ಈಗ ಮದುವಿ ಸೀಜನ್ ಶುರುವಾಗಲತದ. ತಂದಿತಾಯರಿಗಿ ತಮ್ಮ ಮದುವಿಗಿ ಬಂದ ಮಕ್ಕಳಿಗಿ ಮದುವಿ ಮಾಡಿ ಜವಾಬ್ದಾರಿ ಕಳಕೊಳ್ಳೊದು ಒಂದು ಜೀವ ಮಾನದ ಸಾಧನೆ ಆಗಿರತದ. ತಂದೆತಾಯಿ ನೋಡಿ ಒಪ್ಪಿ ಮಾಡಿದ್ದ ಆ ಮದುವಿಗಿ ಒಂದು ಸಂಭ್ರಮ ಇರತದ.ಮಕ್ಕಳೆ ಒಪ್ಪಿ ನಿಶ್ಚಯಿಸಿಕೊಂಡಿದ್ದು ಹೆತ್ತವರು ಒಪ್ಪಿಕೊಳ್ಳೋದು ಸ್ವಲ್ಪ ಕಷ್ಟ. ಆದರೂ ಮದುವೆ ಎಂಬೋ ಋಣಾನುಭಂಧಕ್ಕ ಒಳಪಡೋದು ವಯಸ್ಸಿಗಿ ಬಂದ ನಮ್ಮ ಮಕ್ಕಳಿಗಿ ಅನಿವಾರ್ಯ.

ನನ್ನ ಸಂಭಂಧಿಕರು ಒಬ್ರೂ ಫೋನ್ಮಾಡಿ ತಮ್ಮ ಮಗನಿಗಿ ಹೆಣ್ಣು ನೋಡಲತಿವಿ , ಇಂಜೀನೀಯರ್ ಅದಾನ , ಎಲ್ಲಾದ್ರೂ ಇಂಜೀನಿಯರ್ ಹುಡುಗಿ ಇದ್ರ ನೋಡ್ರೀ ಅಂತ ಹೇಳಿದ್ರೂ . ಎರಡು ವರ್ಷದಿಂದ ಅವರು ಮಗನಿಗಿ ಹೆಣ್ಣು ನೋಡತಿರೋ ವಿಷಯ ತಿಳಿದಿತ್ತು. ಒಳ್ಳೆಯ ಉದ್ಯೋಗ , ಫಾರಿನ್ ನಲ್ಲಿರೋ ಹುಡುಗ , ಹೆತ್ತವರಿಗೆ ಒಳ್ಳೆ ಆಸ್ತಿ ಇತ್ತು.

ಯಾಕ , ಹುಡುಗಿ ಭಾಳ ಆರಸಲತಿರೇನು‌, ಎಂಥ ಹುಡುಗಿ ಬೇಕು ನಿಮಗ ಅಂತ ನಕ್ಕೋತ ಕೇಳ್ದೆ.

ಈಗ ಹುಡುಗಿ ಆರಸೋ ಕಾಲ ಇಲ್ರೀ , ಹುಡಗಗ ಆರಸಿ ಹುಡಗಿ ಕೊಡಲತಾರ ಅಂತ ಅವರೂ ನಕ್ಕೋತ ಹೇಳಿದ್ರೂ. ನಮ್ಮ ಹುಡುಗ ಫಾರಿನ್ ದಾಗ ಇರತಾನಲ್ಲ್ರೀ ಅದಕ್ಕ ಯಾರೂ ಹೆಣ್ಣ ಕೊಡಲ ಹೋಗ್ಯಾರ್ ನೋಡ್ರೀ , ಈಗ ಎಲ್ಲರಿಗೂ ಇರೋದೆ ಎರಡೆರಡು ಮಕ್ಕಳು. ಇರೋ ಮಕ್ಕಳು ಸನೀನೆ ಇರಲಿ ಅಂತ ಬಗಸತಾರ , ದೂರ ಮಕ್ಕಳಿಗಿ ಮದಿ ಮಾಡಿ ಕೊಡಲಾಕ  ಹೆತ್ತೋರು ಲೆಕ್ಕ ಹಾಕಲತಾರ. ಬ್ಯಾರೆ ದೇಶ ಅಂದ್ರ ನಮ್ಮ ಮಂದಿ  ಬಾಳ ಲೆಕ್ಕ ಹಾಕಲತಾರ , ಅಷ್ಟು ದೂರ ಹೋದ್ರ ಒಂದು ಒಳ್ಳೆದಕ್ಕ , ಒಂದು ಕೆಟ್ಟದಕ್ಕ ಪಟ್ಟನೆ ಬರಕ್ಕ ಆಗಲ್ಲ. ಹೋದ್ರಂದ್ರ ವರ್ಷನುಗಟ್ಲೆ ಬರಲಿಕ್ಕಾಗಲ್ಲ.ಬರಿ ಪೊನ್ದಾಗೆ ಮಾರಿ ನೊಡಕ್ಕೊಂತ ಇರಬೇಕು. ಈಗಿನ್ ಹುಡುಗೇರು ಫಾರಿನ್ ಅಂದ್ರ ಇಷ್ಟ ಪಡಲಹೋಗ್ಯಾರ್ರಿ ಅಂತ ತಮ್ಮ ಮಗನಿಗಿ ಹೆಣ್ಣು ಸಿಗದಿದ್ದಕ್ಕ ವಿಷಾದದಿಂದ ಕಾರಣ ಹೇಳಿದ್ರೂ.

ಕಾಲ ಹ್ಯಾಂಗ್ ಬದಲಾಗತದ ನೋಡ್ರೀ. ಕೆಲ ವರ್ಷಗಳ ಹಿಂದ ಫಾರಿನ್ ಅಳಿಯ ಅಂದ್ರ ಹೆಣ್ಣು ಹೆತ್ತೊರು ಎದ್ದು ಬಿದ್ದು ಹೆಣ್ಣು ಕೊಡಲಾಕ ಲೈನ್ ನಿಲ್ಲತಿದ್ರೂ. ಅದೂ ಅವರು ಕೆಳಿದೋಟು ವರದಕ್ಷಿಣಿ ಕೊಟ್ಟು. ಈಗ ಫಾರನ್ ದಾಗ ಇರೋ ಹುಡಗನಿಗಿ ಹುಂಡಾ ಇಲ್ದೆ ಬರೀ ಹುಡುಗಿ ಕೋಡ್ರೀ ಅಂದ್ರೂ ಯಾರೂ ಕೇರೇ ಮಾಡತಿಲ್ಲ. ಮೊದಲೇ ಹುಡುಗೇರು ಸಿಗೋದು ಕಷ್ಟ ಆಗ್ಯಾದ. ಈಗ ಮೊದಲಿನಂಗ ಇಲ್ಲ ಬಿಡ್ರೀ . ಅಪ್ಪ ಅವ್ವ ನೋಡಿದ್ದಕ್ಕ ಗಂಗೆತ್ತಿನ ಹಾಂಗ ತಲಿ ಹಾಕಿ ಹೂಂ ಅಂತ ಯಾವ‌ ಹುಡಗೇರು ಅನ್ನಲತಿಲ್ಲ . ಹುಡುಗೇರು ಹುಡುಗರಿಗಿ ಬಾಳ ಆರಸಲತಾರ. ಈಗ ಹುಡುಗರಿಗಿ ಪಾಪ  ಅಂಬೋ ಕಾಲ ಬಂದದ.

ಬರಲ್ದೆ ಏನು ಮತ್ತ. ಈಗ ಎಲ್ಲರ ಆರ್ಥಿಕ ಪರಿಸ್ಥಿತಿ ಉತ್ತಮ ಆಗ್ಯದ. ದುಡ್ಡು ಗಳಿಸಿ ಮಕ್ಕಳ ಸಲುವಾಗಿ ಖರ್ಚು ಮಾಡಲಾಕ ಹೆತ್ತವರು ಹಿಂದುಮುಂದು ನೋಡಲತಿಲ. ಎಷ್ಟು ಬೇಕಾದ್ರೂ ಹುಂಡಾ ಕೊಡಲಾಕ ರೆಡಿ ಅದಾರ. ದುಡ್ಡು ಕೊಟ್ಟ ಮ್ಯಾಲ ಉತ್ತಮ ವಸ್ತು ಕೊಳ್ಳಬೇಕೆಂಬ  ಆಸಿ  ಸಹಜನೆ ಬೀಡ್ರೀ .ಅದಕ್ಕ ತಮ್ಮ ಹೆಣ್ಣಮಕ್ಕಳ ಸಲುವಾಗಿ‌‌ ವರ ಆರಸೋದು ಬಾಳ ಬಾರಿಕಿ ಆಗ್ಯದ .ಈಗ ಮದುವಿ ಮಾಡಕೊಳ್ಳೋ ಹುಡುಗರು ಮತ್ತು ಅವರು ಹೆತ್ತೊರು ಹುಡುಗಿ ಹುಡಕಿ  ಹುಂಡಾ ಬ್ಯಾಡ ಏನೂ ಬ್ಯಾಡ್ ಒಂದು ಹುಡುಗಿ  ಸಿಕ್ರ‌ ಸಾಕಪ್ಪ ಅನಲತಾರ.

ಈ ರೀತಿ ಆಗಲಕ ಮುಖ್ಯ ಕಾರಣ ಅಂದ್ರ ಈಗ ಎಲ್ಲರಿಗೂ  ಎರಡೂ ಇಲ್ಲಂದ್ರ ಒಂದೇ ಮಕ್ಕಳು. ಅವರು ವಿದ್ಯಾಬ್ಯಾಸ ಮುಗಸಿ ತಮ್ಮ ಅನ್ನ ಹುಡುಕ್ಕೊಂಡು ದೂರ ಹೊಗೆ . ಇರೋ ದೇಶದಾಗ ದೂರ ಇದ್ರೂ ಯಾವದರ ಎಮರ್ಜೆನ್ಸಿ ಇದ್ರ ಬರತಾರ  ಅಂಬೋ ಭರವಸಿರ ಇರತದ ಹೆತ್ತೊರಿಗಿ , ಬ್ಯಾರೆ  ದೇಶದಾಗ ಇದ್ರ ತಮ್ಮ ಕಷ್ಟದ ಕಾಲದಾಗನೂ ಅವರಿಗಿ ನೆನಸಿಕೊಳ್ಳೊ ಹಂಗ ಇಲ್ಲ.
ಅದಕ್ಕ ಈಗ ಮಕ್ಕಳಿಗಿ ದೂರ ನೆಂಟಸ್ತನ ಮಾಡಿ ಕೊಡಲಾಕ ಅಷ್ಟು ಆಸಕ್ತಿ ತೊರಸವಲ್ರು ,

ಅದಲ್ಲದೆ ಹುಡುಗ ರೈತ ಇದ್ದರಂತೂ ಅವನ ಮದುವಿ ಪಾಡು ಹೇಳಕ್ಕ ಬರಲ್ಲ.ಎಲ್ಲಾ ಹೆಣ್ಣು ಹೆತ್ತವರು ಸಾಫ್ಟವೇರ್ , ಡಾಕ್ಟರ್ , ಬಿಸನೆಸ್ ಮಾಡೊ ವರನೇ ಹುಡಕಿದ ಮ್ಯಾಲ ರೈತ ವರಗಳನ್ನು ಕೇಳೋರ್ಯಾರು. ಹೆಣ್ಣು ಹೆತ್ತವರು ಮಗಳ ಭವಿಷ್ಯದ ಬಗ್ಗೆ ಯೋಚನಿ ಮಾಡೋದು ಸಹಜನೆ ಬಿಡ್ರೀ . ಹೊಲ ಮಾಡಿ ಕೈ ಸುಟ್ಟುಕೊಳ್ಳೊದು ಹೆಚ್ಚಾಗಿದ್ದ ಈ ಕಾಲದಾಗ ಯಾರಿಗಿ ಏನ ಅನ್ನಬೇಕು. ಅತಿವೃಷ್ಡಿ ಅನಾವೃಷ್ಟಿ ಯಿಂದ ಸಾಲದಾಗೆ ಇರೋ ರೈತರ ಪಾಡು ನೋಡಿ ತಮ್ಮ ಹೆಣ್ಣಮಕ್ಕಳಿಗಿ ಕೊಡಲಾಕ ತಂದೆ ತಾಯಿ ಹಿಂದಮುಂದ ನೋಡತಾರ. ಅದಕ್ಕ ಎಲ್ಲಾ ಹಳ್ಳಿಗಳು ಖಾಲಿಯಾಗಿ ಎಲ್ಲರೂ ಸಿಟಿ ಸೇರದು ಹೆಚ್ಚಾಗ್ಯಾದ.

ನಮ್ಮ ಉತ್ತರ ಕರ್ನಾಟಕ ದ ಬಾಳ ಮಂದಿ ಆಗಲೆ ಬೆಂಗಳೂರಿಗಿ ಹೋಗಿ ಸೇರ್ಯಾರ . ಊರ ಕಡಿ ಇರೋದು ಬರಿ ತಂದಿ ತಾಯಿ ಮಾತ್ರ . ವಯಸ್ಸಾದ ಮ್ಯಾಲ ಅವರಿಗಿ ಒಂಟಿತನ ಕಾಡತದ . ಸೀಟಿದಾಗ ಮಕ್ಕಳ ಜೋತಿಗಿ ಹೋಗಿ ಇರಲಾಕ ಹೊಂದಾಣಿಕಿ ಸಮಸ್ಯೆ . ಮಕ್ಕಳೆ ತಂದಿ ತಾಯಿ ಇದ್ದಲ್ಲಿ ಬಂದು ಇರಲಕ್ಕ ಆಗಂಗಿಲ್ಲ. ಎಲ್ಲರ ಮನ್ಯಾಗೂ ಮಕ್ಕಳು ದೂರ ದೂರ .ಅವರನ್ನು ಬೆಳಿಸಿ ಓದಿಸಿ ಹೆತ್ತವರು ತಮ್ಮ ಕಡಿ ಕಾಲಕ್ಕ ಒಂಟೀನೇ .

ಈ ಪರಿಸ್ಥಿತಿ ಗಿ ಈಗ ಯಾರನ್ನೂ ದೋಷ ಮಾಡುಹಂಗಿಲ್ಲ ನೋಡ್ರೀ . ಅಪ್ಪ ಅವ್ವಗ ನೋಡಕ್ಕೊಂತ ಕೂತ್ರ ಮಕ್ಕಳ ಜೀವನ ನಡಿಯೋದು ಹ್ಯಾಂಗ್ , ರೆಕ್ಕಿ ಬಂದ ಹಕ್ಕಿ ತನ್ನ ಅನ್ನ ತಾ ಹುಡುಕುವಂಗ ಮಕ್ಕಳು ತಮ್ಮ ತಮ್ಮ ಜವಾಬ್ದಾರಿ ತಾವು ನೋಡಕೋಬೇಕಾಗತದ . ಅವರಿಗೂ ಅವರದೇ ಆದ ಜವಾಬ್ದಾರಿ ಗಳು ಇರತಾವ . ಅವರು ತಮ್ಮ ಭವಿಷ್ಯದ ಬಗ್ಗೆ ಎನೇನೋ ಕನಸು ಕಂಡಿರತಾರ. ಅವರಿಗಿ ಅವರ ಪಾಡಿಗಿ ಬಿಡೋದೆ ಉತ್ತಮ.

ಇನ್ನ ತಂದೆ ತಾಯಿಗಳು ಒಬ್ಬೊರಿಗೊಬ್ಬರು ಜೋಡಿ ಇರೋತನಕ  ಏನು ಸಮಸ್ಯೆ ಇಲ್ಲ ನೋಡ್ರಿ . ವಯಸ್ಸಾದ ಮ್ಯಾಲ ಒಬ್ಬರು ಮುಂದ ಒಬ್ಬರು ಹಿಂದ ಹೋಗಲೇಬೇಕಾಗತದ , ಆಗ ಒಬ್ರೇ ಆದಾಗ ಸಮಸ್ಯೆ ಬರತದ. ಹೆಣ್ಣು ಮಕ್ಕಳು ಹ್ಯಾಂಗಾರ ಒಬ್ಬರೆ ಬದುಕಬಹುದು . ಆದ್ರ ಗಂಡು  ಅದರಲ್ಲೂ ವಯಸ್ಸಾದ ಗಂಡು ಮನುಷ್ಯ ಹೆಣ್ಣಿನ ಆಸರಿ ಇಲ್ದ ಬದುಕೋದು ಬಾಳ ಕಷ್ಟ . ಮಕ್ಕಳಿಗೂ‌ ಹಿರಿಯರನ್ನ ನೋಡಕೊಳ್ಳೊದು ಸಮಸ್ಯನೇ . ತಾವು ಇದ್ದಲ್ಲಿ ಕರಕೊಂಡು ತಂದು ಇಟಕೋಬೇಕಂದ್ರ ಅವರಿಗಿ  ಮಾಡೋರ್ಯಾರು . ಈಗ ಗಂಡ ಹೆಂಡತಿ ಇಬ್ಬರು ದುಡಿಯುವರೆ ಆಗಿರತಾರ.ಮನ್ಯಾಗಿನ ವಯಸ್ಸಾದವರಿಗಿ ನೋಡಿಕೊಳ್ಳಕಾ ಅವರಿಗೂ ಆಗಲ್ಲ.ಆರ್ಥಿಕ ಸ್ಥಿತಿ ಉತ್ತಮ ಇದ್ದೊರು ಕೆಲಸಕ್ಕ ಹಚ್ವಿ ನೋಡಕೋಬಹುದು .ಎಲ್ಲರಿಗೂ ಈ ಸೌಲಭ್ಯ ಇರಬೇಕಲ್ಲ.

ಎಲ್ಲರಿಗೂ ಅವರವರ ಭವಿಷ್ಯ ಮುಖ್ಯ ನೋಡ್ರೀ , ಸುಮ್ನ ಮಕ್ಕಳಿಗಿ ಅಂದು ಪ್ರಯೋಜನ ಇಲ್ಲ. ಈಗ ಎಲ್ಲರದೂ ಬಿಡುವಿಲ್ಲದ ದುಡಿತ.ಒಂದು ಬಿಟ್ಟು ಮತ್ತೊಂದು ಮಗು ಮಾಡಕೊಳ್ಳಕ ಅವ್ರೀಗಿ ಪುರುಸೊತ್ತು ಇಲ್ಲ.ಅಂತದ್ರಾಗ ವಯಸ್ಸಾದ ತಂದಿತಾಯಿಗಳ ಜೋತೆ ಸಮಯ ಕಳಿಲಾಕ ಪುರುಸೊತ್ತಾದ್ರೂ ಎಲ್ಲಿರತದ.

ಈ ನೆಂಟಸ್ತನ ಬಗ್ಗೆ ಅವರ ಜೋಡಿ ಪೋನ್ ದಾಗ ಮಾತಾಡಿ ಇಟ್ಟ ಮ್ಯಾಲ ನನ್ನ ತಲಿಯೊಳಗ ನಾನಾ ನಮೂನಿ ಯೋಚನಿ ಶುರುವಾಗಿದ್ವು. ಈಗ ಇವೆಲ್ಲ ಮಿನಿ  ಸಮಸ್ಯೆ ಯಾಗಬಿಟ್ಟಾವ.

 ಸಮಸ್ಯೆಯನ್ನು ಯಾವಾಗಲೂ ಒಂದೇ ದೃಷ್ಟಿಕೋನದಿಂದ ನೋಡಿದ್ರ ಒಬ್ಬರದೇ ತಪ್ಪು ಅನಸತದ. ಭಿನ್ನ ದೃಷ್ಟಿಕೋನದಿಂದ ನೋಡಿದ್ರ ಸರಿ ತಪ್ಪಿನ ಅರಿವಾಗತದ. ಅದಕ್ಕ ಈಗೀನ ಹೆತ್ತವರ ಪರಿಸ್ಥಿತಿ ಗಿ ಮಕ್ಕಳು ಮಾತ್ರ ಕಾರಣ ಅಲ್ಲ . ಹೆತ್ತವರ ಮಹತ್ವಾಕಾಂಕ್ಷೆಯು ಕಾರಣವಾಗತದ.ನಮ್ಮ ಮಕ್ಕಳು ಹೆಚ್ಚು ಓದಬೇಕು , ದೊಡ್ಡ ದೊಡ್ಡ ನೌಕರಿದಾಗ ಇರಬೇಕು , ಫಾರಿನ್ ದಾಗ ನೌಕರಿ ಮಾಡಬೇಕು , ಸರೀಕರೆದುರು ಮಕ್ಕಳ ಬಗ್ಗೆ ಹೆಮ್ಮೆಯಿಂದ ಹೇಳಕೋಬೇಕು . ಮಕ್ಕಳಿಗಿ ಇವೆಲ್ಲವೂ ದೊರಕಿಸಿ ಕೊಡಲಾಕ ಅವರು ಬಹಳ ಶ್ರಮನೂ ಪಡತಾರ.ತಮ್ಮ ಆಸಿ ಆಕಾಂಕ್ಷೆ ಒತ್ತೆ ಇಟ್ಟು ಶ್ರಮಿಸತಾರ . ಮಕ್ಕಳಿಗಿ ಒಂದು ಹಂತಕ್ಕ ತರಲಕ್ಕ ತಾವು , ತಮ್ಮ ಹೆತ್ತೊರು  ,  ಬಂಧು ಬಳಗ  ಎಲ್ಲಾನೂ ಮರಿತಾರ.  ಇಷ್ಟೆಲ್ಲ ಬಡದಾಡತ ಒಮ್ಮೆ  ತಾವು ನಿಶ್ಯಕ್ತರಾಗತಾರ ,  ಆಗ ಪ ಅವರಿಗಿ ಆಸರಿ ಬೇಕಾದ ಸಮಯದಾಗ ಮಕ್ಕಳು  ದೂರವಾಗಿರತಾರ ಇದು ಒಂದು ಚೈನ್ ಸಿಸ್ಟಮ್ ಆಗಿಬಿಟ್ಟದ.

ಇದು ಹೀಂಗ ಮುಂದುವರಿತಿರತದ ,  ಇದಕ್ಕ ಪರಿಹಾರ ಮಕ್ಕಳು ಮತ್ತು ಹಿರಿಯರು ಕೂಡಿ ಕಂಡಕೋಬೇಕು . ಈಗ ಮಕ್ಕಳು ಮಾಡಬೇಕಾದದ್ದು ಒಂದೇ , ಸಮಯ ಸಿಕ್ಕಾಗಲೆಲ್ಲ ಹೆತ್ತವರಿದ್ದಲ್ಲಿಗಿ  ಹೋಗಿ ಅವರ ಜೋತೆ ಒಂದಿಷ್ಟು ಸಮಯ ಕಳೆಯೋದು , ಅವರಿಗೂ ತಾವಿದ್ದಲ್ಲಿ ಒಂದಷ್ಟು ದಿನ ಕರೆಸಿಕೊಳ್ಳೊದು , ತಮ್ಮ ಮಕ್ಕಳಿಗಿ ಅಜ್ಜ ಅಜ್ಜಿ ಯರ ಜೋತೆ ಮಾತಾಡಕೋಂತ ಇರಬೆಕೆಂದು ತಿಳಿಸಿ ಹೇಳೋದು .ಅವರ ಆರೋಗ್ಯ ದ ಬಗ್ಗೆ ವಿಚಾರಿಸಕೋಂತ ಆಸ್ಪತ್ರೆ ಗೆ ತೋರಿಸಬೇಕಾಗಿ ಬಂದಾಗ ಎಲ್ಲಾ ಕೆಲಸ ಬಿಟ್ಟು ಅವರ ಜೋತೆ ಹೋಗೋದು , ಅವರ ಅವಶ್ಯಕತೆ ಗಳಿಗೆಲ್ಲ ನಾವಿದ್ದೆವೆ ಎಂದು ಭರವಸೆ ಕೊಡೋದು ಬಾಳ ಮುಖ್ಯ . ವಯಸ್ಸಾದ ಮ್ಯಾಲ ಅವರ ಒಂಟಿತನ ದೂರ ಮಾಡಲಿಕ್ಕ ಆಗದಿದ್ರೂ ಒಂದಿಟು ಕಮ್ಮಿ ಮಾಡಲಿಕ್ಕಾದ್ರೂ ಮಕ್ಕಳು ಪ್ರಯತ್ನ ಮಾಡ್ಷೆವಂದ್ರ ಅದಕ್ಕಿಂತ ಹೆಚ್ಚಿಗಿ ಅವರಿಗಿ ಏನು ಬೆಕಾಗಲಿಕ್ಕಿಲ್ಲ. ಇಳಿ ವಯಸ್ಸಿನ ಸ್ಥಿತಿ ಯಲ್ಲಿ ಎಲ್ಲರೂ ಒಮ್ಮೆ ಅಸಹಾಯಕರಾಗತಿವಿ . ಮಕ್ಕಳು ದೂರ ಇದ್ರೂ ಹರಾ ಎಂಬ ಒಂದು ಅನೂಬೂತಿನೆ ಎಷ್ಟೋ ಸಮಾಧಾನ ಕೊಡತದ. ಅ ಭರವಸಿ ಮಕ್ಕಳು ಉಳಿಸಿಕೊಳ್ಳಬೇಕಾಗೇದ ಈಗ.


Leave a Reply

Back To Top