ಕಾವ್ಯ ಸಂಗಾತಿ
ಸುಪ್ತದೀಪ್ತಿ
ಶಿವ ಶಕ್ತಿ
ಜೀವಜಗತ್ತು ಪುಟಿದೇಳುತ್ತದೆ
ನನ್ನ ಪುಟ್ಟ ಕಿಟಕಿಯ ಹೊರಗೆ
ಗೋಡೆಯಾಚೆಗೆ ಬಳ್ಳಿ ಹಬ್ಬಿದೆ
ಸುತ್ತ ಉಸಿರೂ ಕೊನರುತ್ತಿದೆ
ಕಂಡಷ್ಟೇ ಆಕಾಶದಲ್ಲಿ
ಕಂಡೂ ಕಾಣದ ನಕ್ಷತ್ರ
ಮಿನುಗುತ್ತ ಹೊರಳುತ್ತಿದೆ
ದಿಕ್ಕು ದೆಸೆ ತೋರುತ್ತ
ಎಲ್ಲದರೊಳಗೆ ಎಲ್ಲರೊಳಗೆ
ನಿಯಾಮಕಶಕ್ತಿ ಉದ್ದಾಮ ಶಿವ.
ಹಸುರಾಡುತ್ತದೆ, ಹೂವರಳುತ್ತದೆ
ಹಕ್ಕಿಪುಕ್ಕದ ಬೀಸು, ಚಿಟ್ಟೆಪಕ್ಕದ ಬಣ್ಣ
ಮಳೆಯ ಹನಿ, ತೊರೆಯ ದನಿ
ನಿಯತಲಯದಲಿ ಜಗದ ಬನಿ
ಬಾನಿಗೆದ್ದ ಜ್ವಾಲೆಯಲ್ಲೂ ಎಂದು
ಮುಗಿಲಾಡುವ ಮಂಜಿನಲ್ಲೂ
ಮನುಜ ಹಿಡಿತ ನಿಲುಕದಂಥ
ಅಚ್ಚರಿಗಳ ಜಾಲದೊಳಗೆ
ಎಲ್ಲದರೊಳಗೆ ಎಲ್ಲರೊಳಗೆ
ನಿರ್ಮಾತೃಶಕ್ತಿ ನಿರಂತರ ಶಿವ.
ಹೆಬ್ಬೆರಳ ಚುಂಬಿಸುವ ತೋರು
ನೇರ ನೋಡುವ ಮೂರು
ನಾಸಾಗ್ರದಲಿ ನೆಟ್ಟ ದೃಷ್ಟಿ,
ಎಳ್ಳಷ್ಟೂ ಮಿಸುಕದ ಗಾತ್ರಪುಷ್ಟಿ
ಬೆಂಕಿ ಬಿತ್ತುವ ಚಿತ್ತ
ಹಿಮದಲಿ ಕೆತ್ತಿಟ್ಟ ಚಿತ್ರ
ಜೀವ ಝಲ್ಲೆಂದಲ್ಲಿ
ವಿಲಯ ವಿಲೀನ ಪಾತ್ರ
ಎಲ್ಲರೊಳಗೆ ಎಲ್ಲದರೊಳಗೆ
ವಿಧೇಯಕಶಕ್ತಿ ಮಂಗಳ ಶಿವ.
ಸೀತಾರಾಮ ಸೇತುರಾಮನಾದಾಗ
ಗಾಂಢೀವಿಯ ಅಸ್ತ್ರ ಹೂಮಾಲೆಯಾದಾಗ
ಸೊಗಯಿಸಿದ ಕಿರುನಗು
ಅಗ್ನಿಕುಂಡದ ಸತಿಗೆ ಹಿಮಾದ್ರಿ ಸುತೆಗೆ
ಧುಮ್ಮಿಕ್ಕಿದ ಭಾಗೀರತಿಗೆ
ನೆಲೆಯಾದ ಮೆಲುನಗು
ಹಣೆಗಣ್ಣ ಕಿಡಿಗೆ ಮಸಣದ ಪುಡಿಗೆ
ಡಂಡಮರೆಂದ ಡಮರುಗದ ನುಡಿಗೆ
ಭಾಷ್ಯವಾದ ಸವಿನಗು
ಎಲ್ಲರೊಳಗೆ ಎಲ್ಲದರೊಳಗೆ
ವಿಧಾತೃಶಕ್ತಿ ಅರ್ಧಾಂಗ ಶಿವ.
ಯಾರಿದ್ದರೇನು ಜೊತೆಗೆ
ಒಂಟಿ ಪಯಣದ ಬೆಡಗು
ಒಳಹೊರಗು ಏಕವಾದಾಗ
ಬಿಡುಗಡೆಯ ಬೆರಗು
ಜೀವಜಾಲದ ಬಂಧದೊಳಗೆ
ಬಂಧಮುಕ್ತ ಜೀವದೊಸಗೆ
ಅಲ್ಲಿ-ಇಲ್ಲಿ ಎಲ್ಲೆಂದರಲ್ಲಿ
ವಾಸನಾಮುಕ್ತ ಇಂದ್ರಿಯಾತೀತ
ಪರಮಾತ್ಮಶಕ್ತಿ ಪರಮ ಶಿವ.
—————————————
ಸುಪ್ತದೀಪ್ತಿ.