ಮೀನಾಕ್ಷಿ ಸೂಡಿ ಅವರ ಕವಿತೆ-ಓ ಸಖಿ, ನೀ ಸುಖಿ

ಹೊಗಳು ಭಟ್ಟರ ಪದಗಳಿಗೆ
ತುತ್ತಾಗದಿರು ಮುಗುದೆ
ಹೊಗಳಿಕೆಯ ಹೊದಿಕೆಯಲಿ
ಉಸಿರುಗಟ್ಟಿಸಿ ಸಾಯಿಸಿಬಿಟ್ಟಾರು !
ಹಸಿರ ನಡುವಿನ ಹಕ್ಕಿಯ  ಇನಿದನಿ
ತೋಪಿನ ಗುಡುಗಿಗೆ ನಿಶಬ್ದವಾದಂತೆ !

ಸರಿ ತಪ್ಪುಗಳ ಸರಪಣಿಗೆ ಸರಿಹೊಂದಿಕೆಯಾಗುವಂತೆ
ಬದುಕ ಬಂಡಿ ಎಳೆಯುವ ಶಕ್ತಿ
ನಮಗಷ್ಟೇ ಇದೆ
ಕುತಂತ್ರಿಗಳ ಕುಹಕಗಳಿಗೆ ಅರ್ಥವಿದೆಯೇ ವಾಸ್ತವವೇ ಬೇರೆ ಇರುವಾಗ !
ಮನೆ ಮೂಲೆಯಿಂದ
ಮುಗಿಲಾಚೆಗೂ ದುಡಿಯುವ
ಸಾಮರ್ಥ್ಯದವಳು …
ಹೊಗಳಿಕೆಯ ಬಿಟ್ಟು
ನಿಜ ಸಾಕಾರದ ಸಹಕಾರವಷ್ಟೇ
 ನೀಡಿದರೆ ಸಾಕು,,,

ಸ್ತ್ರೀ ಸಮಾನತೆ ಪುರುಷದ್ವೇಷವಲ್ಲ
 ಒಗ್ಗಟ್ಟಿನ ಪಯಣ
ತಂದೆಯಾಗಿ,ಅಣ್ಣನಾಗಿ,
ಗಂಡ-ಗೆಳೆಯನಾಗಿ ಬೆನ್ನು ತಟ್ಟಿದ ಮಹನೀಯರಿಗೆ ನಮ್ಮದೊಂದು ನಮನ

 ಮಕ್ಕಳಿಗೆ ಮಮತೆಯ ತಾಯಿ
 ಸಹೋದರರಿಗೆ ವಾತ್ಸಲ್ಯಮಯಿ
ಪ್ರೀತಿಯ ಸೊಸೆ, ಆತ್ಮೀಯ ಟೀಚರ್ ನಲುಮೆಯ ಗೆಳತಿ ,ಆಪ್ತ ಸಮಾಲೋಚಕಿ, ಕಂಪನಿ ಸಿಇಓ ,ಅದ್ಭುತ ಕಲಾಕಾರ್ತಿ, ಸಾಧನೆಯ ಶಿಖರವೇರಿದ ಮಹಾಸಾಧಕಿ ತನ್ನೂರಿನ ಕೀರ್ತಿ ಕಳಸ,,,,
 ಎಷ್ಟೊಂದು ಬಿರುದು ಬಾವಲಿಗಳು
ಹೆಮ್ಮೆಪಡು ಹೆಣ್ಣೆ ನೀನು
ನಿನಗಷ್ಟೇ ಇದೆಲ್ಲ ಏಕೆ????
 ಮನೆಯಿಂದ ಮುಗಿಲೆತ್ತರಕ್ಕೂ
 ನಡೆದು ಬಂದದ್ದು ನಕ್ಷತ್ರದ ಹಾದಿ,,

 ಬೆಂಕಿ-ಬಿಸಿಲ ದಾರಿಯಲ್ಲಿ
ಕುತಂತ್ರಿಗಳ ಕುಹಕದಲ್ಲಿ
ಹಿಂದೆಳೆದು ಮೋಜು ನೋಡುವ
 ಜನರ ನಡುವೆ
ದಿಟ್ಟತನದಿ ದಾರಿ ಮೆಟ್ಟಿ ಸಾಧನೆ ಶಿಖರವೇರುವುದು ನಮಗಷ್ಟೇ ಸಾಧ್ಯ!!

 ಸಂಬಳವಿಲ್ಲದ ಚಾಕರಿ
ಎಂದು ಹೇಳುವ ಜನರ ಪರಿ
ಗೊತ್ತಿಲ್ಲವರಿಗೆ ಜೇನಿನ ಸಿಹಿ!!
  ಮಮತೆಯ ತಾಯಾಗಿ
ಪ್ರೀತಿಯ ಮಡದಿಯಾಗಿ
 ಅಮೃತಧಾರೆ ಹಿರಿಯರ ಪಾಲಿಗೆ
ಇದು ನಮಗೆ ದೇವರು
ನೀಡಿದ ವರ…
 ನಿರೀಕ್ಷೆಗಳ ನಿಟ್ಟುಸಿರಿನ ಹಂಗಿಲ್ಲದ
 ಕಾರ್ಯ ನಮಗಷ್ಟೇ ಮೀಸಲು!
ಸಮಾನತೆಯ ಅಡಿಯಲ್ಲಿ
ಪ್ರೀತಿಯಲಿ ಈ ಕರ್ತವ್ಯ ಪಾಲಿಸುತ
ದಿನವೆಲ್ಲ ನಮ್ಮದೇ ಆಚರಣೆ ಮಾಡುವಾ
ಯಾರ ಹಂಗಿಲ್ಲದೆ,, ಯಾರ ಹಂಗಿಲ್ಲದೆ
ಆಗ ಓ ಸಖಿ, ನೀ ಸುಖಿ..
———————

Leave a Reply

Back To Top