ನಿಸರ್ಗ ಕಾಯುವ ಅಮ್ಮಂದಿರು…..ನಾಗರಾಜ ಬಿ.ನಾಯ್ಕ

ಹಳ್ಳಿಯ ಸಹಜತೆಯ ಹಸಿರು ರೂಪಕ್ಕೆ ಅಮ್ಮಂದಿರ ಒಂದು ದೊಡ್ಡಪಡೆ ನಿಂತು ಹಸಿರ ಕಾಯುವ ದೊಡ್ಡ ಕೆಲಸ ಸದ್ದಿಲ್ಲದೇ ಮಾಡುತ್ತಿದೆ. ಮನೆಯ ಹತ್ತಿರ ಮೂಲೆ ಮೂಲೆಗಳಲ್ಲಿ ನೂರಾರು ಜಾತಿಯ ಗಿಡಗಳನ್ನು ಬೆಳೆಸಿ ಸುಮ್ಮನಿರುವ ಇವರು ಪ್ರಕೃತಿ ಪ್ರೇಮಿಗಳು. ಅಮ್ಮ ತವರು ಮನೆ ಎಂದು ಹೋದಾಗ ತರುತ್ತಿದ್ದ ಎಷ್ಟೋ ಗಿಡಗಳ ಹೂಗಳು ನಮ್ಮ ಮನೆಯ ದೇವರಿಗೆ ಹೂವಾಗಿ ಸಾರ್ಥಕವಾಗಿದ್ದವು. ಮನೆಯಂಗಳದಿ ಹೂ ಬಿಟ್ಟು ನಿಂತಿದ್ದವು. ನೀರಿಗೆ ಬರವಿರುವ ಆ ದಿನಗಳಲ್ಲಿ ಅಮ್ಮ ತರುವ ಗಿಡಗಳು ಪ್ರತಿ ಬಾರಿಯೂ ಒಂದು ವಿಶೇಷ ಅಕ್ಕರೆಯೊಂದಿಗೆ ಬಂದು ಮನೆಗೆ ಸೇರುತ್ತಿದ್ದವು. ಇದ್ಯಾವ ಗಿಡ ?ಇದು ಯಾವ ಗಿಡ? ಎಂದು ಪ್ರಶ್ನಿಸುವ ನಮಗೆ ಇದು ಅಬ್ಬಲಿ,  ಮುತ್ತು ಮಲ್ಲಿಗೆ,  ಸಂಪಿಗೆ ,ಚಿಗರಿ, ಗಂಟಿ, ಅನಂತ ಪುಷ್ಪ ,ನಿತ್ಯ ಪುಷ್ಪ, ಗಂಧಟ್ಲಿ, ಕೋಟೆ ಹೀಗೆ ಎಲ್ಲ ಜಾತಿಯ ಹೂ ಗಿಡಗಳನ್ನು ಹೆಸರಿಸಿ ಅಮ್ಮ ಪರಿಚಯಿಸುತ್ತಿದ್ದರು. ಪ್ರತಿ ಬಾರಿಯೂ ತವರಿಗೆ ಹೋದಾಗ ತಂದು ನೆಟ್ಟು ಬೆಳೆಸುವುದು ಅವರ ರೂಢಿಯಾಗಿತ್ತು. ಅಮ್ಮನಷ್ಟೇ ಅಲ್ಲ ಮನೆಯ ಸುತ್ತಮುತ್ತಲಿನ ಎಲ್ಲಾ ತಾಯಂದಿರ ಕೆಲಸವೂ ಇದೇ ಆಗಿತ್ತು. ಇದರೊಟ್ಟಿಗೆ ಪರಿಮಳದ ಒಗ್ಗರಣೆ, ಪುದಿನ ,ತಂಬುಳಿ ಸೊಪ್ಪು ಬಸಳೆ, ಹರಿವೆಯ ತರಾವರಿ ಸೊಪ್ಪುಗಳು ಅವರ ಚೀಲದಲ್ಲಿ ಸೇರಿರುತ್ತಿತ್ತು. ಗಿಡವನ್ನೆಲ್ಲ ದನ ಬಂದು ತಿಂದು ಹೋದರೂ ಬೈದು ಸುಮ್ಮನಾಗುವ ಅಮ್ಮ ಮತ್ತೆ ತವರು ಮನೆಗೆ ಹೋದಾಗ ಗಿಡ ತರುವುದು ಸಾಮಾನ್ಯವಾಗಿತ್ತು . ತರಲೇಬೇಕು ಅವರು ಅಲ್ಲಿರುವ ಅಪರೂಪದ ಗಿಡಗಳನ್ನು ಅಥವಾ ಮತ್ತೆ ಅಕ್ಕರೆ ಎನಿಸುವ ಗಿಡಗಳನ್ನು. ಅದೇನೋ ಅಕ್ಕರೆ ಅವರಿಗೆ ಅಲ್ಲಿಯದು ಎಂದರೆ . ತವರು ಎಂದರೆ ಹೆಣ್ಣಿಗೆ ಜೀವಿತದ ಒಂದು ಜೀವಂತ ಭಾವ. ಅಲ್ಲಿಂದ ತಂದ ಗಿಡದ ನೆನಪುಗಳಲ್ಲಿ ಅವರು ಅವರನ್ನು ನೋಡುತ್ತಿದ್ದರು. ಜೊತೆಗೆ ಅದರಿಂದ ತವರನ್ನು ಹಸಿರಾಗಿ ಇಟ್ಟುಕೊಳ್ಳುತ್ತಿದ್ದರು. ಆ ಸಣ್ಣ ಕೆಲಸದ ಹಿಂದೆ ಇರುವ ದೊಡ್ಡ ಪರಿಸರ ಪ್ರೇಮವನ್ನು ನಾವು ಅರಿತದ್ದು ಸ್ವಲ್ಪ ಕಡಿಮೆ ಆದರೂ ಅವರ ಕಾಳಜಿ ಬದುಕಿಗೊಂದು, ಮನೆಗೊಂದು, ಮನಸ್ಸಿಗೊಂದು ಸ್ಪೂರ್ತಿ. ನೂರೆಂಟು ಕೆಲಸಗಳನ್ನು ಮಾಡುವ ಇವರು ಪ್ರಕೃತಿಗೊಂದು ಅಪರೂಪದ ಕಾಣಿಕೆ ಕೊಡುತ್ತಲೇ ಬಂದಿರುತ್ತಾರೆ. ತಂದ ಹಣ್ಣಿನ ಬೀಜಗಳನ್ನು ಆರಿಸಿಡುತ್ತಾರೆ. ಬೀಜಗಳನ್ನು ನೆಟ್ಟು ಬೆಳೆಸಿ ಸುಮ್ಮನೆ ಕಾಯುತ್ತಾರೆ. ಸುಮ್ಮನೇ ಮನೆಯೊಳಗೆ ಉಳಿದು ಮನೆಯ ಕೆಲಸಗಳನ್ನ ಮಾಡುವ ಇವರು ಬಿಡುವಿರದ ಶ್ರಮಜೀವಿಗಳು. ಗದ್ದೆಯಲ್ಲಿ ಸಸಿಗಳನ್ನ ನೆಟ್ಟು ಹಸಿರನ್ನು ಉಳಿಸುವುದು ಇವರ ಮತ್ತೊಂದು ಕಾರ್ಯ.  ಇವರು ಮಾಡಿದ ತರಕಾರಿ ,ಹಣ್ಣು, ಹೂಗಳು ಮನೆ ಜನರ ಆರೋಗ್ಯವನ್ನು ಕಾಯುವ ಕೆಲಸ ಮಾಡುತ್ತಿವೆ. ಅವರ ಅನುಭವ ಜೊತೆಯಾದಾಗ ಅವರಿಗೊಂದು ಕೆಲಸ ಸದಾ ಕಾಣುತ್ತಲೇ ಇರುತ್ತದೆ ಮನೆಯಲ್ಲಿ . ಆ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ ಅವರು. ಇವರು ಪ್ರೀತಿಯಿಂದ ಬೇಸರಿಸಿದೇ ಮಾಡುವ ಅಡುಗೆ ಮನೆ ಜನರಿಗೆ ಆರೋಗ್ಯ ನೀಡಬಲ್ಲದು.  ಏನಾದರೂ ಒಂದು ತಾವು ಬೆಳೆದ ತರಕಾರಿ ಹಾಕಿ ಸಂಭ್ರಮಿಸುವ ಇವರು ನಾವು ಗುರುತಿಸಿದವರು. ಮಾಡುವ ಕಾಯಕವನ್ನು ನಂಬಿ ಕಷ್ಟವಿದ್ದರೂ ನಮ್ಮ ನಗುವಿನಲ್ಲಿ ಉಳಿದವರು. ಎಷ್ಟು ಎಂದು ಹೇಳಲಾಗದ ಇಷ್ಟೇ ಎಂದು ಅಳೆಯಲಾಗದ ಕೆಲಸಗಳು ಇವರವು. ಅಕ್ಕರೆ, ಪ್ರೀತಿ, ಮಮತೆ ಸಹನೆಯ ಜೊತೆಗೆ ಬದುಕನ್ನು ಕಟ್ಟಿದವರು. ಬದುಕು ಉಳಿಸುವವರು. ಅವರ ತಾಳ್ಮೆಯ ಅನುರೂಪ ಮನೆಯ ಚಿಕ್ಕಪುಟ್ಟ ಕೈತೋಟ. ಮನೆ ಅಂಗಳದ ಹೂ ಗಿಡಗಳ ಅಂದ ಚಂದವೆಲ್ಲವೂ ಇವರ ಆನಂದದ ಬಿಡುವಿನ ಕೆಲಸಕ್ಕೊಂದು ಮಾದರಿ.  ಮನೆಯೊಳಗಿನ ದೇವರಂತೆ ಎಲ್ಲವನ್ನ ಕಾಯುವ ಇವರು ಒಂದು ಅಪರೂಪದ ಶ್ರಮಕ್ಕೆ ಬೆವರಿಗೆ ಮಾದರಿ.  ಹೆಚ್ಚಲಿ ಅವರ ಬದುಕುವ ಪ್ರೀತಿ. ಉಳಿಯಲಿ ಇವರು ಪ್ರಚಾರವಿಲ್ಲದೇ ಇಷ್ಟ ಪಟ್ಟು ಮಾಡುವ ಸಹಜ ಕೆಲಸಗಳು ನಮ್ಮ ನಗುವಿಗಾಗಿ, ನೆಮ್ಮದಿಯ ನಾಳೆಗಾಗಿ . ಅವರು ಬೆಳೆಸಿದ ಹಸಿರು ಗಿಡಮರಗಳು ಉಳಿದು ಹೋಗಲಿ ಅವರ ಕರಗಳಲ್ಲಿ ನೆನಪುಗಳಾಗಿ ಶಾಶ್ವತವಾಗಿ ನಮ್ಮ ಸುತ್ತಮುತ್ತ.
 ಜೊತೆಗೆ ಅವರ ಶಕ್ತಿಯೂ ವೃದ್ಧಿಸಲಿ. ಖುಷಿ ಹೆಚ್ಚಲಿ. ಆರೋಗ್ಯ ಸೌಖ್ಯವಾಗಿರಲಿ .ನೆಮ್ಮದಿ ದ್ವಿಗುಣವಾಗಲಿ ಎಂಬುದು ಮಾತ್ರ ನಮ್ಮ ಮನದಾಳದ  ಹಾರೈಕೆಗಳು ಅವರಿಗೆ………..ಪ್ರತಿ ದಿನಕ್ಕೆ…..ಪ್ರತಿ ಕ್ಷಣಕ್ಕೆ……


9 thoughts on “ನಿಸರ್ಗ ಕಾಯುವ ಅಮ್ಮಂದಿರು…..ನಾಗರಾಜ ಬಿ.ನಾಯ್ಕ

  1. ಅಂತರರಾಷ್ಟ್ರೀಯ ಮಹಿಳಾದಿನಾಚರಣೆಯ ದಿನ ಅಮ್ಮಾ ಮತ್ತು ಮಹಿಳೆಯರ ಬಗ್ಗೆ ಗಿಡ ಹೂವಿನ ಗಮದೊಂದಿಗೆ ಸುಂದರ ಭಾವನೆಗಳನ್ನು ಮೂಡಿಸಿರವಿರಿ.
    ರಾಮಮೂರ್ತಿ ಅಂಕೋಲಾ.

    1. ಪ್ರಕೃತಿ ಎಂತಹ ಅನುಭವವನ್ನು ನೀಡುತ್ತದೆ, ಪರಿಸರ, ಹೂವು , ಮರ ಗಿಡಗಳು, ಈ ಲೋಕದ ಜಂಜಾಟವನ್ನು ಕ್ಷಣಕಾಲ ದೂರೀಕರಿಸಿ,ಮೈ ಮನಗಳಿಗೆ ತಂಪನ್ನೀಯುತ್ತದೆ .ಇತರರಿಗೆ, ವಿಶೇಷವಾಗಿ ಮಕ್ಕಳ ಮನಸ್ಸಿಗೆ ಭೂತಾಯಿ ಯೊಂದಿಗಿನ ಒಲವಿನ ಬೆಸುಗೆಗೆ ಕಾರಣವಾಗುತ್ತದೆ ಎಂಬುದು ನಿಮ್ಮ ಈ ಬರವಣಿಗೆ ಪ್ರಚುರಪಡಿಸುತ್ತಿದೆ. ಆಧುನಿಕತೆಯ ಅಬ್ಬರಕ್ಕೆ ಸಂಪೂರ್ಣವಾಗಿ ಕೊಚ್ಚಿ ಹೋಗದಿರಲು ಪ್ರಕೃತಿಯ ಮಡಿಲು ಸುಖದ ಸೋಪಾನವೇ ಸರಿ. ಧನ್ಯವಾದಗಳು ಸರ್

  2. ಕೆಲವು ಸಾಮಾನ್ಯ ಸಂಗತಿಗಳು ಸಹ ನಿಮ್ಮ ಲೇಖನಿಯಲ್ಲಿ ಮಹತ್ವ ಪಡೆಯುತ್ತವೆ. ಈ ದಿನಕ್ಕೆ ಬಹಳ ಹೊಂದುವ ಬರಹ. ಮಮತಾ ನಾಯ್ಕ

  3. ತವರು ಮನೆ, ಅಮ್ಮಂದಿರ ನಿಸ್ವಾರ್ಥ ಪ್ರೀತಿ,ಮಕ್ಕಳಿಗಷ್ಟೇ ಅಲ್ಲದೆ ಪರಿಸರದಲ್ಲಿನ ಮರಗಿಡಗಳ ಮೇಲೂ ಇತ್ತು ಎನ್ನುವುದನ್ನು ತುಂಬಾ ಸೊಗಸಾಗಿ ಬರೆದಿದ್ದೀರಿ ಸರ್. ಸೂಪರ್

  4. ಹಸಿರು , ಉಸಿರು , ಆರೋಗ್ಯ , ಆಹಾರ ,ಸಂಬಂಧ ಗಳ ಬೆಲೆಯನ್ನು hindinavaru ಚೆನ್ನಾಗಿ aritiddaru. ಅದನ್ನು ಉಳಿಸಿ. ಬೆಳೆಸುವ ಕಾರ್ಯ ಇಂದಿನ ಮಹಿಳೆಯರೂ ಮಾಡಬೇಕೆಂದು ತುಂಬಾ ಚೆನ್ನಾಗಿ varnisiddeeri. ನಿಮ್ಮಲ್ಲಿರುವ ಕವಿತ್ವ ಬರುತ್ತಿರುವುದು ತುಂಬಾ ಸಂತಸದ ವಿಷಯ.

  5. ಮನೆ ಮನದಲ್ಲಿ ಹಸಿರಾಗಿಸುವ ಉಸಿರಾಗಿಸುವ ಕಾರ್ಯ ಪ್ರತಿ ಮನೆಯಲ್ಲೂ ಅಮ್ಮಂದಿರು ತಮಗೆ ಅರಿವಿಲ್ಲದಂತೆ, ಮಾಡಿಕೊಂಡು ಬರುತ್ತಾರೆ. ಹೂ ಗಿಡಗಳೆಂದರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಹೂವು ಕಾಯಿಪಲ್ಯೆ ಗಿಡಗಳನ್ನು ಬೆಳೆಸಿ, ಮನೆ ಬಳಕೆಗೆ ಬಳಸುವುದೆಂದರೆ, ತಾಯಂದಿರಿಗೆ ಇನ್ನಿಲ್ಲದ ಆಸಕ್ತಿ. ಅಂತ ಅಮ್ಮಂದಿರ ಬಗ್ಗೆ ತುಂಬ ಚೆನ್ನಾಗಿ ಹೇಳಲಾಗಿದೆ. ಇಂದಿನ ಯುವ ಮನಸುಗಳು ಇದನ್ನ ಕಲಿಯ ಬೇಕಾಗಿದೆ. ಆರೋಗ್ಯವನ್ನ ಹೆಚ್ಚಿಸಿ ಕೊಳ್ಳ ಬೇಕಾಗಿದೆ. ಇಂತ ಅಮ್ಮಂದಿರ ಅಗತ್ಯತೆ ಇಂದು ಅತ್ಯಗತ್ಯವಾಗಿದೆ. ನಮ್ಮ ದಿನ ನಿತ್ಯದ ಬದುಕಿನಲ್ಲಿ ಕಂಡುಬರುವ ಸಂಗತಿಯನ್ನ ಅತ್ಯಂತ ಸುಂದರವಾಗಿ ಹೇಳಲಾಗಿದೆ. ಆಪ್ತತೆ ಮನಸ್ಸನ್ನು ತಟ್ಟುತ್ತದೆ.

    ನಾನಾ ಬಾಡ

  6. ಈ ಲೇಖನ ಪ್ರಕಟಿಸಿದ ಸಂಗಾತಿ ಬಳಗಕ್ಕೆ ತುಂಬಾ ತುಂಬಾ ಧನ್ಯವಾದಗಳು……..

    ಈ ಲೇಖನವನ್ನು ಆತ್ಮೀಯ ಭಾವದಿಂದ ಓದಿದ ಎಲ್ಲರಿಗೂ ಧನ್ಯವಾದಗಳು…..

    ಈ ಲೇಖನ ಓದಿ ಅಭಿಮಾನದಿಂದ ಪ್ರತಿಕ್ರಿಯೆ ನೀಡಿರುವ ಎಲ್ಲರಿಗೂ ಧನ್ಯವಾದಗಳು……

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ
    ಕುಮಟಾ.

Leave a Reply

Back To Top