ಕಾವ್ಯ ಸಂಗಾತಿ
ಲೋಹಿತೇಶ್ವರಿ ಎಸ್ ಪಿ
ಚೈತನ್ಯ….
ಶತಮಾನಗಳು ಕಳೆದ ಮೇಲೆ ಮೂಲೆ ಮನೆಯ ನೆನಪಾಗಿ
ಮೂಲೆ ಮನೆಯ ದೇವರಮನೆ ಮಾಡಲು ಸಜ್ಜಾಗಿದ್ದಾರೆ
ಯಾರು ಅಂತ ಕೇಳಿದರೆ ಮೈ ರೋಮಾಂಚನ ಗೊಳ್ಳುತ್ತೆ. ಯಾಕೆ ಗೊತ್ತಾ ?
ಇಷ್ಟು ದಿನ ಮೂಲೆ ಮನೆಯೆಂದು ಕಸ, ಪೊರಕೆ, ಚಪ್ಪಲಿಯೇ ಕಂಡಿದ್ದಾಯಿತು.
ಸಿರಿ ಸಂಪತ್ತು ಆಸ್ತಿ ಪಾಸ್ತಿ ಗಾಡ್ರೇಜೀನ ಕೀಲಿ ಕೈಯ ಮಾತು
ದೇವಲೋಕಕ್ಕೂ ನರಲೋಕಕ್ಕೂ ನಡುವಿನ ಅಂತರದಂತಹದ್ದು…
ಸಜ್ಜಿನ ಹಿಂದಿನ ಸಂಚು ಅರಿಯದೆ ಎಲ್ಲರೂ ನನ್ನವರೆಂದು ಸಂಚಿನ ಚಿಂತೆ ಮರೆತೇ ಹೋಗಿತ್ತು…
ಮಾರನೇ ದಿನವೇ ಎಲ್ಲವೂ ಸಜ್ಜಾಗಿತ್ತು
ಗಾಡ್ರೇಜೀನ ಕೀಲಿ ಕೈ ನನ್ನ ಕೈ ಸೇರಿತ್ತು
ಆನಂದದಲ್ಲಿ ತೇಲಾಡಿ ಎಲ್ಲರಿಗೂ ಸುದ್ದಿಯ ತಿಳಿಸಿಯೇ ಬಿಟ್ಟೆ
ಅದೇ ಅಮಲಿನಲ್ಲಿ ಮಂಚದ ಮೇಲೆ …ರಾಣಿಯ ಹಾಗೆ
ನಿದ್ದೆಗೆ ಜಾರಿ ಕನಸು ಕಾಣತಲಿ ಸ್ವಪ್ನ ಲೋಕಕೆ ಜಾರಿದೆ
ಯಾರೊ ಕೈ ಕಾಲನು ಬಿಗಿಯಾಗಿ ಹಿಡಿದು ಹ್ಞೂಂ ಬೇಗ ಬೇಗ ಎನ್ನುತ್ತಿದ್ದ ದನಿ
ಜೊತೆಗೆ ಉಸಿರಾಡಲು ಆಗದಂತೆ ಅದುಮಿದ ಭಾವ…….
ಲೋಕದ ಕಣ್ಣಿಗೆ ನಾಯಕರ ಹೊರತು ನಾಯಕಿಯರ ಗುರುತಿಲ್ಲ
ಲೋಕದ ಡೊಂಕಷ್ಟೇ ಅಲ್ಲ ಇದು ಎಲ್ಲರ ಮನದ ಡೊಂಕಿನ ಕತೆ
ಜೀವ ಕೊಟ್ಟವಳ ಜೀವವನ್ನೇ ತೆಗೆಯಲು ಹೊರಟ ಎಲ್ಲರ ಕತೆ…
ನಿತ್ಯ ಕಾಡುವುದೊಂದೆ ವಿಶಯ…. ಚೈತನ್ಯ ತುಂಬುವ ಮನದ ಚೈತ್ರವ……
ಮಸಣವಾಗಿಸುವುದೆಕೆಂದು…?….
——————————–
ಲೋಹಿತೇಶ್ವರಿ ಎಸ್ ಪಿ