ಕಾವ್ಯ ಸಂಗಾತಿ
ಕವಿತಾ ವಿರೂಪಾಕ್ಷ ಕವಿತೆ-
ಒಂದಿರುಳು ತೋಟದಲಿ….
ಒಂದಿರುಳು ತೋಟದಲಿ
ದುಂಡು ಮಲ್ಲಿಗೆ ಬಳ್ಳಿಯಲಿ
ಮೈನೆರೆದು ನಗುತಿರಲು ತೋಟದಲ್ಲೆಲ್ಲಾ ಸುವಾಸನೆಯ ಘಮಲು …!
ಚಂದದ ಸುಮವ ನೋಡಲು
ಇಡೀ ಹೂವು ಸಂಕುಲವೆ ಬರಲು
ತುಂಬಿತು ತೋಟದ ಬಯಲು….
ತುಂಬಿದ ಬಯಲಲಿ
ಸಂಪಿಗೆ,ಸೇವಂತಿಗೆ,ಇರುವಂತಿಗೆ,
ಸುಗಂಧರಾಜ,ಕಡುಗೆಂಪು ರೋಜ
ಜಾಜಿ,ಲಿಲ್ಲಿ,ಕನಕಾಂಬರ…,
ಬಂದಿರಲು ;
ಇಡಿ ತೋಟವೇ ಸುಂದರ ದೃಶ್ಯಕಾವ್ಯ ….!!
ಮೆಲ್ಲಗೆ ಮಲ್ಲಿಗೆಯ
ಬಳಿ ಸಾರಿದ ಸಂಪಿಗೆ
ಭೂಮಿಯ ಸೌಂದರ್ಯದ ರಾಣಿ
ನೀನೇ ಗೆಳತಿ..,
ನಿನ್ನಯ ಗಲ್ಲಕ್ಕಿರಲಿ
ನನ್ನಯ ದೃಷ್ಟಿಯ ಬೊಟ್ಟು,
ಎಂದವಳ ಹೊಗಳಲು
ಸನಿಹವೇ ಕುಳಿತ ಗುಲಾಬಿ
ಮೂತಿಯ ತಿರುವಿದಳು …!!?
ಇದ ಕಂಡ ಸಂಪಿಗೆ
ಗುಣಕ್ಕೆ ಮತ್ಸರ ಬೇಡವೇ ಗೆಳತಿ
ಅವಳೇ ಹೂ ಸಂಕುಲಕ್ಕೆ ಒಡತಿ
ಪುಟ್ಟದಾದರೂ
ಅವಳ ಶ್ರೇಷ್ಠತೆ ಹಿರಿದು..
ದೈವದ ಪೂಜೆಗೆ ಅಗ್ರಗಣ್ಯ ಅವಳು
ಅವಳದೇ ಹಾರದಲಿ ಜೊತೆ ಅಲಂಕಾರಕೆ ನಾವುಗಳು..,
ದೈವದ ಅಂದಕೆ ಕರಗುವ
ಸಣ್ಣತನವೇಕೆಮಗೆ..?!
ಅವಳ ಸಂಕುಲವೇ
ನಾವು ಎಂಬ, ಹೆಮ್ಮೆ ಇರಲಿ
ನಿನಗೆ ಗೆಳತಿ
ಹೆಮ್ಮೆ ಇರಲಿ…!!!
——————————
ಕವಿತಾ ವಿರೂಪಾಕ್ಷ