ಅಮ್ಮ,ನಾವೂ ನಾಯಿ ಸಾಕೋಣ
ಶೀಲಾ ಭಂಡಾರ್ಕರ್
ನಿನ್ನೆ ರಾತ್ರಿಯಿಂದಲೂ ನಮ್ಮ ಮನೆಯಲ್ಲಿ ಏನೋ ಗುಸುಗುಸು ಪಿಸುಪಿಸು ಕೇಳಿಸುತ್ತಿದೆ. ಇಡೀ ದಿನ ಬಿಡುವಿಲ್ಲದೇ ಮನೆಯ ಸ್ವಚ್ಛತೆಯಲ್ಲಿ ತೊಡಗಿದ್ದುದರಿಂದ ಅದರೆಡೆಗೆ ಅಷ್ಟಾಗಿ ಗಮನ ಕೊಡುವ ಮನಸ್ಸಾಗಲಿಲ್ಲ ನನಗೆ.
ಇವತ್ತು ಬೆಳಗಿನಿಂದಲೂ ಅತ್ಯಂತ ಶಾಂತ ವಾತಾವರಣ. ಯಾವುದೇ ಏರು ಧ್ವನಿಯ ಮಾತಿಲ್ಲ, ಜಗಳ ಕದನಗಳಿಲ್ಲ. ಕಿರುಚಾಟಗಳಿಲ್ಲ. ಮದ್ಯಾಹ್ನದವರೆಗೆ ಆರಾಮೋ ಆರಾಮ್.
ಮದ್ಯಾಹ್ನ ಊಟದ ಸಮಯದಲ್ಲೂ ಒಬ್ಬರಿಗೊಬ್ಬರು ಸಹಕರಿಸಿಕೊಂಡು, ತಟ್ಟೆ, ನೀರು ಇಡುವುದರಿಂದ ಹಿಡಿದು ಮಾಡಿದ ಅಡುಗೆಯನ್ನು ಒಂದೊಂದಾಗಿ ಬಡಿಸುವಾಗಲೂ ಅದೇನು ಶಿಸ್ತು, ಅದೆಷ್ಟು ಸಂಯಮ.
ತಟ್ಟೆಯಲ್ಲಿ ಬಡಿಸಿದ ಕೂಡಲೇ ಹುಡುಗಿಯರಿಬ್ಬರೂ ನಾವು ಬಾಲ್ಕನಿಗೆ ಹೋಗ್ತೇವೆ ಅಮ್ಮಾ ನೀನೂ ಅಲ್ಲಿಗೇ ಬಾ. ಅದೆಲ್ಲಿಂದ ಇಷ್ಟು ಪ್ರೀತಿ ಸುರೀತಿದೆ!? ಮೇಲೆ ಕೆಳಗೆ ನೋಡಿದೆ.
ನಾನಿಷ್ಟು ಹೊತ್ತು ಹೇಳುತ್ತಾ ಇದ್ದ ಗುಸುಗುಸು, ಪಿಸುಪಿಸು, ಜಗಳ ಕದನ, ಶಾಂತಿ ಸಂಯಮ ಎಲ್ಲಾ ನಮ್ಮ ಮನೆಯ ಎರಡು ಹುಡುಗಿಯರ ಬಗ್ಗೆ.
ದಿನ ಬೆಳಗಾದಲ್ಲಿಂದ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ಕಾರಣಕ್ಕೆ, ಒಂದಲ್ಲ ಒಂದು ಸಮಯದಲ್ಲಿ ಅರಚುವಿಕೆ, ಕಿರುಚುವಿಕೆ ಮತ್ತೆ ಸ್ವಲ್ಪ ಹೊತ್ತಿನಲ್ಲೇ ಅವರಿಬ್ಬರೂ ಜೊತೆಯಲ್ಲೇ ಕೂತು ಯಾವುದಾದರೂ ಸಿನೆಮಾ ನೋಡುತ್ತಾ ಜೋರಾಗಿ ಅಥವಾ ಕಿಲಕಿಲನೆ ನಗುತ್ತಾ ಇರುವುದು ನಮ್ಮ ಮನೆಯ ದಿನಚರಿ
.
ನಾನೂ ನನ್ನ ಊಟದ ತಟ್ಟೆಯೊಂದಿಗೆ ಬಾಲ್ಕನಿಗೆ ಬಂದೆ. ಮತ್ತದೇ ಗುಸುಗುಸು. ಗಮನಿಸದ ಹಾಗೆ ನಾನು ನನ್ನ ಪಾಡಿಗೆ ಊಟ ಮಾಡಲು ತೊಡಗಿದೆ.
ಅಮ್ಮಾ.. ಏನೋ ಕೇಳಬೇಕಿತ್ತು.
ಏನು? ಅಂದೆ.
ನಾವು ಇಷ್ಟರವರೆಗೆ ಏನಾದರೂ ನಮಗೆ ಇಂಥದ್ದು ಬೇಕು ಎಂದು ಕೇಳಿದ್ದೇವಾ?
ಇನ್ಯಾರು ಕೇಳಿದ್ದು ನಿಮ್ಮ ಪರವಾಗಿ, ಪಕ್ಕದ ಮನೆಯವರಾ!?
ಅಲ್ಲಮ್ಮಾ.. ಬೇಕೇಬೇಕು ಅಂತ ಯಾವತ್ತಾದರೂ ಹಠ ಮಾಡಿದಿವಾ?
ಇವತ್ತು ಹಠ ಮಾಡುವ ಯೋಚನೆಯಾ? ಕೇಳಿದೆ.
ಹಾಗಂತ ಅಲ್ಲ. ಆದರೆ ಒಂದು ಆಸೆ. ನಿನಗೆ ಏನೂ ತೊಂದರೆ ಕೊಡಲ್ಲ. ನಾವೇ ಕೆಲಸ ಎಲ್ಲಾ ಮಾಡುತ್ತೇವೆ.
ಏನು ವಿಷಯ? ವಿಷಯ ಏನು? ಅಂದೆ.
ನೀನು ಹೇಳು ಅಂತ ಒಬ್ಬಳು ಇನ್ನೊಬ್ಬಳಿಗೆ. ದೊಡ್ಡವಳು ಅತ್ಯಂತ ಹಸನ್ಮುಖಿಯಾಗಿ ಕೂತಿದ್ದಳು. ಚಿಕ್ಕವಳು ಬಲು ಉತ್ಸಾಹದಿಂದ,
ನಾನೇ ಹೇಳ್ತೇನೆ. ಎಂದು ಭಾಷಣ ಶುರು ಮಾಡುವ ಹಾಗೆ ನೆಟ್ಟಗೆ ಕೂತಳು.
ನೀನು ಚಿಕ್ಕವಳಿದ್ದಾಗ ನಿಮ್ಮನೆಯಲ್ಲಿ ಒಂದು ಬೆಕ್ಕು ಇತ್ತು ಅಂತ ಹೇಳಿದ್ದೆ ಅಲ್ವಾ? ಅದರ ಹೆಸರು ಮೀನಾಕ್ಷಿ ಅಂತ ಇತ್ತು ಅಂತ ಕೂಡ..
ಅನ್ನುವುದರೊಳಗೆ, ನಾನು ಕೇಳಿದೆ, ಈಗ ಏನು ಬೆಕ್ಕು ತರ್ತೀರಾ?
ಅಲ್ಲ. ನಾಯಿ.
ಎಲಾ!! ಮತ್ತೆ ನಮ್ಮ ಮನೆಯ ಮೀನಾಕ್ಷಿ ವಿಷಯ ಯಾಕೆ ಬಂತು?
ನಿಂಗೂ ಪ್ರಾಣಿಗಳನ್ನು ಸಾಕಿ ಗೊತ್ತಲ್ವಾ? ಮರೆತಿದ್ರೆ ಅಂತ ನೆನಪಿಸಿದ್ದು. ಅಂದಳು.
ನಾಯಿ ಸಾಕಿದ್ರೆ ಎಷ್ಟು ಕೆಲಸ ಇದೆ ಗೊತ್ತಾ? ಅಂದೆ.
ನಾವೇ ಮಾಡ್ತಿವಿ, ನಾವೇ ಮಾಡ್ತೀವಿ.
ನಾನು ದಿನಾ ವಾಕಿಂಗ್ ಕರಕೊಂಡು ಹೋಗ್ತಿನಿ ಅಂದಳು ಚಿಕ್ಕವಳು. ಇಷ್ಟು ಹೊತ್ತೂ ಮಾತಾಡಿದ್ದೆಲ್ಲಾ ಚಿಕ್ಕವಳೆ.
ನನ್ನ ಫ್ರೆಂಡ್ ಸಿಂಚನಾ ಹತ್ರನೂ ನಾಯಿ ಇದೆ. ಅವಳೇ ವಾಕ್ ಕರಕೊಂಡು ಹೋಗ್ತಾಳೆ. ನಾನೂ ಅವಳ ಜತೆ ಹೋಗ್ತೀನಿ. ನಾವಿಬ್ರೂ ಪಾಠದ ಬಗ್ಗೆ ಚರ್ಚೆ ಮಾಡಬಹುದು. ಯಾಕಂದ್ರೆ ಅವಳೂ ಕಾಮರ್ಸ್. ನಿಂಗೆ ಖುಷಿ ಆಗ್ತದೆ ಅಲ್ವಾ! ಮತ್ತೆ ನನಗೂ ವ್ಯಾಯಾಮ ಆಗುತ್ತೆ.
ಬಡಬಡ ಹೇಳಿ ನಿಲ್ಲಿಸಿದಳು.
ನೋಡಮ್ಮ, ಎಷ್ಟೆಲ್ಲಾ ಒಳ್ಳೆಯದಾಗುತ್ತೆ ಅದರಿಂದ. ದೊಡ್ಡವಳು ಬಾಯಿ ಬಿಟ್ಟಳು.
ಮತ್ತೆ.. ಚಿಕ್ಕವಳದು ಶುರುವಾಯಿತು. ಅದರ ಎಲ್ಲಾ ಕೆಲಸ ನಾವೇ ಮಾಡ್ತೇವೆ. ಒಂದು ಎರಡು ಎಲ್ಲಾ ನಾವೇ ಕ್ಲೀನ್ ಮಾಡ್ತೇವೆ.
ಹೋ… ನಾನು ಸ್ವಲ್ಪ ಎತ್ತರದ ದನಿಯಲ್ಲಿ , ಹೌದೌದು ಮಾಡೋ ಸಣ್ಣ ಪುಟ್ಟ ಕೆಲಸಕ್ಕೂ ದಿನಾ ಹೇಳಬೇಕು ನಿಮಗೆ. ಇನ್ನು ಇದೂ ನನ್ನ ತಲೆಗೆ ಬರುತ್ತೆ.
ಚಿಕ್ಕವಳಿಗೆ ವಾಷಿಂಗ್ ಮೆಷಿನ್ ಗೆ ಬಟ್ಟೆ ಹಾಕೋ ಕೆಲಸ. ಹೇಗೆ ಹಾಕೋದು ಅಂತ ಹೇಳಿ ಕೊಡ್ತೀನಿ ಬಾ ಅಂತ ಕರೆದಾಗ ಕಿವಿಯೊಳಗೆ ವಯರ್ ಸಿಗಿಸಿಕೊಂಡು ಬಂದು ನಿಂತಳು. ಅದೆಷ್ಟು ಕೇಳಿಸಿತೋ ಅವಳಿಗೇ ಗೊತ್ತು. ವಯರ್ ಕಿತ್ತು ಎಳೆದೆ, ನೀನು ಹೇಳು. ನಂಗೆ ಕೇಳಿಸುತ್ತೆ ಅಂತ ಮತ್ತೆ ಸಿಕ್ಕಿಸಿಕೊಂಡು ಅದರ ಜೊತೆಗೆ ಹಾಡುತ್ತಾ ನಿಂತಳು. ಗೊತ್ತಾಯ್ತಾ? ಅಂತ ಸನ್ನೆ ಮಾಡಿದ್ರೆ. ಗೊತ್ತಾಯ್ತೂ ಅಂತ ಕಿರುಚಿದಳು. ಯಾಕಂದ್ರೆ ಜೋರಾಗಿ ಹಾಡು ಹಾಕಿದ್ದಳಲ್ಲ ಕಿವಿಯೊಳಗೆ.
ಸರಿಯಾದ ಸಮಯಕ್ಕೆ ವಾಷಿಂಗ್ ಕೆಲಸ ಆಗ್ತಾ ಇದೆ. ಖುಷಿಯಾಯ್ತು. ಆದರೆ.. ಬಟ್ಟೆ ಏನೋ ಒಂಥರಾ ವಾಸನೆ. ಘಮ್ ಅನ್ನುತಿಲ್ಲ. ಅವಳನ್ನು ಕರೆದು ಕೇಳಿದೆ. ಕಂಫರ್ಟ್ ಹಾಕ್ತಿದ್ದಿಯಲ್ವಾ?
ಇಲ್ಲ.. ಅದೆಲ್ಲಾ ಹಾಕಬೇಕಾ? ಕೇಳ್ತಾಳೆ.
ಅಯ್ಯೋ ಸೋಪಿನ ಪುಡಿ ಜೊತೆ ಕಂಫರ್ಟ್ ಕೂಡ ಹಾಕಬೇಕು ಅಂದಿಲ್ವಾ ಅಂದೆ.
ಆಟೋಮೆಟಿಕ್ ಅಲ್ವಾ ಅದೆಲ್ಲಾ ನಾವು ಹಾಕ್ಕೋಬೇಕಾ? ಬರೀ ಸ್ವಿಚ್ ಮಾತ್ರ ನಾವು ಹಾಕೋದಲ್ವಾ? ಮತ್ತೆಲ್ಲಾ ಅದೇ ಮಾಡ್ಕೊಳ್ಳುತ್ತೆ ಅಂತ ತಾನೇ ಆಟೋಮೆಟಿಕ್ ಅಂದ್ರೆ.
ತಲೆ ಚಚ್ಚಿಕೊಂಡೆ.
ಇಂಥವಳು ನಾಯಿ ತಂದ್ರೆ ಒಂದು ಎರಡು ಮೂರು ಎಲ್ಲಾ ಕೆಲಸನೂ ತಾನು ಮಾಡುತ್ತಾಳಂತೆ. ಸ್ವಲ್ಪ ವ್ಯಂಗ್ಯವಾಗಿ ನೆನಪಿಸಿದೆ.
ಆಗ ಗೊತ್ತಿರಲಿಲ್ಲ. ಈಗ ಸರಿ ಮಾಡ್ತಿದಿನಿ ಅಲ್ವಾ? ಅದೆಲ್ಲಾ ಕೆಲಸ ಮಾಡಿದ್ರೆ ನಾಳೆ ನಾವು ದೊಡ್ಡವರಾಗಿ ಮದುವೆ ಆಗಿ ಮಕ್ಕಳಾದಾಗ, ಮಕ್ಕಳ ಕೆಲಸ ಮಾಡಲು ಸುಲಭ ಆಗುತ್ತೆ. ಆಗ ಕಷ್ಟ ಅನಿಸಲ್ಲ. ಅಲ್ವಾ ಅಂತ ದೊಡ್ಡವಳನ್ನು ನೋಡಿದಳು.
ಅವಳು ಹಲ್ಲು ಕಚ್ಚಿ ಹಿಡಿದು, ನಿಂಗೆ ಎಷ್ಟು ಮಾತಾಡಕ್ಕೆ ಹೇಳಿದ್ನೋ ಅಷ್ಟೇ ಮಾತಾಡು. ಜಾಸ್ತಿ ಬೇಡ. ಅಂದಳು. ಚಿಕ್ಕವಳು ತಲೆ ತಗ್ಗಿಸಿ ಊಟ ಮಾಡಲು ತೊಡಗಿದಳು.
ದುಡ್ಡು ಎಷ್ಟು ಬೇಕು ಅದಕ್ಕೆ? ಆಮೇಲೆ ಖರ್ಚು ಎಷ್ಟಿದೆ ಗೊತ್ತಾ ಅದರದ್ದು? ಅಂದೆ.
ಚಿಕ್ಕವಳು ಏನಂತಾಳೆ ಗೊತ್ತಾ.. ನಾನು ಸೈನ್ಸ್ ತಗೊಂಡಿದ್ರೆ ಟ್ಯೂಷನ್, ಪೆಟ್ರೋಲ್ ಅಂತ ಎಷ್ಟೊಂದು ದುಡ್ಡು ಖರ್ಚಾಗ್ತಿರಲಿಲ್ವಾ? ಅದು ಉಳಿದಿಲ್ವಾ?
ಹಾಗಾದ್ರೆ ನಾಯಿ ತರೊ ಯೋಚನೆ ನೀನು ಕಾಮರ್ಸ್ ತಗೊಳ್ತಿನಿ ಅನ್ನುವಾಗಲೇ ಇತ್ತಾ? ಕೇಳಿದೆ.
ಇಲ್ಲಾ ನಿನ್ನೆ ಶುರುವಾಯ್ತು. ತುಂಬಾ ಆಸೆ ಮಾಡುತ್ತಮ್ಮ ಅದು. ನಿಂಗೂ, ಅಪ್ಪನಿಗೂ ಎಷ್ಟು ಖುಷಿಯಾಗುತ್ತೆ ಗೊತ್ತಾ ಆಮೇಲೆ.
ದೊಡ್ಡವಳು ಕೂಡಲೇ ಕಣ್ಣು ಇಷ್ಟು ದೊಡ್ಡದು ಮಾಡಿ, ಅವಳನ್ನು ಕಣ್ಣಲ್ಲೇ ಕಿರುಚಿ ಗದರಿಸಿದಳು. ಆಮೇಲೆ ಮೆಲ್ಲ ಅತ್ಯಂತ ಮೃದುವಾಗಿ ತಂಗಿಗೆ, “ನೀನಿನ್ನು ಹೋಗು. ಇಷ್ಟೇ ಇದ್ದಿದ್ದು ನಿಂಗೆ ಮಾತಾಡ್ಲಿಕ್ಕೆ.”
ಅವಳು ಎದ್ದು ಹೋಗುವಾಗ ತಿರುಗಿ ನೋಡಿ. ಹೆಂಗೆ? ನಾನಲ್ವಾ ಒಪ್ಪಿಸಿದ್ದು. ಅಂದಳು.
ಯೇಯ್ ಬಾ.. ಇಲ್ಲಿ. ನಾನು ಯಾವಾಗ ಒಪ್ಪಿದೆ? ನಾನಿನ್ನೂ ಯೋಚನೆನೂ ಮಾಡಿಲ್ಲ ಅಂದೆ.
ಒಪ್ಪಿಲ್ವಾ? ಛೆ! ಇಷ್ಟು ಹೊತ್ತು ಎಷ್ಟು ಕಷ್ಟ ಪಟ್ಟು ಏನೇನೋ ಹೇಳಿದೆ. ಒಪ್ಪಲ್ವಾ!?? ಅಂದಳು. ಕಣ್ಣಲ್ಲಿ ನೀರು ತುಂಬಿ ತುಳುಕುತ್ತಿದೆ. ದೊಡ್ಡವಳನ್ನು ನೋಡಿದರೆ ಅವಳೂ ಅತ್ಯಂತ ದೀನಳಾಗಿ ನೋಡುತಿದ್ದಾಳೆ.
ಪಾಪ ಅನಿಸಿತು. ಆಯ್ತು ಅಂದಿದಿನಿ.
ಹೊಸದರಲ್ಲಿ ಅಗಸ ಗೋಣಿ ಒಗೆದಂತೆ, ಆಮೇಲೆ ನನ್ನ ತಲೆಗೆ ಕಟ್ಟುತ್ತಾರೆ.
ನನ್ನ ಪರವಾಗಿ ಸಾಕ್ಷಿಗೆ ಬೇಕಾಗಬಹುದು ಅಂತ ನಿಮಗೆ ತಿಳಿಸಿದೆ. ನೋಡೋಣ ಯಾರೆಲ್ಲಾ ಬರ್ತೀರಿ ಅಂತ.
**********************************