ಕಾವ್ಯ ಸಂಗಾತಿ
ಅಶ್ವಿಜ ಶ್ರೀಧರ್
ಬಾಳ ಗೀತೆ
ಬೆಂದೊಡಲ ಬೇಗೆಯನು ತಿಂದೊಡಲು ತಣಿಸುತಿದೆ
ಕಂದನಾಗಿದ್ದರೂ ತಾನು ಕುಂದಿಲ್ಲದೆ ಪ್ರೀತಿ ಸುರಿಸಿದೆ
ಮಂದಿಯೆಲ್ಲರೂ ಇದ ನೋಡುತಲಿ ಕಲಿಯಬೇಕಿದೆ
ಚಂದಿರನ ತೋರಿ ಬೆಳೆಸಿದಮ್ಮನಿಗೆ ಹಿತವೆನಿಸುತಿದೆ
ಕೆಲಸದ ನಡುವೆ ಮರೆತಳವಳು ಸುರಿವ ಮಳೆಹನಿಯ
ಕಲಿತ ಆ ಮುತ್ತು ಮಾತ್ರ ಮರೆಯಲಿಲ್ಲ ಜನನಿಯ
ಫಳಫಳನೆ ಹೊಳೆಯಲು ಶ್ರಮವಿಲ್ಲಿ ಹಲ ಬಗೆಯ
ಕಳವಳವು ಮುಗ್ಧ ಹೃದಯಕೆ ಮಾತೆ ನೀ ಕಾಣೆಯ
ಹೆಜ್ಜೆಯದು ನಿಂತ ಭಂಗಿಯಲಿ ಹೆಮ್ಮೆ ಕಾಣುತಿದೆ
ಲಜ್ಜೆಯಾಗುವಂತಾಗಿದೆ ಹನಿಗೂ ಇದ ನೋಡುತಲಿ
ಗೆಜ್ಜೆಯ ಸದ್ದಿನಂತೆ ಕುಣಿ ಕುಣಿದು ಬಾನಿಂದ ಜಾರಿದೆ
ಮಜ್ಜನದ ಸೊಬಗಂತೆ ಕಂಡಿದೆ ಕರಿಯ ಕೊಡೆಯಲಿ
ಸುತ್ತಲು ತುಂಬಿಹ ಪರಿಸರದಿ ಸಿರಿಯಿಲ್ಲ ನೀ ನೋಡು
ಮುತ್ತಿನಾ ಮುಗ್ಧತೆಯು ತೋರಿರುವ ನಗುವ ಬೀಡು
ಮೆತ್ತಿರುವ ಮಣ್ಣು ತಿಳಿಸಿದೆ ಗೋಡೆಯೊಳಗಣ ಗುಟ್ಟು
ಹೊತ್ತು ಹೊತ್ತಿಗೂ ಸರಿಯದಿರಲಿ ಆ ಪ್ರೀತಿಯ ಕಟ್ಟು
———————————————
ಅಶ್ವಿಜ ಶ್ರೀಧರ್
❤️