‘ಗುಂಡಿನ ಟಿಕ್ಕಿ’ ಅನಸೂಯ ಜಹಗೀರದಾರ ಅವರ ಸಣ್ಣಕಥೆ

ಕಥಾ ಸಂಗಾತಿ

ಅನಸೂಯ ಜಹಗೀರದಾರ


‘ಗುಂಡಿನ ಟಿಕ್ಕಿ’

ಕೊನೆಗೂ ಬಿಡ್ಲಿಲ್ಲ ನೋಡ್ರಿ ನಿಮ್ಮವ್ವ”
ಶಾಂತಿ ಹೇಳುತ್ತಿದ್ದಳು.ಹೇಳುತ್ತಿದ್ದಳೇನು…ಗೋಳಾಡುತ್ತಿದ್ದಳು..
ಚೀರಾಡುತ್ತಿದ್ದಳು.ಸುಮ್ಮನೆಯೇ ಇದ್ದ ವಸಂತಪ್ಪ.
ಅದಕ್ಕೂ ಸಹನೆ ಇರಲಿಲ್ಲ ಅವಳಿಗೆ..,
“ಏನ್ ಹಂಗ ಗುಮ್ಮನ ಗುಸಗನಂಗ‌ಕುಂತ್ರ ನಡೀತದೇನ” ಗದರಿದಳು.
ಈ ಬಾರಿ ಮೌನ ಮುರಿದ ವಸಂತಪ್ಪ ಹೇಳಿದ'” ಹೇಳ ಏನ್ಮಾಡಂತೀಯ ನನ್ನ” ಕಣ್ಣೀರು ತುಂಬಿಕೊಂಡು ಮತ್ತೇ ಹೇಳಿದ””ಅವ್ವ ಹೋಗಿ ಇನ್ನ ಹತ್ತು ದಿನಾನೂ ಆಗಿಲ್ಲ.ಆಗ್ಲೇ ಸುರು ಹಚ್ಕೊಂಡಿದೀ..ಜಗತ್ನ್ಯಾಗ ಸಮಾಧಾನ ಇಲ್ಲದ ಹೆಣ್ಣ ಅಂದ್ರ ನೀನ ಬಿಡು” ನಿಟ್ಟುಸಿರಿನಿಂದ ಹೊರಬಂದ.ಬಾಗಿಲ ಹೊರತನಕ ನಡೆದ.ಆತ ಹೋಗುವುದನ್ನೇ ನೋಡುತ್ತಿದ್ದಳು ಶಾಂತಿ.
ಎಂದೂ ಆತ ತಾಯಿಯನ್ನ ಬಿಟ್ಟುಕೊಟ್ಟವನಲ್ಲ.”ಭಾರೀ ಪ್ರೀತಿ ಅವ್ವನ ಮ್ಯಾಲ..ಈತಂದು ಒಂದೀಟರ ಹೆಣ್ತೀ ಮ್ಯಾಲನೂ ಇದ್ರ ಹೆಂಗಿರ್ತಿತ್ತು..?! ಅಲ್ಲ..ಹೆಂಗರ ಇರ್ತದ..ಅಂತೀನಿ..” ಶಾಂತಿ ಸ್ವಗತದಲ್ಲಿ ಮಾತಾಡಿಕೊಳ್ಳತೊಡಗಿದಳು.ಹೊದ್ದ ಟವಲ್ ಝಾಡಿಸಿ ವಸಂತಪ್ಪ ಮನೆಯಂಗಳ ದಾಟಿ ಊರ ಗುಡಿ ಕಡೆಗೆ ನಡೆಯತೊಡಗಿದ.”ಊರ ಕಣಿವಿರಾಯ ಕಾಪಾಡಪ್ಪ ನನ್ನನ್ನ”ಅಂತ ಕೇಳಿಕೊಂಡರಾಯ್ತು ಅಂದುಕೊಂಡ.ಮತ್ತೊಮ್ಮೆ ನೆನಪಿಸಿಕೊಂಡು ನಕ್ಕ.”ಅಲ್ಲ..ಆತರ ಏನ ಮಾಡ್ಯಾನ..ಬ್ರಹ್ಮಚಾರಿ ಅವ
ಅವಗ ಗೊತ್ತಿಲ್ಲಬಿಡು ಈ ಸಂಕಟ..” ಸ್ವಗತದಲ್ಲಿ
ಮಾತಾಡಿಕೊಳ್ಳುತ್ತ ಅಲ್ಲೇ ಇದ್ದ ಅಶ್ವತ್ಥದ ನೆರಳಿನ ಕಟ್ಟೆಗೆ ಕುಳಿತುಕೊಂಡ.ಮತ್ತೊಮ್ಮೆ ಮಗದೊಮ್ಮೆ ಅವ್ವನ ನೆನಪು.ಅವಳನ್ನು ಹೂತು ಬಂದಾಗಿನಿಂದ ಇವನ ಕಣ್ಮುಂದೆ ಹೂತು ಹೋದ ನೆನಪುಗಳೆಲ್ಲ ಮರಮರಳಿ ನುಗ್ಗುತಿವೆ.ಅಲೆಅಲೆಯಂತೆ

ಚಿಕ್ಕಂದಿನಿಂದ ಗಟ್ಟಿಗಿತ್ತಿಯಾಗಿ ವಸಂತಪ್ಪನನ್ನು ಬೆಳೆಸಿ ಓದಿಸಿ ಬರೆಯಿಸಿ ಬಾಳೇವಿಗೆ ಒಂದು ಘನತೆಯನ್ನು ತಂದುಕೊಟ್ಟ ಪಾರವ್ವ ಅನ್ನುವ ಪಾರ್ವತಾದೇವಿಯ ಹ್ಯಾಂಗ ಮರೆತಾನು..? ರಕ್ತದೊಂದಿಗೆ ಅಂಟಿಕೊಂಡ ಮಮತಾಮಯಿ ಸೆಲೆಯ ವ್ಯಕ್ತಿತ್ವವನ್ನು ಶಾಂತಿಯ ಎದುರಿಗೆ ಅವಳಂತೆ ಹೇಳಿ ಮಮತೆಗೆ ಹ್ಯಾಗೆ ದ್ರೋಹ ಬಗೆದಾನು‌..? ಅಪ್ಪ ಕುಡಿದು ತೂರಾಡಿ ಬಂದು ಹೊರ ಜಗಲಿ ಕಟ್ಟೆಯ ಮೇಲೆಯೇ ನಿಂತಲ್ಲಿಯೇ ದುಬಕ್ ಅಂತ ಬಿದ್ದುಕೊಂಡಾಗ ಸಿಡಿಮಿಡಿಗೊಳ್ಳದ ಅವ್ವ”ಈತಂದು ಇಷ್ಟ..” ಅಂತ ಗೊಣಗಿಕೊಳ್ಳುತ್ತ ಆತನ ಮುಖವನ್ನು ಸೀದಾಮಾಡಿ
ಕಾಲು ಜೋಡಿಸಿ ಬೆಚ್ಚನೆಯ ಹೊದಿಕೆ ಹೊದೆಸಿ ಬರುತ್ತಿದ್ದಳು.ಗೊರಕೆ ಹೊಡೆಯುತ್ತ ನಿಶ್ಚಿಂತ ನಿದ್ದೆಗೆ ಜಾರುತ್ತಿದ್ದ ಅಪ್ಪ ಮತ್ತೇ ಮುಂಜಾನೆ ಎದ್ದಾಗ ಏನೂ ನಡೆದೇ ಇಲ್ಲವೆಂಬಂತೆ ಅವ್ವ ಆತನಿಗೆ ಕೇಟಿ,ಮಂಡಕ್ಕಿವಗ್ಗರಣೆ ನಾಷ್ಟ ಮಾಡಿಕೊಟ್ಟು ಇತ್ತ ಮಗನ ಉಪಚಾರ ಮಾಡುತ್ತಿದ್ದಳು.ಇವನ ಸ್ನಾನ ಎಲ್ಲ ಹ್ವಾರೇವು ಮುಗಿಸಿ ಮಗನನ್ನ ಶಾಲೆಗೆ ಕಳಿಸಿ ತಾನೂ ಹೊಲಕ್ಕೆ ಹೋಗುತ್ತಿದ್ದಳು.”ಈ ಬಾರಿ ಮಲ್ಲಿಗಿ ತ್ವಾಟ ಮಾಡೀನೀಯಪ್ಪಾ ನಡಬರಕ ಗುಲಾಬಿ ಅದಾವ ಅಲ್ಲಲ್ಲಿ ಶ್ಯಾವಂತಿಗಿ ಚೆಂಡು ಹೂ ಅದಾವ ಒಳ್ಳೆಯ ರೇಟ ಬಂದss ಬರ್ತದ.ನೀ ಮುಂದಿನ ಸಾಲಿಗೀ ಹೋಗ ಹೋಗ್ತೀದಿ ಮಗನೆ” ಅನ್ನುತಿದ್ಲು.ಪಾರವ್ವನ ನಿರೀಕ್ಷೆಯಂತೆ ವಸಂತಪ್ಪ ಓದಿದ.ಡಿಗ್ರಿವರೆಗೂ ಓದಿದ.ಪಾರವ್ವನಿಗೆ ಖುಶಿಯೋ ಖುಶಿ.ಮೂರೆಕೆರೆ ಹೊಲದಲ್ಲಿ ಪಾರವ್ವ ಹೂವುಗಳನ್ನು ತರಕಾರಿಗಳನ್ನು ಬೆಳೆಯುತ್ತಿದ್ದಳು. ತೆಂಗು ಮಾವು ನೆಲ್ಲಿಗಿಡಗಳೂ ಇದ್ದವು ಹೊಲದ ಬದುವಿಗೆ ಅಲ್ಲಲ್ಲಿ ಲೋಳೀಸರ,ಬೇವಿನ ಮರ ಬೆಳೆಸಿದ್ದಳು.ಆಯುರ್ವೇದ ಗಿಡಗಳ ಲೆಕ್ಕಾಚಾರ ಆಕೆಯದು.ಕಂಪನಿಯವರು ಬಂದು ಅದನ್ನು ಒಯ್ಯುತ್ತಿದ್ದರು. ಲೋಳೆ ರಸ ಫಿಲ್ಟರ್ ಆಗಿ ಬ್ರಾಂಡ್ ನೊಂದಿಗೆ ಮಾರಿಕಟ್ಟೆಗೆ ಬರುತ್ತಿತ್ತು.ಹೆಚ್ಚು ಓದಿರದ ಅವ್ವ ವ್ಯವಹಾರದಲ್ಲಿ ಪಕ್ಕಾ ನಿಷ್ಣಾತಳಾಗಿದ್ದಳು.ಅವಳ ಪ್ರಗತಿಪರ ವಿಚಾರಗಳು ವಸಂತಪ್ಪನನ್ನೂ ಒಮ್ಮೊಮ್ಮೆ ದಂಗುಬಡಿಸುತ್ತಿದ್ದವು.ಒಂದು ವಿಚಾರ ಎಂದರೆ ಗಂಡ ಸಿದ್ಲಿಂಗಪ್ಪ ಎಂದೂ ಹೆಂಡತಿಗೆ ಏನೂ ಹೇಳುತ್ತಿರಲಿಲ್ಲ.ಮೈ ಮುರಿದು ದುಡಿಯುತ್ತಿದ್ದ.ಮನದಣಿಯ ಕುಡಿಯುತ್ತಿದ್ದ.ಮಕ್ಕಳ ವಿಚಾರವಾಗಿಯೂ ತಲೆಕೆಡಿಸಿಕೊಳ್ಳದೇ ಎಲ್ಲ ಪಾರಮ್ಮನ ಮೇಲೆಯೇ ಭಾರ ಹಾಕಿ ನಿಶ್ಚಿಂತನಾಗಿದ್ದ.ಪಾರವ್ವಳಿಗೆ ಅದೇ ಭಾಗ್ಯ ಅನಿಸಿತ್ತು.ಉಳಿದ ಕಡೆ ನೆರೆ ಹೊರೆ ನೋಡಿದಂತೆ ಕುಡಿದು ಬಂದು ತೂರಾಡುತ್ತ ಮನೆಯನ್ನು ರಣರಂಗ ಮಾಡಿ,ಹೆಂಡತಿಯನ್ನು ಹೊಡೆದು,ಅಲ್ಲೊಂದು ಕ್ರೂರ ವಾತಾವರಣ ನಿರ್ಮಿಸುತ್ತಿದ್ದ ಜನರ ಮುಂದೆ ಈತನೇ ಭಾರಿ ಪಾಸ್ ಗಣಮಗ ಆಗಿದ್ದ.ಅವರೆಲ್ಲ ತಾವು ದುಡಿದುದರಲ್ಲೇ ಗಂಡನಿಗೂ ಕುಡಿಯಲು ಕೊಟ್ಡು ಚಟ ಪೋಷಿಸಿಕೊಂಡು ಬಾಳುವೆ ಮಾಡಬೇಕಿತ್ತು.ಎದುರು ಹೇಳಿದಲ್ಲಿ ಹೊಡೆತ ತಿನ್ನಬೇಕಿತ್ತು.ಸಿದ್ಲಿಂಗಪ್ಪ ಪಾರವ್ವಗ ಎದರು ಹೇಳಿದವನಲ್ಲ.ಹೊಡೆದವನೂ ಅಲ್ಲ.ಆಕೆಯೇನಾದರೂ ಗೊಣಗಿದ ದಿನ ಮತ್ತೊಂದು ಬಾಟ್ಲಿ ಹೆಚ್ಚುಗೆ  ಇಳಿಸುತ್ತಿದ್ದ ಒಡಲೊಳಗೆ.ಅದೇನು ನಶೆಯೋ..ನಿಶ್ವಿಂತನಾಗಿ ಮಲಗಿಬಿಡುತ್ತಿದ್ದ.ಹೊಲದ ಕೆಲಸ,ಹಮಾಲಿ ಕೆಲಸ,ಕಟ್ಟಡದ ಗೌಂಡಿ ಕೆಲಸ,ಮೇಸ್ತ್ರಿ ಕೆಲಸ,ಹೀಗೆ ಬಹು ವಿಧಧ ಕಸುಬುಗಳಿದ್ದವು ಆತನವು.ಬಡ ಮಂದಿ ಮನಿ ಮುಗ್ಗರಿಸಿದರೆ ಈತನೇ ಕಟ್ಟಿಕೊಡುತ್ತಿದ್ದ.ಬಡವರ ದಿಲ್ ದಾರ್ ಮೇಸ್ತ್ರಿ ಆಗಿದ್ದ.ಅಷ್ಟು ಇಷ್ಟು ಅಂತ ಅನ್ನುತಿದ್ದಿಲ್ಲ.ಕೊಟ್ಟಷ್ಟನ್ನು ಖುಶಿಯಿಂದ ಪಡೆಯುತ್ತಿದ್ದ‌ಮೈಕೈ ನೋವಿಗೆ ಪರಿಹಾರ ಎಂಬಂತೆ ಕುಡಿಯುತ್ತಿದ್ದ.ಪಾರವ್ವ ಗಂಡನ ಚಟ ಬಿಡಿಸಲು ಪ್ರಯತ್ನಿಸಿ ಸೋತು ಕೈಚೆಲ್ಲಿದ್ದಳು.ಮರ್ಯಾದೆಗಂಜಿ ಸುಮ್ಮನಾಗಿದ್ದಳು.ಮನೆ,ಮಗ ಹಲಾಕಾಗಬಾರದು ಎಂಬ ಯೋಚನೆ ಆಕೆಗೆ.ಅಂತೆಯೇ ಆಕೆಯ ಸರ್ವಸ್ವ ವಸಂತಪ್ಪ..! ಆಕೆಯ ಬಾಳಿಗೆ ವಸಂತನ ಆಗಮನದಂತೆ ಕಾಲಿರಿಸಿದ್ದೆ.ತನ್ನ ಜಾಣತನ,ಪ್ರೀತಿಯ ಮಾತುಗಳಿಂದ ಆಕೆಯ ಮಡಿಲನ್ನು ಹಸಿರಾಗಿಸಿದ್ದ.

ವಸಂತಪ್ಪನ ಡಿಗ್ರಿ ಶಹರದಲ್ಲಿ ಮುಗಿಯಿತು.ಬೇರೆ ಊರಿನಲ್ಲಿ ಸೀಟು ಪಡೆದು ಬಿಎಡ್ ಮಾಡಿದ.ಸಿಇಟಿ ಟಿಇಟಿ ಅಂತ ಬರೆದು ಹೈಸ್ಕೂಲ್ ನಲ್ಲಿ ಶಿಕ್ಷಕ ವೃತ್ತಿಗೆ ಆಯ್ಕೆಯಾದ.ಮೊದಲು ಬೇರೆ ಜಿಲ್ಲೆಗೆ ಆರ್ಡರ್ ಬಂತು. ತನ್ನೂರಿಂದ ದೂರವೇ ಇತ್ತು.ದೂರದ ಶಹಪುರದಲ್ಲಿ ಕೆಲಸಕ್ಕೆ ಸೇರಿಕೊಂಡ.ಒಂದಿಷ್ಟು ವರ್ಷ ಕಾರ್ಯನಿರ್ವಹಿಸಿದ.ಆತನ ಅನುಕೂಲಕ್ಕೆ ಮ್ಯೂಚ್ಯೂಯಲ್ ಆಗಿ ಒಬ್ಬ ದೊರೆತು ಪರಸ್ಪರ ವರ್ಗಾವಣೆಗೆ ಅರ್ಜಿ ಹಾಕಿಕೊಂಡರು.ನಿರೀಕ್ಷೆಯಂತೆ ತನ್ನೂರು ಎಂದರೆ ಬೇವೂರು ಸಮೀಪದ ಶಾಲೆಗೆ ವರ್ಗಾವಣೆ ಆಯ್ತು.ತನ್ನ ಹಳ್ಳಿಯಿಂದ ದಿನಾಲೂ ಹೋಗಿಬರುತ್ತಿದ್ದ.ಬಸ್ ನ ಅನುಕೂಲವೂ ಇತ್ತು.ತಂಗಿ ಗೌರಮ್ಮನನ್ನೂ ಪಾರವ್ವ ಓದಿಸಿದ್ದಳು.ಊರಿಗೆ ಸ್ವಲ್ಪ ದೂರದ ಮುರಾರ್ಜಿ ವಸತಿ ಶಾಲೆಯಲ್ಲಿ ತಂಗಿ ಓದಿದ್ದಳು.ಎಸ್ ಎಸ್ ಎಲ್ ಸಿ ಯಲ್ಲಿ ಚೆನ್ನಾಗಿಯೇ ಅಂಕ ತೆಗೆದು ಕೊಪ್ಪಳದ ಪಿ ಯು ಕಾಲೇಜಿಗೆ ದಾಖಲಾದಳು.ಬಸ್ ಪಾಸ್ ತೆಗೆದು ಅಡ್ಡಾಡುತ್ತ.ಅವ್ವನ ಕೆಲಸದಲ್ಲಿ ನೆರವಾಗುತ್ತ ತಂಗಿ ಪಿ ಯು ಸಿ ಯಲ್ಲಿ ಪ್ರಥಮ ಶ್ರೇಣಿಯಲ್ಲಿಯೇ ಪಾಸಾದಳು.ಮುಂದೆ ನರ್ಸಿಂಗ್ ಕೋರ್ಸ ಸೇರಿದಳು ಬೇಗ ಆರೋಗ್ಯ ಇಲಾಖೆಯಲ್ಲಿ ಕೆಲಸ ಸಿಗಬಹುದೆಂಬ ತರ್ಕ ಅವಳದು.ಕಷ್ಟಪಟ್ಟು ಓದಿ ಪಾಸಾದಳು ನಿರೀಕ್ಷಿಸಿದಂತೆ ಅವಳಿಗೂ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತು.ಹಳ್ಳಿಯ ದವಾಖಾನೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಳು.ಪಾರವ್ವ ವರನನ್ನು ಹುಡುಕಿ ಗೌರಮ್ಮನಿಗೊಬ್ಬ ಈಶಪ್ಪನನ್ನು ಜೊತೆ ಮಾಡಿದಳು.ತಂಗಿ ಗಂಡನ ಮನೆಯಲ್ಲಿ ಚೆಂದಾಗಿ ಸಂಸಾರ ಸಾಗಿಸುತ್ತ  ತನ್ನ ವೃತ್ತಿಯನ್ನು ಮಾಡುತ್ತ ತನ್ನ ಮಕ್ಕಳನ್ನೂ ಶಾಲೆಗೆ ಕಳಿಸಿ ಶಿಕ್ಷಣ ಪ್ರೇಮಿಯಾಗಿ ತಾನೂ ಅಲ್ಲಲ್ಲಿ ಸಮಾಜ ಸೇವೆ, ಸಂಘ,ಅದೂ ಇದೂ ಅಂತ ಚುರುಕಾಗಿದ್ದಳು. ಹಳ್ಳಿ ಮಕ್ಕಳಿಗೆ ಉಚಿತ ಮನೆ ಪಾಠ ಹೇಳುತ್ತಿದ್ದಳು.ಒಟ್ಟಾರೆ ಜೀವನ ನಡೆದಿತ್ತು.ಯಾವುದೂ ತೊಂದರೆ ಅಂತ ಏನೂ ಇರಲಿಲ್ಲ.ಪಾರವ್ವನ ಮತ್ತೊಂದು ಕರ್ತವ್ಯ ಮಗನ ಮದುವೆ ಮಾಡುವುದು.ವೈನಾದ ಸಂಬಂಧ ಅನ್ನುತ್ತ ತನ್ನ ತವರಿನ ದೂರದ ಸಂಬಂಧವನ್ನು ತಂದಳು.ಕರುಳು ಬಳ್ಳಿ ಬಂಧವನ್ನು ಬಿಗಿಗೊಳಿಸಲು ಅಣಿಯಾದಳು.ದೂರದ ಸಂಬಂಧಿ ಅಣ್ಣನ ಮಗಳು
ಶಾಂತಿಯನ್ನು ತಂದು ವಸಂತಪ್ಪನ ಜೋಡಿ ಮಾಡಿದಳು
ಪಾರವ್ವನ ಮಾತಿಗೆ ಹುಂಗುಟ್ಟುತ್ತ ವಸಂತಪ್ಪ ಶಾಂತಿಯನ್ನು ಬಾಳ ಸಂಗಾತಿಯನ್ನಾಗಿ ಕಾಯಾ,ವಾಚಾ,ಮನಸಾ ಸ್ವೀಕರಿಸಿದ.

ಕುಡಿದು ದಣಿದು ಆರೋಗ್ಯ ಏರುಪೇರಾಗಿಸಿಕೊಂಡಿದ್ದ ಅಪ್ಪ ಒಂದಿನ ಕಣ್ಮುಚ್ಚಿಕೊಂಡ.ಪಾರವ್ವನಿಗೆ ಏನೂ ಅನಿಸಲಿಲ್ಲ.ಒಂದಿಷ್ಟು ಅತ್ತು ಸುಮ್ಮನಾದಳು.ಎಂದೂ ಸಂಸಾರದ ನೊಗ ಹೊರದ ಆತ ಆಕೆಯ ಪಾಲಿಗೆ ಇದ್ದೂ ಇಲ್ಲವಾಗಿದ್ದ.”ಗೊರ ಗೊರ ಕೆಮ್ಮಿನ ಶಬ್ದ ಮಾತ್ರ ಇಲ್ಲದ್ಹಂಗಾತು ನೋಡು”ಅಂತ ನಗುತ್ತಿದ್ದಳು.ಅಳು ನುಂಗಿ ಬಹಳ ದಿನಗಳಾಗಿದ್ದವು.ನುಂಗಿದ ಬೆಂಕಿ ಒಡಲೊಳಗೆ ಇಳಿದು ಬೆಳಕಾಗಿ ಮಾರ್ಪಟ್ಟಿತ್ತು.ಹೀಗಾಗಿ ಆಕೆ ನಗೆ ಬೆಳಕನ್ನೇ ಚೆಲ್ಲುತ್ತಿದ್ದಳು. ಎಲ್ಲರ ಪಾಲಿಗೆ ನಗು ಸಿಗುವಂತೆ ನಗುತ್ತ ನಗಿಸುತ್ತಿದ್ದಳು.ಸದಾ ಅವ್ವನ ಕ್ರಿಯಾಶಕ್ತಿ, ಆಕೆಯ ಜವಾಬ್ದಾರಿ ನಿರ್ವಹಣೆ ಕಂಡವರಿಗೆ ಅಪ್ಪ ಒಬ್ಬ ನಿಶ್ಯಕ್ತ ನಿರಾಸಕ್ತಿಯ ವ್ಯಕ್ತಿಯಾಗಿದ್ದ.ಯಾವ ಬಂಧವೂ ಸಂವೇದನೆಯೂ ಈತನೊಂದಿಗೆ ಅವ್ವನನ್ನು ಬೆಸೆದಿರಲಿಲ್ಲ.ಕಣ್ಣೀರು ಹಾಕಿದ್ದೂ ಖರೆ ಇತ್ತು.ಅದು ತನ್ನ ಹಣೆಬರಹವ ನೆನೆದೋ ಇಲ್ಲವೆ ಅವಳವ್ವ ಹೇಳುವ ವಿಧಿಯ ಹಳಿದೋ ದೇವರ ನೆನದೋ ಕಣ್ಣು ಹನಿಗೊಂಡಿದ್ದವಷ್ಟೇ..! ವಸಂತಪ್ಪನಿಗೂ ಅಪ್ಪನ ಬಗ್ಗೆ ಅಂತಹ ಗಾಢ ಅನುಬಂಧ ಏನೂ ಇರಲಿಲ್ಲ.ರಕ್ತ ಸಙಬಂಧ‌.ಸಹಜವಾಗಿಯೇ ಸಾಯುವಾಗ ಒಂದಿಷ್ಟು ಕಣ್ಣೀರು ಹಾಕಿದ್ದ.ಮಗನಾಗಿ ಅಂತ್ಯಕ್ರಿಯೆಯ ಕರ್ತವ್ಯ ಮಾಡಿದ್ದ..! ಮಗಳಾಗಿ ಬಂದು ಗೌರಮ್ಮ ಕಣ್ಣೀರು ಹರಿಸಿದ್ದಳು.ಯಾಕೋ ಗೌರಮ್ಮನಿಗೆ ಅಪ್ಪನ ಮೇಲೆ ಅಕ್ಕರೆ ಇತ್ತು ನೋಡುವುದಕ್ಕೂ ಆಕೆ ಅಪ್ಪನಂತೆಯೇ ಇದ್ದಳು.ಆಕೆಯ  ಮಕ್ಕಳು ಕಣ್ಣೀರು ಹಾಕಿದ್ದರು.ಸಣ್ಣ ಮಕ್ಕಳವು.ತಾಯಿ ಅಳುವುದನ್ನು ನೋಡಿ ತಾವೂ ಅತ್ತವು.ಬೀಗ ಬಿಜ್ಜರೂ,ನೆಂಟರಿಷ್ಟರು ಬಂದು ಹೋದರು.ಸೂತಕದ ಮನೆ ಶಿವಗಣರಾಧನೆಯಿಂದ ಸೂತಕ ಕಳೆದುಕೊಂಡಿತು.ಮತ್ತೆ ಮೊದಲಿನಂತೆ ಮನೆಯ ಸ್ಥಿತಿ ಮರುಕಳಿಸತೊಡಗಿತು‌.ಮಾವ ಹೋದಾಗ ಶಾಂತಿಯೂ ಅತ್ತಳು.ಅವಳೂ ಮಾವನ ಅಕ್ಕರೆಯ ಸೊಸೆಯಾಗಿದ್ದಳು.ಸುಮ್ಮನೆ ಬಿದ್ದುಕೊಳ್ಳುವ ಅವನ ಮೇಲೆ ಅಕ್ಕರೆ ತೋರಿಸುತ್ತಿದ್ದಳು.ಊಟ ಉಪಚಾರ ನೋಡಿಕೊಳ್ಳುತ್ತಿದ್ದಳು‌.ಸತ್ತಾಗ ಅವಳ ಬಳಗವೂ ಬಂದಿತ್ತು.ಪಾರವ್ವ ಎಲ್ಲ ಎದುರಿಸುವ ಛಾತಿ ಉಳ್ಳವಳು.ಇದನ್ನೂ ಎದುರಿಸಿದಳು.”ಚಟಕ್ಕೆ ಬದ್ದಾವ ಒಂದಿನ ಗೊಟಕ್ ಅನ್ನದೇ ಇದ್ದಾನೆಯೇ.!”.ಅನ್ನುವುದು ಆಕೆಗೆ ಗೊತ್ತಿತ್ತು.ಆಗಾಗ ಎಲ್ಲರೆದುರು ಹೇಳುತ್ತಿದ್ದಳು ಕೂಡ..!ಒಟ್ಟಾರೆ ಈಗ ಆ ಮನೆಯಲ್ಲಿ ಕಾಲನ ಕರೆಗೆ ಓಗೊಟ್ಟ ಒಬ್ಬ ವ್ಯಕ್ತಿಯ ನಿರ್ಗಮನವಾಗಿತ್ತು.

ಆ ಮನೆಯಲ್ಲಿ ಈಗ ಹಿರಿಯರು ಮೂರು ಮಂದಿ.ಮಕ್ಕಳಿಬ್ಬರು ಸೇರಿ ಐದು ಜನ.ನೆಮ್ಮದಿ ಅಂತ ಅಂದುಕೊಂಡಿದ್ದ ವಸಂತಪ್ಪ.ಆಗಲೇ ಅಪಸ್ವರವೊಂದು ಹೊಯ್ದಾಡತೊಡಗಿತು.ಶಾಂತಿಗೆ ತನ್ನ ಎರಡು ಮಕ್ಕಳನ್ನು ದೊಡ್ಡ ಇಂಗ್ಲಿಷ್ ಶಾಲೆಗೆ ಹಾಕುವ ಬಯಕೆಯಾಯಿತು‌.ಇದಕ್ಕೆ ಕಾರಣವೂ ಇತ್ತು.ಅವಳಕ್ಕ ತನ್ನ ಮಕ್ಕಳನ್ನು ಶಹರದ ದೊಡ್ಡ ಇಂಗ್ಲಿಷ್ ಶಾಲೆಗೆ ಸೇರಿಸಿದ್ದಳು.ಶಾಂತಿ ಹಿಡಿದ ಪಟ್ಟು ಬಿಡಲಿಲ್ಲ.ಜಿಲ್ಲೆಯಲ್ಲಿ ಇವರು ನೆಲಸಬೇಕಾಯ್ತು ಪಟ್ಟಣದಲ್ಲಿ ಮನೆಯನ್ನು ಮಾಡಬೇಕಾಯ್ತು.
ಪಾರವ್ವ ಇವರೊಂದಿಗೆ ಬರಲೊಪ್ಪಲಿಲ್ಲ. “ಕಣಿವೆರಾಯ ತನ್ನ ಕಾಯ್ತಾನೆ”ಅನ್ನುತ್ತ ತನ್ನ ಹೊಲ ಮನೆ ಕೆಲಸ ಕಾಯಕದಲ್ಲಿ ನಿರತಳಾಗುತ್ತ ಹಳ್ಳಿಯಲ್ಲಿಯೇ ಉಳಿದಳು.ವಸಂತಪ್ಪ ಬಂದು ಹೋಗುವುದನ್ನು ಮಾಡುತ್ತಿದ್ದ.ಶಾಲೆ ಈ ಎರಡು ಮನೆ ಆತನ ಆದ್ಯತೆ ಆಗಿದ್ದವು.ಶಾಂತಿ ಓದಿದ್ದಳು.ಮಕ್ಕಳ ಶಿಕ್ಷಣದತ್ತ,ಆರೋಗ್ಯದತ್ತ ಲಕ್ಷ್ಯ ಅವಳಿಗೆ.ಪಾರವ್ವ ಅವಳಿಗೇನೂ ಅಲ್ಲ.ಇದಕ್ಕಾಗಿ ಭೂಮಿಯಂತಹ ಆ ಅವ್ವ ಎಂದೂ ಮಿಡುಕಲಿಲ್ಲ.”ಹಸುರೆಲಿ ಮುಂದ ಹಣ್ಣೆಲಿದ್ಯಾಕ ಹಟ” ಅಂದುಕೊಂಡಳು.ಹಣ್ಣಾದ ಎಲಿಯಂತೆ ಅವಳ ಮನಸ್ಸು ಬುದ್ಧಿ ಪರಿಪಕ್ವ ಯಾವಾಗಲೂ..! ಯಾರಿಂದಲೂ ಏನನ್ನೂ ನಿರೀಕ್ಷಿಸದ ಅವ್ವ ಕೊಡುತ್ತಲೇ ನಡೆದಳು.ಇವರು ಪಡೆಯುತ್ತಲೇ ನಡೆದರು.ವರ್ಷದ ಪೀಕಿನ ರೊಕ್ಕ,ತ್ವಾಟದ ಮಾಲಿನ ರೊಕ್ಕ ಹೀಗೆ ತನಗಂತ ಒಂದಿಷ್ಟು ಇಟಗೊಂಡು ಮಕ್ಕಳಿಗೂ ಮೊಮ್ಮಕ್ಕಳಿಗೂ ಕಳಿಸುತ್ತಿದ್ದಳು.ಮನಿ,ಆಳು,ಬಳಗ ಬಂಧು ಅಂತ ಸದಾ ಬಿಡದ ಕಾಯಕ ಅವಳದು.

ಪಾರವ್ವ ಎಲ್ಲರಿಗೂ ಎಲ್ಲವನ್ನು ಹಂಚಿದ್ದರೂ ಒಂದು ಗುಂಡಿನಟಿಕ್ಕಿ,ಬುಗುಡಿ,ಬೆಂಡ್ವಾಲಿ ಮೂಗುಬೊಟ್ಟು ಯಾರಿಗೂ ಕೊಟ್ಟಿರಲಿಲ್ಲ.ಗುಂಡಿನಟಿಕ್ಕಿ ಅವಳ ಟ್ರಂಕ್ ನಲ್ಲಿ ಭದ್ರವಾಗಿಯೇ ಇತ್ತು.ಮೂಗುತಿ ಬೆಂಡ್ವಾಲಿ ದಿನ ಹಾಕಿಕೊಳ್ಳುತ್ತಿದ್ದಳು.ಶಾಂತಿಗೆ ಅದರ ಮೇಲೆ ಕಣ್ಣಿತ್ತು.ಎಲ್ಲಿ ಮಗಳಿಗೆ ಕೊಡ್ತಾಳೋ ಇಲ್ಲ‌ ಮಗಳ ಮಗಳಿಗೆ ಕೊಡ್ತಾಳೋ ಅಂತ ಅವುಗಳ ಮೇಲೆ ಒಂದು ನಿಗಾ ಇಟ್ಟೇ ಇದ್ದಳು.ಹಳೆಯ ಕಾಲದ ಸಾಂಪ್ರದಾಯಿಕ ಶೈಲಿಯ ಒಡವೆ ಅವು.ಗ್ರಾಮೀಣ ಸಂಸ್ಕೃತಿಯ ಬಣ್ಣದ ಮೆರುಗಿತ್ತು.ಚೆಂದ ಕುಸುರಿ ಕಲೆಯಿತ್ತು.ಪತ್ತಾರನ ಕೈಚಳಕವಿತ್ತು ಅಲ್ಲಿ.ಪಾರವ್ವನಿಗೆ ಅವಳ ಅವ್ವ ಕೊಟ್ಟದ್ದೆಂದು ಬಲು ಜ್ವಾಪಾನ ಮಾಡಿದ್ದಳು.ಹಬ್ಬ ಹುಣ್ಣಿಮೆ ಜಾತ್ರೆ ತೇರು ಅಂತ ಬಂದಾಗ ತೆಗೆದು ಒಂದು ಹೊಸ ಬಾಂಡ ಸೀರೆಯನ್ನೋ ಇಲ್ಲವೆ ಹಸಿರು ಇಳಕಲ್ಲಿನ ಸೀರೆಯನ್ನೋ ಉಟ್ಟುಕೊಂಡು ಕರಿಮಣಿ ಸರ ಬೋರುಮಳ,ಗುಂಡಿನ ಟಿಕ್ಕಿ ಹಾಕಿಕೊಂಡು ಕೊರಳನ್ನು ಶ್ರೀಮಂತಗೊಳಿಸುತ್ತಿದ್ದಳು.ಅದಕ್ಕಿಂತ ಹೆಚ್ಚು ಅವಳ ಪ್ರೀತಿ ಹಂಚುವ ಆರೋಗ್ಯಕರ ನಗೆಯ ಮಾತು ಮತ್ತೂ ಆಕೆಯ ಕೊರಳನ್ನು ಧೀಮಂತ ಶ್ರೀಮಂತಗೊಳಿಸುತ್ತಿದ್ದವು.ತನ್ನ ಜಟಿಲಕಬರಿಗೆ ಮೊಳ ಹೂವು ಮುಡಿದು ತಲೆತುಂಬ ಸೆರಗು ಹೊದ್ದು ಹೊರಟಳೆಂದರೆ ಬಹು ಆಸ್ಥೆಯ ನೋಟದಿಂದ ಕಣ್ತುಂಬಿಕೊಳ್ಳುತ್ತಿದ್ದ ವಸಂತಪ್ಪ.ಊರ ಜನ ದ್ಯಾಮವ್ವನ ಜಾತ್ರೆಯಲ್ಲಿ ಅವ್ವನಿಗೆ ಕಳಸ ಹಿಡಿದು ಬೆಳಗಲು ಮೊದಲು ಹೇಳುತ್ತಿದ್ದರು.ಅವ್ವನನ್ನು ಜುಲುಮಿ ಮಾಡುತ್ತಿದ್ದರು.ನಸುನಕ್ಕ ಪಾರವ್ವ ಮುಂಚೂಣಿಯಾಗಿ ನಿಂತು ತನಗೆ ಬಂದ ಕಂಟಸ್ಥ ಮಂಗಳಾರತಿ ಪದ ಹಾಡುತ್ತ ದೇವಿಗೆ ಬೆಳಗುತ್ತಿದ್ದಳು.ತನಗಿಂತ ಚಿಕ್ಕವರಿಗೆ ಹೇಳಿಕೊಡುತ್ತಿದ್ದಳು.ಎಲ್ಲೂ ಬೆಂಕಿ ಹಚ್ಚಿ ಸುಖಿಸದೇ ಸದಾ ಜ್ಯೋತಿ ಬೆಳಗಿ ನಡೆವ ಅವ್ವಳ ನಿಷ್ಕಲ್ಮಷ ಮನಸ್ಸೂ ನಿರ್ಮಲವಾಗಿತ್ತು.ತಮವ ಹೊರಹಾಕುವ ಆ ದೀಪದಂತೆಯೇ…!

ಕೆಲ ದಿನಗಳ ಹಿಂದೆ ಎದೆ ನೋವು ಅಂತ ಹೇಳಿ ಎಲ್ಲರನ್ನ ಕರೆಸಿಕೊಂಡು ಕಣ್ತುಂಬ ನೋಡಿ ನಕ್ಕು ಕಣ್ಮುಚ್ಚಿದ ಪಾರವ್ವ ಮತ್ತೇ ಏಳಲೇ ಇಲ್ಲ.
“ತೊಳಿಸಿಕೊಳ್ಳದೇ ಬಳಿಸಿಕೊಳ್ಳದೇ ಪುಣ್ಯ ಕಂಡ್ಲು ನಿಮ್ಮವ್ವ” ಅಂದರು ವಸಂತಪ್ಪ ಇದ್ದ ಬಾಡಿಗೆ ಮನೆಯ ಓನರ್.”ಇವತ್ತು,ನಾಳೆ ಬರೀ ಶುಗರ್ ಬಿಪಿ ಅಂತ ಪ್ರಾಣ ತಿಂತಾವ..ನೆಲಕ್ಕ ಕೆಡವತಾವ..ಅಂತದ್ದರಲ್ಲಿ ನಿಮ್ಮವ್ವ ಏನೂ ಇಲ್ದ ಪುಣ್ಯ ಕಂಡ ಪಣ್ಯವಂತೆ ಅಂದ್ರು” ಶಹರದ ಜನ.ಆತನ ಸಹೋದ್ಯೋಗಿಗಳು ಆ ಮನೆಯ ನೆರೆಯವರು ಎಲ್ಲರ ಬಾಯಲ್ಲೂ ಇಂಥದ್ದೇ ಮಾತು.
ವಸಂತಪ್ಪನಿಗೂ ಖರೇ ಅನಿಸಿತ್ತು.”ಅವ್ವ ಅವ್ವ”
ಅನ್ನುತ್ತ ಬಿಕ್ಕಿದ.‌.!  ಅವ್ವನ ಮರೆಯಲು ಸಾಧ್ಯವೇ ಆತನಿಗೆ..ಅವ್ವ ಆತನ ನರನಾಡಿಯಲ್ಲಿ ಸೇರಿಹೋಗಿದ್ದಳು.ಕಾಯಕಯೋಗಿ ಪ್ರೀತಿಯ ಸೆಲೆ ಅವ್ವನ ಮಾರಿ ನೋಡುತ್ತ ಆಕೆಯ ಚಿತ್ರವ ಚಿತ್ತದಲ್ಲಿ ಧ್ಯಾನಿಸುತ್ತ ದಿನಗಳೆದ ವಸಂತಪ್ಪ ಆಕೆಯ ಎಲ್ಲ ಭಾವನೆಗಳ ಮೊತ್ತವಾಗಿದ್ದ.ಕನಸುಗಳ ನೆಲೆಯಾಗಿದ್ದ.ನಿರ್ಲಿಪ್ತ ಚಿತ್ತದಲ್ಲಿ ದಿನಗಳ ನೂಕಿ ವಸಂತಪ್ಪನ ಬಾಳಿಗೊಂದು ಆಕೃತಿ ಒದಗಿಸಿದ ದೇವತೆ ಆಕೆ.

ಜೋರಾಗಿ ನಾಯಿ ಕೂಗಿದ ಶಬ್ದವಾಯ್ತು.ಎಲ್ಲ ನೆನಪಿನಲೆಯಿಂದ ಹೊರಬಂದ ವಸಂತಪ್ಪ.
ಕಣವಿರಾಯ ಹನುಮಂತ ದೇವರ ಹೊರ ಕಟ್ಟಿ ಮ್ಯಾಲೆ.ಅಶ್ವತ್ಥ ಮರದ ನೆರಳಿಗೆ ಅದಕ್ಕೂ ನಿಶ್ಚಿಂತೆಯ ನಿದ್ದೆ.ಇವನು ಬಿಕ್ಕಿ ಅಳುತ್ತಿರುವುದನ್ನು ಕಂಡು ಅದೂ ಬೊಗಳಹತ್ತಿತು.ಇವನು ಸುಮ್ಮನಾಗಿ ಗದರಿಸಿದ.ಅದೂ ಸುಮ್ಮನಾಯಿತು.ಮತ್ತೇ ಮನೆಗೆ ನಡೆದರೆ ಶಾಂತಿಯನ್ನು ಎದುರಿಸಬೇಕು.ಟ್ರಂಕಿನಲ್ಲಿದ್ದ ಗುಂಡಿನ ಟಿಕ್ಕಿ ಎಲ್ಲಿ..? ಟ್ರಂಕ್ಯಾಕ ಖಾಲಿ..! ಅಲ್ಯಾಕ ಇಲ್ಲ…? ಪ್ರಶ್ನೆಗೆ ಏನಂತ ಉತ್ತರಿಸಬೇಕು..ತನಗೂ ಗೊತ್ತಿಲ್ಲ.ಅವ್ವ ಹೇಳದೇ ಏನೂ ಮಾಡುತ್ತಿರಲಿಲ್ಲ.ಇದು ಹೇಳಲಾರದ ವಿಷಯ ಇರಬೇಕು.ಅಥವಾ ತನಗೆ ನೋವು ತರುವಂತಹ ವಿಷಯ ಇರಬೇಕು.ಅಥವಾ ತನಗೆ ಬೇಡದ ವಿಷಯ ಇರಬೇಕು.ಅದಕ್ಕೆ ಹೇಳಿರಲಿಕ್ಕಿಲ್ಲ. ಐದು ತೊಲೆಯ ಗುಂಡಿನ ಟಿಕ್ಕಿ ಸರ ಅಂದಿದ್ದಳು.”ನಮ್ಮವ್ವ ನನಗ ಲಗ್ನದಾಗ ಕೊಟ್ಟದ್ದು”ಅಂತಿದ್ಲು ಸಂತಸದಿಂದ.ಹೀಗೆ ಅಂದಾಗ ಕಣ್ಣೀರು ಸೆರಗಿನ ಚುಂಗಿನಿಂದ ಒರೆಸಿಕೊಳ್ಳುತ್ತಿದ್ದಳು.ಅವ್ವಗ ಅವಳವ್ವನ ಮ್ಯಾಲ ಪ್ರೀತಿ…ಸಹಜವಾಗಿಯೇ ಉಕ್ಕಿ ಹರಿಯುತ್ತಿತ್ತು.ಹೆಣ್ಣೆಂದರೆ ತವರು ತವರಿನ ಪ್ರೀತಿ ತವರ ಅಭಿಮಾನ ತವರ ತಂಪನು ಮರೆಯಲಾರರು.ಅವ್ವಗ ಅವಳವ್ವನ ಮ್ಯಾಲ ಪ್ರೀತಿ ಅಂತಃಕ್ಕರಣ ಉಕ್ಕಿ ಗಂಟಲುಬ್ಬಿ ಮುಸಿ ಮುಸಿ ಅತ್ತು ಸೊರ ಸೊರ ಮೂಗೇರಿಸಿ ಸುಮ್ಮನಾಗುತ್ತಿದ್ದಳು.ತಾಯಿ ನೆನಪಿಂದ ಗತಕ್ಕೆ ಜಾರುತ್ತಿತ್ತು ಅವ್ವಳ ಮನಸ್ಸು‌.ಮತ್ತೆ ತಹಬಙದಿಗೆ ತಂದುಕೊಂಡು ನಸುನಕ್ಕು ಕಾಯಕಕ್ಕೆ ಅಣಿಯಾಗುತ್ತಿದ್ದಳು.

ಈಗ ಈ ವಿಷಯದ ಶೋಧನೆ ಆಗಬೇಕು.ಸುಮ್ಮನಿರು ಎಂದರೆ ಕೇಳುತ್ತಿಲ್ಲ ಶಾಂತಿ.ಅಶಾಂತಿಯ ಕೆಸರ ಹರಡುತ್ತಿದ್ದಾಳೆ‌.ಶಾಂತ ಸರೋವರವ ಕದಡುತ್ತಿದ್ದಾಳೆ.”ಕಣಿವಿರಾಯ ಕಾಪಾಡಪ್ಪ” ಹನುಮಂತನಿಗೆ ಕೈ ಮುಗಿದು ಸಾಷ್ಟಾಂಗ ಹಾಕಿ ನಡೆದ ವಸಂತಪ್ಪ.ಮತ್ತೊಮ್ಮೆ ಮಗದೊಮ್ಮೆಕೈ ಮುಗಿದು ಮನೆಯ ದಾರಿ ತುಳಿಯತೊಡಗಿದ…

ಯಥಾ ಪ್ರಕಾರ ಶಾಂತಿ ಅಡಿಗಿ ಮಾಡಿಕೊಂಡು ದಾರಿ ನೋಡುತ್ತ ಸುಮ್ಮನೆ ಕುಳಿತಿದ್ಲು.ಇನ್ನೇನು ಈ ಹಳ್ಳಿಯಿಂದ ಊರಿಗೆ ಹೋಗಬೇಕು.ಡ್ಯೂಟಿ ಇದೆ.ಮಕ್ಕಳು ಬಂದಿದ್ದಾರೆ.ದೊಡ್ಡ ಮಗ ಬೆಂಗಳೂರಿನಿಂದ ಬಂದಿದ್ದಾನೆ.ಅಜ್ಜಿ ಕಡೇ ಮಾರಿ ನೋಡಲು ಬಂದಿದ್ದ.ಮಗಳು ಅಲ್ಲೇ ಶಹರ ಶಾಲೆಗೆ ಹೋಗಬೇಕು.ಊಟ ಮಾಡಿದ ನಂತರ ಎಲ್ಲ ವಸ್ತುಗಳನ್ನು ಪ್ಯಾಕ್ ಮಾಡತೊಡಗಿದ.ಗಾಡಿ ಹೇಳಿದ್ದ.ಮಿನಿ ಲಾರಿ ಗಾಡಿಯಲ್ಲಿ ಇಲ್ಲಿರುವ ಸಾಮಾನು ಹಾಕ್ಕೊಂಡು ಹೋಗಬೇಕು.ಶಾಂತಿಗೆ ಹೇಳಿದ್ದ.ಶಾಂತಿ ಖಾಲಿ ಟ್ರಂಕಿಗೆ ಅಲ್ಲಿ ಹರಡಿದ್ದ ಬಟ್ಟೆ ಬರೆ ತುಂಬುತ್ತ ಮತ್ತೇ ಗೊಣಗತೊಡಗಿದಳು.

“ಅಮ್ಮಾ..ಅಮ್ಮಾ…” ಓಡಿಬಂದು ಶಾಂತಿಯ ಅಪ್ಪಿ ಬಿಕ್ಕುತ್ತಿದ್ದ ಮಗರಾಯ.
“ಯಾಕೋ ಶರಣು ಏನಾಯ್ತು…?!”
ಅಂದಳು ಶಾಂತಿ.
“ಅಜ್ಜಿಯ ನೆನಪಾಯ್ತೇನೋ?”
ಕೇಳಿದ ವಸಂತಪ್ಪ..
“ಹುಂ..!” ಅಂತ ಬಿಕ್ಕುತ್ತ “ಅಪ್ಪಾ ..ಅಮ್ಮಾ..ನಾನೊಂದ ಮಾತ ಹೇಳ್ಬೇಕು..ಮತ್ತ..ಮತ್ತ..ನೀವು ಬಯ್ಯಬಾರದು”
ಶರಣು ಹೇಳಿದಾಗ ದಂಪತಿಗಳು ಅವಾಕ್ಕಾದರು
“ಇಲ್ಲ..ಮಗನೆ..ಹೇಳೋ..” ಹೇಳಿದ ವಸಂತಪ್ಪ.
ಶಾಂತಿ ಮಗನನ್ನು ಅಪ್ಪಿ ಬಿಕ್ಕುತ್ತಿದ್ದಳು.ಆವಕ್ಕಾಗಿದ್ದಳು.
“ಭಾಳ ದಿನದಿಂದ ಅಜ್ಜಿ ಒಡವಿ ಬಗ್ಗೆ ಹೇಳ್ಲಕ್ಕತ್ತೀರಿ.ನನಗ ಗೊತ್ತದ..ಗೊತ್ತಿದ್ರೂ ಹೇಳಲಾರ್ದ ಪರಿಸ್ಥಿತಿ ನಂದು..!”
ಶರಣು ಅಳುತ್ತಲೇ ತೊದಲಿದ.
ಶಾಂತಿ ಕಿವಿ ಚುರುಕಾದವು.ಬಾಯಿ ಸುಮ್ಮನಿರಲಿಲ್ಲ.
“ಹೇಳೋ..”
“ಮತ್ತೇನದ..ಮಗಳಿಗೆ ಕೊಟ್ಟಿರ್ತಾಳ ಬಿಡು..ಅತ್ತೆವ್ವ..ಅದು ನೀ ನೋಡಿರ್ತೀದಿ..ಹೇಳಂಗಿಲ್ಲ ಅಂತ ಹೇಳಿರ್ತೀದಿ..ಹೌದಲ್ಲೋ..!” ತಡೆಯದೇ ಉದ್ವೇಗದಲಿ ಜೋರಾಗಿ ಕೂಗಿದಂತೆ ಹೇಳಿದಳು.
ಅದಕ್ಕೆ ಪ್ರತಿಯಾಗಿ ಶರಣು ಹೇಳಿದ:
“ಹೌದು..ಯಾರಿಗೂ ಹೇಳಬ್ಯಾಡ ಅಂತನ ಹೇಳಿ ಪ್ರಾಮಿಸ್ ತೊಗೊಂಡಿದ್ಲು ಅಜ್ಜಿ ಇದು ಖರೇ ಅದ..ಆದ್ರ ಮಗಳಿಗೆ ಕೊಟ್ಟದ್ದು ಖರೇ ಅಲ್ಲ..!” ಶರಣು ಹೇಳಿದ.ಶರಣನಿಗೆ ಇಂಜಿನಿಯರಿಂಗ್ ಸೀಟು ಸಿಕ್ಕಿತ್ತು.ಬೆಂಗಳೂರಿನಲ್ಲಿ ದೊಡ್ಡ ಕಾಲೇಜಿನಲ್ಲಿ ಓದುತ್ತಿದ್ದ.ಅಪ್ಪನ ಹಣ ಪೀಸು ಹಾಸ್ಟೆಲ್ ಪುಸ್ತಕ ಟ್ಯೂಶನ್ ಅಂತ ಖರ್ಚಾದರೆ ಕೈ ಖರ್ಚಿಗೆ ಪಾರಮ್ಮನೇ ಹಣ ಕೊಡುತ್ತಿದ್ದಳು.”ದೊಡ್ಡೂರಾಗ ಇರ್ತೀದಿ.ತಿಂದುಂಡು ಚೆಂದಾಗಿರು.ಹಾಸ್ಟಲ್ನ್ಯಾಗ ಏನು ಊಟವೋ..ನಾಷ್ಟ ಮಾಡು.ನಿನ್  ಪಸಂದ ಬರೋದು ಉಡು ಉಣ್ಣು..ಆರಾಮಿರು.ಆದರ ಹಾಳಹರಟಿ ಮಾಡಬ್ಯಾಡ.ಕೆಟ್ಟ ಚಟಕ್ಕ ಬೀಳಬ್ಯಾಡ.” ಅಂತಿದ್ಲು ಪಾರಮ್ಮ.ಶರಣನಿಗೆ ಅಜ್ಜಿ ಮ್ಯಾಲ ಬಹಳ ಪ್ರೀತಿ.ರಜೆ ಬಿಟ್ಟಾಗ ಹಳ್ಳಿಗೆ ಓಡಿ ಬರ್ತಿದ್ದ.ಆಕಿ ಕೆಲಸಕ್ಕ ನೆರವಾಗ್ತಿದ್ದ‌.”ಮೊಮ್ಮಗ ಭಾಳ ಪ್ರೀತಿ ಪಾರವ್ವಗ” ಅಂತ ಹಳ್ಳೂರ ಜನ,ಆ ಓಣಿ ಜನ ಹೇಳ್ತಿದ್ರು.ಪಾರವ್ವಗೂ ಖುಶಿಯೇ ಖುಶಿ.ಆದರೆ ಒಮ್ಮೆ ಅಪ್ಪ ಕಳಿಸಿದ ರೊಕ್ಕ ಮೊಮ್ಮಗ ಗೆಳೆಯನಿಗೆ ಸಾಲ ಕೊಟ್ಟಿದ್ದ.ಫೀಸು ಕಟ್ಟಲು.ಆ ಗೆಳೆಯ ಸಾಲ ಮರಳಿ ಕೊಟ್ಟಿರಲಿಲ್ಲ.ಮತ್ತೊಂದು ಓದಿನ ಕೋಚಿಂಗ್ ಗೆ ಸೇರಲು ಶರಣು ಅಪೇಕ್ಷೆ ಮಾಡಿದ್ದ‌.ಅದಕ್ಕೂ ಹಣ ಬೇಕಿತ್ತು.ಅದಕ್ಕೆ ಅಪ್ಪ ಕೊಡೋದಿಲ್ಲ ಅನ್ನೋದು ಶರಣನಿಗೆ ಗೊತ್ತಿತ್ತು.ಕೇಳುವ ಸಾಹಸ ಮಾಡಿರಲಿಲ್ಲ.ಅಲ್ಲದೇ ತನ್ನ ಗೆಳೆಯರ ದುಬಾರಿ ಬಟ್ಟೆ ನೋಡಿ ಅಂಥವನ್ನೇ ತಾನು ಖರೀದಿಸುತ್ತಿದ್ದ.ಎಲ್ಲ ಸೇರಿ ಲಕ್ಷದ ಮೇಲೆ ಹಣ ಬೇಕಾಗಿತ್ತು.ಪಾರವ್ವನನ್ನು ಬಾಯ್ತೆಗೆದು ಕೇಳಿದ್ದ.ಸಲುಗೆ ಆಕೆಯಲ್ಲಿ.ಮೊಮ್ಮಗನಿಗೆ ಇಲ್ಲವೆನ್ನಲು ಪಾರವ್ವಗೆ ಮನಸ್ಸಾಗಲಿಲ್ಲ.ಕೈಯಲ್ಲಿ ಅಷ್ಟೊಂದು ಹಣ ಇರಲಿಲ್ಲ.ಆ ಹಳ್ಳಿಯಲ್ಲಿ ಅಷ್ಟೊಂದು ಸಾಲವೂ ಹುಟ್ಟಲಿಲ್ಲ.ಇಬ್ಬರೂ ಸೇರಿ ಬ್ಯಾಂಕಿಗೆ ಹೋಗಿ ಚಿನ್ನ ಅಡವಿಟ್ಟು ಸಾಲ ಮಾಡಿದ್ದರು.ಪಾರವ್ವ ಬೇಕಾದಷ್ಟು ಹಣ ಮೊಮ್ಮಗನಿಗೆ ಕೊಟ್ಟು ಉಳಿದ ಹಣದಲ್ಲಿ ಒಂದಿಷ್ಟು ಆ ಊರ ದ್ಯಾಮವ್ವನ ಗುಡಿಗೆ ಕಲಶಕ್ಕಾಗಿ ಕೊಟ್ಟಿದ್ದಳು.ಮತ್ತೂ ಉಳಿದಿದ್ದರಲ್ಲಿ ಜೋಡು ಎಮ್ಮೆ ಖರೀದಿ ಮಾಡಿದ್ದಳು‌.ಹೊಲ ಕಳೆ ತೆಗೆವ ಕೆಲಸಕ್ಕೆ,ಹಾಗು ಬಿತ್ತನೆಗೆ ಖರ್ಚು ಮಾಡಿದ್ದಳು.ಒಂದಿಷ್ಟು ಆಕೆಯ ಖಾತೆಯಲ್ಲಿತ್ತು.ಸಮಯ ಬಂದಾಗ ಮಗನಿಗೆ ಹೇಳುತ್ತೇನೆಂದೂ ನೀನು ಯಾರಿಗೂ ಹೇಳಬಾರದೆಂದು ಕೈ ಮ್ಯಾಲ ಕೈ ಹಾಕಿ ಮೊಮ್ಮಗನ ಕೈಯಿಂದ ಭಾಷೆ ತೊಗೊಂಡಿದ್ದಳು.ಊರ ದ್ಯಾಮವ್ವನ ಆಣೆ ಇರಿಸಿಕೊಂಡಿದ್ದಳು.ಶರಣು ಒಪ್ಪಿಕೊಂಡಿದ್ದ.ಫೀಸು ತುಂಬಿದ್ದ.ಎಲ್ಲ ಪರೀಕ್ಷೆಯಲ್ಲಿ ಪಾಸೂ ಆಗಿದ್ದ.ಆದರೆ ಬದುಕಿನ ಎಲ್ಲ ಪರೀಕ್ಷೆಯನ್ನೂ ಎದುರಿಸಿ ಮುನ್ನುಗ್ಗುತ್ತಿದ್ದ ಪಾರವ್ವ ಈ ಬಾರಿ ಸೋತಿದ್ದಳು.ಬೆಳೆ ರೊಕ್ಕ ಬಂದ ಮೇಲೆ ಮಗನಿಗೆ ಹೇಳಿ ಒಡವೆ ತರಬೇಕು ಅಂದುಕೊಂಡಿದ್ಲು.ಆದರೆ ವಿಧಿಯಾಟ ಬೇರೆಯೇ ಇತ್ತು.ದೈವ ಚಿತ್ತ ಬೇರೆಯೇ ಇತ್ತು.ಶರಣು ಹೇಳುತ್ತ ಹೇಳುತ್ತ ಕುಸಿದು ಕುಳಿತ..ಕೇಳುತ್ತಿದ್ದ ಶಾಂತಿ ಅಳುತ್ತಿದ್ದಳು.ಈ ಬಾರಿ ಸುಮ್ಮನೆ ಅಲ್ಲ..ಕೊಡುತ್ತಲೇ ನಡೆದ ತನ್ನ ಅತ್ತೆಮ್ಮ ಪಾರವ್ವನ ನೆನೆದು ನಿಜವಾಗಿಯೂ ಅಳುತ್ತಿದ್ದಳು.ಅವಳ ಬಲಗೈ ಬೆರಳು ಮಗನ ತಲೆ ನೇವರಿಸುತ್ತಿತ್ತು


ಅನಸೂಯ ಜಹಗೀರದಾರ

4 thoughts on “‘ಗುಂಡಿನ ಟಿಕ್ಕಿ’ ಅನಸೂಯ ಜಹಗೀರದಾರ ಅವರ ಸಣ್ಣಕಥೆ

  1. ವಾಸ್ತವಕ್ಕೆ ಹೊಂದಿಕೊಂಡಂತಹ ಸಣ್ಣ ಕಥೆ ತುಂಬಾ ಚೆನ್ನಾಗಿದೆ.

  2. ಧನ್ಯವಾದಗಳು.. ನಿಮ್ಮ ಸ್ಪಂದನೆಗೆ ಖುಶಿಯಾಯ್ತು.☺

  3. ಕಥೆ ಬರೆಯಲು ಸ್ಪೂರ್ತಿಯಂತಿದೆ ಈ ನಿಮ್ಮ ಕಥೆ ತಾಯಿಯನ್ನು ಅರ್ಥ ಮಾಡಿಕೊಳ್ಳುವ ರೀತಿ ನಾವಿಂದು ಬದಲಿಸಬೇಕಿದೆ ಎಂಬ ಮಾರ್ಮಿಕತೆಯನ್ನು ತಾಯಿ ಮಗನ ಸಂಬಂಧದಲ್ಲಿ ಚೆನ್ನಾಗಿ ಅಭಿಕ್ತಪಡಿಸಿದ್ದೀರಿ ಧನ್ಯವಾದಗಳು ಮೇಡಂ

Leave a Reply

Back To Top