ಅಮು ಭಾವಜೀವಿ ಮುಸ್ಟೂರು ಅವರ ಗಜಲ್

ಬದುಕಿನ ಹಾದಿಯನ್ನು ಅಡ ಇಡಲಾಗಿದೆ
ಬಸಿದ ಬೆವರನ್ನು ಇಲ್ಲಿ ಅಡ ಇಡಲಾಗಿದೆ

ಬಿರು ಬೇಗೆಯಲ್ಲಿ ದಣಿವಿರದೆ ದುಡಿವ ಜೀವಗಳುಂಟು
ಬೆಳಗು ಬೈಗುವರೆಗೂ ದುಡಿದುದನೆಲ್ಲ ಶರಾಬಿಗೆ ಅಡ ಇಡಲಾಗಿದೆ

ಸತಿಸುತರೆಲ್ಲ ಹಸಿವೆಯಿಂದ ನರಳುತ್ತಿದ್ದಾರೆ
ದುಡಿದ ಬಿಡಿಗಾಸನು ‘ಅವಳ’ ಸೆರಗಿಗೆ ಅಡ ಇಡಲಾಗಿದೆ

ಸಾಲಗಾರನ ಮುಂದೆ ಸಂಕಟ ಹೇಳಿಕೊಂಡರೇನು ಪ್ರಯೋಜನ
ಬಡಪಾಯಿ ಬದುಕನ್ನು ಸಾಲದ ಶೂಲದ ಸಾವಿಗೆ ಅಡ ಇಡಲಾಗಿದೆ

ಎಷ್ಟೇ ಬುದ್ಧಿವಾದ ಹೇಳಿದರು ಕೆಲಸಕ್ಕೆ ಬಾರದು ಅಮು
ಕ್ಷಣದ ಆಮಿಷಗಳಿಗೆ ದುಡಿದ ಇಡೀ ಬದುಕನ್ನು ಅಡ ಇಡಲಾಗಿದೆ

——————-

Leave a Reply

Back To Top