ನಾಗೊಂಡಹಳ್ಳಿ ಸುನೀಲ್-ಇನ್ನಷ್ಟು ಕಾಲ ಬದುಕಿರಬೇಕಿತ್ತು ನೀನು

ಬಿಟ್ಟ ಸ್ಥಳ ತುಂಬಲು
ಇದು ಪ್ರಶ್ನೆಪತ್ರಿಕೆಯಲ್ಲ ಗೆಳತಿ
ಬದುಕಿನ ಬೀದಿಯಲ್ಲಿ
ನೀ ಬಿಟ್ಟು ಹೋದ ಬೆಳಕು
ನೀ ಕೊಟ್ಟು ಹೋದ ಕೆಟ್ಟು ನಿಂತ ಗಡಿಯಾರ
ಎಲ್ಲವೂ ನಿನ್ನನ್ನೇ ಎದುರು ನೋಡುತ್ತಿವೆ.

ಅಂದೊಮ್ಮೆ ಕತ್ತಲ್ಲನ್ನಷ್ಟೇ ಪ್ರೀತಿಸುತ್ತಿದ್ದೆ
ಈಗ ಕತ್ತಲೆಂದರೆ ಸಾವಿನಷ್ಟೇ ಹೆದರಿಕೆ
ಎದೆಯ ಬೆಳಗು ಸತ್ತು
ಕತ್ತಲು ಕವಿದಂತೆ ಅಗಾಧ ಪ್ರೀತಿಯುಣಿಸಿ
ಕಾರಣವಿಲ್ಲದೆ ಕಾಲವಾದ
ನಿನ್ನ ಕಾಲ್ಗೆಜ್ಜೆಯ ಸದ್ದು ತಬ್ಬುತ್ತಿದೆ.

ಇಳಿಸಂಜೆ ಉಳಿಯಾಗುವಾಗ
ಗೂಡಿಗೆ ಮರಳುವ ಹಕ್ಕಿಗೆ
ಮರಿ ನೆನಪಾಗುವಂತೆ
ಮಬ್ಬು ಮುಸುಕುವ ಶರಾಬಿನ ವೇಳೆಗೆ
ಮಿಣಕ್ಕನೆ ನೆನಪಾಗುವ ಮಿಂಚುಳ್ಳಿ ನೀನು.

ನಿನ್ನದೇ ನೆನಪುಗಳ ಮೂಟೆಗಳು
ಪ್ರೀತಿಯ ಮೂಸೆಯಲ್ಲಿ
ಕರಗುತ್ತಿರುವ ನನ್ನೀ ನೋವು-ನಲಿವುಗಳನ್ನು
ಕಣ್ತುಂಬಿಕೊಳ್ಳಲಾದರೂ
ನೀ ಇನ್ನಷ್ಟು ಕಾಲ ಬದುಕಿರಬೇಕಿತ್ತು ಗೆಳತಿ.

ನಿನ್ನ ಪ್ರೇಮದ ಗಾಳಕ್ಕೆ ಸಿಲುಕಿದ ನಾನು
ಈಗಲೂ ಅರೆಹುಚ್ಚ
ಈ ಕವಿತೆಯ ನಂಟು ನನಗೆ ಅಂಟದೇ ಹೋಗಿದ್ದರೆ
ನಾನು ಸಂಪೂರ್ಣ ಹುಚ್ಚ.
ಈ ಕವಿತೆಯ ಹೂ ಮುಡಿಯುವುದಕ್ಕಾದರೂ
ನೀನು ಇನ್ನಷ್ಟು ಕಾಲ ಬದುಕಿರಬೇಕಿತ್ತು ಗೆಳತಿ.

ಮಲ್ಲಿಗೆಯಂತಹ ನಿನ್ನ ಮಗ್ಗಲಿನ ಮ(ನ)ಡುವಲ್ಲಿ
ನನ್ನ ಅದೆಷ್ಟೋ ಮಾತುಗಳು
ಇನ್ನೂ ಮೌನವಾಗಿ ಬೆಚ್ಚನೆಯ ಮುತ್ತಾಗಿ
ಮಲಗಿರಬಹುದು.

ನೀನಿಲ್ಲದ ಈ ದಿನಗಳು
ಉಸಿರನ್ನು ಬಿಗಿಗೊಳಿಸುತ್ತಿವೆ
ಬಿಗಿದ ಕುಣಿಕೆಯನ್ನು ಸಡಿಲಗೊಳಿಸಲಾದರೂ
ನೀನಿನ್ನು ಬದುಕಬೇಕಿತ್ತು ಗೆಳತಿ.
ಸುಮ್ಮನೆ ಪ್ರೀತಿಸಿಬಿಡಬೇಕಿತ್ತು ಸಾಯುವಷ್ಟು,
ಆ ಸಾವೂ ನಮ್ಮಿಬ್ಬರನ್ನೂ ಪ್ರೀತಿಸುವಷ್ಟು.

ವಿರಹದೆದೆಂಗಳದಲ್ಲಿ ಕಂಬನಿಯ
ಜಿಟಿ ಜಿಟಿ ಮಳೆ ಒಂದೇ ಸಮನೆ ಸುರಿಯುತ್ತಿದೆ
ಹೀಗೆ ಅಲ್ಪವಿರಾಮ ಕೊಟ್ಟು ಕಾಡಬೇಡ
ಅಗತ್ಯ ಮೀರಿ ಸುರಿಸುವುದಾದರೆ
ಎಲ್ಲವೂ ಕೊಚ್ಚಿ ಹೋಗುವ ಹಾಗೆ
ಸುರಿದು ಪೂರ್ಣವಿರಾಮ ಕೊಟ್ಟು ಬಿಡು.

ಸುಟ್ಟಬದುಕಿನ ಬೆನ್ನಿಗೆ ತಣ್ಣನೆಯ ಬಣ್ಣ
ಬಳಿಯಲಾದರೂ
ನೀನಿನ್ನೂ ಬದುಕಬೇಕಿತ್ತು ಗೆಳತಿ.


Leave a Reply

Back To Top