ಶಾಲಿನಿ ಕೆಮ್ಮಣ್ಣುಕವಿತೆ-ಭರವಸೆಯ ಭಾಸ್ಕರ

ಮೂಡಣದಿ ಮುಂಜಾನೆ ಮೂಡಿದ ಸೂರ್ಯ
ಚೆಲ್ಲಿದ ಬಾನಂಗಳದಿ ಕೆಂಪು ಓಕುಳಿಯ

ಏರುತ ನಭದಲಿ ಬೆಳಕಿನ ಸಿರಿ ತೇರ
ಉದಯಿಸಿದ ಜಗಕೆ ಮನಮೋಹಕ ನೇಸರ

ಮಂಜಿನ ಮುಸುಕಿಗೆ ಇಕ್ಕುತ ಕಚಗುಳಿ
ಸಾಗುವ ಸಾಲು ಹಕ್ಕಿಗಳ ಚಿಲಿಪಿಲಿ

ಮೇಘ ರಾಶಿಗೆ ಎರಚಿದ ಬಣ್ಣದ ಚಿತ್ತಾರ
ಮಬ್ಬನು ಭೇದಿಸಿ ಪ್ರಕಟಿಸಿದ ಬೆಳಕಿನ ಸರದಾರ

ಪಶ್ಚಿಮದಿ ಮುಸ್ಸಂಜೆ ಮತ್ತೆ ರಂಗನು ಚೆಲ್ಲಿ
ತರತರದ ವಿನ್ಯಾಸಗಳು ಮುಗಿಲೊಡಲಲ್ಲಿ

ಮತ್ತೆ ವಿಹಗಗಳ ಸಾಲು ಕಲರವದಿ ಹಾರಿ
ತಂಗಾಳಿ ದಣಿದ ಮೈಮನಗಳ ಸವರಿ

ಸೋತ ಮನಗಳಿಗೆ ಸಾಂತ್ವಾನ ಹೇಳಿದಂತೆ
ಖುಷಿಯ ಮನಸುಗಳಿಗೆ ಆನಂದ ತಂದಂತೆ

ಒಡಲ ಕಣ್ಣಿಗೆ ಸವಿಯೂಟ ಉಣಿಸಿದ
ಸೌಂದರ್ಯ ರಾಶಿಯ  ಆಗಸದಿ ಮೂಡಿಸಿದ

ಮೇಲೇರುತ  ದಿನಕರನ ಜ್ವಾಲೆ ಪ್ರಖರ
ಹೊಂಬಿಸಿಲು ಕೆಂಬಿಸಲಾಯ್ತು ಅಗ್ನಿಯ ಪ್ರಕಾರ

ತಡೆಯಲಾರೆವು ನಾವು ಬೆಂಕಿಯ ಅಬ್ಬರ
ಭುಗಿಲೆದ್ದಿತು ಎಲ್ಲೆಲ್ಲೂ ಬೇಗುದಿಯ ಹಾಹಾಕಾರ

ಸುಡು ಬೇಸಿಗೆಗೆ ಬದುಕು ಬರ್ಬರ
ಜಲ ಕ್ಷಾಮಕ್ಕೆ ಜನ ಜೀವನ ತತ್ತರ

ನಗುತಿಹನು ಅಟ್ಟಹಾಸದಿ ದಿವಾಕರ
ಕೊಡುತಿಹನು ಮನುಜನ ಸ್ವಾರ್ಥಕ್ಕೆ ಉತ್ತರ

ಕೆನ್ನಾಲಿಗೆಯ ಚಾಚಿ ಸುಡುತಿಹನು ಪ್ರಭಾಕರ
ದಾಹದಿ ದಣಿದುಹುದು ಜೀವ ಸಂಕುಲ ತೀರ

ಹುಟ್ಟಲು ತಂಪು ಇಳಿಯಲು ಸೊಂಪು ಬೀರಿ
ಮೇಲೇರಲು ದರ್ಪದ ಜೊಂಪೆಂಬ ಸಂದೇಶ ಸಾರಿ

ಬರುವನೇ ಮತ್ತೆಂದೂ ಭರವಸೆಯ ಭಾಸ್ಕರ
ತಂಪಾಗಿ ಸೊಂಪಾಗಿ ಬೆಳಕಿನ ಮಹಾಪೂರ
ತರುವನೆ ಇಳೆಯ ಮೈ ತುಂಬುವ ಐಸಿರ
ಸೃಷ್ಟಿಯ ಉಸಿರನು ಮಾಡುವನೆ ಉದ್ಧಾರ


One thought on “ಶಾಲಿನಿ ಕೆಮ್ಮಣ್ಣುಕವಿತೆ-ಭರವಸೆಯ ಭಾಸ್ಕರ

Leave a Reply

Back To Top