ಪ್ರೊ. ಸಿದ್ದು ಸಾವಳಸಂಗ ಅವರ ಕವಿತೆ-ನಾನೂ ಸಿರಿವಂತನಾದೆ…!

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ನಾನೂ ಸಿರಿವಂತನಾದೆ…!

 ಮೊದಲು ನಾನೂ ಸಹ ಮುರುಕು ಗುಡಿಸಲಲ್ಲಿದ್ದೆ
ಹರಕು ಅಂಗಿ ಪ್ಯಾಂಟು ಧರಿಸುತ್ತಿದ್ದೆ !
ಅರ್ಧ ಹೊಟ್ಟೆ ಉಂಡು ಉರಿಯುತ್ತಿದ್ದೆ
ಹರಕು ಚಾಪೆ ಹಾಸಿ ನಿರಾಸೆಯಿಂದ ಮಲಗುತ್ತಿದ್ದೆ !!

ಬಹಳ ಯೋಚಿಸಿ ಯೋಚಿಸಿ ತಲೆ ಕೆಡಿಸಿಕೊಂಡು
ಹಣಗಳಿಸುವುದು ಹೇಗೆಂಬ ಸತ್ಯ ಅರಿತೆ !
ಬಡವರನ್ನು ಕಾರಣವಿಲ್ಲದೆ ಬಗ್ಗುಬಡಿದೆ
ಅನ್ಯೋನ್ಯವಾಗಿದ್ದ ಸಹೋದರಲ್ಲಿ ಕಲಹಹಚ್ಚಿ
ಅದನ್ನು ಬಿಡಿಸುವ ನೆವದಲ್ಲಿ
ಅವರಿಂದ ಹಣ ಕಿತ್ತಿಕೊಳ್ಳುವುದು ಕಲಿತೆ !!

ಚುನಾವಣೆ ಸಮಯಲ್ಲಿ ಪ್ರಚಾರಕ್ಕಾಗಿ
ಎಲ್ಲ ಪಕ್ಷದವರೊಂದಿಗೆ ಗುರುತಿಸಿಕೊಂಡೆ !
ಜನರಿಂದ ಓಟು ಹಾಕಿಸುವೆನೆಂದು
ಸುಳ್ಳು ಪೊಳ್ಳು ಭರವಸೆ ನೀಡಿ
ಅವರಿಂದ ಹಣ ಪಡೆದುಕೊಂಡು ನನ್ನ ಕಿಸೆ ತುಂಬಿಕೊಂಡೆ !!



ವೃದ್ಧಾಪ್ಯ ವೇತನ, ವಿಧವಾ ವೇತನ
ಅಂಗವಿಕಲ ವೇತನ, ಮಾಶಾಸನ !
ಕೊಡಿಸುವೆನೆಂದು ಜನರ ನಂಬಿಸಿ
ಹಣ ಹೊಡೆದುಕೊಂಡು ಸಿರಿವಂತನಾದೆ !!

ಸಣ್ಣ ಸಣ್ಣ ಫೈನಾನ್ಸ್ ತೆಗೆದು ಹೆಚ್ಚು ಬಡ್ಡಿ
ಬರುವುದೆಂದು ನಂಬಿಸಿ ಹಣಯಿಡಲು
ಜನರನ್ನು ನಂಬಿಸಿ ಪುಸಲಾಯಿಸಿದೆ !
ಮುಂದೊಂದು ದಿನ ಪೈನಾನ್ಸ್ ಲಾಸ್
ಆಯಿತೆಂದು ಘೋಷಿಸಿ ಎಲ್ಲ ಹಣ ನುಂಗಿದೆ !!

ಹಣಕ್ಕಾಗಿ ನಾನು ಮೋಸ ಮಾಡುವುದು
ಸುಲಭದ ಕಾಯಕವೆಂದು ತಿಳಿದೆ !
ಜನ ನನಗೆ ಈಗ ಏನೆಂದರೂ ತಲೆಕೆಡಿಸಿಕೊಳ್ಳುವುದಿಲ್ಲ !
ಯಾಕೆಂದರೆ ನಾನು ಅವರ ಮುಗ್ಧತನದ
ದುರುಪಯೋಗದಿಂದ ಸಿರಿವಂತನಾಗಿದ್ದೇನೆ
ನನ್ನ ಬದುಕನ್ನು ಭದ್ರಪಡಿಸಿಕೊಂಡಿದ್ದೇನೆ !!

—————————

ಪ್ರೊ. ಸಿದ್ದು ಸಾವಳಸಂಗ

Leave a Reply

Back To Top