ವಧುವರರಿಬ್ಬರೂ ಹೊರಟು ನಿಂತರು. ಇಬ್ಬರೂ ನಾರಾಯಣನ್ ಹಾಗೂ ಇನ್ನುಳಿದ ಹಿರಿಯರ ಪಾದ ಸ್ಪರ್ಶಿಸಿ ವಂದಿಸಿದರು. ನಾರಾಯಣನ್….” ಇಬ್ಬರೂ ನೂರು ಕಾಲ ಸುಖವಾಗಿ ಬಾಳಿ…. ಸುಂದರ ಸುಖಮಯ ದಾಂಪತ್ಯ ನಿಮ್ಮದಾಗಲಿ…. ಉತ್ತಮ ಗುಣವುಳ್ಳ ಮಕ್ಕಳನ್ನು ಪಡೆಯಿರಿ…. ನಮ್ಮ ಕುಲದೈವ ಶ್ರೀ ಕೃಷ್ಣ, ಭಗವತಿ ಹಾಗೂ ನಾಗದೇವತೆಗಳ ಆಶೀರ್ವಾದ ನಿಮಗೆ ಸದಾ ಇರಲಿ…. ಒಬ್ಬರನ್ನು ಇನ್ನೊಬ್ಬರು ಅರಿತು ಬಾಳಿ”…. ಎಂದು ಮನ ತುಂಬಿ ಹಾರೈಸಿದರು. ಸುಮತಿ ಅಳು ತಡೆಯಲಾರದೆ ಒಳಗೆ ನಡೆದಳು. ಅಮ್ಮನ ನೆನಪು ಬಹಳವಾಗಿ ಕಾಡಿತು. ಕಣ್ಣುಮುಚ್ಚಿ ಅಮ್ಮನನ್ನು ನೆನೆದಳು. ಅರಿವಿಲ್ಲದೇ ಕಣ್ಣೀರ ಹನಿಗಳು ಅವಳ ಕೆನ್ನೆಯ ಮೇಲೆ ಜಾರಿದವು. ಅವಳ ಹಿಂದೆಯೇ ಗೆಳತಿ ಹಾಗೂ ಅವಳ ಅಕ್ಕ ಬಂದರು. ಸಮಾಧಾನದ ಮಾತುಗಳನ್ನು ಹೇಳಿ ಸಾಂತ್ವನ ಪಡಿಸಿದರು. ಅವಳ ಅಕ್ಕ ತನಗೆ ತಿಳಿದಂತೆ ದಾಂಪತ್ಯದ ಕೆಲವು ಸೂತ್ರಗಳನ್ನು ಹೇಳಿಕೊಟ್ಟಳು….” ಏನೇ ಬಂದರೂ ಪತಿಗೆ ಎದುರು ಮಾತನಾಡಬೇಡ…. ತಗ್ಗಿ ಬಗ್ಗಿ ನಡೆ…. ಎಂತಹ ಪ್ರಸಂಗ ಬಂದರೂ ಮನಸ್ತಾಪಕ್ಕೆ ಅವಕಾಶ ಕೊಡಬೇಡ…. ದೇವರನ್ನು ಧ್ಯಾನಿಸುವುದು ಮರೆಯಬೇಡ… ಪತಿಯೇ ಪರದೈವ…. ಅವರ ಇಚ್ಛೆಗೆ ತಕ್ಕಂತೆ ನಡೆದುಕೋ…. ಬೇಸರ ದುಖಃ ಆದಾಗ ಅಮ್ಮನನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಾ ಎಲ್ಲವನ್ನೂ ನಿಭಾಯಿಸುವುದನ್ನು ರೂಢಿ ಮಾಡಿಕೋ…. ಏನಾದರೂ ಸಣ್ಣ ಪುಟ್ಟ ತೊಂದರೆಗಳು ಆದರೆ ನಾನು ನಿನ್ನ ಭಾವ ಹಾಗೂ ಅಪ್ಪ ಇದ್ದೇವೆ… ಎಂದು ಹೇಳಿ ಕೈ ಹಿಡಿದು ಕರೆದುಕೊಂಡು ಬಂದಳು. ಅವಳ ಗೆಳತಿಯ ಕಣ್ಣ ತುಂಬಾ ನೀರು ತುಂಬಿತ್ತು. ಸೀರೆಯ ಅಂಚಿನಿಂದ ಸುಮತಿಗೆ ಕಾಣದಂತೆ ಒರೆಸಿಕೊಳ್ಳುತ್ತಾ ದಾರಿಯ ಕೊನೆಯವರೆಗೂ ಅವಳ ಜೊತೆ ನಡೆದಳು.  ಸುಮತಿಯ ಅಕ್ಕ ಭಾವ ಮತ್ತು ಅಪ್ಪ ಹಾಗೂ ಕೆಲವು ಹಿರಿಯರು ಅವರ ಜೊತೆ ಅವರ ಮನೆಯವರೆಗೂ ಬಿಟ್ಟು ಬರಲು ಜೊತೆಗೂಡಿದರು. 

ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಿದ್ದ ರೈಲ್ವೆ ಸೇತುವೆಯನ್ನು ದಾಟಿ ಅವರೆಲ್ಲರೂ ಹೋಗಬೇಕಾಗಿತ್ತು. ಕಬ್ಬಿಣದ ಸೇತುವೆ ಮೇಲೆ ನಿಧಾನವಾಗಿ ಒಂದೊಂದೇ ಹೆಜ್ಜೆ ಇಡುತ್ತಾ ನವ ವಧು ಸುಮತಿ ವೇಲಾಯುದನ್ ರವರ ಹಿಂದೆ ನಡೆದಳು.ಅವಳ ಹೆಜ್ಜೆಗಳು ಭಾರವಾಗಿ ನಡುಗುತ್ತಾ ಇದ್ದವು. ಕಬ್ಬಿಣದ ಸೇತುವೆಯ ಮೇಲೆ ನಡೆಯುವಾಗ ಸೇತುವೆಯ ತುದಿಗೆ ಅವಳು ಉಟ್ಟಿದ್ದ  ಸೆಟ್ಟು ಸೀರೆ ಸಿಲುಕಿ ಮುಗ್ಗರಿಸುವಂತೆ ಆಯಿತು.  ಹೇಗೋ ಸಾವರಿಸಿಕೊಂಡು ಹೆಜ್ಜೆ ಹಾಕಿದಳು. ಮುಗ್ಗರಿಸಿದ ಸುಮತಿಯನ್ನು ವೇಲಾಯುಧನ್ ಒಮ್ಮೆ ತಿರುಗಿ ನೋಡಿ ಯಾವ ಭಾವನೆಯನ್ನೂ ವ್ಯಕ್ತ ಪಡಿಸದೇ ಮುನ್ನಡೆದರು. ಸುಮತಿಗೆ ಒಳಗೊಳಗೇ ಅಳುಕು. ಪತಿಯನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಅವರು ಹೇಗೋ ಏನೋ…. ನಾನು ಮುಗ್ಗರಿಸಿ ಬೀಳಲು ಹೋದರೂ ಯಾವುದೇ ಪ್ರತಿಕ್ರಿಯೆ ಇಲ್ಲ ಇವರಿಂದ….ಭಯವಾಗಿದೆ…. ಇನ್ನು ನಾನು ಒಂಟಿಯೇ? ಹಿಂದೆ ತಿರುಗಿ ಅಕ್ಕನ ಮುಖ  ನೋಡಿದಳು. ಇಕ್ಕಟ್ಟಾದ ಸೇತುವೆಯ ಮೇಲೆ ನಡೆಯಲು ಸುಮತಿ ಹರಸಾಹಸ ಪಾಡಬೇಕಾಯಿತು. ಇದಕ್ಕಿಂತ ಮೊದಲೆಲ್ಲ ಈ ಸೇತುವೆಯ ಮೇಲೆ ನಡೆಯುವಾಗ ಅನಾಯಾಸವಾಗಿ ನಡೆಯುತ್ತಾ ಇದ್ದ ಅವಳು ಇಂದು ಹೊಸದಾಗಿ ನಡೆಯುತ್ತಿರುವಂತೆ ಹೆದರುತ್ತಾ ಹೆಜ್ಜೆ ಇಡುತ್ತಿದ್ದಳು. ಹಾಗೂ ಹೀಗೂ ಸೇತುವೆ ದಾಟಿದಳು. ಅಲ್ಲಿಂದ ಇಪ್ಪತ್ತು ನಿಮಿಷದಲ್ಲಿ ವೇಲಾಯುಧನ್ ಬಾಡಿಗೆಗೆ ಪಡೆದಿದ್ದ ಮನೆಗೆ ತಲುಪಿದರು. ಮೊದಲೇ ಮನೆಯನ್ನು ತಲುಪಿದ್ದ ಹೆಂಗಳೆಯರು ಆರತಿ ತಟ್ಟೆ ಹಿಡಿದು ಬಂದು ನವ ವಧೂವರರಿಗೆ ಆರತಿ ಎತ್ತಿ ಸುಮತಿಯ ಕೈಗೆ ಎಣ್ಣೆ ಹಾಗೂ ಒಂದು ಬತ್ತಿಯನ್ನು ಇಟ್ಟು ಹಚ್ಚಿದ ನಿಲವಿಳಕ್ಕನ್ನು  ಕೊಟ್ಟು ಮುಂಬಾಗಿಲ ಹೊಸಿಲಿನ ಮೇಲೆ ಅಕ್ಕಿ ತುಂಬಿ ಇಟ್ಟಿದ್ದ ಸೇರನ್ನು ಬಲಗಾಲಿನಿಂದ ಮೆಲ್ಲಗೆ ಸ್ಪರ್ಶಿಸಿ ಮನೆಯ ಒಳಗೆ ಬರಲು ಹೇಳಿದರು.

ಸುಮತಿ ನಡುಗುವ ಕೈಯಿಂದಲೇ ನಿಲವಿಳಕ್ಕನ್ನು ಹಿಡಿದುಕೊಂಡು ಅಕ್ಕನ ಮುಖ ನೋಡಿದಳು. ಅವಳ ಅಕ್ಕ ಮೆಲ್ಲನೆ ಅವಳ ಕಿವಿಯ ಬಳಿ ಹೇಳಿದಳು…. “ಹೆದರಬೇಡ…. ಭದ್ರವಾಗಿ ನಿಲವಿಳಕ್ಕನ್ನು  ಹಿಡಿದುಕೋ…. ನಿಧಾನವಾಗಿ ಅಕ್ಕಿಯು ಮನೆಯ ಒಳಗೆ ಹರಡದೇ ಚೆಲ್ಲುವಂತೆ ಬಲಗಾಲಿನಿಂದ ಸ್ಪರ್ಶಿಸು”….ಎಂದಾಗ ಸ್ವಲ್ಪ ಧೈರ್ಯ ತಂದುಕೊಂಡು ಅಕ್ಕ ಹೇಳಿದಂತೆ ಮಾಡಿದಳು…. ಅಕ್ಕಿಯು ಹೆಚ್ಚಾಗಿ ಹರಡದೇ ನೆಲಕ್ಕೆ ವಾಲಿದ ಸೇರಿನಿಂದ ಸ್ವಲ್ಪವೇ ಕೆಳಗೆ ಬಿದ್ದು ಅರ್ಧ ಚಂದ್ರಾಕೃತಿಯಲ್ಲಿ ಸೇರಿನ ಸುತ್ತ ಹರಡಿತು. ಮನೆಯ ಒಳಗೆ ಇದ್ದ ಹಿರಿಯರಿಗೆಲ್ಲಾ ಬಹಳ ಸಂತೋಷವಾಯಿತು. ಪರವಾಗಿಲ್ಲ ವೇಲಾಯುಧನ ವಧು ಸುಂದರಿಯೂ ಸುಶೀಲೆಯೂ ಬುದ್ಧಿವಂತಳೂ ಕುಟುಂಬವನ್ನು ಮುತುವರ್ಜಿಯಿಂದ ನಡೆಸುವ ಸರ್ವಗುಣ ಸಂಪನ್ನೆಯೂ ಆಗಿದ್ದಾಳೆ ಎಂದು ಮನದಲ್ಲಿ ಅಂದುಕೊಂಡು ನಗುಮೊಗದಿಂದ ಸುಮತಿಯನ್ನು ಒಳಗೆ ಬರಮಾಡಿಕೊಂಡು ನಿಲವಿಳಕ್ಕನ್ನು ದೇವರ ಮುಂದೆ ಇಡುವಂತೆ ಹೇಳಿದರು. ವಧೂವರರು ಶ್ರೀ ಕೃಷ್ಣನ ಪುಟ್ಟ ವಿಗ್ರಹಕ್ಕೆ ನಮಸ್ಕಾರ ಮಾಡಿದರು. ಸುಮತಿಗೆ ಬಹಳ ಆನಂದವಾಯಿತು. ತನ್ನ ಜೊತೆಗೆ ಇಲ್ಲಿ ಪ್ರಿಯ ದೈವ ಶ್ರೀ ಕೃಷ್ಣನು ಇರುವನು ನನ್ನ ಕಾವಲಿಗೆ ಎಂದು ಮನದಲ್ಲೇ ಇಷ್ಟ ದೈವಕ್ಕೆ ಸಾವಿರ ಪ್ರಣಾಮ ಸಲ್ಲಿಸಿದಳು.  ಅವಳ ಅಕ್ಕ ಹಾಗೂ ಉಳಿದ ಹೆಂಗಳೆಯರು ಸೇರಿ ರುಚಿಯಾದ ಅಡುಗೆ ಮಾಡಿದರು. ಊಟದ ನಂತರ ಎಲ್ಲರೂ ಹೊರಟರು. ನವ ವಧೂವರರಿಗೆ ಶುಭಾಶಯಗಳನ್ನು ತಿಳಿಸಿ ಇಬ್ಬರಿಗೂ ವಂದಿಸಿ ಆಶೀರ್ವದಿಸಿ ಎಲ್ಲರೂ ಹೊರಟು ನಿಂತಾಗ ಸುಮತಿಗೆ ಅಳು ತಡೆಯಲು ಸಾಧ್ಯವಾಗಲಿಲ್ಲ. ಅಪ್ಪನ ಮುಖ ನೋಡಿದಳು. ಅವರ ಕಣ್ಣುಗಳು ಹನಿಗೂಡಿದ್ದರೂ ಮುಖದಲ್ಲಿ ಜವಾಬ್ದಾರಿ ಅಳಿಯನಿಗೆ ವಹಿಸಿದ ನೆಮ್ಮದಿ ಇತ್ತು. 

ಸುಮತಿ ಅಕ್ಕನನ್ನ ಅಪ್ಪಿಕೊಂಡಳು. ಅವಳಿಗೂ ಅಳು ಬಂದು ಗಂಟಲು ಕಟ್ಟಿತು. ಏನೂ ಹೇಳಲು ಸಾಧ್ಯವಾಗದೇ ಅವಳ ಭುಜ ತಟ್ಟಿ ಬೆನ್ನು ಸವರಿ ಸಾಂತ್ವನ ಮಾಡಿದಳು. ಸುಮತಿ ಅಕ್ಕನ ಕಿವಿಯಲ್ಲಿ ಹೇಳಿದಳು…. “ಅಮ್ಮ ನಮ್ಮ ಜೊತೆಗೆ ಇಲ್ಲವಲ್ಲ…. ಇಲ್ಲಿ ನಡೆದ ಯಾವುದೇ ವಿಷಯಗಳನ್ನು ತಿಳಿಯದೇ ನಮ್ಮನ್ನು ನೋಡದೇ ಅದೆಷ್ಟು ಸಂಕಟ ಪಡುತ್ತಾ ಇರುವರೋ….ಅಮ್ಮನ ಆಶೀರ್ವಾದ ಇಲ್ಲದೇ ಈ ಹೊಸ ಜೀವನ ಹೇಗೆ ನಡೆಸಲಿ?…. ಒಮ್ಮೆಯಾದರೂ ಅಮ್ಮನನ್ನು ನೋಡಬೇಕಿತ್ತು. ನನ್ನವರು ಹೇಗೋ ಗೊತ್ತಿಲ್ಲ….ಇಲ್ಲಿಯವರೆಗೂ ಒಂದು ಮಾತು ಕೂಡಾ ಆಡಿಲ್ಲ…ನನಗೆ ಭಯವಾಗಿದೆ…. ನೀವೆಲ್ಲರೂ ಈಗ ನನ್ನನ್ನು ಇಲ್ಲಿ ಬಿಟ್ಟು ನಿಮ್ಮ ಮನೆಗೆ ಹೊರಟು ಹೋಗುವಿರಿ…. ನನಗೆ ತಿಳಿ ಹೇಳಿ ಧೈರ್ಯ ತುಂಬಿ ಮಾರ್ಗದರ್ಶನ ನೀಡುವವರು ಯಾರು?… ಎಂದು ಅಕ್ಕನ ಭುಜಕ್ಕೆ ತೋಳು ಆನಿಸಿ ಸದ್ದಿಲ್ಲದೇ ಅತ್ತು ಸ್ವಲ್ಪ ಹಗುರಾದಳು. ಅಕ್ಕನಿಗೂ ಕೂಡಾ ಮನಸ್ಸಿಗೆ ಏನೋ ತಳಮಳ. ತನ್ನ  ವಿವಾಹ ಆದಾಗಲೂ ಹೀಗೇ ನೊಂಡಿದ್ದೆ ಅಲ್ಲವೇ ಎಂದು ನೆನೆದುಕೊಂಡು…. “ಸುಮತೀ ಹೆಣ್ಣಿನ ಜೀವನ ಹೀಗೆಯೇ…. ಹುಟ್ಟಿದ ಮನೆ ತೊರೆದು ಅನ್ಯ ಮನೆ ಸೇರಿ ಆ ಮನೆ ಬೆಳಗುವಳು…. ಆ ಕುಟುಂಬ ವೃಕ್ಷವನ್ನು ಬೆಳೆಸುವವಳು….ನೀನು ಬುದ್ಧಿವಂತೆ ದಿನ ಕಳೆದ ಹಾಗೆ ನೀನೂ ಈ ಹೊಸ ಜೀವನಕ್ಕೆ ಹೊಂದಿಕೊಳ್ಳುವೆ…. ಅಮ್ಮ ಇಲ್ಲಿ ಇಲ್ಲದಿದ್ದರೂ ಸದಾ ನಿನ್ನ ಜೊತೆಗೆ ನಿನ್ನ ಮನದಲ್ಲಿ ಇರುವರು…. ನೀನು ಅವರ ಮುದ್ದಿನ ಮಗಳು ಅಲ್ಲವೇ?…. ನಿನ್ನ ಜೊತೆ ನಮ್ಮ ಕುಲದೈವ ಕೂಡಾ ಸದಾ ನಿನ್ನ ರಕ್ಷೆಗೆ ಇರುವನು…. ಹಾಗಾಗಿಯೇ ನೋಡು…. ಇಲ್ಲಿಯೂ ಕೃಷ್ಣನು ಇರುವನು”…. ಎಂದು ಶ್ರೀ ಕೃಷ್ಣನ ಮುದ್ದಾದ ಪುಟ್ಟ ವಿಗ್ರಹವನ್ನು ತೋರಿಸುತ್ತಾ ತಂಗಿಗೆ ಸಾಂತ್ವನ ಮಾಡಿದಳು.


Leave a Reply

Back To Top