ಆಸೀಫಾ ಅವರ ಹೊಸ ಗಜಲ್

: ಅವನು ಮುತ್ತಿಟ್ಟು ಹೋದ ಕೆನ್ನೆಯೊಳಗಿನ ಮತ್ತಿನ್ನೂ ಇಳಿದಿಲ್ಲ
ಅವ ನಡೆದಾಡಿದ   ಹಾದಿಯೊಳಗಿನ ಹೆಜ್ಜೆಗಳಿನ್ನೂ ಮಾಸಿಲ್ಲ

ಸಾರಿದ ಸತ್ಯವೆಲ್ಲಾ ಉಸಿರುಗಟ್ಟಿ ಮಾತಿಲ್ಲದಂತೆ ನರಳುತಿದೆ
ಸವರಿದ ಮುಂಗುರುಳು ಮೌನಮುರಿದೇನೂ  ಹೇಳಲಿಲ್ಲ

ಕೈಹಿಡಿದು ಸೆಳೆದ ಕ್ಷಣ ಮನಮಲ್ಲಿಗೆ ಬಿರಿದು ಕಂಪು ಬೀರಿತ್ತು
ಗಾಳಿಯೊಳಗೆ ಚೆಲ್ಲಿದ ಪ್ರೇಮ ಗಂದವದು ಇನ್ನೂ ಚೆದುರಿಲ್ಲ



ಎದೆಯ ವೀಣೆ ಮೀಟಿ ಭಾವದಲೆಗಳಲಿ ಎನ್ನ ತೇಲಿಸಿದ
ನೆನಪಿನಂಗಳದ ಬೆಳದಿಂಗಳಲ್ಲರಳಿದ ಹೂವಿನ್ನೂ ಬಾಡಿಲ್ಲ

ಬಿಸಿಲ ಬೇಗೆಯಲಿ ಮಿಂದೆದ್ದ ಹೊಳಪಿನಂದದಿ ಆ ಕಂಗಳು
ಆ ನೋಟದಲಿ ಮುಳುಗಿದ ನಯನಗಳಿನ್ನೂ ಮೇಲೇರಲಿಲ್ಲ

ಜಾತ್ರೆಯೊಳಗೂ ಜಾಡು ಬಿಟ್ಟು ಹಿಂಬಾಲಿಸೆಂದ ಮಾಯಗಾರ
ಬಾಹುಗಳಲಿ ಬಿಗಿದಪ್ಪಿದ ಬೆಚ್ಚನೆಯ ಬಿಸುಪಿನ್ನೂ ಬಿಡಲಿಲ್ಲ

ಚಂದಿರನ ಬೆಳಕಲ್ಲಿ ದಾರಿತಪ್ಪಿದ ಕತ್ತಲು ಅಸ್ಮಿತೆಯ ಅರಸುತಿದೆ
ನಿಶೆಯ ಕಿಸೆಯೊಳಗಿನ ಆಸೀಯ ಕನಸು ಗೂಡಿನ್ನೂ ತೊರೆದಿಲ್ಲ

Leave a Reply

Back To Top