ಧಾರಾವಾಹಿ-ಅಧ್ಯಾಯ –26
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಹೊಸ ಬದುಕಿನ ಮೊದಲಹೆಜ್ಜೆ
ವಧೂವರರಿಗೆ ವಿದಾಯ ಹೇಳಿ ಎಲ್ಲರೂ ಹೊರಟು ನಿಂತರು. ಸುಮತಿ ಬಾಗಿಲವರೆಗೆ ಹಿಂಬಾಲಿಸಿ ಬಂದಳು. ನವವಧು ರಾತ್ರಿ ಹೊಸಿಲು ದಾಟಿ ಹೊರಗೆ ಬರಬಾರದೆಂದು ಅಕ್ಕ ಕಣ್ಸನ್ನೆಯಲ್ಲಿ ಹೇಳಿದಳು. ಸರಿ ಎಂಬಂತೆ ಅವಳು ಬಾಗಿಲ ಬಳಿ ನಿಂತು ಎಲ್ಲರೂ ಮರೆಯಾಗುವುದನ್ನು ನೋಡುತ್ತಾ ನಿಂತಳು. ಅಕ್ಕ ಹಾಗೂ ಜೊತೆಗೆ ಬಂದಿದ್ದ ಮಹಿಳೆಯರು ಹೊರಡುವ ಮೊದಲೇ ವಧೂವರರಿಗಾಗಿ ಪ್ರಸ್ತದ ಕೋಣೆಯನ್ನು ಸಿಂಗರಿಸಿದ್ದರು. ವೇಲಾಯುಧನ್ ಸ್ವಲ್ಪ ದೂರ ಎಲ್ಲರ ಜೊತೆಗೂ ಹೋಗಿ ಕೈಯಲ್ಲಿ ಮಲ್ಲಿಗೆ ಹೂವಿನ ದಂಡೆಯನ್ನು ಹಿಡಿದು ಮನೆಗೆ ಹಿಂತಿರುಗಿ ಬಂದರು. ನವವಿವಾಹಿತರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಅಲ್ಲಿ ಮಾಡಲಾಗಿತ್ತು. ಹಣ್ಣು ಹಂಪಲುಗಳನ್ನು ಸಿಹಿ ತಿನಿಸುಗಳನ್ನು ಮೇಜಿನ ಮೇಲೆ ಇಡಲಾಗಿತ್ತು. ಅಡುಗೆ ಮನೆಯ ಒಲೆಯ ಮೇಲೆ ಹಾಲು ಸಣ್ಣ ಉರಿಯಲ್ಲಿ ಬಿಸಿಯಾಗುತ್ತಾ ಇತ್ತು. ಅಕ್ಕ ಹೇಳಿದ ಪ್ರತಿಯೊಂದು ವಿಷಯವನ್ನು ಸುಮತಿ ನೆನಪಿಗೆ ತಂದುಕೊಂಡಳು. ಪತಿ ಮನೆ ಒಳಗೆ ಪ್ರವೇಶಿಸಿ ಬಾಗಿಲ ಚಿಲಕ ಹಾಕಿದಾಗ ಸುಮತಿ ಅಲ್ಲಿ ನಿಲ್ಲಲು ಸಾಧ್ಯವಾಗದೇ ಅಡುಗೆ ಮನೆಗೆ ಹೋದಳು. ಹಾಲು ಉಕ್ಕಿ ಬರುತ್ತಾ ಇದ್ದದ್ದು ಕಂಡು ಉರಿಯುತ್ತಾ ಇದ್ದ ಸೌದೆಯ ಒಲೆಯನ್ನು ಆರಿಸಿ ಹಾಲನ್ನು ಒಂದು ಸಣ್ಣ ಪಾತ್ರೆಗೆ ಬಗ್ಗಿಸಿ ಸ್ವಲ್ಪ ಕಲ್ಲು ಸಕ್ಕರೆ ಬೆರೆಸಿ ಕುಡಿಯಲು ಹದವಾಗುವಂತೆ ಆರಿಸಿದಳು.
ಮನೆಯ ಒಳಗೆ ಬಂದ ವೇಲಾಯುಧನ್ ಮೇಜಿನ ಮೇಲೆ ಮಲ್ಲಿಗೆ ಹೂವಿನ ದಂಡೆಯನ್ನು ಇಟ್ಟು ಕೋಣೆಗೆ ಹೋಗಿ ಬಟ್ಟೆ ಬದಲಿಸಿ ಬಂದರು. ಸುಮತಿ ಇನ್ನೂ ಒಲೆಯ ಬಳಿ ನಿಂತಿದ್ದಳು. ಮನಸ್ಸಿನಲ್ಲಿ ಏನೋ ಅವ್ಯಕ್ತ ಭಯ. ಮನೆಯಲ್ಲಿ ನಾವಿಬ್ಬರೇ ಅಲ್ಲದೇ ಬೇರೆ ಯಾರೂ ಇಲ್ಲ. ಅಕ್ಕನಾದರೂ ಜೊತೆಗೆ ಇರಬಹುದಿತ್ತು ಅಲ್ಲವೇ? ಎಂದು ಯೋಚಿಸುತ್ತಾ ಇರುವಾಗಲೇ ವೇಲಾಯುಧನ್ ಬಂದು ಕೇಳಿದರು…. “ಸುಮತಿ ಇನ್ನೂ ಅಡುಗೆ ಮನೆಯಲ್ಲಿ ಏನು ಮಾಡುತ್ತಿರುವೆ?…. ಬಾ ಇಲ್ಲಿ”….ಎಂದು ಕರೆದರು.
ಅಳುಕುತ್ತಲೇ ಅವರ ಗಡುಸಾದ ಧ್ವನಿ ಕೇಳಿ ಹೆದರುತ್ತಲೇ ಅಡುಗೆ ಮನೆಯಿಂದ ಹೊರಗೆ ಬಂದಳು.
ಮರದ ಕುರ್ಚಿಯ ಮೇಲೆ ಕುಳಿತಿದ್ದ ವೇಲಾಯುಧನ್ ಅಲ್ಲಿಯೇ ತನ್ನ ಪಕ್ಕದಲ್ಲಿ ಇದ್ದ ಕುರ್ಚಿಯನ್ನು ತೋರಿಸಿ ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. ಸುಮತಿ ಮೆಲ್ಲನೆ ನಡೆದು ಬಂದಾಗ ಆ ನೀರವ ಮೌನದಲ್ಲಿ ಅವಳ ಕಾಲ್ಗೆಜ್ಜೆ ಘಲ್ ಘಲ್ ಎಂದು ಸದ್ದು ಮಾಡಿ ಮನಸ್ಸಿಗೆ ಪುಳಕವನ್ನು ಉಂಟು ಮಾಡಿತು. ಸುಮತಿ ಕುರ್ಚಿಯ ತುದಿಯಲ್ಲಿ ಕುಳಿತಳು. ವೇಲಾಯುಧನ್ ಸುಮತಿಯನ್ನು ಅಡಿಯಿಂದ ಮುಡಿಯವರೆಗೆ ಒಮ್ಮೆ ನೋಡಿದರು. ಪುಟ್ಟ ಹುಡುಗಿ ಹದಿನಾರು ತುಂಬಿದ ಹರೆಯ. ನೋಡಲು ಮುದ್ದು ಮುದ್ದಾಗಿ ಇದ್ದಳು. ಅವಳ ನೀಳ ಕಪ್ಪು ಕೇಶ ರಾಶಿ ಎಂಥವರನ್ನೂ ಸೆಳೆಯುವಂತೆ ಇತ್ತು. ನೆಲ ನೋಡುತ್ತಾ ಕುಳಿತಿದ್ದ ಸುಮತಿಯನ್ನು ಉದ್ದೇಶಿಸಿ ಕೇಳಿದರು….ನನ್ನ ಬಗ್ಗೆ ಮಾವನವರು ಏನೆಲ್ಲಾ ವಿವರವನ್ನು ಹೇಳಿದ್ದಾರೆ? ಎಂದಾಗ ಸುಮತಿ ಮೆಲುವಾಗಿ…. “ನಿಮ್ಮ ಹೆಸರನ್ನು ಹೇಳಿದ್ದಾರೆ”….
ನೀವು ಮಿಲಿಟರಿಯಲ್ಲಿ ಕೆಲಸ ಮಾಡಿದ್ದೀರಿ ಎಂದು ಹೇಳಿದ್ದಾರೆ… ಎಂದಾಗ ಅವಳ ಧ್ವನಿ ಅವಳಿಗೆ ಅರಿವಿಲ್ಲದಂತೆ ನಡುಗುತ್ತಾ ಇತ್ತು. ಇದನ್ನು ಕೇಳಿದ ವೇಲಾಯುಧನ್ ಒಮ್ಮೆ ಜೋರಾಗಿ ನಕ್ಕು…. ನನ್ನ ಊರು… ಅಪ್ಪ ಅಮ್ಮ …ನನ್ನ ಸಹೋದರರು…ಈ ಯಾವುದರ ಬಗ್ಗೆಯೂ ಹೇಳಿಲ್ಲವೇ? ಎಂದು ಕೇಳಿದರು. ಇಲ್ಲವೆಂಬಂತೆ ಗೋಣು ಅಲ್ಲಾಡಿಸಿದಳು ಸುಮತಿ…. ನಿನಗೆ ನನ್ನ ಬಗ್ಗೆ ತಿಳಿಯಬೇಡವೇ? ಎಂದು ಕೇಳಿದಾಗ ಏನೂ ಉತ್ತರಿಸದೇ ಸುಮ್ಮನೇ ಇದ್ದಳು. ಅವಳ ಸಂಕೋಚವನ್ನು ಕಂಡು ಮತ್ತೊಮ್ಮೆ ಹೇಳಿದರು….ನನ್ನ ಹೆಸರು ವೇಲಾಯುಧನ್….ನಾನು ಹುಟ್ಟಿ ಬೆಳೆದದ್ದು ಕೇರಳದ ಕೋಯಿಕ್ಕೋಡು….ನನ್ನ ವಿಧ್ಯಾಭ್ಯಾಸ ಅಲ್ಲಿಯೇ ನಡೆಯಿತು…. ನನ್ನ ಅಪ್ಪ ಅಮ್ಮನಿಗೆ ನಾವು ನಾಲ್ವರು ಗಂಡು ಮಕ್ಕಳು…. ಅದರಲ್ಲಿ ನಾನು ಎರಡನೆಯವನು”….
ಎಂದು ತನ್ನ ಪರಿಚಯವನ್ನು ಪತ್ನಿಗೆ ಮಾಡಿಕೊಡುತ್ತಿದ್ದ ವೇಲಾಯುಧನ್ ಪತ್ನಿಯ ಕಡೆಗೊಮ್ಮೆ ನೋಡಿದರು.
ಸುಮತಿಯ ನೆಲವನ್ನು ನೋಡುತ್ತಾ ಅವರು ಹೇಳಿದ ಮಾತಿಗೆ ಹೂಂ ಗುಡುತ್ತ ಇದ್ದಳು. ಬೆಳಗ್ಗಿನಿಂದ ಉಪವಾಸವಿದ್ದು ಹೆಚ್ಚು ಓಡಾಡಿದ್ದರಿಂದ ಆಯಾಸವಾಗಿ ನಿದ್ರೆ ಬರುತ್ತಾ ಇತ್ತು ಸುಮತಿಗೆ….”ಇನ್ನು ಉಳಿದದ್ದು ನಾಳೆ ಹೇಳುವೆ…. ಸರಿ ನಡೆ ನಿದ್ರೆ ಮಾಡೋಣ…. ಎಂದು ಹೇಳಿ ವೇಲಾಯುಧನ್ ಮಲಗುವ ಕೋಣೆಗೆ ಹೊರಟು ಹೋದರು. ಸುಮತಿಯು ಅಡುಗೆ ಮನೆಯ ಕಡೆ ಹೋದಳು. ಮಲಗುವ ಮುನ್ನ ಹಾಲನ್ನು ಕಲ್ಲು ಸಕ್ಕರೆ ಹಾಕಿ ಹದವಾಗಿ ಬಿಸಿ ಮಾಡಿ ಪತಿಗೆ ಕುಡಿಯಲು ಕೊಟ್ಟು ಅವರು ಕುಡಿದು ಉಳಿದ ಹಾಲನ್ನು ಕುಡಿಯಬೇಕು ಎಂದು ಅಕ್ಕ ಹೇಳಿದ್ದು ನೆನಪಾಯ್ತು. ಹಾಲು ಸ್ವಲ್ಪ ಆರಿ ಹೋಗಿತ್ತು. ಒಲೆಯಲ್ಲಿ ಇನ್ನೂ ಬಿಸಿ ಕೆಂಡವಿತ್ತು. ಅದನ್ನು ಕೆದಕಿ ಹಾಲನ್ನು ಸಣ್ಣ ಪಾತ್ರೆಯಲ್ಲಿ ಕೆಂಡದ ಮೇಲೆ ಇಟ್ಟಳು. ಅದು ಬಿಸಿಯಾಗುವುದನ್ನೇ ಕಾಯುತ್ತಾ ಕುಳಿತಾಗ ಅಮ್ಮನ ನೆನಪಾಯಿತು. ಹಾಗೇ ಯೋಚಿಸುತ್ತಾ ಕುಳಿತವಳಿಗೆ ಪತಿ ಬಂದು ಹಿಂದೆ ನಿಂತದ್ದು ಅರಿವಾಗಲಿಲ್ಲ. ಅವರು ಸಣ್ಣಗೆ ಕೆಮ್ಮಿ ಎಚ್ಚರಿಸಿದಾಗ ಅಮ್ಮನ ನೆನಪಿನಿಂದ ವಾಸ್ತವಕ್ಕೆ ಬಂದಳು. ದಡಬಡಿಸಿ ಹಾಲಿನ ಪಾತ್ರೆಯನ್ನು ಬರೀ ಕೈಯಲ್ಲಿ ಮುಟ್ಟಿದಳು. ಕೈ ಚುರ್ ಎಂದಿತು ಬಿಸಿ ತಾಕಿತ್ತು. ಬಟ್ಟೆ ಅಲ್ಲೇ ಬದಿಯಲ್ಲಿ ಇದ್ದರೂ ಪತಿಯನ್ನು ಕಂಡು ಗಾಬರಿಗೊಂಡ ಸುಮತಿ ಬಟ್ಟೆ ಹಿಡಿದು ಪಾತ್ರೆಯನ್ನು ಕೆಂಡದ ಮೇಲಿಂದ ತೆಗೆಯದೇ ಕೈಯಿಂದ ಮುಟ್ಟಿದ್ದಳು. ಬಿಸಿಗೆ ಬೆರಳು ಸುಟ್ಟಿತು ತಕ್ಷಣವೇ ಪಾತ್ರೆಯನ್ನು ಹಾಗೇ ಬಿಟ್ಟಳು. ತಿರುಗಿ ನೋಡಿದಳು ಪತಿ ಅಲ್ಲಿ ಇಲ್ಲದಿರುವುದನ್ನು ನೋಡಿ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ವೇಲಾಯುಧನ್ ಆಗಲೇ ಅಲ್ಲಿಂದ ಪುನಃ ಮಲಗುವ ಕೋಣೆಗೆ ಹೋಗಿದ್ದರು. ಗಾಜಿನ ಲೋಟವನ್ನು ತೆಗೆದುಕೊಂಡು ಅದರಲ್ಲಿ ಮುಕ್ಕಾಲು ಭಾಗ ಹಾಲನ್ನು ಬಗ್ಗಿಸಿದಳು.
ಮೆಲ್ಲನೆ ಮಲಗುವ ಕೋಣೆಯ ಬಾಗಿಲಿಗೆ ಬಂದಳು. ಕೈ ಕಾಲುಗಳಲ್ಲಿ ನಡುಕದ ಅನುಭವ ಆಯಿತು. ಆದರೂ ಸಾವರಿಸಿಕೊಂಡು ಒಳಗೆ ಅಡಿಯಿಟ್ಟಳು. ಕಾಲ್ಗೆಜ್ಜೆ ಸದ್ದಿನಿಂದ ಪತ್ನಿಯು ಕೋಣೆಗೆ ಬಂದದ್ದು ತಿಳಿಯಿತು. “ಮೇಜಿನ ಮೇಲೆ ನಿನಗಾಗಿ ಮಲ್ಲಿಗೆ ಹೂವಿನ ದಂಡೆಯನ್ನು ಇಟ್ಟಿದ್ದೇನೆ ಮುಡಿದುಕೋ…. ಎಂದರು. ಹಾಲು ತುಂಬಿದ ಗಾಜಿನ ಲೋಟವನ್ನು ಪತಿಯ ಕೈಗೆ ಕೊಟ್ಟು ಮೇಜಿನ ಮೇಲೆ ಇಟ್ಟಿದ್ದ ಮಲ್ಲಿಗೆಯ ದಂಡೆಯನ್ನು ತೆಗೆದುಕೊಂಡು ಅರ್ಧ ಶ್ರೀ ಕೃಷ್ಣನ ವಿಗ್ರಹಕ್ಕೆ ಹಾರ ಹಾಕಿ ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿ, ಕೈ ಮುಗಿದು ಬೇಡಿಕೊಂಡಳು….” ನಮ್ಮ ದಾಂಪತ್ಯ ಜೀವನವು ಸುಖ ಸಂತೋಷದಿಂದ ಕೂಡಿರಲಿ ಎಂದು ಹರಸು ಭಗವಂತ”…. ಎಂದು ಮನದಲ್ಲೇ ಪ್ರಾರ್ಥಿಸುತ್ತಾ ಉಳಿದಿದ್ದ ಹೂವನ್ನು ಮುಡಿದು ಪತಿಯ ಎದುರಿಗೆ ಬಂದು ನಿಂತಳು. ಆಗಲೇ ಅರ್ಧ ಹಾಲು ಕುಡಿದು ಮುಗಿಸಿದ್ದ ವೇಲಾಯುಧನ್ ಉಳಿದರ್ಧ ಹಾಲು ಇರುವ ಗಾಜಿನ ಲೋಟವನ್ನು ಪತ್ನಿಯ ಕೈಗೆ ಕೊಟ್ಟು ಕುಡಿಯಲು ಹೇಳಿದರು. ಪತಿಯು ಕೊಟ್ಟ ಲೋಟವನ್ನು ತೆಗೆದುಕೊಂಡು ಉಳಿದ ಹಾಲನ್ನು ನಿಧಾನವಾಗಿ ಕುಡಿದಳು. ಏಕೋ ಇಂದು ಹಾಲು ಗಂಟಲಲ್ಲಿ ಇಳಿಯುತ್ತಾ ಇಲ್ಲ ಎನಿಸಿತು ಅವಳಿಗೆ.
ಲೋಟವನ್ನು ಅಡುಗೆ ಮನೆಯಲ್ಲಿ ಇಟ್ಟು ನಿತ್ಯ ಕರ್ಮವನ್ನು ಮುಗಿಸಿ ಕೋಣೆಗೆ ಬಂದಳು. ಪತಿಯು ಕಟ್ಟಿದ್ದ ತಾಳಿಯೊಂದನ್ನು ಬಿಟ್ಟು ಉಳಿದೆಲ್ಲಾ ಆಭರಣಗಳನ್ನು ಬಿಚ್ಚಿ ಪೆಟ್ಟಿಗೆಯಲ್ಲಿ ಭದ್ರವಾಗಿ ಇಟ್ಟಳು. ಆಭರಣಗಳನ್ನೆಲ್ಲ ಬಿಚ್ಚಿ ಇಟ್ಟರೂ ಅವಳ ಸರಳ ಸೌಂದರ್ಯ ವೇಲಾಯುಧನ್ ಮನ ಸೆಳೆಯಿತು. ಸುಮತಿ ಮುಡಿದಿದ್ದ ಮಲ್ಲಿಗೆಯ ಪರಿಮಳ ಕೋಣೆಯನ್ನು ಆವರಿಸಿತ್ತು…. “ಸರಿ ಇನ್ನು ಮಲಗೋಣ… ದೀಪದ ನಾಳವನ್ನು ಕಿರಿದಾಗಿ ಇರಿಸಿ ಬಾ”…. ಎಂದು ಪತ್ನಿಗೆ ಹೇಳಿದರು.
ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು