ಕಥಾ ಸಂಗಾತಿ
ಮಾಳೇಟಿರ ಸೀತಮ್ಮ ವಿವೇಕ್
ನ್ಯಾನೊ ಕಥೆಗಳು
ನಿರ್ಧಾರ
ಸೋನ ವಿದ್ಯಾವಂತೆ, ಉದ್ಯೋಗದಲ್ಲಿದ್ದಳು. ತಂದೆ ನೋಡಿದ ನಿರುದ್ಯೋಗಿ ಆದರೆ ಉನ್ನತ ವ್ಯಾಸಂಗ ಮಾಡಿದ ಗಂಡನ್ನು ವರಿಸುತ್ತಾಳೆ. ಆಕೆ ಕೆಲಸ ಬಿಟ್ಟು ಆತನ ಮನೆಯ ಆಕೆಗೆ ಸಂಭಾವನೆ ದೊರಕದ ವ್ಯವಹಾರಕ್ಕೆ ಕೈ ಜೋಡಿಸುತ್ತಾಳೆ. ಆತನೂ ದೊಡ್ಡ ಸಂಬಳದ ಉದ್ಯೋಗ ದಕ್ಕಿಸಿಕೊಳ್ಳುತ್ತಾನೆ. ಮಕ್ಕಳಾಗುತ್ತವೆ. ನಂತರ ಸೋನ ಜೀವನ ಏರುಪೇರಾಗುತ್ತದೆ. ಮಕ್ಕಳ ಲಾಲನೆ ಪಾಲನೆಯಲ್ಲಿ ಆಕೆ ಸಂಪೂರ್ಣ ಗಂಡನ ಅವಲಂಬನೆಗೆ ಬರುತ್ತಾಳೆ. ದೊಡ್ಡ ಖರ್ಚುಗಳನ್ನು ಎಲ್ಲರಿಗು ಹೇಳಿಕೊಂಡು ಮಾಡುತ್ತಿದ್ದ ಆತ, ತನ್ನ ಹೆಂಡತಿ ಚಿಕ್ಕ ಪುಟ್ಟ ವಿಷಯಕ್ಕೂ ಅವಲಂಬಸಿರುವುದನ್ನು ದ್ವೇಷಿಸುತ್ತಿರುತ್ತಾನೆ. ಆಕೆಯ ಸೂಕ್ಷ್ಮ ವಿಚಾರಗಳ ನಿರ್ವಹಣೆಯನ್ನೂ ನಿರ್ಲಕ್ಷಿಸಿ, ಕಾಳಜಿಯೇ ತೋರದಿದ್ದಾಗ ಕುಟುಂಬದಲ್ಲಿ ಅನಾರೋಗ್ಯ ವಾತಾವರಣ ಬೆಳೆಯುತ್ತದೆ. ಒಂದು ದಿನ ಸೋನ ದೃಢವಾಗಿ ನಿರ್ಧರಿಸಿ ಗಂಡ, ಮಕ್ಕಳನ್ನು ತೊರೆಯದೆ ಮನೆಯಿಂದಲೇ ಹಣ ಗಳಿಸುವ ಮಾರ್ಗ ಹುಡುಕಿ ತನ್ನ ವಿಚಾರದಲ್ಲಿ ಗಂಡನ ಅವಲಂಬನೆ ಸಂಪೂರ್ಣ ತೊರೆದು, ತಾಳ್ಮೆಯಿಂದ ಇದ್ದು ಎಲ್ಲರನ್ನು ಕ್ಷಮಿಸಿ ಕುಟುಂಬವನ್ನೂ ಉಳಿಸಿಕೊಂಡು ಸಾಧನೆ ಮಾಡಿ ಸಮಾಜಕ್ಕೂ ಮಾದರಿಯಾಗುತ್ತಾಳೆ.
*******
ಕರ್ಮಫಲ
ಚಂದು ಹರೆಯದಲ್ಲಿ ಒಬ್ಬಾಕೆಯನ್ನು ಅತಿಯಾಗಿ ಪ್ರೀತಿಸಿ ಮಗು ಹಡೆಯುವಂತೆ ಮಾಡಿರುತ್ತಾನೆ. ಆದರೆ ಮುಂದೆ ಕುಟುಂಬದವರು ಚಂದುವಿಗೆ ತಮ್ಮ ಕುಲದ ಹೆಣ್ಣಿನೊಂದಿಗೆ ಮದುವೆ ಮಾಡಿಸುತ್ತಾರೆ. ಏಕೆಂದರೆ ಆತನ ಪ್ರೇಯಸಿಯಾಗಿದ್ದವಳು ವೇಶ್ಯೆ ಸಂತಾನ ಎಂದು. ವಿಧಿಯಾಟ ಚಂದುವಿನ ಭವಿಷ್ಯತ್ ಕಾಲದಲ್ಲಿ ಆತನ ಈಗಿನ ಮಗನಿಗೆ ಸೊಸೆಯಾಗಿ ಬರಬೇಕಿದ್ದವಳು ಆ ವೇಶ್ಯೆ ಸಂತಾನದವಳ ಮಗನೊಂದಿಗೆ ಓಡಿಹೋಗಿ ಮದುವೆಯಾಗುತ್ತಾಳೆ. ಆಕೆ ಉತ್ತಮ ಕುಟುಂಬಕ್ಕೆ ಸೇರಿದವಳಾಗಿ ವಿದ್ಯಾವಂತೆ ಆಗಿದ್ದರೂ, ಆತನನ್ನು ಮದುವೆಯಾದ ವಿಧಿಯಾಟದ ಕಾರಣ ಅವರಿಬ್ಬರ ತಂದೆಯರು ತಮ್ಮ ಹರೆಯದಲ್ಲಿ ನಿಜವಾಗಿಯೂ, ಆಳವಾಗಿಯೂ, ನಿಷ್ಕಲ್ಮಶವಾಗಿಯೂ ಪ್ರೀತಿಸಿದ್ದ ಹೆಣ್ಣಿಗೆ ಜನಿಸಿದವರಾಗಿದ್ದರು. ಹಾಗಾಗಿ ಕುಲ ಗೋತ್ರವೆನ್ನದೆ ನಿರ್ಮಲ ಮಕ್ಕಳನ್ನು ವಿಧಿ ಒಂದು ಮಾಡಿತ್ತು. ಚಂದುವಿಗೆ ಕರ್ಮಫಲವನ್ನು ತಿಳಿಸಿತ್ತು.
ಮಾಳೇಟಿರ ಸೀತಮ್ಮ ವಿವೇಕ್