ಹಲಸಿನ ಹಪ್ಪಳ
ಸಂಧ್ಯಾಶೆಣೈ
ಇವತ್ತು ನಮ್ಮ ಕೆಳಗಿನ ಮನೆಯವರು ಒಂದು ಸಣ್ಣ ತುಂಡು ಹಲಸಿನ ಗುಜ್ಜೆ ಕೊಟ್ಟಿದ್ದರು ..ಅದನ್ನು ಅಕ್ಕಿಯ ಆಳಾವಣದಲ್ಲಿ ಹಾಕಿ ಫ್ರೈ ಮಾಡಿದೆ ..ಆಗ ನನಗೆ ಸೋಮೇಶ್ವರದ ದಿನಗಳು ನೆನಪಾದವು.. ಹೀಗೆ ಬೇಸಿಗೆ ದಿನಗಳಲ್ಲಿ ಮನೆಗೆ ಆಗಾಗ ಹಲಸಿನ ಕಾಯಿ ಬರುತ್ತಿತ್ತು..ಉಪಿಗೆ ಸೋಳೆ ಹಾಕಲು.. ಹಪ್ಪಳ ಮಾಡಲು ಎಂದು.. ಆಗೆಲ್ಲ ಅಮ್ಮ ಹಲಸಿನ ಕಾಯಿಯ ವೈವಿಧ್ಯಮಯ ಪಲ್ಯಗಳನ್ನು ಮಾಡುತ್ತಿದ್ದರು.. ಸೋಳೆ ಹಾಕಲು ತಂದ ಹಲಸಿನ ಕಾಯಿಯ ಉಪಕ್ಕರಿ .ಅದರ ಒಟ್ಟಿಗೆ ಸೌತೆ ಕಾಯಿ ಹಾಕಿ ಮಾಡಿದ ಗುಜ್ಜ.. ಹಲಸಿನ ಕಾಯಿ ಮತ್ತೆ ಧಾನ್ಯ ಹಾಕಿ ಕೊದ್ದೆಲು.. ಎಳೇಕಡಗಿ ಸಣ್ಣ ಸಣ್ಣ ಬೀಜ ಆಗುತ್ತಾ ಇರುವಂತಹ ಹಲಸಿನ ಕಾಯಿಯಿಂದ ಪೋಡಿ.. ಒಂದೇ ಎರಡೇ .. ಹಣ್ಣು ಸಿಕ್ಕಿದರೆ ದೋಸೆ ..ಇಡ್ಲಿ.. ಪಾತ್ತೋಳಿ. ಪಾಯಸ.. ಮೂಳಿಕ ಎಂದು ಎಷ್ಟೆಲ್ಲ ಬಗೆ ಮಾಡುತ್ತಿದ್ದರು.. ಈಗ ನೋಡಿದ್ರೆ ಅನ್ನಿಸ್ತಾ ಇದೆ ಪಾಪ! ನಮ್ಮ ಬಾಯಿ ರುಚಿಗಾಗಿ ಎಷ್ಟೆಲ್ಲ ಕಷ್ಟಕರ ಕೆಲಸವನ್ನು ಮಾಡುತ್ತಿದ್ದರು ..ನಾವಂತೂ ಬಕಾಸುರರು ಏನು ಮಾಡಿಟ್ಟರು ಸ್ವಾಹ ಎನ್ನುತ್ತಿದ್ದೆವು.
ನಾವು ಬೆಳಿಗ್ಗೆ ಎದ್ದು ಬರುವಾಗಲೇ ಅಜ್ಜಿ ಹಲಸಿನ ಹಣ್ಣನ್ನು ಕೊಯ್ದು ಗೋಣಿಯ ಮೇಲೆ ಶೇಡು ಶೇಡು ಮಾಡಿ ಇಟ್ಟಿರುತ್ತಿದ್ದರು .ನಾವು ಎದ್ದವರೇ ಬೇಕಾದಷ್ಟು ತಿಂದು ಸ್ವಲ್ಪ ಹಣ್ಣನ್ನು ಬಿಡಿಸಿ ಸೊಳೆ ಬೇರೆ ಬೀಜ ಬೇರೆ ಮಾಡಿ ಬಿಡುತ್ತಿದ್ದೆವು . ಅಮ್ಮ ಹೇಳುತ್ತಿದ್ದರು ಹಸಿದ ಹಲಸು ಉ೦ಡ ಮಾವು ಎಂದು.. ಅಂದ್ರೆ ಹಸಿದಿರುವಾಗ ಹಲಸಿನ ಹಣ್ಣು ತಿನ್ನಬೇಕು ಊಟ ಆದ ಮೇಲೆ ಮಾವಿನ ಹಣ್ಣು ತಿನ್ನಬೇಕು ಎಂದು.
ಇಷ್ಟು ಮಾತ್ರವೇ ಆ ದಿನಗಳಲ್ಲಿ ನಮ್ಮ ಬೇಸಿಗೆ ರಜೆಯಲ್ಲಿ ಹಲಸಿನ ಹಪ್ಪಳದ ಫ್ಯಾಕ್ಟರಿಯೇ ನಮ್ಮಲ್ಲಿ ನಡೆಯುತ್ತಿತ್ತು. ರಾತ್ರಿ ದೊಡ್ಡ ದೊಡ್ಡ ಹಲಸಿನ ಕಾಯಿಗಳನ್ನು ಕರ್ಕು ಎಂಬ ಹೆಸರಿನ ಹೆಂಗಸು ತಲೆಯ ಮೇಲೆ ಹೊತ್ತು ತಂದು ನಮ್ಮ ಮನೆಯಲ್ಲಿ ಹಾಕಿ ಅದನ್ನು ಕೊಡಲಿಯಿಂದ ನಾಲ್ಕು ನಾಲ್ಕು ಭಾಗ ಮಾಡಿ ಹಾಕಿ ಹೋಗುತ್ತಿದ್ದಳು.. ಈಗ ಎಣಿಸಿದರೆ ಅವಳ ಆ ಶಕ್ತಿ ವಿಸ್ಮಯಕಾರಿ ಅನ್ನಿಸುತ್ತಾ ಇದೆ. ಒಂದಲ್ಲ ಎರಡಲ್ಲ ಕೆಲವೊಮ್ಮೆ ಮೂರು ನಾಲ್ಕು ಹಲಸಿನ ಕಾಯಿಯನ್ನು ತಲೆಯ ಮೇಲೆ ಹೊತ್ತುಕೊಂಡು ಎರಡು ಮೂರು ಮೈಲು ನಡೆದುಕೊಂಡು ಬರುತ್ತಿದ್ದಳು.. ಪಾಪ ಅದನ್ನು ನಮ್ಮಲ್ಲಿ ಹಾಕಿ ಒಡೆದು ಕೊಟ್ಟು ಅಮ್ಮ ಕೊಟ್ಟ ಕಾಫಿಯನ್ನು ಕುಡಿದು ಹೋಗುತ್ತಿದ್ದಳು. ಆಮೇಲೆ ಅಜ್ಜಿಯಾಗಿ ಕೆಲಸದವರಾಗಲಿ ಅದನ್ನು ಶಾಡ್ ಶಾಡ್ ಮಾಡಿ ತುಂಡು ಮಾಡಿ ಹಾಕುತ್ತಿದ್ದರು. ನಾವೆಲ್ಲರೂ. ತುಳಸಿ ಕಟ್ಟೆಯ ಎದುರಿನ ದಂಡೆ ಮೇಲೆ ಕುಳಿತುಕೊಂಡು ಆ ಹಲಸಿನಕಾಯಿಯನ್ನು ಬಿಡಿಸುತ್ತಿದ್ದೆವು. ಆಗ ಅಮ್ಮನಾಗಲೀ ಅಕ್ಕನಾಗಲೀ ಏನಾದರೂ ಕಥೆಯನ್ನು ನಮಗೆ ಹೇಳುತ್ತಿದ್ದರು.. ಅದನ್ನು ಕೇಳುತ್ತಾ ಕೇಳುತ್ತಾ ಹಲಸಿನ ಕಾಯಿ ಬಿಡಿಸಿದ್ದೇ ನಮಗೆ ತಿಳಿಯುತ್ತಿರಲಿಲ್ಲ..
ಬೆಳಿಗ್ಗೆ ನಾವು ಏಳುವಾಗ ಕಾಫಿ ತಿ೦ಡಿಯಾದ ಮೇಲೆ ಇಡ್ಲಿ ಬೇಯಿಸುವ ಪಾತ್ರೆಯಲ್ಲಿ ಹಲಸಿನ ಕಾಯಿ ಹದವಾಗಿ ಬೆಂದು ತಯಾರಾಗುತ್ತಿತ್ತು.. ಅದನ್ನು ಒರಳು ಕಲ್ಲಿನಲ್ಲಿ ಹಾಕಿ ಮರದ ಗುದ್ದಲಿಯಿಂದ ಗುದ್ಧಿ ಗುದ್ಧಿ ನಮ್ಮ ಕೆಲಸದ ಹೆಂಗಸು ಹಿಟ್ಟು ಮಾಡಿ ಕೊಡುತ್ತಿದ್ದರು.. ಕೆಲವೊಮ್ಮೆ ಅಜ್ಜಿಯೇ ಹಿಟ್ಟು ಮಾಡುತ್ತಿದ್ದರು ..ಅದರೊಂದಿಗೆ ಹದವಾಗಿ ಗುದ್ದಿಟ್ಟ ಮೆಣಸು.. ಕೊತ್ತಂಬರಿ ..ಉಪ್ಪು ..ಹಾಕಿ ಹದವಾಗಿ ಹಿಟ್ಟು ತಯಾರಾಗುತ್ತಿತ್ತು.. ತಯಾರಾದ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಸುಮಾರು ಹತ್ತು ಹನ್ನೊಂದು ಗಂಟೆ ಹೊತ್ತಿಗೆ ನಾವೆಲ್ಲರೂ ಕೂತು ಹಲಸಿನ ಹಪ್ಪಳ ಮಾಡುವ ಕಾರ್ಯಾಗಾರವನ್ನು ಶುರು ಮಾಡುತ್ತಿದ್ದೆವು ..ಹೆಚ್ಚಾಗಿ ಅಜ್ಜಿ ಅಥವಾ ಅಮ್ಮ ಉರುಟುರುಟು ಉಂಡೆ ಕಟ್ಟಿ ಇಡುತ್ತಿದ್ದರು.. ಅದನ್ನು ನಾವು ಮಕ್ಕಳು ಎರಡು ಪ್ಲಾಸ್ಟಿಕ್ಕಿನ ನಡುವೆ ಇಟ್ಟು ಒತ್ತುತ್ತಿದ್ದೆವು ಅದನ್ನು ಅಮ್ಮನಾಗಲೀ ಅಜ್ಜಿಯಾಗಲೀ ತಟ್ಟಿ ತಟ್ಟಿ ದೊಡ್ಡ ಹಪ್ಪಳವನ್ನಾಗಿ ಮಾಡುತ್ತಿದ್ದರೆ ಅದನ್ನು ನಾವು ಯಾರಾದರೊಬ್ಬರು ಚಾಪೆಗೆ ಹಚ್ಚುತ್ತಿದ್ದೆವು.. ಚಾಪೆ ತುಂಬಿದ ಮೇಲೆ ಹೊರಗೆ ಅಂಗಳದಲ್ಲಿ ಚಾಪೆಯನ್ನು ತೆಗೆದುಕೊಂಡು ಹೋಗಿ ಹಾಕುತ್ತಿದ್ದೆವು ..ಆ ಕೆಲಸ ಭಹುಷ್ಯ ಮಧ್ಯಾಹ್ನದೊಳಗೆ ಮುಗಿಯುತ್ತಿತ್ತು.. ಹಪ್ಪಳ ತಟ್ಟುತ್ತಾ ತಟ್ಟುತ್ತಾ ನಾವು ಅದೆಷ್ಟು ಹಿಟ್ಟನ್ನು ಎಣ್ಣೆಯಲ್ಲಿ ಮುಳುಗಿಸಿ ಮುಳುಗಿಸಿ ತಿನ್ನುತ್ತಿದ್ದೆವು ಲೆಕ್ಕವೇ ಇಲ್ಲ .ಆ ಹಿಟ್ಟು ಎಷ್ಟು ರುಚಿಯಾಗಿರುತ್ತದೆ ಎಂದರೆ ನಾವೆಲ್ಲರೂ ದೊಡ್ಡವರಾದ ಮೇಲೆ ಕೇವಲ ಹಿಟ್ಟು ತಿನ್ನುವುದು ಗೋಸ್ಕರ ಹಲಸಿನ ಹಪ್ಪಳದ ಹಿಟ್ಟನ್ನು ಅಮ್ಮ ಮಾಡುತ್ತಿದ್ದರು.ನಮ್ಮ ಭಾಗ್ಯಕ್ಕೆ ಅಮ್ಮನಿಗೂ ಇಂಥದ್ದೆಲ್ಲ ತಿನ್ನುವುದೆಂದರೆ ತುಂಬಾ ಇಷ್ಟ ..ಹಾಗಾಗಿ ಅಮ್ಮ ಇದನ್ನೆಲ್ಲ ಬಹಳ ಉತ್ಸಾಹದಿಂದಲೇ ಮಾಡುತ್ತಿದ್ದರು .ಅಜ್ಜಿಗೆ ಅದನ್ನೆಲ್ಲ ತಿನ್ನುವ ಆಸಕ್ತಿ ಇಲ್ಲದಿದ್ದರೂ ನಮ್ಮೆಲ್ಲರ ಸಂತೋಷಕ್ಕಾಗಿ ನಿಷ್ಠೆಯಿಂದ ತಮ್ಮ ಕೆಲಸವನ್ನು ಮಾಡುತ್ತಿದ್ದರು .
ಹಪ್ಪಳ ಹೊರಗೆ ಹಾಕಿದ ಮೇಲೆ ಇರುವುದು ಇನ್ನೂ ದೊಡ್ಡ ಕೆಲಸ .ಅದೇನೆಂದರೆ ಹಪ್ಪಳವನ್ನು ಕಾಗೆ ..ನಾಯಿ ತೆಗೆದುಕೊಂಡು ಹೋಗದಂತೆ ಕಾಯುವುದು. ಅದಕ್ಕಂತೂ ನಾವ್ಯಾರೂ ಸುತಾರಾಂ ಒಪ್ಪುತ್ತಿರಲಿಲ್ಲ .ಭಯಂಕರ ಬೋರಿಂಗ್ ಕೆಲಸ ಅದು.ಇದಕ್ಕಿಂತ ಈಗ ಲಾಕ್ ಡಾನ್ ಅವಧಿಯಲ್ಲಿ ಮನೆಯಲ್ಲಿ ಇರುವುದೇ ಎಷ್ಟೋ ಉತ್ತಮ.. ನಾವಂತೂ ಮಕ್ಕಳು.. ಆಡುವುದರಲ್ಲೇ ತಲೆ ನಮಗೆ ..ಎಷ್ಟು ಹಪ್ಪಳ ಕಾಯುತ್ತೇವೆ ..ಕೆಲವೊಮ್ಮೆ ಅಲ್ಲಿ ಜಗಲಿಯ ಮೇಲೆ ಆಡಿಕೊಂಡು ಹಪ್ಪಳದ ಕಡೆ ನೋಡುತ್ತಾ ಇರುತ್ತಿದ್ದೆವು.. ಆದರೂ ನಮ್ಮ ಕಣ್ತಪ್ಪಿಸಿ ಕಾಗೆ ಬಂದೇ ಬಿಡುತ್ತಿತ್ತು.. ಹಾಗಾಗಿ ಮಧ್ಯಾಹ್ನ ನಂತರ ಹೆಚ್ಚಾಗಿ ಅಜ್ಜಿ ಒಂದು ಚಂದಮಾಮವನ್ನೋ ಮಯುರವನ್ನೋ ಹಿಡಿದುಕೊಂಡು ಓದುತ್ತ ಒಂದು ಉದ್ದಕೋಲನ್ನು ಹಿಡಿದುಕೊಂಡು ಕಾಗೆಯನ್ನು ಓಡಿಸುತ್ತಿದ್ದದ್ದು ಇವತ್ತಿಗೂ ಕಣ್ಣೆದುರು ಕಾಣಿಸುತ್ತಿದೆ .. ಇಷ್ಟೇ ಮಾತ್ರವಲ್ಲ ಅರ್ಧ ಒಣಗಿದ ಹಲಸಿನ ಹಪ್ಪಳವನ್ನು ತೆಂಗಿನೆಣ್ಣೆಯಲ್ಲಿ ಮುಳುಗಿಸಿ ತಿನ್ನುವ ಇನ್ನೊಂದು ರುಚಿಯೂ ವರ್ಣಿಸಲಸಾಧ್ಯ. ಹಾಗಾಗಿ ಕೆಲವೊಮ್ಮೆ ನಾವೆಲ್ಲರೂ ಸೇರಿ ಅರ್ಧ ಚಾಪೆಯನ್ನೇ ಖಾಲಿ ಮಾಡಿ ಬಿಡುತ್ತಿದ್ದೆವು. ಅಮ್ಮ ಸುಳ್ಳು ಸುಳ್ಳೇ ಬೈಯುತ್ತಿದ್ದರು. ಯಾಕೆಂದರೆ ಅವರಿಗೂ ಅಂಥದ್ದೆಲ್ಲ ತಿನ್ನುವುದೆಂದರೆ ಬಹಳ ಇಷ್ಟ. ಹಾಗಾಗಿ ಅವರ ಬೈಗಳನು ನಾವೇನು ಬಹಳ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿರಲಿಲ್ಲ ..ನಮ್ಮ ಕೆಲಸ ನಾವು ಮಾಡುತ್ತಾನೆ ಹೋಗ್ತಿದ್ದೆವು.
ಎರಡು ಮೂರು ದಿನ ಒಣಗಿ ಬಂದ ಹಪ್ಪಳ ಇಪ್ಪತ್ತೈದು ಇಪ್ಪತ್ತೈದು ಲೆಕ್ಕ ಮಾಡಿ ಕೊಡುವುದೇ ನಮ್ಮ ಸಂಭ್ರಮದ ಕೆಲಸ.. ಆಗ ಪ್ಲಾಸ್ಟಿಕ್ ಯುಗ ಅಲ್ಲದ ಕಾರಣ ಹಪ್ಪಳವನ್ನು ಬಾಳೆನಾರಿನ ಹಗ್ಗದಲ್ಲಿ ಚೆಂದವಾಗಿ ಕಟ್ಟಿ ಪುನಃ ಮತ್ತೊಂದು ದಿನ ಬಿಸಿಲಿನಲ್ಲಿಟ್ಟು ಆಮೇಲೆ ಡಬ್ಬಿಯಲ್ಲಿ ಹಾಕಿಟ್ಟರೆ ಹಪ್ಪಳದ ಮಹಾಕಾರ್ಯ ಮುಗಿದಂತೆ .
ಮತ್ತೆ ಮಳೆಗಾಲದಲ್ಲಿ ನಮ್ಮೂರ ಎಡೆಬಿಡದ ಮಳೆಯಲ್ಲಿ ನಮಗೆ ಶಾಲೆಗೆ ರಜೆ ಇದ್ದೇ ಇರುತ್ತಿತ್ತು.. ಆ ಸಮಯದಲ್ಲಿ ಕೆಂಡದ ಮೇಲೆ ಸುಟ್ಟು ಅಥವಾ ತೆಂಗಿನ ಎಣ್ಣೆಯಲ್ಲಿ ಕರಿದು ತಿನ್ನುವ ಈ ಹಪ್ಪಳದ ರುಚಿ ಇದೆಯಲ್ಲ ಅದು ಭಹುಷ್ಯ ಅಮೃತ ಸಮಾನ ನಿಮ್ಮೆಲ್ಲರಿಗೂ ಇದನ್ನು ಓದುವಾಗ ಎಣ್ಣೆಯಲ್ಲಿ ಕರಿದ ಹಲಸಿನ ಹಪ್ಪಳ ಮತ್ತೆ ತೆಂಗಿನಕಾಯಿ ಚೂರು ತಿಂದ ಅನುಭವ ಆಗುತ್ತಾ ಇದೆಯಲ್ಲವೇ
********