ಲಹರಿ ಸಂಗಾತಿ
ರುದ್ರಾಗ್ನಿ
“ಮಂಗಳವಾರದ ಮನದಾಳದ ಮಾತು”
ನನ್ನ ಕವನಗಳ ಸಂಕಲನ ಮಾಡುವ ದೊಡ್ಡ ಕನಸು ಬಹುಷಃ ನನ್ನ ಭಯದಲ್ಲೇ ನನಸಾಗದೆ ಉಳಿದಿದೆ.
ಸತತ ಎರಡು ವರುಷಗಳಿಂದ ಗೀಚುವೆ. ಗೀಟು ಚಿತ್ರಗಳ ಕಪ್ಪು ಗೋಳಾಕ್ಷರದ ಗಮನದಲ್ಲೇ ಗಮ್ಯವಾಗಿರುವೆ. ಎಲ್ಲರೂ ಕೇಳಿದ್ದಾರೆ. ನಿಮ್ಮ ಬುಕ್ ಬಿಡುಗಡೆ ಆಗಿಲ್ವಾ… ಹೇ ಮಾಡಿ ಪ. ಎಂದು ಹೇಳಿದವರ ಮಾತಿಗೆ ನಕ್ಕು ಸುಮ್ಮನಿರುವೆ.
… ನಾನೊಬ್ಬಳು ಕಥೆಗಾರ್ತಿಯ ?? ಆದರೆ ಕವಯತ್ರಿ…?? ಹುಹು…! ಉತ್ತರವಿಲ್ಲ… ನೀರವ ಮೌನ ನನ್ನ ಆವರಿಸಿಬಿಡುತ್ತದೆ.
ನನ್ನ ಕವಿತೆಗಳ ಹುಡುಕಾಟದ ಹಂಬಲದಲ್ಲಿ ಪದಗಳ ಪುಷ್ಕರಣಿಯಲ್ಲಿ ಒಮ್ಮೆ ಮುಳುಗಿ ಏಳಬೇಕು. ಆಗಲಾದರೂ ನಾನು ಸಾಲುಗಳ ಸಮಾಗಮ ಶಿವನ ಪಾದದ ಧೂಳಿಗಾದರೂ ಸಮವಾಗಬಲ್ಲೆನಾ? ಪದಲೀಲೆಗೆ ಪವಿತ್ರವಾಗಬಲ್ಲೆನಾ? ತಿಳಿಯದ ಶೂನ್ಯ.
ಶೂನ್ಯವೇ ಚೆನ್ನ. ನನ್ನ ಬಿಟ್ಟು ಬಿಡ್ರಪ್ಪ ಎಂದು ಕೈ ಮುಗಿದು ಕುಳಿತದ್ದದ್ದು ಇದೆ.
ಒಂದಷ್ಟು ಆತ್ಮೀಯ ಗೆಳೆಯರು ಬೆನ್ನಿಗೆ ದುಂಬಾಲು ಬಿದ್ದು ಕವಿತೆಗಳನ್ನೆಲ್ಲಾ ಒಟ್ಟುಗೂಡಿಸಿ ಸಂಕಲನ ಮಾಡು, ಎನ್ನುವ ಪ್ರೋತ್ಸಾಹ ಕೊಟ್ಟರೂ ನಾನಿನ್ನು ಪೆದ್ದು ಗಡಿಗೆಯ ಮೆತ್ತನೆ ಮಣ್ಣು ಕಣಪ್ಪ. ಸುಟ್ಟು ಗಟ್ಟಿಯಾಗಬೇಕು ಎಂದು ನನ್ನ ಬುದ್ದಿ ಮಟ್ಟಕ್ಕೆ ಉತ್ತರಿಸಿ ನಕ್ಕರೆ, ಹೆಸರಲ್ಲೇ ಅಗ್ನಿ ಇಟ್ಟುಕೊಂಡು ಸುಡಲು ಇನ್ನೆಷ್ಟು ಕಾಲ… ಇನ್ನೇನು ಸುಟ್ಟು ಬೂದಿಯಾಗಬೇಕಾ? ಎಂದು ಕಾಲು ಎಳೆದು ಬೈಯುತ್ತಾರೆ.
ಅವರ ಮಾತೇನೋ ಸತ್ಯ. ಆದ್ರೆ ಅವರನ್ನು ಮರು ಪ್ರಶ್ನಿಸದೆ ನಾನು ಬಿಡಲಾರೆ. ಸರಿ ಕವಿತೆ ಅಂದರೇನು. ಅದು ಜಸ್ಟ್ ಸಾಲುಗಳಲ್ಲ. ನನಗೆ ಅದು ನನ್ನೊಳಗೆ ಹುಟ್ಟುವ ಜ್ಞಾನದ ಮರುಹುಟ್ಟು. ಅದನ್ನು ಓದಿದ ಪ್ರತಿ ಒಬ್ಬನಿಗೂ ಅದರ ಬೆಚ್ಚನೆ ಭಾವ ತಟ್ಟಿ ಕಣ್ಣು ಮುಚ್ಚಿ ಉಸಿರು ಬಿಗಿ ಹಿಡಿದು ತುಟಿ ಅಂಚಿನ ನಗುವಲ್ಲೋ/ ಮೀಸೆ ಮರೆಯಲ್ಲೊ/ ಸುಕ್ಕುಗಟ್ಟಿದ ಸೌಂಧರ್ಯದಲ್ಲೋ/ ರತಿ ಚಿಪ್ಪಿನ ಮುತ್ತಿನಂತೆ / ಸ್ವಾತಿ ಮಳೆಯಲ್ಲಿ ನೆನೆದ ಅನುಭವವಾಗಿ ಅವರೊಂದು ಭಾವ ತಳೆದಾಗ ಮಾತ್ರ ನನ್ನ ಪುಟ್ಟ ಪುಟ್ಟ ಸಾಲುಗಳಿಗೆ ಸಾರ್ಥಕತೆ ಸಿಗುತ್ತದೆ ಎಂದುತ್ತರಿಸಿ ನಾನೇ ಗೆದ್ದೆ ಎಂಬ ಹುಂಬತನದಿ ಕುಳಿತಿದ್ದೆ…
ಆಗ ತೂರಿ ಬಂದ ಅವನ ಕಂಚಿನ ಕಂಠ. …..
ಹುಚ್ಚಿನ ಪರಮಾವಧಿ ಅಂದ್ರೆ ನಿನ್ನ ನೋಡೇ ಹೇಳಿರಬೇಕು ಕಣೆ. ಇಷ್ಟೆಲ್ಲಾ ಹೇಳುವ ಭಾವಂತರಂಗ ಮಾತು ಅದು ಹೇಗೆ ಶೂನ್ಯ ನಾನು ಅರಿಯೆ. ಆದ್ರೆ ಶೂನ್ಯ ಆಕಾಶದಲ್ಲೇ ಮೋಡ ಕಟ್ಟಿ ಸ್ವಾತಿ ಮುತ್ತಾಗುವುದು ಅನ್ನುವ ಪಾಠ ಮರಿಯಬೇಡ. ನಿನ್ನ ಹೃದಯದ ಮಾತಿಗೆ ಮಾತ್ರ ಅಲ್ಲ ನಿನ್ನ ಬರವಣಿಗೆಗೆ ಒಂದಷ್ಟು ಒತ್ತು ಕೊಟ್ಟು ಪುಸ್ತಕ ಮಾಡು ಎಂದು ಫೋನ್ ಕುಕ್ಕಿದ್ದ.
ನಾನು ಇದೊಂದು ಬಿಡಲಾರದ ಭೂತ ಎಂದು ಮತ್ತೆ ಸುಮ್ಮನಾಗಿದ್ದೆ. ಒಂದು ವಾರದ ನಂತರ ಮತ್ತೆ ಫೋನ್ ಬಡೆದುಕೊಳ್ಳುತಿತ್ತು. ಫೋನ್ ಮೇಲೆ ಮೂಡಿದ ಆರ್ಕೆ ಎಂಬ ಈ ಅಕ್ಷರಗಳೇ ಸಾಕು ಎಷ್ಟೇ ಬ್ಯುಸಿ ಇದ್ದರೂ ಮಾತಾಡಬಾರದು ಎಂದುಕೊಂಡರು ಆಗುವುದಿಲ್ಲ.
ಫೋನ್ ಎತ್ತಿ “ಹು….” ಎಂದುರಾಗ ಎಳೆದಾಗ ನಾನು ಹೇಳಿದ್ದು ಯಾವ ತೀರ್ಮಾನಕ್ಕೆ ಬಂದೆ…? ಎನ್ನುವ ಪ್ರಶ್ನೆ ಕಿವಿಗೆ ಕರ್ಕಶವಾಗೆ ಕೇಳಿತ್ತು.
ನಿನಗೆ ನನ್ನ ಕವಿತೆಗಳ ಹುಚ್ಚು ಯಾಕೆ…? ನಿನ್ನ ಕವಿತೆಗಳ ರೂಪ ರೇಷುಗಳಿಗಿಂತ ನನ್ನ ಸ್ಮಶಾನ ಮೌನದ ಸಾಲುಗಳಿಗೆ ಏಕೆ ನೇಣು ಹಾಕಿಕೊಳ್ಳುವ ಹುಂಬತನ.
ಅಯ್ಯೋ ಜಂಭದ ಹೆಣ್ಣೇ ಹುಂಬತನವಲ್ಲ ಹರುಷತನ. ನಿನಗೆಲ್ಲಿ ಅರಿವಾಗಬೇಕು ? ಆರಾಧಿಸುವ ಪದಗಳ ಅಕ್ಷರಗಳನ್ನು ಪುಸ್ತಕದ ಅಚ್ಚಿಗೊತ್ತಿ ಅದರ ಘಮಲನ್ನು ಮೂಗಿಗೆ ಏರಿಸಿಕೊಂಡು ನಶೆಯಲ್ಲಿ ಓದುವ ಅಮಲು ನೀನು ಬಲ್ಲೆಯ… ರುದ್ರಾಗ್ನಿ.. ? ನಿನ್ನ ಬರಹದ ತಾಪ ತಟ್ಟಿ ಈ ಕವಿ ಮನ್ಮಥ ಸುಟ್ಟು ಭಸ್ಮವಾಗುವ ಭಕ್ತಿಗೆ ನಿನ್ನ ಕವಿತೆಗಳ ಒಂದಷ್ಟು ಅಚ್ಚೋತ್ತಿದ್ದ ಆ ಬಿಳಿಯ ಹಾಳೆಯ ಕಪ್ಪು ಮುತ್ತುಗಳ ಭಾಗ್ಯ ಅದಮ್ಯವಾಗಿ ಸಿಕ್ಕರೆ ನಾ ಪಡೆದ ಪುಣ್ಯ…
ಉಫ್…! ಇದೆಲ್ಲಾ ಹೇಳಲು ಚೆನ್ನ. ಅಷ್ಟು ಸುಲಭದ ಮಾತಲ್ಲ… ಕವಿ… ! ನಿಮ್ಮ ಬರಹದ ಮುಂದೆ ಸೋತು ಶರಣಾದ ಮೇಲೆ ನನ್ನ ಸಾಲುಗಳು ಕೂಡ ನಿಮ್ಮ ಸಾತ್ವಿಕ ಪೂಜೆಗಾಗಿ. ಗಹನವಾಗಿ ಗಮಕಗಳಾಗಿ ನಾದವಾಗಲಿ. ನರ್ಮದೆಯು ಶಿವನಿಗಾಗಿ ಉಕ್ಕಿ ಹರಿಯುವಂತೆ ಈ ಶೃತಿ ನಾದವಾಗಿ ಆ ನಿಮ್ಮ ಪರಿಭಾಷೆಯ ಕನ್ನಡದ ನುಡಿಗಳ ನಾಲಿಗೆಯಲ್ಲೇ ಝೇಂಕರಿಸಲು ಇಷ್ಟ ಪಡುವೆ. ಹೊರತು ಅಚ್ಚೋತ್ತಿದ ಗೆದ್ದಲು ಹಿಡಿಯುವ ಹಾಳೆಗಳ ಪಟ್ಟಿಗೆ ಸೇರಲಾರೆ…
ಅಬ್ಬಾ…! ನಿನ್ನನ್ನು ಅಷ್ಟು ಸುಲಭದಲ್ಲಿ ಒಪ್ಪಿಸಲು ಸಾಕ್ಷತ್ ರುದ್ರನೇ ಧರೆಗೆ ಇಳಿದು ಬರಬೇಕೇನೋ? ನಾ ಕಾಣೆ. ಸರಿ ಇನ್ನು ಈ ಬಗ್ಗೆ ಚರ್ಚಿಸಲಾರೆ. ಒಂದು ಮಾತು ನೆನಪಿರಲಿ. ನೀನು ಅಭಿಮಾನದಲಿ ಹುಚ್ಚಿಯಾದರೆ ಹುಚ್ಚು ಬಿಡಿಸುವ ವೈಧ್ಯಕೀಯ ಪದವಿ ಪಡೆದ ನಾನು ಸುಮ್ಮನೆ ಕೂರಲಾರೆ.
ನನಗೆ ನಗು ತಡೆಯಲಾಗಲಿಲ್ಲ. ಆ ನಗು ಅಂದಿಗೆ ಕೊನೆಯಾಗಿತ್ತು. ಈ ವಿಚಾರ ನಡೆದು ಒಂದು ವರುಷಗಳೇ ಕಳೆದು ಹೋಯಿತು… ಮಾತೆಲ್ಲ ಮೌನಕ್ಕೆ ತಿರುಗಿತ್ತು.
ಅವನ ಕನಸೊಂದು ನನ್ನ ಇಂದಿಗೂ ಕಾಡದೆ ಇರಲಾರದು… ಕೃತಿಯ ಕನಸು ಕಾವ್ಯದ ಕೂಗು ಆ ಟಿಟ್ಟಿಬ್ಬನ ಧ್ವನಿಯಲ್ಲಿ ಕೂಗುತ್ತೆ… ಅವನ ಕಥೆ ಕವಿತೆಯಲ್ಲೆ ಬಿದ್ದು ಒದ್ದಾಡುವ ನನ್ನ ಬದಲಾಯಿಸಲು ಬರೆಯುವುದನ್ನೆ ನಿಲ್ಲಿಸಿ ನನ್ನ ಬರಹಕ್ಕಾಗಿ ಕಾದು ಕುಳಿತಿರುವ ಕವಿಗೆ ನಾನು ಹೇಗೆ ಉತ್ತರಿಸಲಿ…?
ಅವರ ಬರಹ ಮಾತ್ರ ಇಂದಿಗೂ ಉಸಿರಿಗೆ ಅಂಟಿದ ಘಾಟಿನ ಹಾಗೆ. ಅದ್ಯಾವ ರೋಗವೋ ಎಂದು ಬಯ್ಯುತ್ತಿದವನ ಮೌನ ಕೋಪ ಎಲ್ಲವೂ ನನ್ನ ಕಾವ್ಯಕ್ಕಾಗಿ..
ನಾನು ಮತ್ತದೆ ಶೂನ್ಯ… ಮಳೆ ಸುರಿಯಲು ಗಳಿಗೆ ಕೂಡಿ ಬರುವುದೋ ಇಲ್ಲವೋ ನಾ ಕಾಣೆ. ಅವನು ಹೇಳಿದಂತೆ ಆಕಾಶ ನಾನಲ್ಲ. ಬರಿ ಶೂನ್ಯದ ಗಮ್ಯ ಅಲ್ಲಿ ಕೇವಲ ಪದಗಳ ಬಿರುಗಾಳಿ. ಸಾಲು ಸಾಲು ನೋವಿನ ಸಾಲುಗಳ ಸ್ಮಶಾನ ಮೌನ. ಆ ಬಿರುಗಾಳಿಗೆ ಸಿಕ್ಕಿ ಹವಣಿಸುತ್ತಿರುವಾಗ ಪದಗಳು ಕೈಗೆ ಸಿಕ್ಕಿದಾಗ ಮತ್ತೆ ಬದುಕುವೆ. ಬರೆಯುವೆ… ಬದುಕುವೆ… ಬರೆಯುವೆ…
ಕಾವ್ಯವಾಗಲಾರೆ…
ಈ
ರುದ್ರಾಗ್ನಿ