ವಿಜಯಪ್ರಕಾಶ್ ಕಣಕ್ಕೂರು ಅವರ-ಕಾಫಿಯಾನಾ ಗಝಲ್

ನಗ ನಾಣ್ಯಗಳನೆಷ್ಟು ಕೂಡಿಟ್ಟರೇನು ಮನಸಿನಲ್ಲಿ ಹರುಷ ಬತ್ತಿಹೋಗಿರಲು
ನಗುವು ಮೊಗದಲ್ಲಿ ಅರಳಿದರೇನು ಅಂತರಂಗವು ಮಡಿದು ಮಲಗಿರಲು

ನೇಸರನ ಬೆಳಕಿನಲ್ಲಿ ಗೋಚರಿಸಲಿಲ್ಲ ಯಾರಿಗೂ ಒಡೆದ ಒಡಲಿನ ಅಳಲು
ಬೇಸರದ ಚಾದರದೊಳಗೆ ಚಡಪಡಿಸುವುದು ಹೃದಯ ಒಂಟಿಯಾಗಿರಲು

ಬೆಂಬಿಡದೆ ಕಾಡುತಿಹ ನೆನಪಿನಲೆಗಳ ಭೋರ್ಗರೆತ ಎದೆಯ ಕಡಲೊಳಗೆ
ಸುಡುವ ನಿಟ್ಟುಸಿರಿನ ಅಬ್ಬರ ನಡು ರಾತ್ರಿಯಲಿ ಜಗವೇ ನಿಶ್ಶಬ್ದವಾಗಿರಲು

ಸಹಸವಿಲ್ಲದ ಬದುಕಲಿ ನಲಿವಿನ ಮೃಗಜಲವ ಹುಡುಕುವ ಹುಚ್ಚು ಸಾಹಸ
ಸಂತಸ ಸನಿಹವಿಲ್ಲದೆ ನೀರಸವು ದಿನಚರಿ ನೆಮ್ಮದಿ ಮರೀಚಿಕೆಯಾಗಿರಲು

ಜಗವ ಜೈಸಿಯೂ ವಿಜಯವು ಕಳಾಹೀನ ಸಂಭ್ರಮಿಸುವವರ ಸಂಗವಿಲ್ಲದೆ
ಮೃಗಕ್ಕಿಂತ ತೃಣವಾಗುವುದು ಜೀವನ ಭರವಸೆಯು ಕಳೆದುಹೋಗಿರಲು


Leave a Reply

Back To Top