ಕವಿತಾ ವಿರೂಪಾಕ್ಷಕವಿತೆ-“ಅವಳೊಳಗಿನ ಕನಸುಗಳೂ ಮರಿ ಹಾಕಲಿ ಬಿಡಿ ಸ್ವಾಮಿ..”

ಹುಟ್ಟಿದಾಗಲೇ
ಹೆಣ್ಣೆಂದು ತಿಳಿದು
ಸಣ್ಣದಾದ ಮುಖಗಳು…!

ನೋಡಿಯೇ
ಸುಮ್ಮನಾದಳೇನೋ
ಇವಳು…!

ಬೆಳೆದಂತೆಲ್ಲಾ,
ಸಂಕೋಲೆಗಳೇ…!
ನಿಲ್ಲಬೇಡ,ನಗಬೇಡ,
ಹೊರಹೋಗಬೇಡ,
ತಲೆ ಎತ್ತಬೇಡ,
ಮಾತಾಡಬೇಡ,
ಎದುರಾಡಬೇಡ…!!
ಮತ್ತೇನು ಮಾಡಬೇಕು
ಅಹಲ್ಯೆಯಂತೆ
ಕಲ್ಲಾಗಬೇಕೆ…?!

ಊಹೂಂ..
ಅವರೂ,ಇವರೂ,ಯಾರ್ಯಾರೋ
ಸಮಾಜವಿತ್ತ ಶಾಪಕ್ಕೆ
ಏನಾಗಬೇಕೋ
ತಿಳಿಯಲಿಲ್ಲ ಅವಳಿಗೆ….!

ಅವಳದೇ ಕೋಣೆಯ
ನಾಲ್ಕು ಗೋಡೆಗಳಿಗೇನಾದರೂ
ಬಾಯಿದ್ದಿದ್ದರೆ ಗೊತ್ತಾಗುತ್ತಿತ್ತು…,



ಹಾಡಾಗಿರುವ ಮಾತುಗಳು
ಪದವಾಗಿರುವ ಬವಣೆಗಳು
ಆಗಸವನ್ನೇ ಮೀರಿ ಹಾರುವ
ಬಯಕೆಯಾ ಕನಸುಗಳು.,
ಮರಿ ಹಾಕದೆ ಹಾಗೇ ಉಳಿದಿರುವುದು…!?

ಅಪ್ಪನದೋ, ಅಣ್ಣನದೋ
ಜೊತೆ ಜೊತೆಯೇ ಹೆಜ್ಜೆ ಹಾಕುವ
ಸಂಗಾತಿಯದೋ..
ಪ್ರೋತ್ಸಾಹದ ಬೆಚ್ಚನೆಯ
ಕಾವು ಸಿಗಬೇಕಷ್ಟೇ…

ಮೊಟ್ಟೆಯೊಡೆದು
ಮರಿ ಹೊರಬರುವಂತೆ
ಕಾದು ಕುಳಿತ ಕನಸೆಲ್ಲವೂ
ರೆಕ್ಕೆ ಬಿಚ್ಚಿ ಹಾರುತ್ತವೆ ನಭಕ್ಕೆ
ಪುರ್ರೆಂದು…!!

ಪ್ಲೀಸ್..,
ಅವಳೊಳಗಿನ ಕನಸುಗಳೂ
ಮರಿಹಾಕಲಿ ಬಿಡಿ ಸ್ವಾಮಿ…!!

One thought on “ಕವಿತಾ ವಿರೂಪಾಕ್ಷಕವಿತೆ-“ಅವಳೊಳಗಿನ ಕನಸುಗಳೂ ಮರಿ ಹಾಕಲಿ ಬಿಡಿ ಸ್ವಾಮಿ..”

Leave a Reply

Back To Top