ಎರಡರ ನಡುವೆ
ವಿಭಾ ಪುರೋಹಿತ
ಎಲ್ಲಿ ಹೋದರಲ್ಲಿ ಬೆಂಬತ್ತಿ
ತೆರೆದ ಕೋರೆಹಲ್ಲು
ಎದೆಗುಂಡಿಗೆ ಇರಿಯುತ್ತದೆ
ಎನ್ನೆದೆಗುದಿಗಳನು ದಿಕ್ಕೆಡಿಸಿ
ಅಡವಿಗೆ ಕೆಡವುತ್ತದೆ
ಏನಿದು, ನನಗೇ ಹೀಗಾ ?
ಎಲ್ಲರಿಗೂ ಬೆನ್ನಿಗೊಂದು ಭೂತ
ವಕ್ಕರಿಸಿಕೊಂಡಿರುತ್ತಾ ?
ಎಡಬಲಗಳ ನಡುವೆ ನಡೆಯುವುದು ದುರ್ಬರ !!
ವರ್ತಮಾನದ ಕಾಲಗತಿಯಲಿ
ದ್ವಂದ್ವ ಗಳ ಆಂತರ್ಯ
ಹೆಜ್ಜೆ ಇಡಿಸುತ್ತದೆ ಭ್ರಮೆ ಬಿಡಿಸುತ್ತದೆ
ಸಿಕ್ಕದ ದಕ್ಕದ ದೂರದ ಹಾದಿಗೆ !!!
ಓಡುತ್ತಾ ಮುಗ್ಗರಿಸುತ್ತ……
ಸಿಗದ ಆಕಾಶಕ್ಕೆ ಛಂಗನೆ ! ಜಿಗಿಸಿ
ಲಗ್ಗೆ ಹಾಕುತ್ತದೆ ಕನಸಿನೊಳಗಿನ ಮನಸು
ಅಗೋಚರ ಕಾಳ್ಗಿಚ್ಚು ಸುತ್ತಲೂ ಕುಣಿಯುತ್ತದೆ
ಎಲ್ಲೋ ಕಾರುತ್ತದೆ ತೆಗಳಿಕೆ, ತಿರಸ್ಕಾರ
ನಿಂತಲ್ಲಿ ಕೂತಲ್ಲಿ, ಕವಿತೆಯ ಕಂತೆಯಲ್ಲಿ
ಕಾಡುತ್ತದೆ ವಿಕ್ರಮಾದಿತ್ಯನ ಬೇತಾಳವಾಗಿ
ನಿರ್ಲಿಪ್ತ ನನ್ನ ದಾರಿಗೆ
ಲುಬ್ಧ ಶೂನ್ಯ ಗಮ್ಯಕ್ಕೆ
ವಾಸ್ತವದ ಮೌನ ಭವಿಷ್ಯ ಗರ್ಭದಲ್ಲಿ
ಬೆಳೆದು ಉತ್ತರಗಳಾಗಬೇಕಿದೆ.
ತಟಸ್ಥ ವಾಗದೇ ನಡುನಡುವೆ
ಸೆಡ್ಡು ಹೊಡೆದು ನಿಲ್ಲುವ ಪ್ರಶ್ನೆಗಳಿಗೆ !!
ಜಗದಪುಟಕೆ ಸದಾ
ತೆರೆದಿಟ್ಟ ನನ್ನ ಹೃದಯ
ಯಾವ ಅರಿವಿನ ಸ್ಪರ್ಶಕ್ಕೆ
ಶಪಿತಶಿಲೆ ಅಹಲ್ಯೆ ಯಾಗಿ
ಜೀವತಳೆವುದೋ ?
ಯಾವ ಕಾಲದ ಕರೆ
ಎಂಥ ಸಂಕಲ್ಪ ಗೀತೆಯ
ಯುಗ ಯುಗದ ಧ್ವನಿಯಾಗಿ
ಗುಡುಗಿಸುವುದೋ ?
Kavana sogasagide