು. ಈಗ ನನಗೆ ಉಳಿಯಲು ಮನೆಯಿಲ್ಲ ಬಾಳಲು ಸಂಸಾರವಿಲ್ಲ. 

ಒಬ್ಬೊಂಟಿಯಾಗಿ ಹೀಗೆ ಇಲ್ಲಿ ಅನ್ಯರ ಜೊತೆ ಅವರು ಬರುವವರೆಗೆ ಹೇಗೆ ಇರುವುದು? ಎಂದು ಚಿಂತಿಸುತ್ತಾ ತನ್ನ ಪರಿಸ್ಥಿತಿಯನ್ನು ಹಳಿದುಕೊಳ್ಳುತ್ತಾ ಕುಳಿತಿರುವಾಗ ಜೀಪು ಬರುವ ಸದ್ದು ಕೇಳಿಸಿತು. ತನ್ನ ಪತಿ ಹಾಗೂ ಮಕ್ಕಳು ಬಂದರು ನನ್ನನ್ನು ಬಿಟ್ಟಿರಲು ಅವರಿಂದ ಸಾಧ್ಯವೇ? ಭಗವಂತ ಕೊನೆಗೂ ನನ್ನ ಮೊರೆ ಕೇಳಿದೆ ಎಂದುಕೊಳ್ಳುತ್ತಾ ಎದ್ದು ಓಡುವ ನಡುಗೆಯಲ್ಲಿ ಆತುರವಾಗಿ ಮುಖ್ಯ ದ್ವಾರದ ಕಡೆಗೆ ಹೋಗುವಾಗ ಹಜಾರದ ಕಂಬಕ್ಕೆ ಡಿಕ್ಕಿ ಹೊಡೆದರು. ತಲೆ ಆ ಕಂಬಕ್ಕೆ ಜೋರಾಗಿ ತಾಗಿತು.  ಅದು ಯಾವುದೂ ಅವರ ಗಮನಕ್ಕೆ ಬರಲಿಲ್ಲ. ಮುಖ್ಯ ದ್ವಾರದ ಬಳಿಗೆ ಓಡಿದರು. ಮನೆಯ ಮುಂದೆ  ಜೀಪು ಬಂದು ನಿಂತಿತು. ಪತಿ ಹಾಗೂ ಮಕ್ಕಳು ಬಂದರು ಎಂದು ಬಹಳ ಸಂತೋಷಗೊಂಡರು. ರಾತ್ರಿಯಾಗಿದ್ದರಿಂದ ಕತ್ತಲೆಯಲ್ಲಿ ಜೀಪಿನಿಂದ ಇಳಿದವರು ಯಾರು ಎಂದು ಕಾಣುತ್ತಿರಲಿಲ್ಲ. ಇಬ್ಬರು ಗಂಡಸರ ಅಸ್ಪಷ್ಟ ಆಕೃತಿ ಮನೆಯ ಕಡೆಗೆ ಬರುತ್ತಿರುವುದು ಕಂಡರು. ಜೊತೆಗೆ ಇಬ್ಬರು ಹೆಂಗಸರ ಅಸ್ಪಷ್ಟ ಆಕೃತಿಯೂ ಜೀಪಿನಿಂದ ಇಳಿಯುತ್ತಾ ಇರುವುದು ಕಂಡಿತು. ಕಲ್ಯಾಣಿಯ ಮನಸ್ಸಲ್ಲಿ ಈಗ ಆಶಂಕೆ ಮೂಡಿತು. ಯಾರು ಇಲ್ಲಿಗೆ ಬರುತ್ತಿರಬಹುದು? ಅಸ್ಪಷ್ಟವಾಗಿ ಇದ್ದರೂ ನನ್ನ ಪತಿ ಹಾಗೂ ಮಕ್ಕಳಂತೆ ತೋರುತ್ತಿಲ್ಲ. ಕಲ್ಯಾಣಿಯ ನಡಿಗೆ ನಿಧಾನವಾಯಿತು. ಜೀಪಿನಿಂದ ಇಳಿದವರು ತನ್ನೆಡೆಗೆ ಬರುತ್ತಾ ಇರುವುದರ ಅರಿವು ಕಲ್ಯಾಣಿಗೆ ಆಯಿತು. ಬೆಳಗ್ಗಿನಿಂದ ಅನ್ನ ನೀರು ಸೇವಿಸದ ಕಲ್ಯಾಣಿಯ ಕಣ್ಣು ಮಂಜಾಗಿ ಕತ್ತಲಾಯಿತು. ಮುಂದೆ ಹೆಜ್ಜೆ ಇಡಲು ಸಾಧ್ಯವಾಗದೇ ತಲೆ ತಿರುಗಿ ಇನ್ನೇನು ಅವರು ಬೀಳಬೇಕು ಎನ್ನುವಷ್ಟರಲ್ಲಿ ಬಲಿಷ್ಠವಾದ ಕರಗಳು ಅವರನ್ನು ಬೀಳದಂತೆ ಮೆಲ್ಲನೆ ಹಿಡಿದುಕೊಂಡಿತು.


Leave a Reply

Back To Top