ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್
ಪ್ರಸವದಲಿ ವೇದನೆ ಪಡುತ ಅತ್ತವಳು ನೀನು
ಅಸಮಗುಣ ಧರಿಸಿ ನಿತ್ಯವೂ ಸತ್ತವಳು ನೀನು
ವಿಷಕಂಠನಂತೆ ಸಂಕಟ ನುಂಗಿ ನಕ್ಕಳೇಕೆ ಹೇಳು
ಬಸವಳಿದು ನವಮಾಸ ಗರ್ಭವ ಹೊತ್ತವಳು ನೀನು
ಕಬ್ಬಿಣದಂತೆ ಕುಲುಮೆಯಲಿ ಬೆಂದು ಕೆಂಪಾದೆ ಸಖಿ
ಅಬ್ಬರಿಸದೆ ಅಳುತ್ತ ಜೀವವನು ತೆತ್ತವಳು ನೀನು
ಹುಟ್ಟಿದ ಸುತರು ಜೀವ ಹಿಂಡಿದರೂ ತಡೆದುಕೊಂಡೆ
ಕೊಟ್ಟ ಮನೆಯೊಳು ಸಂತಸವನು ಉತ್ತವಳು ನೀನು
ಮತಿಯ ಅಜ್ಞಾನವನು ಅಳಿಸೀತು ಪ್ರೀತಿಯ ನುಡಿ
ನತನಾದ ಅಭಿನವಗೆ ಆಶಿರ್ವಾದ ಇತ್ತವಳು ನೀನು
ಶಂಕರಾನಂದ ಹೆಬ್ಬಾಳ