“ಹಾವಿನ ಬಾಯ ಕಪ್ಪೆ ಹಸಿದು ಹಾರುವ ನೊಣಕ್ಕೆ ಆಸೆ ಮಾಡುವಂತೆ,

 ಶೂಲವನೇರುವ ಕಳ್ಳನು ಹಾಲು ತುಪ್ಪವ ಕುಡಿದು ಮೇಲೇಸುಕಾಲ ಬದುಕುವನೊ?
 
ಕೆಡುವೊಡಲ ನೆಚ್ಚಿ, ಕಡುಹುಸಿಯನೆ ಹುಸಿದು,  ಒಡಲ ಹೊರೆವವರ ಕೂಡಲಸಂಗಮದೇವಯ್ಯನೊಲ್ಲ ಕಾಣಿರಣ್ಣಾ.”

ಅಪ್ಪ ಬಸವಣ್ಣನವರು

12 ನೇ ಶತಮಾನದ ಬಸವಾದಿ ಶರಣರು ಸಮಾಜದಲ್ಲಿ ಬೇರೂರಿರುವ ಅಂಕು ಡೊಂಕುಗಳನ್ನು, ಅಜ್ಞಾನದ ಬಾಹ್ಯ ಆಚರಣೆಗಳನ್ನು ಅಷ್ಟೇ ತೊಲಗಿಸಲಾರದೆ,ಮಾನವರ ಮನಸ್ಸಿನ ಆಂತರಿಕ ಅಂಕು ಡೊಂಕುಗಳನ್ನು ದೂರ ಮಾಡಿದ ಶ್ರೇಷ್ಠ ಮನೋವಿಜ್ಞಾನಿಗಳು ನಮ್ಮ ಶರಣರು.

ಡಾಂಬಿಕರನ್ನು ˌ ಕಪಟಿಗಳನ್ನು,ವಂಚಕರನ್ನು ಅಪ್ಪ ಬಸವಣ್ಣನವರು ತಮ್ಮ ವಚನಗಳಲ್ಲಿ ಬಹು ತೀಕ್ಷ್ಣ ಶಬ್ಧಗಳಲ್ಲಿ  ಸಾಮಾನ್ಯವಾಗಿ ಎಲ್ಲರಿಗೆ ಗೊತ್ತಿರುವ ಉದಾಹರಣೆ ಕೊಟ್ಟು ವಿಡಂಬಿಸಿದ್ದನ್ನು ನಾವು ಈ ವಚನದಲ್ಲಿ ಕಾಣುತ್ತೇವೆ….

ಹಾವಿನ ಬಾಯ ಕಪ್ಪೆ ಹಸಿದು ಹಾರುವ ನೊಣಕ್ಕೆ ಆಸೆ ಮಾಡುವಂತೆ

ಹಾವಿನ ಬಾಯಿಯೊಳಗೆ ಸಿಕ್ಕು, ಸಾವು ಬದುಕಿನ ನಡುವೆ ನರಳಾಡುವ ಸಂದರ್ಭದಲ್ಲಿಯೂ, ಕಪ್ಪೆಯೊಂದು.. ಪಕ್ಕದಲ್ಲಿ ಹಾರಿ ಹೋಗುವ ನೊಣವನ್ನು ತಿನ್ನಬೇಕೆಂಬ ಆಸೆ ಪಡುವಂತೆ, ತನ್ನ ಸಾವು ತನ್ನ ಕಣ್ಣು ಮುಂದೆ ಬಂದು ನಿಂತಿದ್ದರೂ, ಈ ಹೇಸಿ  ಮನಸ್ಸು ಆಸೆ ದುರಾಸೆಗೆ ಒಳಪಡುವದು ನೋಡಿದರೆ,ಈ ಮನಸ್ಸಿನ ಮನಸ್ಥಿತಿ ಎಷ್ಟು ವಿಚಿತ್ರ ಎನ್ನಿಸುತ್ತದೆ.ಈ ಬದುಕು ನಶ್ವರವೆಂದು ತಿಳಿದರೂ ಮನುಷ್ಯ ಆಶೆ ದುರಾಸೆಗೆ ದಾಸನಾಗಿ ಬದುಕ ಬಯಸುತ್ತಾನೆ.

ಶೂಲವನೇರುವ ಕಳ್ಳನು ಹಾಲು ತುಪ್ಪವ ಕುಡಿದು ಮೇಲೇಸುಕಾಲ ಬದುಕುವನೊ?

ದೊಡ್ಡ ಕಳ್ಳತನ ಅಥವಾ ಅಪರಾಧ ಮಾಡಿ ಮರಣದಂಡನೆಗೊಳಗಾದ ಅಪರಾಧಿ ಮನುಷ್ಯನೊಬ್ಬನು ಹೇಳುತ್ತಾನಂತೆ  ನನ್ನ ಕೊನೆಯ ಆಸೆ ,ಹಾಲು ತುಪ್ಪ ತಿನ್ನಬೇಕೆನ್ನುವುದು ಎಂದು, ತಾನು ಇನ್ನೇನೂ ಕೆಲ ಘಳಿಗೆಯಲ್ಲಿ ಮರಣಹೊಂದುತ್ತೇನೆಂದು ತಿಳಿದಿದ್ದರೂ ಮನುಷ್ಯ ಲೌಕಿಕ ಸುಖ ಭೋಗಗಳಿಗೆ ಮನಸೋಲುತ್ತಾನೆ ಎನ್ನುವ ನಿರ್ಲಜ್ಯ ಭಾವವನ್ನು ತೆರೆದಿಟ್ಟಿದ್ದಾರೆ ಅಪ್ಪ ಬಸವಣ್ಣನವರು.

ಕೆಡುವೊಡಲ ನೆಚ್ಚಿ ಕಡುಹುಸಿಯನೆ ಹುಸಿದು ಒಡಲ ಹೊರೆವವರ ಕೂಡಲಸಂಗಮದೇವಯ್ಯನೊಲ್ಲ ಕಾಣಿರಣ್ಣಾ

ಕೆಟ್ಟುಹೋಗುವ ದೇಹವನ್ನು ನಂಬಿˌ ಸದಾ ಹಸಿ ಹಸಿ ಸುಳ್ಳುಗಳನ್ನೇ ಹೇಳುತ್ತ,ಕೇವಲ ಹೊಟ್ಟೆಹೊರೆಯುವ ನೆಪದಲ್ಲಿ ಸಂಗ್ರಹ ಬುದ್ಧಿಯ ಸ್ವಾರ್ಥಕ್ಕಾಗಿ ಸದಾ ಹಫಿ ಹಫಿಸುವ ಕ್ಷುದ್ರ ಮನಸ್ಸಿನ
ಡಾಂಬಿಕˌ ಆಶೆಬುರುಕರನ್ನು ದೇವರು ಎಂದೂ… ಮೆಚ್ಚಲಾರನು. ಕೂಡಲ ಸಂಗಮದೇವಾ ಇಂತಹ  ಗುಣಮನಸ್ಸಿನ ಮನುಜರನ್ನು  ನನಗೆ ತೋರಿಸಬೇಡಾ ಎಂದಿದ್ದಾರೆ.

ಅಪ್ಪ ಬಸವಣ್ಣನವರು ಮನುಷ್ಯನ ಈ ಲೌಕಿಕ ಬದುಕಿನ ಲೋಲುಪತನವನ್ನು  ವ್ಯಂಗ್ಯವಿಡಂಬನೆಯನ್ನು ಬಹಳ ಅರ್ಥಪೂರ್ಣ ಹಾಗೂ ಮಾರ್ಮಿಕವಾಗಿ ವರ್ಣಿಸಿದ್ದಾರೆ. ಈ ಆಸೆ ಆಮೀಸೆ, ದುರಾಸೆ, ದುರ್ಬುದ್ಧಿ, ಸಂಗ್ರಹಬುದ್ಧಿಯ ಲೋಲುಪತನಗಳನ್ನು ಸ್ವಲ್ಪವಾದರೂ ಮರೆತು ಪಾರಮಾರ್ಥಿಕ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು.
ಹಾಗೂ ಆ ಮೂಲಕ ಲೋಕ ಕಲ್ಯಾಣದ, ಸಮಾಜಮುಖಿ ಕಾರ್ಯದಲ್ಲಿ ಸಹಭಾಗಿ ಆಗಬೇಕು ಮತ್ತು ಮನುಷ್ಯನಾಗಿ ಹುಟ್ಟಿದ ಮೇಲೆ ಒಂದಿಷ್ಟಾದರೂ ತನ್ನನ್ನು ತಾನು , ದೇವರಿಗಾಗಿ ಅರ್ಪಿಸಿಕೊಳ್ಳಬೇಕೆಂಬುದು ಅಪ್ಪ ಬಸವಣ್ಣನವರ  ಮತ್ತು ಬಸವಾದಿ ಶರಣರ  ಆಶಯವಾಗಿದೆ.


One thought on “

  1. Infact,Shivasharane Sujata Patil is the versatile genius. She very explicitly narrates vachanas with her mystic experience.

Leave a Reply

Back To Top